< ಯೆಹೆಜ್ಕೇಲನು 19 >
1 ೧ “ಇಸ್ರಾಯೇಲಿನ ರಾಜರ ವಿಷಯವಾಗಿ ಈ ಶೋಕ ಗೀತೆಯನ್ನು ಹಾಡು,
2 ೨ ‘ಆಹಾ, ನಿನ್ನ ತಾಯಿಯು ಸಿಂಹಗಳ ಮಧ್ಯೆ ಸಿಂಹಿಣಿ, ಸಾಕಿದಳು ತನ್ನ ಮರಿಗಳನ್ನು, ಯುವ ಸಿಂಹಗಳ ನಡುವೆ ವಾಸಿಸಿ.
3 ೩ ಅವಳು ಬೆಳೆಯಿಸಿದ ಒಂದು ಮರಿಯು ಪ್ರಾಯದ ಸಿಂಹವಾಗಿ, ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಲಾರಂಭಿಸಿತು.
4 ೪ ಜನಾಂಗಗಳು ಈ ವಾರ್ತೆಯನ್ನು ಕೇಳಿ, ಅದಕ್ಕೆ ಗುಂಡಿ ತೋಡಲು ಅದು ಅಲ್ಲಿ ಸಿಕ್ಕಿಬಿದ್ದಿತು; ಅದನ್ನು ಸರಪಣಿಗಳಿಂದ ಬಿಗಿದು ಐಗುಪ್ತ ದೇಶಕ್ಕೆ ಒಯ್ದರು.
5 ೫ ಆ ಸಿಂಹಿಣಿಯು ತಾನು ಕಾದುಕೊಂಡಿದ್ದರೂ, ತನ್ನ ನಿರೀಕ್ಷೆಯು ಹಾಳಾಯಿತೆಂದು ತನ್ನ ಮರಿಗಳಲ್ಲಿ ಇನ್ನೊಂದನ್ನು ತೆಗೆದು ಸಾಕಿ, ಪ್ರಾಯಕ್ಕೆ ತಂದಳು.
6 ೬ ಅದು ಪ್ರಾಯದ ಸಿಂಹವಾಗಿ, ಸಿಂಹಗಳ ನಡುವೆ ತಿರುಗುತ್ತಾ ಬೇಟೆಯನ್ನು ಕಲಿತು, ಮನುಷ್ಯರನ್ನು ನುಂಗಲಾರಂಭಿಸಿತು.
7 ೭ ಅದು ಪಟ್ಟಣಗಳನ್ನು ಹಾಳುಮಾಡಿ, ಬಹಳ ಮಂದಿ ವಿಧವೆಯರಾದವರನ್ನು ಕೆಡಿಸಿತು, ಅದರ ಗರ್ಜನೆಯ ಶಬ್ದಕ್ಕೆ ದೇಶವು ಮತ್ತು ಅದರಲ್ಲಿದ್ದದ್ದೆಲ್ಲವೂ ಕ್ಷೀಣವಾದವು.
8 ೮ ಆಗ ಜನಾಂಗಗಳು ಸುತ್ತಲಿನ ರಾಷ್ಟ್ರಗಳಿಂದ ಕೂಡಿ ಬಂದು, ಅದಕ್ಕೆ ವಿರುದ್ಧವಾಗಿ ನಿಂತು, ಬಲೆಯೊಡ್ಡಿ ಗುಂಡಿ ತೋಡಲು, ಅದು ಅಲ್ಲಿ ಸಿಕ್ಕಿಬಿದ್ದಿತು.
9 ೯ ಅದನ್ನು ಸರಪಣಿಗಳಿಂದ ಬಿಗಿದು, ಪಂಜರದಲ್ಲಿ ಹಾಕಿ, ಬಾಬೆಲಿನ ಅರಸನ ಬಳಿಗೆ ತಂದವು. ಅದರ ಧ್ವನಿಯು ಇಸ್ರಾಯೇಲಿನ ಪರ್ವತಗಳಲ್ಲಿ ಇನ್ನು ಕೇಳಿಸದಂತೆ ಅದನ್ನು ಕೋಟೆಯೊಳಗೆ ಸೇರಿಸಿ ಬಿಟ್ಟವು.
10 ೧೦ “‘ನಿನ್ನ ಹೆತ್ತ ತಾಯಿ ನೀರಾವರಿಯಲ್ಲಿ ನಾಟಿಕೊಂಡಿದ್ದ ದ್ರಾಕ್ಷಾಲತೆಯಾಗಿದ್ದಳು, ಆ ಲತೆಯು ತುಂಬಾ ನೀರಾವರಿಯಿಂದ ಫಲವತ್ತಾಗಿಯೂ, ಪೊದೆಯಾಗಿಯೂ ಬೆಳೆದಿತ್ತು.
11 ೧೧ ಅದರಲ್ಲಿ ಆಳುವವರ ರಾಜದಂಡಗಳಿಗೆ ಯೋಗ್ಯವಾದ ಗಟ್ಟಿಕೊಂಬೆಗಳಿದ್ದವು, ಅವುಗಳ ಎತ್ತರವು ಉಳಿದ ರೆಂಬೆಗಳಿಗಿಂತ ಹೆಚ್ಚಾಗಿತ್ತು, ಬಹಳ ರೆಂಬೆಗಳ ಮಧ್ಯದಲ್ಲಿ ಉದ್ದುದ್ದವಾಗಿ ಕಾಣಿಸಿದವು.
12 ೧೨ ಆದರೆ ಆ ಲತೆಯು ರೋಷದಲ್ಲಿ ಕೀಳಲ್ಪಟ್ಟು, ನೆಲದ ಮೇಲೆ ಬಿಸಾಡಲ್ಪಟ್ಟಿತು, ಮೂಡಣ ಗಾಳಿಯು ಅದರ ಫಲವನ್ನು ಬಾಡಿಸಿತು, ಅದರ ಗಟ್ಟಿ ಕೊಂಬೆಗಳು ಮುರಿದು ಒಣಗಿ ಹೋದವು, ಬೆಂಕಿಯು ಅವುಗಳನ್ನು ನುಂಗಿತು.
13 ೧೩ ಈಗ ಅದು ನೀರಿಲ್ಲದೆ ಬೆಂಗಾಡಿನಲ್ಲಿ ನಾಟಿಕೊಂಡಿದೆ.
14 ೧೪ ಬೆಂಕಿಯು ಅದರ ಕೊಂಬೆಗಳಿಂದ ಹೊರಟು ಅದರ ಫಲವನ್ನು ನುಂಗಿ ಬಿಟ್ಟಿದೆ. ಆದುದರಿಂದ ರಾಜದಂಡಕ್ಕೆ ಯೋಗ್ಯವಾದ ಯಾವ ಗಟ್ಟಿ ಕೊಂಬೆಯೂ ಅದರಲ್ಲಿ ಉಳಿದಿಲ್ಲ.’ ಇದು ಶೋಕ ಗೀತೆ, ಶೋಕ ಗೀತೆಯಾಗಿ ವಾಡಿಕೆಯಲ್ಲಿದೆ.”