< ವಿಮೋಚನಕಾಂಡ 18 >
1 ೧ ದೇವರು ಮೋಶೆಗೂ ತನ್ನ ಜನರಾದ ಇಸ್ರಾಯೇಲರಿಗೂ ಮಹೋಪಕಾರಗಳನ್ನು ಮಾಡಿದ್ದನ್ನೂ, ಯೆಹೋವನು ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಕರತಂದದ್ದನ್ನೂ, ಮಿದ್ಯಾನ್ಯರ ಆಚಾರ್ಯನೂ ಮೋಶೆಯ ಮಾವನೂ ಆಗಿದ್ದ ಇತ್ರೋವನು ಕೇಳಿದನು.
2 ೨ ಆಗ ಮೋಶೆಯ ಮಾವನಾದ ಇತ್ರೋವನು ತನ್ನ ಬಳಿಗೆ ಕಳುಹಿಸಲ್ಪಟ್ಟಿದ್ದ ಮೋಶೆಯ ಹೆಂಡತಿಯಾದ ಚಿಪ್ಪೋರಳನ್ನೂ, ಆಕೆಯ ಇಬ್ಬರು ಗಂಡು ಮಕ್ಕಳನ್ನೂ ಕರೆದುಕೊಂಡು ಬಂದನು.
3 ೩ ಆ ಪುತ್ರರಲ್ಲಿ ಒಬ್ಬನಿಗೆ “ಗೇರ್ಷೋಮ್” ಎಂದು ಹೆಸರಿಟ್ಟನು. ಏಕೆಂದರೆ ಮೋಶೆಯು, “ನಾನು ಅನ್ಯದೇಶದಲ್ಲಿ ಪ್ರವಾಸಿಯಾಗಿದ್ದೇನೆ” ಎಂದು ಹೇಳಿದನು.
4 ೪ ತನ್ನ ಇನ್ನೊಬ್ಬ ಮಗನಿಗೆ ಮೋಶೆಯು, “ನನ್ನ ತಂದೆಯ ದೇವರು ನನಗೆ ಸಹಾಯಕನಾಗಿದ್ದು ನನ್ನನ್ನು ಫರೋಹನ ಕತ್ತಿಗೆ ತಪ್ಪಿಸಿ ಕಾಪಾಡಿದನು” ಎಂದು ಹೇಳಿ, ಆ ಮಗನಿಗೆ “ಎಲೀಯೆಜೆರ್” ಎಂದು ಹೆಸರಿಟ್ಟನು.
5 ೫ ಮೋಶೆಯ ಮಾವನಾದ ಇತ್ರೋವನು ಮೋಶೆಯ ಮಕ್ಕಳನ್ನು, ಹೆಂಡತಿಯನ್ನು ಕರೆದುಕೊಂಡು ಮರುಭೂಮಿಯಲ್ಲಿ ದೇವರ ಬೆಟ್ಟದ ಹತ್ತಿರ ಇಳಿದುಕೊಂಡಿದ್ದ ಮೋಶೆಯ ಬಳಿಗೆ ಬಂದನು.
6 ೬ ಅವನು ಮೋಶೆಗೆ, “ನಿನ್ನ ಮಾವನಾದ ಇತ್ರೋವನಾದ ನಾನು ನಿನ್ನ ಹೆಂಡತಿಯನ್ನು, ನಿನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆ” ಎಂದು ಹೇಳಿ ಕಳುಹಿಸಿದನು.
7 ೭ ಮೋಶೆಯು ತನ್ನ ಮಾವನನ್ನು ಎದುರುಗೊಳ್ಳುವುದಕ್ಕೆ ಹೊರಟು ಆತನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಡೇರೆಯೊಳಗೆ ಹೋದರು.
8 ೮ ಆ ನಂತರ ಮೋಶೆಯು ಯೆಹೋವನು ಇಸ್ರಾಯೇಲರ ಪರವಾಗಿ ಫರೋಹನಿಗೂ, ಐಗುಪ್ತ್ಯರಿಗೂ ಮಾಡಿದ್ದೆಲ್ಲವನ್ನೂ, ದಾರಿಯಲ್ಲಿ ತಮಗುಂಟಾದ ಎಲ್ಲಾ ಕಷ್ಟಗಳನ್ನೂ, ಯೆಹೋವನು ಆ ಕಷ್ಟಗಳಿಂದ ತಪ್ಪಿಸಿದ್ದನ್ನೂ ತನ್ನ ಮಾವನಿಗೆ ವಿವರಿಸಿದನು.
9 ೯ ಯೆಹೋವನು ಐಗುಪ್ತ್ಯರ ಕೈಯಿಂದ ಇಸ್ರಾಯೇಲರನ್ನು ಬಿಡಿಸಿ ಅವರಿಗೆ ಉಪಕಾರವನ್ನು ಮಾಡಿದ್ದಕ್ಕಾಗಿ ಇತ್ರೋವನು ಸಂತೋಷ ಪಟ್ಟನು.
10 ೧೦ ಇತ್ರೋವನು, “ಐಗುಪ್ತ್ಯರ ಕೈಯಿಂದಲೂ, ಫರೋಹನ ಕೈಯಿಂದಲೂ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನಿಗೆ ಸ್ತೋತ್ರವಾಗಲಿ.
11 ೧೧ ಯೆಹೋವನು ತನ್ನ ಜನರನ್ನು ಅವರ ಕೈಯಿಂದ ಬಿಡಿಸಿ, ಆ ಐಗುಪ್ತ್ಯರು ಯಾವ ವಿಷಯದಲ್ಲಿ ಗರ್ವಪಡುತ್ತಿದ್ದರೋ, ಆ ವಿಷಯದಲ್ಲಿ ಅವರನ್ನು ತಗ್ಗಿಸಿದ್ದರಿಂದ ಯೆಹೋವನು ಎಲ್ಲಾ ದೇವರುಗಳಿಗಿಂತಲೂ ದೊಡ್ಡವನೆಂದು ಈಗ ತಿಳಿದುಕೊಂಡಿದ್ದೇನೆ” ಅಂದನು.
12 ೧೨ ಇದಲ್ಲದೆ ಮೋಶೆಯ ಮಾವನಾದ ಇತ್ರೋವನು ದೇವರಿಗೆ ಸರ್ವಾಂಗಹೋಮ ಯಜ್ಞಗಳನ್ನು ಸಮರ್ಪಿಸಿದನು. ಆರೋನನು, ಇಸ್ರಾಯೇಲರ ಹಿರಿಯರೆಲ್ಲರೂ ಅವನ ಸಂಗಡ ದೇವರ ಸನ್ನಿಧಿಯಲ್ಲಿ ಸಹಭೋಜನವನ್ನು ಮಾಡುವುದಕ್ಕೆ ಬಂದರು.
13 ೧೩ ಮರುದಿನ ಮೋಶೆ ಜನರಿಗೆ ನ್ಯಾಯತೀರಿಸುವುದಕ್ಕಾಗಿ ಕುಳಿತಿರಲು ಮುಂಜಾನೆಯಿಂದ ಸಾಯಂಕಾಲದವರೆಗೂ ಜನರು ಅವನ ಹತ್ತಿರ ನಿಂತಿದ್ದರು.
14 ೧೪ ಮೋಶೆಯು ಜನರಿಗಾಗಿ ಮಾಡುತ್ತಿರುವುದೆಲ್ಲವನ್ನು ಮಾವನು ನೋಡಿ ಅವನಿಗೆ, “ನೀನು ಯಾತಕ್ಕೆ ಜನರಿಗಾಗಿ ಇಷ್ಟು ಪ್ರಯಾಸ ಪಡುತ್ತಿರುವೆ? ನೀನು ಒಬ್ಬನೇ ನ್ಯಾಯತೀರಿಸುವುದಕ್ಕೆ ಕುಳಿತಿರುವುದೇಕೆ?” ಎಂದು ಕೇಳಿದನು.
15 ೧೫ ಮೋಶೆ ತನ್ನ ಮಾವನಿಗೆ, “ದೇವರ ನಡೆಸುವಿಕೆಯನ್ನು ತಿಳಿದುಕೊಳ್ಳುವುದಕ್ಕಾಗಿ ಜನರು ನನ್ನ ಹತ್ತಿರ ಬರುತ್ತಾರೆ.
16 ೧೬ ಹಾಗೆಯೇ ಅವರೊಳಗೆ ವ್ಯಾಜ್ಯವೇನಾದರೂ ಉಂಟಾಗಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ವಿಚಾರಣೆ ಮಾಡಿ ಅವರಿಗೆ ನ್ಯಾಯತೀರಿಸಿ ದೇವರ ಆಜ್ಞಾವಿಧಿಗಳನ್ನು ಬೋಧಿಸುತ್ತೇನೆ” ಎಂದು ಹೇಳಿದನು.
17 ೧೭ ಅದನ್ನು ಕೇಳಿ ಮೋಶೆಯ ಮಾವನು ಅವನಿಗೆ, “ನೀನು ಮಾಡುತ್ತಿರುವ ಈ ಕಾರ್ಯವಿಧಾನ ಸರಿಯಲ್ಲ.
18 ೧೮ ಈ ಕೆಲಸ ಬಹಳ ಕಷ್ಟವಾದದ್ದು. ನಿನ್ನೊಬ್ಬನಿಂದಲೇ ಅದನ್ನು ನಡೆಸಲಾಗದು. ನೀನು ನಿನ್ನ ಸಂಗಡ ಇರುವ ಈ ಜನರೂ ನಿಶ್ಚಯವಾಗಿ ಬಳಲಿಹೋಗುವಿರಿ.
19 ೧೯ ನನ್ನ ಮಾತನ್ನು ಕೇಳು. ನಾನು ನಿನಗೆ ಒಂದು ಆಲೋಚನೆಯನ್ನು ಹೇಳುತ್ತೇನೆ ಮತ್ತು ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗೂ, ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಹತ್ತಿರಕ್ಕೆ ತರಬೇಕು.
20 ೨೦ ನೀನು ದೇವರ ಆಜ್ಞಾವಿಧಿಗಳನ್ನು ಬೋಧಿಸಿ, ಅವರು ನಡೆಯಬೇಕಾದ ಮಾರ್ಗವನ್ನೂ, ಮಾಡಬೇಕಾದ ಕಾರ್ಯಗಳನ್ನೂ ಅವರಿಗೆ ತಿಳಿಯಪಡಿಸಬೇಕು.
21 ೨೧ ಆದರೆ ನೀನು ಸಮಸ್ತ ಜನರೊಳಗೆ ಸಮರ್ಥರೂ, ಭಕ್ತರೂ, ನಂಬಿಗಸ್ತರೂ, ಲಂಚಮುಟ್ಟದವರೂ ಆಗಿರುವ ಪುರುಷರನ್ನು ಆರಿಸಿಕೊಂಡು ಅವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.
22 ೨೨ ಅವರೇ ಯಾವಾಗಲೂ ಜನರಿಗೆ ನ್ಯಾಯವನ್ನು ತೀರಿಸಲಿ. ಅವರು ದೊಡ್ಡ ವ್ಯಾಜ್ಯಗಳನ್ನು ನಿನ್ನ ಮುಂದೆ ತರಲಿ. ಸಣ್ಣ ವ್ಯಾಜ್ಯಗಳನ್ನೆಲ್ಲಾ ಅವರೇ ತೀರಿಸಲಿ. ಅವರು ನಿನ್ನೊಂದಿಗೆ ಈ ಭಾರವನ್ನು ಹೊರುವುದರಿಂದ ನಿನಗೆ ಸುಲಭವಾಗುವುದು.
23 ೨೩ ದೇವರು ನಿನಗೆ ಹೀಗೆ ಮಾಡುವುದಕ್ಕೆ ಅಪ್ಪಣೆಕೊಡುವುದಾದರೆ, ನೀನು ಈ ಕೆಲಸದ ಹೊರೆಯನ್ನು ನಿರ್ವಹಿಸಲು ಸಾಧ್ಯವಾಗುವುದು. ಇದು ಮಾತ್ರವಲ್ಲದೆ ಈ ಜನರೆಲ್ಲರೂ ಸಂತುಷ್ಟರಾಗಿ ತಮ್ಮ ತಮ್ಮ ಮನೆಗಳಿಗೆ ಹೋಗುವರು” ಎಂದು ಹೇಳಿದನು.
24 ೨೪ ಮೋಶೆ ತನ್ನ ಮಾವನ ಮಾತಿಗೆ ಒಪ್ಪಿಕೊಂಡು ಅವನು ಹೇಳಿದಂತೆಯೇ ಎಲ್ಲವನ್ನು ಮಾಡಿದನು.
25 ೨೫ ಮೋಶೆಯು ಇಸ್ರಾಯೇಲರಲ್ಲಿ ಸಮರ್ಥರಾದವರನ್ನು ಆರಿಸಿಕೊಂಡು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಿದನು.
26 ೨೬ ಇವರು ಯಾವಾಗಲೂ ಜನರಿಗೆ ನ್ಯಾಯತೀರಿಸುವವರಾಗಿ ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಾ, ಸುಲಭವಾದ ವ್ಯಾಜ್ಯಗಳನ್ನು ತಾವೇ ತೀರಿಸುತ್ತಾ ಬಂದರು.
27 ೨೭ ತರುವಾಯ ಮೋಶೆ ತನ್ನ ಮಾವನಿಗೆ ಅಪ್ಪಣೆ ಕೊಡಲಾಗಿ, ಅವನು ಸ್ವದೇಶಕ್ಕೆ ಹೊರಟುಹೋದನು.