< ವಿಮೋಚನಕಾಂಡ 10 >
1 ೧ ತರುವಾಯ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹಿಂತಿರುಗಿ ಹೋಗು. ನಾನು ಫರೋಹನ ಮತ್ತು ಅವನ ಪರಿವಾರದವರ ಹೃದಯಗಳನ್ನು ಕಠಿಣಗೊಳಿಸಿದ್ದೇನೆ. ಏಕೆಂದರೆ ನಾನು ಈ ಮಹತ್ಕಾರ್ಯಗಳನ್ನು ಅವರ ಮುಂದೆ ನಡೆಸುವುದಕ್ಕೆ ಇದು ಕಾರಣವಾಯಿತು.
2 ೨ ಇಸ್ರಾಯೇಲರು ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡೆಸಿರುವ ಈ ಮಹತ್ಕಾರ್ಯಗಳನ್ನು ವಿವರಿಸಿ ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟಬಂದ ಹಾಗೆ ಶಿಕ್ಷಿಸಿದನು ಎಂಬುದಾಗಿ ತಿಳಿಸಬೇಕು. ಹೀಗೆ ನಾನು ಫರೋಹನ ಹೃದಯವನ್ನು, ಅವನ ಪರಿವಾರದವರ ಹೃದಯಗಳನ್ನೂ ಕಠಿಣಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದನು.
3 ೩ ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ, “ಇಬ್ರಿಯರ ದೇವರಾಗಿರುವ ಯೆಹೋವನು ಆಜ್ಞಾಪಿಸುವುದೇನೆಂದರೆ, ‘ನೀನು ನನ್ನ ಮುಂದೆ ತಗ್ಗಿಸಿಕೊಳ್ಳದೆ ಇರುವುದು ಇನ್ನು ಎಲ್ಲಿಯವರೆಗೆ? ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆ ಕೊಡು.
4 ೪ ಅಪ್ಪಣೆಕೊಡದೆ ಹೋದರೆ ನಾಳೆ ನಿನ್ನ ರಾಜ್ಯದೊಳಗೆ ಮಿಡತೆಗಳನ್ನು ಬರುವಂತೆ ಮಾಡುವೆನು.
5 ೫ ಅವು ಭೂಮಿಯನ್ನೆಲ್ಲಾ ಆವರಿಸಿಕೊಳ್ಳುವವು. ನೆಲವೇ ಕಾಣಿಸದೆ ಹೋಗುವುದು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದೆಲ್ಲವನ್ನು ಮಿಡತೆಗಳು ತಿಂದುಬಿಡುವವು. ಹೊಲದಲ್ಲಿರುವ ನಿಮ್ಮ ಎಲ್ಲಾ ಮರಗಳ ಎಲೆ ಚಿಗುರುಗಳನ್ನೂ ತಿಂದುಬಿಡುವವು.
6 ೬ ಅವು ನಿನ್ನ ಮನೆಗಳಲ್ಲಿಯೂ, ನಿನ್ನ ಪರಿವಾರದವರ ಮನೆಗಳಲ್ಲಿಯೂ, ಐಗುಪ್ತ್ಯರೆಲ್ಲರ ಮನೆಗಳಲ್ಲಿಯೂ ತುಂಬಿಕೊಂಡಿರುವವು. ನಿಮ್ಮ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅಂಥ ಮಿಡತೆಯ ದಂಡನ್ನು ಎಂದೂ ಅವರು ನೋಡಿರುವುದಿಲ್ಲ’” ಎಂದು ಹೇಳಿದರು. ಇದನ್ನು ಹೇಳಿ ಮೋಶೆ ತಿರುಗಿಕೊಂಡು ಫರೋಹನ ಬಳಿಯಿಂದ ಹೊರಟುಹೋದನು.
7 ೭ ಆಗ ಫರೋಹನ ಪರಿವಾರದವರು ಅವನಿಗೆ, “ಈ ಮನುಷ್ಯನು ಇನ್ನು ಎಷ್ಟು ದಿನ ನಮಗೆ ಉರುಲಾಗಿರಬೇಕು. ಆ ಜನರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸುವುದಕ್ಕೆ ಅಪ್ಪಣೆಕೊಡು. ಐಗುಪ್ತ ದೇಶವು ಹಾಳಾಯಿತೆಂದು ಇನ್ನು ನಿನ್ನ ಮನಸ್ಸಿಗೆ ಬರಲಿಲ್ಲವೋ?” ಎಂದು ಹೇಳಿದರು.
8 ೮ ಅದನ್ನು ಕೇಳಿ ಫರೋಹನು, ಮೋಶೆ ಮತ್ತು ಆರೋನರನ್ನು ತಿರುಗಿ ಕರೆಯಿಸಿ ಅವರಿಗೆ, “ನೀವು ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬಹುದು. ಆದರೆ ಯಾರಾರು ಹೋಗಬೇಕನ್ನುತ್ತೀರಿ?” ಎಂದು ಕೇಳಿದನು.
9 ೯ ಮೋಶೆ ಅವನಿಗೆ, “ನಾವು ಯೆಹೋವನಿಗೆ ಜಾತ್ರೆಯನ್ನು ಆಚರಿಸಬೇಕಾಗಿದೆ. ಆದಕಾರಣ ಚಿಕ್ಕವರು ಮೊದಲುಗೊಂಡು, ಮುದುಕರವರೆಗೂ ಎಲ್ಲರೂ ಹೋಗುತ್ತೇವೆ; ಗಂಡು ಹೆಣ್ಣುಮಕ್ಕಳನ್ನೂ, ದನಕುರಿಗಳ ಮಂದೆಯನ್ನು ತೆಗೆದುಕೊಂಡು ಹೋಗುತ್ತೇವೆ” ಎಂದು ಉತ್ತರಕೊಟ್ಟನು.
10 ೧೦ ಅದಕ್ಕೆ ಫರೋಹನು, “ನಾನು ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಹೋಗುವುದಕ್ಕೆ ಅಪ್ಪಣೆ ಕೊಡುವುದಿಲ್ಲ; ಕಳುಹಿಸಿಕೊಟ್ಟರೆ, ಯೆಹೋವನು ನಿಮ್ಮ ಸಂಗಡವಿರುವನು. ನೋಡಿ, ನೀವು ದುರಾಲೋಚನೆಯಿಂದ ಕೂಡಿದವರು.
11 ೧೧ ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಯೆಹೋವನನ್ನು ಆರಾಧಿಸಿ ಬರಬಹುದು. ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೇ” ಎಂದು ಹೇಳಿ ಅವರನ್ನು ಫರೋಹನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.
12 ೧೨ ಆಗ ಯೆಹೋವನು ಮೋಶೆಗೆ, “ಐಗುಪ್ತ ದೇಶದ ಮೇಲೆ ನಿನ್ನ ಕೈಯನ್ನು ಚಾಚಿ, ಮಿಡತೆಗಳನ್ನು ಬರಮಾಡು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡಲಿ” ಎಂದು ಹೇಳಿದನು.
13 ೧೩ ಮೋಶೆ ತನ್ನ ಕೋಲನ್ನು ಐಗುಪ್ತ ದೇಶದ ಮೇಲೆ ಚಾಚಿದಾಗ, ಯೆಹೋವನು ಹಗಲಿರುಳು ಮೂಡಣದಿಕ್ಕಿನಿಂದ ಗಾಳಿಯನ್ನು ಬೀಸುವಂತೆ ಮಾಡಿದನು. ಹೊತ್ತಾರೆ ಗಾಳಿಯ ದೆಸೆಯಿಂದ ಮಿಡತೆಗಳು ಬಂದಿದ್ದವು.
14 ೧೪ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದಿಳಿದು ಐಗುಪ್ತ ದೇಶದ ಎಲ್ಲಾ ಕಡೆಯಲ್ಲಿಯೂ ಅಪರಿಮಿತವಾಗಿ ಮುತ್ತಿಕೊಂಡವು. ಅಂಥ ಮಿಡತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರಲು ಸಾಧ್ಯವಿಲ್ಲ.
15 ೧೫ ಅವು ಭೂಮಿಯನ್ನೆಲ್ಲಾ ಮುಚ್ಚಿಕೊಂಡಿದ್ದರಿಂದ ನೆಲವು ಕಾಣದೇ ಹೋಯಿತು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ, ಮರಗಳಲ್ಲಿದ್ದ ಎಲ್ಲಾ ಕಾಯಿಗಳನ್ನೂ ಅವು ತಿಂದುಬಿಟ್ಟವು. ಐಗುಪ್ತ ದೇಶದಲ್ಲೆಲ್ಲಾ ಮರಗಳಲ್ಲಾಗಲಿ, ಹೊಲದ ಗಿಡಗಳಲ್ಲಾಗಲಿ ಹಸುರಾದದ್ದು ಒಂದೂ ಉಳಿಯಲಿಲ್ಲ.
16 ೧೬ ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ, ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ.
17 ೧೭ ಆದರೂ ಈ ಒಂದೇ ಸಾರಿ ನನ್ನ ಪಾಪಗಳನ್ನು ಕ್ಷಮಿಸಬೇಕು. ನಿಮ್ಮ ದೇವರಾದ ಯೆಹೋವನು ಈ ಮರಣಕರವಾದ ವಿಪತ್ತನ್ನು ನನ್ನ ಬಳಿಯಿಂದ ತೊಲಗಿಸುವಂತೆ ಆತನನ್ನು ಪ್ರಾರ್ಥಿಸಬೇಕು” ಎಂದನು.
18 ೧೮ ಮೋಶೆ ಫರೋಹನ ಬಳಿಯಿಂದ ಹೊರಟು ಯೆಹೋವನನ್ನು ಬೇಡಿಕೊಂಡನು.
19 ೧೯ ಯೆಹೋವನು ಪಶ್ಚಿಮದಿಂದ ಬಿರುಗಾಳಿ ಬೀಸುವಂತೆ ಮಾಡಿದನು. ಅದು ಆ ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದೊಳಗೆ ಹಾಕಿಬಿಟ್ಟಿತು. ಐಗುಪ್ತ ದೇಶದ ಮೇರೆಗಳೊಳಗೆ ಒಂದು ಮಿಡತೆಯೂ ನಿಲ್ಲಲಿಲ್ಲ.
20 ೨೦ ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲರನ್ನು ಕಳುಹಿಸಿಕೊಡಲು ಒಪ್ಪಲಿಲ್ಲ.
21 ೨೧ ತರುವಾಯ ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಯನ್ನು ಚಾಚು. ಆಗ ಐಗುಪ್ತ ದೇಶದಲ್ಲೆಲ್ಲಾ ಕತ್ತಲು ಉಂಟಾಗುವುದು. ಆ ಕತ್ತಲೆಯಿಂದಾಗಿ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.
22 ೨೨ ಮೋಶೆ ಆಕಾಶಕ್ಕೆ ಕೈಯನ್ನು ಚಾಚಿದಾಗ ಐಗುಪ್ತ ದೇಶದಲ್ಲೆಲ್ಲಾ ಮೂರು ದಿನ ಕಾರ್ಗತ್ತಲೆ ಮುಚ್ಚಿಕೊಂಡಿತು.
23 ೨೩ ಮೂರು ದಿನಗಳವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ. ಯಾರೂ ತಮ್ಮ ಸ್ಥಳದಿಂದ ಏಳಲೂ ಇಲ್ಲ. ಆದರೆ ಇಸ್ರಾಯೇಲರು ವಾಸವಾಗಿದ್ದ ಸ್ಥಳಗಳಲ್ಲಿ ಬೆಳಕು ಇತ್ತು.
24 ೨೪ ಆಗ ಫರೋಹನು ಮೋಶೆಯನ್ನು ಕರೆಯಿಸಿ ಅವನಿಗೆ, “ನೀವು ಹೋಗಿ ಯೆಹೋವನಿಗೆ ಆರಾಧನೆ ಮಾಡಿ ಬರಬಹುದು. ನಿಮ್ಮ ಮನೆಗಳಿಗೆ ಸೇರಿದವರೂ ಹೋಗಬಹುದು. ನಿಮ್ಮ ಕುರಿದನಗಳನ್ನು ಮಾತ್ರ ಇಲ್ಲೇ ಬಿಟ್ಟುಹೋಗಬೇಕು” ಎಂದನು.
25 ೨೫ ಅದಕ್ಕೆ ಮೋಶೆಯು, “ನಮ್ಮ ದೇವರಾದ ಯೆಹೋವನಿಗೆ ನಾವು ಯಜ್ಞಹೋಮಗಳನ್ನು ಮಾಡುವಂತೆ ಬೇಕಾದ ಪಶುಗಳನ್ನು ತೆಗೆದುಕೊಂಡು ಹೋಗಲು ಅಪ್ಪಣೆಯಾಗಬೇಕು.
26 ೨೬ ನಮ್ಮ ಎಲ್ಲಾ ಪಶುಗಳನ್ನೂ ಸಹ ನಮ್ಮ ಸಂಗಡ ತೆಗೆದುಕೊಂಡು ಹೋಗುವೆವು. ಒಂದು ಗೊರಸನ್ನಾದರೂ ನಾವು ಬಿಟ್ಟು ಹೋಗುವುದಿಲ್ಲ. ಆ ಪಶುಗಳಿಂದಲೇ ನಮ್ಮ ದೇವರಾದ ಯೆಹೋವನಿಗೆ ಆರಾಧನೆಯನ್ನು ಸಲ್ಲಿಸಬೇಕು. ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ನಾವು ಅಲ್ಲಿಗೆ ಸೇರುವುದಕ್ಕೆ ಮೊದಲು ನಮಗೆ ತಿಳಿಯದು” ಎಂದನು.
27 ೨೭ ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ ಅವನು ಅವರನ್ನು ಕಳುಹಿಸಲಾರದೆ ಹೋದನು.
28 ೨೮ ಆಗ ಫರೋಹನು ಮೋಶೆಗೆ, “ನನ್ನನ್ನು ಬಿಟ್ಟುಹೋಗು. ಇನ್ನು ಮುಂದೆ ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು. ಏಕೆಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವೆ” ಎಂದು ಹೇಳಿದನು.
29 ೨೯ ಅದಕ್ಕೆ ಮೋಶೆಯು, “ನೀನು ಸರಿಯಾಗಿ ಹೇಳಿದೆ. ಇನ್ನು ಮೇಲೆ ನಾನು ನಿನ್ನ ಮುಖವನ್ನು ಪುನಃ ನೋಡುವುದಿಲ್ಲ” ಎಂದನು.