< ಎಫೆಸದವರಿಗೆ ಬರೆದ ಪತ್ರಿಕೆ 2 >
1 ೧ ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ.
2 ೨ ಪೂರ್ವದಲ್ಲಿ ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ. (aiōn )
3 ೩ ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.
4 ೪ ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,
5 ೫ ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.
6 ೬ ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು
7 ೭ ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ. (aiōn )
8 ೮ ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.
9 ೯ ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.
10 ೧೦ ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.
11 ೧೧ ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ.
12 ೧೨ ಅಂದು ನೀವು ಕ್ರಿಸ್ತನಿಂದ ದೂರವಿದವರೂ, ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.
13 ೧೩ ಈಗಲಾದರೋ, ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ.
14 ೧೪ ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.
15 ೧೫ ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ.
16 ೧೬ ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ ಇಲ್ಲವಾಗಿಸಿ, ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ.
17 ೧೭ ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು.
18 ೧೮ ಇದರಿಂದ ಆತನ ಮೂಲಕ ಉಭಯತ್ರರು ಒಂದೇ ಆತ್ಮನಲ್ಲಿ ತಂದೆಯ ಬಳಿಗೆ ಪ್ರವೇಶಿಸಲು ಮಾರ್ಗವಾಯಿತು.
19 ೧೯ ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೇ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ.
20 ೨೦ ಅಪೊಸ್ತಲರೂ ಪ್ರವಾದಿಗಳೂ ಎಂಬ ಅಡಿಪಾಯದ ಮೇಲೆ ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು.
21 ೨೧ ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ.
22 ೨೨ ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.