< ಧರ್ಮೋಪದೇಶಕಾಂಡ 9 >
1 ೧ ಇಸ್ರಾಯೇಲರೇ ಕೇಳಿರಿ, ನಿಮಗಿಂತ ಮಹಾ ಬಲಿಷ್ಠ ಜನಾಂಗಗಳನ್ನೂ ಮತ್ತು ಆಕಾಶವನ್ನು ಮುಟ್ಟುವ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನೂ ಸ್ವಾಧೀನ ಮಾಡಿಕೊಳ್ಳುವುದಕ್ಕೆ ನೀವು ಈ ಯೊರ್ದನ್ ನದಿಯನ್ನು ಇಂದು ದಾಟಲಿದ್ದೀರಿ.
ಇಸ್ರಾಯೇಲರೇ, ಕೇಳಿರಿ, ನೀವು ಹೋಗಿ ನಿಮಗಿಂತ ದೊಡ್ಡ, ಬಲಿಷ್ಠ ಜನಾಂಗಗಳನ್ನೂ, ಆಕಾಶದವರೆಗೆ ಭದ್ರಮಾಡಿದ ದೊಡ್ಡ ಪಟ್ಟಣಗಳನ್ನೂ ಸ್ವಾಧೀನಮಾಡಿಕೊಳ್ಳುವುದಕ್ಕೆ ಈ ಹೊತ್ತು ಯೊರ್ದನ್ ನದಿಯನ್ನು ದಾಟಲಿದ್ದೀರಿ.
2 ೨ ಆ ದೇಶದ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ, “ಅನಾಕ್ಯರ ಮುಂದೆ ನಿಲ್ಲಬಲ್ಲವರು ಯಾರಿದ್ದಾರೆ?” ಎಂಬ ಮಾತನ್ನು ಕೇಳಿದ್ದೀರಿ.
ಆ ನಾಡಿನ ಅನಾಕ್ಯರು ಬಲಿಷ್ಠರು ಮತ್ತು ಎತ್ತರವಾದ ಪುರುಷರು ಆಗಿದ್ದಾರೆ. ಅವರ ವಿಷಯ ನಿಮಗೆ ತಿಳಿದೇ ಇದೆ. “ಅನಾಕ್ಯರ ಮುಂದೆ ಯಾರು ನಿಲ್ಲುವರು?” ಎಂಬ ಮಾತನ್ನು ಅವರ ಬಗ್ಗೆ ಕೇಳಿದ್ದೀರಿ.
3 ೩ ಆದುದರಿಂದ ನಿಮ್ಮ ದೇವರಾದ ಯೆಹೋವನು ತಾನೇ ವಿರೋಧಿಗಳನ್ನು ದಹಿಸುವ ಬೆಂಕಿಯೋಪಾದಿಯಲ್ಲಿ ನಿಮ್ಮ ಮುಂದೆ ಹೋಗುತ್ತಾನೆಂದು ಈಗ ತಿಳಿದುಕೊಳ್ಳಿರಿ. ಆತನೇ ಅವರನ್ನು ನಾಶಮಾಡುವನು; ಆತನೇ ಅವರನ್ನು ನಿಮ್ಮ ಮುಂದೆ ಸೋತುಹೋಗುವಂತೆ ಮಾಡುವನು. ಯೆಹೋವನು ನಿಮಗೆ ಹೇಳಿದಂತೆ ನೀವು ಅವರನ್ನು ಹೊರಡಿಸಿ, ಬೇಗನೆ ನಾಶಮಾಡುವಿರಿ.
ಹೀಗಿರುವುದರಿಂದ ನೀವು ಈ ಹೊತ್ತು ತಿಳಿದುಕೊಳ್ಳತಕ್ಕದ್ದೇನೆಂದರೆ, ನಿಮ್ಮ ದೇವರಾದ ಯೆಹೋವ ದೇವರೇ ನಿಮ್ಮ ಮುಂದೆ ಹೋಗುತ್ತಾರೆ. ಅವರು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡುವರು. ದೇವರು ಅವರನ್ನು ನಿಮ್ಮ ಮುಂದೆ ಸೋಲಿಸುವರು. ಯೆಹೋವ ದೇವರು ನಿಮಗೆ ಹೇಳಿದ ಹಾಗೆ ನೀವು ಅವರನ್ನು ಸ್ವಾಧೀನಪಡಿಸಿಕೊಂಡು ಅವರನ್ನು ಬೇಗ ತೆಗೆದುಹಾಕುವಿರಿ.
4 ೪ ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸಿದ ನಂತರ ನೀವು ನಿಮ್ಮ ಮನಸ್ಸಿನಲ್ಲಿ, “ಯೆಹೋವನು ನಮ್ಮನ್ನು ಈ ದೇಶಕ್ಕೆ ಕರೆತಂದು ಅದನ್ನು ನಮಗೆ ಸ್ವಾಧೀನಪಡಿಸಿದ್ದಕ್ಕೆ ಕಾರಣ ನಮ್ಮ ಸದಾಚಾರವೇ” ಅಂದುಕೊಳ್ಳಬಾರದು. ಆ ಜನಾಂಗಗಳ ದುರ್ನಡತೆಯ ದೆಸೆಯಿಂದಲೇ ಯೆಹೋವನು ನಿಮ್ಮ ಎದುರಿನಿಂದ ಅವರನ್ನು ಹೊರಡಿಸುತ್ತಾನೆ.
ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ತೆಗೆದುಹಾಕಿದಾಗ, “ಯೆಹೋವ ದೇವರು ನಮ್ಮನ್ನು ಈ ದೇಶವನ್ನು ಸ್ವಾಧೀನಪಡಿಸಲು ಕರೆದುಕೊಂಡು ಬಂದಿದ್ದು ನಮ್ಮ ನೀತಿಯ ನಿಮಿತ್ತವೇ,” ಎಂದು ನೀವು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳಬಾರದು. ಆ ಜನಾಂಗಗಳ ಕೆಟ್ಟತನದ ನಿಮಿತ್ತವೇ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ.
5 ೫ ನೀವು ಅವರ ದೇಶಕ್ಕೆ ಬಂದು ಅದನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ನಿಮ್ಮ ಸದಾಚಾರವಾಗಲಿ, ನಿಮ್ಮ ಒಳ್ಳೆಯ ಸ್ವಭಾವವೇ ಆಗಲಿ ಕಾರಣವಲ್ಲ. ಆ ಜನಾಂಗಗಳ ದುರ್ನಡತೆಯ ದೆಸೆಯಿಂದಲೂ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನೆರವೇರಿಸಬೇಕೆಂದಿದ್ದರಿಂದಲೂ ಅವರನ್ನು ನಿಮ್ಮ ಎದುರಿನಿಂದ ಹೊರಡಿಸಿಬಿಡುತ್ತಾನೆ.
ನಿಮ್ಮ ನೀತಿಗೋಸ್ಕರವೂ, ನಿಮ್ಮ ಹೃದಯದ ಯಥಾರ್ಥತೆಗೋಸ್ಕರವೂ ನೀವು ಅವರ ದೇಶವನ್ನು ಸ್ವತಂತ್ರಿಸಿಕೊಳ್ಳುವುದಕ್ಕೆ ಬರುವುದಿಲ್ಲ. ಆ ಜನಾಂಗಗಳ ಕೆಟ್ಟತನಕ್ಕೋಸ್ಕರವೂ, ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ್, ಇಸಾಕ್, ಯಾಕೋಬರಿಗೆ ಕೊಟ್ಟ ಮಾತನ್ನು ಪೂರೈಸುವ ಹಾಗೆಯೂ ನಿಮ್ಮ ದೇವರಾದ ಯೆಹೋವ ದೇವರು ಅವರನ್ನು ನಿಮ್ಮ ಮುಂದೆ ಹೊರಡಿಸುತ್ತಾರೆ.
6 ೬ ನಿಮ್ಮ ದೇವರಾದ ಯೆಹೋವನು ಆ ಉತ್ತಮ ದೇಶವನ್ನು ನಿಮಗೆ ಸ್ವದೇಶವಾಗಿ ಕೊಡುವುದು ನಿಮ್ಮ ಸದಾಚಾರದ ಫಲವಲ್ಲವೆಂದು ಚೆನ್ನಾಗಿ ತಿಳಿದುಕೊಳ್ಳಿರಿ. ನೀವು ಆತನ ಆಜ್ಞೆಯನ್ನು ಪಾಲಿಸದ ಮೊಂಡ ಜನರೇ ಆಗಿದ್ದೀರಿ.
ಹೀಗಿರುವುದರಿಂದ ನಿಮ್ಮ ನೀತಿಗೋಸ್ಕರ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಈ ಒಳ್ಳೆಯ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೊಡುವುದಿಲ್ಲವೆಂದು ನೀವು ತಿಳಿದುಕೊಳ್ಳಬೇಕು. ಏಕೆಂದರೆ ನೀವು ಹಟಮಾರಿ ಜನಾಂಗವಾಗಿದ್ದೀರಿ.
7 ೭ ನೀವು ಅರಣ್ಯದಲ್ಲಿ ನಿಮ್ಮ ದೇವರಾದ ಯೆಹೋವನಿಗೆ ಕೋಪಹುಟ್ಟಿಸಿದ್ದನ್ನು ನೆನಪುಮಾಡಿಕೊಳ್ಳಿರಿ; ಅದನ್ನು ಮರೆಯಬೇಡಿರಿ. ನೀವು ಐಗುಪ್ತದೇಶವನ್ನು ಬಿಟ್ಟಂದಿನಿಂದ ಈ ಸ್ಥಳಕ್ಕೆ ಬಂದ ದಿನದವರೆಗೂ ಯೆಹೋವನ ಆಜ್ಞೆಗಳನ್ನು ಧಿಕ್ಕರಿಸುವವರಾಗಿದ್ದೀರಿ.
ನೀವು ಮರುಭೂಮಿಯಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದ್ದನ್ನು ಜ್ಞಾಪಕಮಾಡಿಕೊಳ್ಳಿರಿ. ಮರೆಯಬೇಡಿರಿ. ನೀವು ಈಜಿಪ್ಟ್ ದೇಶದಿಂದ ಹೊರಟ ದಿವಸ ಮೊದಲ್ಗೊಂಡು ಈ ಸ್ಥಳಕ್ಕೆ ಬರುವವರೆಗೆ ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುತ್ತಿದ್ದೀರಿ.
8 ೮ ಉದಾಹರಣೆಗೆ, ಹೋರೇಬಿನಲ್ಲಿ ನೀವು ಯೆಹೋವನಿಗೆ ಕೋಪವನ್ನು ಹುಟ್ಟಿಸಿದಿರಿ. ಆಗ ಆತನು ಬಲು ಸಿಟ್ಟುಗೊಂಡು ನಿಮ್ಮನ್ನು ಧ್ವಂಸ ಮಾಡಬೇಕೆಂದಿದ್ದನು.
ನೀವು ಹೋರೇಬಿನಲ್ಲಿಯೂ ಯೆಹೋವ ದೇವರಿಗೆ ಕೋಪವನ್ನೆಬ್ಬಿಸಿದಾಗ, ಅವರು ನಿಮ್ಮನ್ನು ನಿಮ್ಮ ಮೇಲೆ ಸಿಟ್ಟುಮಾಡಿಕೊಂಡು ನಾಶಮಾಡಬೇಕೆಂದಿದ್ದರು.
9 ೯ ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ಬರೆದ ಆ ಕಲ್ಲಿನ ಹಲಿಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟವನ್ನು ಹತ್ತಿದ್ದಾಗ ನಾನು ಅನ್ನ ಪಾನಗಳನ್ನು ಬಿಟ್ಟು ಹಗಲಿರುಳು ನಲ್ವತ್ತು ದಿನ ಆ ಬೆಟ್ಟದಲ್ಲಿದ್ದೆನು.
ಆ ಕಲ್ಲಿನ ಹಲಗೆಗಳು ಅಂದರೆ, ಯೆಹೋವ ದೇವರು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯ ಹಲಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟದ ಮೇಲೆ ಏರಿದಾಗ, ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿದ್ದೆನು. ರೊಟ್ಟಿ ತಿನ್ನಲಿಲ್ಲ, ನೀರೂ ಕುಡಿಯಲಿಲ್ಲ.
10 ೧೦ ಆಗ ಯೆಹೋವನು ತನ್ನ ಕೈಯಿಂದಲೇ ಬರೆದ ಆ ಎರಡು ಕಲ್ಲಿನ ಹಲಿಗೆಗಳನ್ನು ನನ್ನ ವಶಕ್ಕೆ ಕೊಟ್ಟನು. ನೀವು ಸಭೆ ಕೂಡಿದ ದಿನದಲ್ಲಿ ಯೆಹೋವನು ಆ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ ನಿಮ್ಮ ಸಂಗಡ ಹೇಳಿದ ಮಾತುಗಳು ಆ ಹಲಿಗೆಗಳಲ್ಲಿದ್ದವು.
ಆಗ ಯೆಹೋವ ದೇವರು ನನಗೆ ತಮ್ಮ ಬೆರಳಿನಿಂದ ಬರೆದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು. ಯೆಹೋವ ದೇವರು ನಿಮ್ಮ ಸಂಗಡ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿನದಲ್ಲಿ ಹೇಳಿದ ಆಜ್ಞೆಗಳೆಲ್ಲಾ ಆ ಹಲಗೆಗಳಲ್ಲಿದ್ದವು.
11 ೧೧ ಆ ನಲ್ವತ್ತು ದಿನಗಳು ಕಳೆದ ಮೇಲೆ ಯೆಹೋವನು ತನ್ನ ಆಜ್ಞೆಗಳಿರುವ ಆ ಎರಡು ಕಲ್ಲಿನ ಹಲಿಗೆಗಳನ್ನು ನನಗೆ ಕೊಟ್ಟು, “ನೀನು ಬೇಗ ಇಲ್ಲಿಂದ ಹೋಗು;
ನಲವತ್ತು ದಿವಸ ಹಗಲು ರಾತ್ರಿಗಳಾದ ಮೇಲೆ ಯೆಹೋವ ದೇವರು ನನಗೆ ಒಡಂಬಡಿಕೆಯ ಹಲಗೆಗಳಾದ ಆ ಎರಡು ಕಲ್ಲಿನ ಹಲಗೆಗಳನ್ನು ಕೊಟ್ಟರು.
12 ೧೨ ನೀನು ಐಗುಪ್ತ ದೇಶದಿಂದ ಕರೆದುಕೊಂಡು ಬಂದ ನಿನ್ನ ಜನರು ಕೆಟ್ಟುಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಅವರು ಬೇಗನೆ ಬಿಟ್ಟುಹೋಗಿ ತಮಗೆ ಬೇಕಾದ ಲೋಹದ ವಿಗ್ರಹವನ್ನು ಮಾಡಿಸಿಕೊಂಡಿದ್ದಾರೆ” ಎಂದು ಹೇಳಿದನು.
ಆಗ ಯೆಹೋವ ದೇವರು, “ಎದ್ದು ಇಲ್ಲಿಂದ ಬೇಗ ಇಳಿದು ಹೋಗು. ಏಕೆಂದರೆ ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ನಿನ್ನ ಜನರು ಕೆಟ್ಟು ಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಬಿಟ್ಟು ತಮಗೆ ಎರಕ ಹೊಯ್ದ ವಿಗ್ರಹವನ್ನು ಮಾಡಿಕೊಂಡಿದ್ದಾರೆ,” ಎಂದು ನನಗೆ ಹೇಳಿದರು.
13 ೧೩ ಅದಲ್ಲದೆ ಆತನು ನನಗೆ, “ಈ ಜನರ ಸ್ವಭಾವವನ್ನು ನಾನು ನೋಡುತ್ತಾ ಬಂದಿದ್ದೇನೆ; ಇವರು ನನ್ನ ಆಜ್ಞೆಗೆ ಅವಿಧೇಯರಾದವರು.
ಇದಲ್ಲದೆ ಯೆಹೋವ ದೇವರು ನನಗೆ, “ನಾನು ಈ ಜನರನ್ನು ನೋಡಿದ್ದೇನೆ. ಇಗೋ, ಇದು ಆಜ್ಞೆಗೆ ವಿಧೇಯವಾಗದ ಜನಾಂಗವೇ.
14 ೧೪ ಬಿಡು, ನಾನು ಅವರನ್ನು ನಾಶಮಾಡಿ, ಅವರ ಹೆಸರನ್ನು ಭೂಮಿಯ ಮೇಲೆ ಉಳಿಯದಂತೆ ಮಾಡುವೆನು. ತರುವಾಯ ಅವರಿಗಿಂತಲೂ ಮಹಾ ಬಲಿಷ್ಠ ಜನಾಂಗವು ನಿನ್ನಿಂದುಂಟಾಗುವಂತೆ ಮಾಡುವೆನು” ಎಂದು ಹೇಳಿದನು.
ನನ್ನನ್ನು ಬಿಡು, ನಾನು ಅವರನ್ನು ನಾಶಮಾಡಿ, ಅವರ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಟ್ಟು, ನಿಮ್ಮನ್ನು ಅವರಿಗಿಂತ ಬಲಿಷ್ಠವಾದ ಜನಾಂಗವಾಗಿ ಮಾಡುವೆನು,” ಎಂದು ಹೇಳಿದರು.
15 ೧೫ ಆಗ ನಾನು ಆ ಎರಡು ಆಜ್ಞಾಶಾಸನಗಳನ್ನು ನನ್ನ ಎರಡು ಕೈಗಳಲ್ಲಿ ಹಿಡಿದುಕೊಂಡು ಬೆಂಕಿಯಿಂದ ಉರಿಯುವ ಆ ಬೆಟ್ಟದಿಂದ ಇಳಿದು ಬಂದು ನೋಡಲಾಗಿ
ಆಗ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದೆನು. ಆ ಬೆಟ್ಟವು ಬೆಂಕಿಯಿಂದ ಉರಿಯುತ್ತಿತ್ತು. ಒಡಂಬಡಿಕೆಯ ಎರಡು ಹಲಗೆಗಳು ನನ್ನ ಎರಡು ಕೈಗಳಲ್ಲಿ ಇದ್ದವು.
16 ೧೬ ನೀವು ನಿಮ್ಮ ದೇವರಾದ ಯೆಹೋವನಿಗೆ ದ್ರೋಹಿಗಳಾಗಿ ಲೋಹದ ಬಸವನನ್ನು ಮಾಡಿಸಿಕೊಂಡು, ಯೆಹೋವನು ನಿಮಗೆ ಆಜ್ಞಾಪಿಸಿದ್ದ ಮಾರ್ಗವನ್ನು ಬೇಗನೆ ಬಿಟ್ಟು ಹೋದದ್ದು ನನಗೆ ಕಂಡುಬಂತು.
ನಾನು ನೋಡಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಎರಕ ಹೊಯ್ದ ಕರುವನ್ನು ನಿಮಗೆ ಮಾಡಿಕೊಂಡು, ಯೆಹೋವ ದೇವರು ನಿಮಗೆ ಆಜ್ಞಾಪಿಸಿದ ಮಾರ್ಗವನ್ನು ಬೇಗ ಬಿಟ್ಟುಬಿಟ್ಟು ಹೋಗಿದ್ದಿರಿ.
17 ೧೭ ಅದನ್ನು ನೋಡಿ ನಾನು ಕೈಯಲ್ಲಿದ್ದ ಆ ಎರಡು ಶಿಲಾಶಾಸನಗಳನ್ನು ನಿಮಗೆದುರಾಗಿಯೇ ನೆಲಕ್ಕೆ ಹಾಕಿ ಒಡೆದುಬಿಟ್ಟೆನು.
ಆಗ ನಾನು ಆ ಎರಡು ಹಲಗೆಗಳನ್ನು ತೆಗೆದುಕೊಂಡು ನನ್ನ ಕೈಯಿಂದ ಬಿಸಾಡಿ, ನಿಮ್ಮ ಮುಂದೆ ಒಡೆದು ಹಾಕಿದೆನು.
18 ೧೮ ನೀವು ಹೀಗೆ ಅಪರಾಧಮಾಡಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡಿಸಿ ಆತನನ್ನು ಕೋಪಗೊಳಿಸಿದ ಕಾರಣ ನಾನು ಮೊದಲಿನಂತೆ ಅನ್ನ ಪಾನಗಳನ್ನು ಬಿಟ್ಟು ನಲ್ವತ್ತು ದಿನಗಳು ಹಗಲಿರುಳು ಯೆಹೋವನ ಸನ್ನಿಧಿಯಲ್ಲೇ ಬಿದ್ದಿದ್ದೆನು.
ಆಮೇಲೆ ನೀವು ಮಾಡಿದ ಎಲ್ಲಾ ಪಾಪಗಳ ನಿಮಿತ್ತವೂ ನೀವು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರಿಗೆ ಕೋಪವನ್ನೆಬ್ಬಿಸಿದ ನಿಮಿತ್ತವೂ ಮುಂಚಿನಂತೆ ನಲವತ್ತು ದಿವಸ ಹಗಲುರಾತ್ರಿ ಊಟಮಾಡದೆ, ನೀರು ಕುಡಿಯದೆ, ಯೆಹೋವ ದೇವರ ಮುಂದೆ ಬಿದ್ದಿದ್ದೆನು.
19 ೧೯ ಯೆಹೋವನು ನಿಮ್ಮ ಮೇಲೆ ಬಹುಕೋಪಗೊಂಡು ನಿಮ್ಮನ್ನು ನಾಶಮಾಡಬೇಕೆಂದು ಆಲೋಚಿಸಿದ್ದರಿಂದ ನಾನು ಹೆದರಿಕೊಂಡೆನು. ಆದರೆ ಆ ಸಮಯದಲ್ಲಿಯೂ ಆತನು ನನ್ನ ಮನವಿಯನ್ನು ಕೇಳಿದನು.
ಏಕೆಂದರೆ ಯೆಹೋವ ದೇವರು ನಿಮ್ಮನ್ನು ನಾಶಮಾಡುವಂತೆ ನಿಮ್ಮ ಮೇಲೆ ಮಾಡುವ ಕೋಪ ರೌದ್ರಗಳಿಗೆ ಹೆದರಿದೆನು. ಆದರೆ ಆ ಸಾರಿ ಕೂಡ ಯೆಹೋವ ದೇವರು ನನ್ನ ಬೇಡಿಕೆಯನ್ನು ಕೇಳಿದರು.
20 ೨೦ ಅದಲ್ಲದೆ ಯೆಹೋವನು ಆರೋನನ ಮೇಲೆ ಬಹಳ ಸಿಟ್ಟುಗೊಂಡು ಅವನನ್ನೂ ನಾಶಮಾಡಬೇಕೆಂದಿದ್ದರಿಂದ ನಾನು ಅವನಿಗೋಸ್ಕರವಾಗಿಯೂ ಆ ಸಮಯದದಲ್ಲಿ ಪ್ರಾರ್ಥಿಸಿದೆನು.
ಆರೋನನನ್ನು ನಾಶಮಾಡುವಂತೆ ಯೆಹೋವ ದೇವರು ಅವನ ಮೇಲೆಯೂ ಬಹಳ ಕೋಪಗೊಂಡರು. ಆದ್ದರಿಂದ ಆರೋನನಿಗೋಸ್ಕರವೂ ಆ ಸಮಯದಲ್ಲಿ ಪ್ರಾರ್ಥನೆ ಮಾಡಿದೆನು.
21 ೨೧ ಮತ್ತು ನೀವು ಯಾವುದರ ಮೂಲಕ ಪಾಪವನ್ನು ಮಾಡಿದ್ದಿರೋ ಆ ಬಸವನನ್ನು ನಾನು ತೆಗೆದುಕೊಂಡು ಬೆಂಕಿಯಿಂದ ಸುಟ್ಟು, ಒಡೆದು, ಅರೆದು ಧೂಳುಮಾಡಿ, ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬೀಸಾಡಿಬಿಟ್ಟೆ.
ಇದಲ್ಲದೆ ನೀವು ಯಾವದರ ಮೂಲಕ ಪಾಪವನ್ನು ಮಾಡಿದ್ದೀರೋ ಆ ಚಿನ್ನದ ಕರುವನ್ನು ನಾನು ತೆಗೆದುಕೊಂಡು, ಬೆಂಕಿಯಿಂದ ಸುಟ್ಟು, ಒಡೆದು, ಅರೆದು, ಧೂಳುಮಾಡಿ, ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ಬಿಸಾಡಿದೆನು.
22 ೨೨ ತಬೇರಾ, ಮಸ್ಸಾ, ಕಿಬ್ರೋತ್ ಹತಾವಾ ಎಂಬ ಸ್ಥಳಗಳಲ್ಲಿಯೂ ನೀವು ಯೆಹೋವನಿಗೆ ಕೋಪವನ್ನು ಹುಟ್ಟಿಸಿದ್ದಿರಿ.
ನೀವು ತಬೇರಾ, ಮಸ್ಸಾ, ಕಿಬ್ರೋತ್ ಹತಾವಾ ಎಂಬ ಸ್ಥಳಗಲ್ಲಿಯೂ ಯೆಹೋವ ದೇವರಿಗೆ ಕೋಪವನ್ನು ಎಬ್ಬಿಸಿದಿರಿ.
23 ೨೩ ಅದಲ್ಲದೆ ಕಾದೇಶ್ ಬರ್ನೇಯದಲ್ಲಿ ಯೆಹೋವನು ನಿಮಗೆ, “ಬೆಟ್ಟದ ಸೀಮೆಯನ್ನು ಹತ್ತಿ ನಾನು ನಿಮಗೆ ಕೊಟ್ಟಿರುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ” ಎಂದು ಅಪ್ಪಣೆಕೊಟ್ಟಾಗಲೂ ನೀವು ನಿಮ್ಮ ದೇವರಾದ ಯೆಹೋವನ ಆ ಆಜ್ಞೆಯನ್ನು ಧಿಕ್ಕರಿಸಿ, ಆತನನ್ನು ನಂಬದೆ, ಆತನ ಮಾತನ್ನು ಅಲಕ್ಷ್ಯ ಮಾಡಿದಿರಿ.
ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಕಾದೇಶ್ ಬರ್ನೇಯದಿಂದ ಕಳುಹಿಸಿ, “ನೀವು ಹೋಗಿ ನಾನು ನಿಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳಿರಿ,” ಎಂದು ಹೇಳಿದಾಗ, ನೀವು ನಿಮ್ಮ ದೇವರಾದ ಯೆಹೋವ ದೇವರ ಅಪ್ಪಣೆಗೆ ವಿರೋಧವಾಗಿ ತಿರುಗಿಬಿದ್ದು ಅವರನ್ನು ನಂಬಲಿಲ್ಲ. ಅವರ ಮಾತನ್ನೂ ಕೇಳಲಿಲ್ಲ.
24 ೨೪ ನನಗೆ ನಿಮ್ಮ ಪರಿಚಯವಾದಂದಿನಿಂದಲೂ ನೀವು ಯೆಹೋವನಿಗೆ ದ್ರೋಹಿಗಳಾಗಿ ನಡೆದುಕೊಂಡಿದ್ದೀರಿ.
ನಾನು ನಿಮ್ಮನ್ನು ತಿಳಿದಂದಿನಿಂದ ನೀವು ಯೆಹೋವ ದೇವರಿಗೆ ವಿರೋಧವಾಗಿ ತಿರುಗಿಬೀಳುವವರಾಗಿದ್ದೀರಿ.
25 ೨೫ ಯೆಹೋವನು ನಿಮ್ಮನ್ನು ನಾಶಮಾಡಬೇಕೆಂದಿದ್ದರಿಂದ ನಾನು ಆ ನಲ್ವತ್ತು ದಿನವೂ ಹಗಲಿರುಳು ಆತನ ಸನ್ನಿಧಿಯಲ್ಲಿ ಬಿದ್ದಿದ್ದೆನು.
ಹೀಗಿರಲಾಗಿ ಯೆಹೋವ ದೇವರು ನಿಮ್ಮನ್ನು ನಾಶಮಾಡುತ್ತೇನೆಂದು ಹೇಳಿದ್ದರಿಂದ, ನಾನು ಮುಂಚೆ ಬಿದ್ದುಕೊಂಡ ಹಾಗೆಯೇ ನಲವತ್ತು ದಿವಸ ಹಗಲುರಾತ್ರಿ ಯೆಹೋವ ದೇವರ ಮುಂದೆ ಬಿದ್ದಿದ್ದೆನು.
26 ೨೬ ನಾನು ಆತನನ್ನು ಬೇಡಿಕೊಳ್ಳುತ್ತಾ, “ಕರ್ತನಾದ ಯೆಹೋವನೇ, ನೀನು ನಿನ್ನ ಮಹಿಮೆಯಿಂದ ರಕ್ಷಿಸಿ ನಿನ್ನ ಭುಜಬಲದಿಂದ ಐಗುಪ್ತ್ಯರಿಂದ ಬಿಡುಗಡೆಮಾಡಿದ ನಿನ್ನ ಸ್ವಕೀಯ ಜನರನ್ನು ನಾಶಮಾಡಬೇಡ.
ನಾನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿ, “ಸಾರ್ವಭೌಮ ಯೆಹೋವ ದೇವರೇ, ನೀವು ನಿಮ್ಮ ಮಹಿಮೆಯಿಂದ ವಿಮೋಚಿಸಿ, ಬಲವಾದ ಕೈಯಿಂದ ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ ನಿಮ್ಮ ಜನರನ್ನು ನಾಶಮಾಡಬೇಡಿ.
27 ೨೭ ಇವರ ಮೊಂಡುತನ, ದುಷ್ಟತ್ವ, ಪಾಪ ಇವುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿನ್ನ ಸೇವಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರನ್ನು ನೆನಪಿಗೆ ತಂದುಕೋ.
ನಿಮ್ಮ ದಾಸರಾದ ಅಬ್ರಹಾಮ್, ಇಸಾಕ್, ಯಾಕೋಬರನ್ನು ಜ್ಞಾಪಕಮಾಡಿಕೊಳ್ಳಿರಿ. ಈ ಜನರ ಕಾಠಿಣ್ಯದ ಮೇಲೆಯೂ, ಅವರ ದುಷ್ಟತ್ವದ ಮೇಲೆಯೂ, ಅವರ ಪಾಪದ ಮೇಲೆಯೂ ದೃಷ್ಟಿ ಇಡಬೇಡಿ.
28 ೨೮ ನೀನು ಯಾವ ದೇಶದಿಂದ ನಮ್ಮನ್ನು ಬರಮಾಡಿದಿಯೋ ಆ ದೇಶದವರು, ‘ಯೆಹೋವನು ಇಸ್ರಾಯೇಲರಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಸೇರಿಸಲಾರದೆ ಹಗೆಮಾಡಿ ಅರಣ್ಯದಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದನು’ ಎಂದು ಹೇಳುವುದಕ್ಕೆ ಆಸ್ಪದವಾದೀತು.
ನೀವು ಯಾವ ದೇಶದಿಂದ ನಮ್ಮನ್ನು ಬರಮಾಡಿದಿರೋ, ಆ ದೇಶದವರು, ‘ಯೆಹೋವ ದೇವರು ಇಸ್ರಾಯೇಲರಿಗೆ ವಾಗ್ದಾನ ಮಾಡಿದ ನಾಡಿಗೆ ಅವರನ್ನು ಸೇರಿಸಲಾರದೆ ಹಗೆಮಾಡಿ, ಮರುಭೂಮಿಯಲ್ಲಿ ಕೊಲ್ಲುವುದಕ್ಕೆ ಕರೆದುಕೊಂಡು ಹೋದರು’ ಎಂದು ಹೇಳುವುದಕ್ಕೆ ಆಸ್ಪದವಾದೀತು.
29 ೨೯ ಇವರು ಮಹಾಶಕ್ತಿಯಿಂದಲೂ ಮತ್ತು ಭುಜಬಲದಿಂದಲೂ ನೀನು ಬಿಡಿಸಿದ ನಿನ್ನ ಸ್ವಕೀಯ ಜನರಲ್ಲವೇ” ಎಂದು ಬಿನ್ನೈಸಿದೆನು.
ಆದರೂ ನೀವು ನಿಮ್ಮ ದೊಡ್ಡ ಶಕ್ತಿಯಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಹೊರಗೆ ಬರಮಾಡಿದ ನಿಮ್ಮ ಜನವೂ ನಿಮ್ಮ ಸೊತ್ತೂ ಇವರೇ,” ಎಂದು ಹೇಳಿದೆನು.