< ಧರ್ಮೋಪದೇಶಕಾಂಡ 6 >
1 ೧ ನೀವು ಯೊರ್ದನ್ ನದಿ ದಾಟಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಅನುಸರಿಸುವುದಕ್ಕಾಗಿ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದ ಧರ್ಮೋಪದೇಶವೂ ಮತ್ತು ವಿಧಿನಿಯಮಗಳೂ ಇವೇ.
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಬೋಧಿಸಲು ನನಗೆ ನಡೆಸಿದ ಈ ಆಜ್ಞೆಗಳನ್ನೂ, ತೀರ್ಪುಗಳನ್ನೂ, ನಿಯಮಗಳನ್ನೂ ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದವುಗಳು ಇವೇ.
2 ೨ ನೀವೂ, ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಅವರ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು, ನಾನು ಈಗ ಬೋಧಿಸುವ ಆತನ ವಿಧಿನಿಯಮಗಳನ್ನೆಲ್ಲಾ ಅನುಸರಿಸಬೇಕೆಂದೂ ಮತ್ತು ನೀವು ಬಹುಕಾಲ ಬಾಳಬೇಕೆಂದೂ ಇವುಗಳನ್ನು ಆಜ್ಞಾಪಿಸಿದ್ದಾನೆ.
ನೀವೂ, ನಿಮ್ಮ ಮಕ್ಕಳೂ, ನಿಮ್ಮ ಮೊಮ್ಮಕ್ಕಳೂ ತಮ್ಮ ಜೀವನದ ದಿವಸಗಳಲ್ಲೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಕೈಗೊಳ್ಳುವ ಹಾಗೆಯೂ, ನಿಮ್ಮ ದಿವಸಗಳು ಬಹಳವಾಗುವ ಹಾಗೆಯೂ ನಾನು ನಿಮಗೆ ಕೊಡುವ ದೇವರ ಎಲ್ಲಾ ತೀರ್ಪುಗಳನ್ನು ಮತ್ತು ಆಜ್ಞೆಗಳನ್ನು ಅನುಸರಿಸಬೇಕು.
3 ೩ ಆದುದರಿಂದ ಇಸ್ರಾಯೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನು ವಾಗ್ದಾನಮಾಡಿದ ಪ್ರಕಾರ ಹಾಲೂ ಮತ್ತು ಜೇನೂ ಹರಿಯುವ ಆ ದೇಶದಲ್ಲಿ ನಿಮಗೆ ಶುಭವುಂಟಾಗುವುದಕ್ಕೂ, ನೀವು ಬಹಳವಾಗಿ ಹೆಚ್ಚುವುದಕ್ಕೂ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಲೇಬೇಕು.
ಹೀಗಿರುವುದರಿಂದ ಓ ಇಸ್ರಾಯೇಲರೇ, ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರು ವಾಗ್ದಾನ ಮಾಡಿದ ಪ್ರಕಾರ ಹಾಲೂ ಜೇನೂ ಹರಿಯುವ ದೇಶದಲ್ಲಿ ನಿಮಗೆ ಒಳ್ಳೆಯದಾಗುವ ಹಾಗೆಯೂ ನೀವು ಬಹಳವಾಗಿ ಹೆಚ್ಚುವ ಹಾಗೆಯೂ ಲಕ್ಷ್ಯವಿಟ್ಟು ಕೇಳಿ ವಿಧೇಯರಾಗಿರಿ.
4 ೪ ಇಸ್ರಾಯೇಲರೇ, ಕೇಳಿರಿ, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು;
ಇಸ್ರಾಯೇಲರೇ, ಕೇಳಿರಿ: ದೇವರಾದ ಯೆಹೋವ ನಮ್ಮ ದೇವರು; ಯೆಹೋವ ದೇವರು ಒಬ್ಬರೇ.
5 ೫ ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.
ನೀವು ನಿಮ್ಮ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.
6 ೬ ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು.
ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು.
7 ೭ ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡಬೇಕು.
ಅವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸ ಮಾಡಿಸಿ, ನಿಮ್ಮ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯವಾಗಿ ಮಾತನಾಡಬೇಕು.
8 ೮ ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು, ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು.
ಅವುಗಳನ್ನು ಗುರುತಾಗಿ ನಿಮ್ಮ ಕೈಗಳಿಗೆ ಕಟ್ಟಿಕೊಳ್ಳಬೇಕು. ಅವುಗಳನ್ನು ನಿಮ್ಮ ಹಣೆಗೂ ಕಟ್ಟಿಕೊಳ್ಳಬೇಕು.
9 ೯ ನಿಮ್ಮ ಮನೆಬಾಗಿಲಿನ ನಿಲುವು ಪಟ್ಟಿಗಳಲ್ಲಿಯೂ ಮತ್ತು ದ್ವಾರಗಳ ಮೇಲೆಯೂ ಇವುಗಳನ್ನು ಬರೆಯಬೇಕು.
ಅವುಗಳನ್ನು ನಿಮ್ಮ ಮನೆಯ ನಿಲುವು ಪಟ್ಟಿಗಳ ಮೇಲೆಯೂ ನಿಮ್ಮ ಬಾಗಿಲುಗಳ ಮೇಲೆಯೂ ಬರೆಯಬೇಕು.
10 ೧೦ ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದಾಗ ನೀವು ಕಟ್ಟದ ಒಳ್ಳೆಯ ದೊಡ್ಡ ಪಟ್ಟಣಗಳನ್ನೂ, ನೀವು ಕೂಡಿಸದ ಉತ್ತಮ ವಸ್ತುಗಳಿಂದ
ಇದಲ್ಲದೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಾಕೋಬರಿಗೆ ಪ್ರಮಾಣ ಮಾಡಿದ ದೇಶದಲ್ಲಿ ನಿಮ್ಮನ್ನು ಸೇರಿಸಿ, ನೀವು ಕಟ್ಟಿದ ದೊಡ್ಡದಾದ ಒಳ್ಳೆಯ ಪಟ್ಟಣಗಳನ್ನೂ,
11 ೧೧ ತುಂಬಿದ ಮನೆಗಳನ್ನೂ, ನೀವು ತೋಡದ ನೀರುಗುಂಡಿಗಳನ್ನೂ, ನೀವು ಬೆಳಸದ ದ್ರಾಕ್ಷಿತೋಟಗಳನ್ನೂ ಮತ್ತು ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ,
ನೀವು ಕೂಡಿಸದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ, ನೀವು ಅಗೆಯದಿರುವ ಬಾವಿಗಳನ್ನೂ, ನೀವು ನೆಡದ ದ್ರಾಕ್ಷಿತೋಟಗಳನ್ನೂ, ಓಲಿವ್ ತೋಟಗಳನ್ನೂ ನಿಮಗೆ ಕೊಡಲಾಗಿ, ನೀವು ತಿಂದು ತೃಪ್ತರಾಗಿರುವಿರಿ.
12 ೧೨ ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನನ್ನು ಮರೆಯದೇ ಎಚ್ಚರದಿಂದಿರಿ.
ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿದ ಯೆಹೋವ ದೇವರನ್ನು ಮರೆಯದ ಹಾಗೆ ನೋಡಿಕೊಳ್ಳಿರಿ.
13 ೧೩ ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು, ಆತನನ್ನೇ ಸೇವಿಸಬೇಕು ಮತ್ತು ಆತನ ಹೆಸರು ಹೇಳಿ ಪ್ರಮಾಣಮಾಡಬೇಕು.
ನಿಮ್ಮ ದೇವರಾದ ಯೆಹೋವ ದೇವರಿಗೆ ನೀವು ಭಯಪಡಬೇಕು. ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು ಮತ್ತು ಅವರ ಹೆಸರಿನಲ್ಲಿ ಆಣೆಯಿಟ್ಟುಕೊಳ್ಳಬೇಕು.
14 ೧೪ ಸುತ್ತಮುತ್ತಲಿರುವ ಜನಾಂಗಗಳು ಸೇವಿಸುವ ದೇವರುಗಳನ್ನು ನೀವು ಆರಾಧಿಸಬಾರದು.
ನಿಮ್ಮ ಸುತ್ತಲಿರುವ ಜನರ ದೇವರುಗಳಾಗಿರುವ ಬೇರೆ ದೇವರುಗಳನ್ನು ನೀವು ಹಿಂಬಾಲಿಸಬೇಡಿರಿ.
15 ೧೫ ನಿಮ್ಮ ಮಧ್ಯದಲ್ಲಿರುವ ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಿಸುವುದಿಲ್ಲ, ಆತನು ನಿಮ್ಮ ಮೇಲೆ ಕೋಪಗೊಂಡರೆ ನಿಮ್ಮನ್ನು ಭೂಮಿಯ ಮೇಲೆ ಉಳಿಯದಂತೆ ನಾಶಮಾಡಾನು.
ಏಕೆಂದರೆ ನಿಮ್ಮ ಮಧ್ಯದಲ್ಲಿರುವ ನಿಮ್ಮ ಯೆಹೋವ ದೇವರು ತಮಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ಸ್ವಾಮ್ಯಾಸಕ್ತರಾದ ದೇವರು. ನಿಮ್ಮ ದೇವರ ಕೋಪವು ನಿಮ್ಮ ಮೇಲೆ ಉರಿಯಲು, ಅವರು ನಿಮ್ಮನ್ನು ಭೂಮಿಯ ಮೇಲಿನಿಂದ ತೆಗೆದುಹಾಕುವರು.
16 ೧೬ ನೀವು ಮಸ್ಸದಲ್ಲಿ ನಿಮ್ಮ ದೇವರಾದ ಯೆಹೋವನನ್ನು ಪರೀಕ್ಷಿಸಿದಂತೆ ಇನ್ನು ಮುಂದೆ ಮಾಡಬೇಡಿರಿ.
ನೀವು ಮಸ್ಸದಲ್ಲಿ ಪರೀಕ್ಷಿಸಿದ ಹಾಗೆ ನಿಮ್ಮ ದೇವರಾದ ಯೆಹೋವ ದೇವರನ್ನು ಪರೀಕ್ಷಿಸಬಾರದು.
17 ೧೭ ನಿಮ್ಮ ದೇವರಾದ ಯೆಹೋವನು ನಿಮಗೆ ನೇಮಿಸಿದ ಆಜ್ಞಾವಿಧಿನಿಯಮಗಳನ್ನು ಅನುಸರಿಸಲೇಬೇಕು.
ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನೂ, ಅವರು ನಿಮಗೆ ನೀಡಿದ ಷರತ್ತುಗಳನ್ನೂ, ಅವರ ತೀರ್ಪುಗಳನ್ನೂ ಎಚ್ಚರಿಕೆಯಿಂದ ಕೈಗೊಳ್ಳಬೇಕು.
18 ೧೮ ಯೆಹೋವನ ದೃಷ್ಟಿಗೆ ಯಾವುದು ನ್ಯಾಯವೂ ಮತ್ತು ಯೋಗ್ಯವೂ ಆಗಿದೆಯೋ ಅದನ್ನೇ ಮಾಡಬೇಕು. ಹೀಗೆ ನಡೆದರೆ ನಿಮಗೆ ಶುಭವುಂಟಾಗುವುದು, ಮತ್ತು ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ಉತ್ತಮದೇಶವನ್ನು ನೀವು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.
ನಿಮಗೆ ಒಳ್ಳೆಯದಾಗುವಂತೆಯೂ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಆ ಒಳ್ಳೆಯ ದೇಶವನ್ನು ನೀವು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವಂತೆಯೂ ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೂ, ಒಳ್ಳೆಯದನ್ನೂ ಮಾಡಿರಿ.
19 ೧೯ ಆತನು ತಾನೇ ನಿಮ್ಮ ಶತ್ರುಗಳನ್ನು ನಿಮ್ಮ ಎದುರಿನಿಂದ ಹೊರಡಿಸುವೆನೆಂದು ಮಾತುಕೊಟ್ಟನಲ್ಲವೇ.
ಆಗ ಯೆಹೋವ ದೇವರು ತಾವು ಹೇಳಿದಂತೆ ನಿಮ್ಮ ಎಲ್ಲಾ ಶತ್ರುಗಳನ್ನು ನಿಮ್ಮ ಮುಂದೆಯೇ ಓಡಿಸಿಬಿಡುವರು.
20 ೨೦ ಇನ್ನು ಮುಂದೆ ನಿಮ್ಮ ಮಕ್ಕಳು, “ಈ ಆಜ್ಞಾವಿಧಿನಿಯಮಗಳನ್ನು ನಮ್ಮ ದೇವರಾದ ಯೆಹೋವನು ಏಕೆ ನೇಮಿಸಿದನು?” ಎಂದು ವಿಚಾರಿಸುವಾಗ
ಮುಂದಿನ ಕಾಲದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು, “ನಮ್ಮ ದೇವರಾದ ಯೆಹೋವ ದೇವರು ಆಜ್ಞಾಪಿಸಿದ ಈ ಷರತ್ತುಗಳ, ತೀರ್ಪುಗಳ ಹಾಗು ನಿಯಮಗಳ ಅರ್ಥ ಏನು?” ಎಂದು ನಿಮ್ಮನ್ನು ಕೇಳುವರು.
21 ೨೧ ನೀವು ಅವರಿಗೆ, “ನಾವು ಐಗುಪ್ತದೇಶದಲ್ಲಿ ಫರೋಹನಿಗೆ ದಾಸರಾಗಿದ್ದಾಗ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡುಗಡೆಮಾಡಿದನು.
ಆಗ ನೀವು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಫರೋಹನನಿಗೆ ದಾಸರಾಗಿದ್ದೆವು. ಯೆಹೋವ ದೇವರು ಬಲವಾದ ಕೈಯಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದರು.
22 ೨೨ ಆತನು ಐಗುಪ್ತ್ಯರನ್ನೂ, ಫರೋಹನನ್ನೂ ಮತ್ತು ಅವನ ಮನೆಯವರನ್ನೂ ಬಾಧಕವಾದ ದೊಡ್ಡ ಮಹತ್ಕಾರ್ಯಗಳಿಂದಲೂ, ಉತ್ಪಾತಗಳಿಂದಲೂ ನಮ್ಮ ಕಣ್ಣೆದುರಿನಲ್ಲಿ ಶಿಕ್ಷಿಸಿ,
ಯೆಹೋವ ದೇವರು ನಮ್ಮ ಕಣ್ಣ ಮುಂದೆಯೇ ಈಜಿಪ್ಟಿನ ಮೇಲೆಯೂ, ಫರೋಹನ ಮೇಲೆಯೂ, ಅವನ ಎಲ್ಲಾ ಮನೆಯ ಮೇಲೆಯೂ ಭಯಂಕರವಾದ ದೊಡ್ಡ ಗುರುತುಗಳನ್ನೂ, ಅದ್ಭುತಗಳನ್ನೂ ಕಳುಹಿಸಿದರು.
23 ೨೩ ತಾನು ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಮ್ಮನ್ನು ಸೇರಿಸುವುದಕ್ಕಾಗಿ ಐಗುಪ್ತದೇಶದೊಳಗಿಂದ ಬರಮಾಡಿದನು.
ಆದರೆ ದೇವರು ನಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶವನ್ನು ನಮಗೆ ಕೊಡುವಂತೆಯೂ ನಾವು ಅದರಲ್ಲಿ ಪ್ರವೇಶ ಮಾಡುವಂತೆಯೂ ನಮ್ಮನ್ನು ಈಜಿಪ್ಟಿನಿಂದ ಬರಮಾಡಿದರು.
24 ೨೪ ಆ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ, ಆತನು ಈಗಲೂ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯುಳ್ಳವರಾಗಿರಬೇಕು.
ನಮಗೆ ಎಂದೆಂದಿಗೂ ಒಳ್ಳೆಯದಾಗುವಂತೆಯೂ, ಇಂದಿನಂತೆ ನಾವು ಬದುಕುವಂತೆಯೂ, ನಾವು ಈ ನಿಯಮಗಳನ್ನೆಲ್ಲಾ ಕೈಗೊಂಡು ನಮ್ಮ ಯೆಹೋವ ದೇವರಿಗೆ ಭಯಪಡಬೇಕೆಂದು ಅವರು ನಮಗೆ ಆಜ್ಞಾಪಿಸಿದ್ದಾರೆ.
25 ೨೫ ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಪರಿಗಣಿಸಲು ಯೋಗ್ಯರಾಗುವೆವು” ಎಂಬುದಾಗಿ ನೀವು ಉತ್ತರಕೊಡಬೇಕು.
ಅವರು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಗೊಂಡು ನಡೆದರೆ, ಅದು ನಮಗೆ ನೀತಿಯಾಗಿರುವುದು,” ಎಂದು ಹೇಳಬೇಕು.