< ಧರ್ಮೋಪದೇಶಕಾಂಡ 15 >

1 ಪ್ರತಿ ಏಳನೆಯ ವರ್ಷದ ಕೊನೆಯಲ್ಲಿ ಸಾಲವನ್ನು ಬಿಟ್ಟುಬಿಡಬೇಕು.
ಪ್ರತಿ ಏಳು ವರ್ಷಗಳ ಅಂತ್ಯದಲ್ಲಿ ಎಲ್ಲರ ಸಾಲಗಳನ್ನೂ ಮನ್ನಾಮಾಡಬೇಕು.
2 ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು.
ನೀವು ಮಾಡಬೇಕಾದ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಾದ ಇಸ್ರಾಯೇಲರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡಬೇಕು. ಅದು ಯೆಹೋವ ದೇವರ ಬಿಡುಗಡೆಯ ವರ್ಷ ಎಂದು ಪ್ರಕಟವಾಗಿರುವುದರಿಂದ ತನ್ನ ನೆರೆಯವನಿಂದಲೂ, ತನ್ನ ಸಹೋದರನಿಂದಲೂ ಸಾಲವನ್ನು ಕೇಳಬಾರದು.
3 ಅನ್ಯದೇಶದವರಿಗೆ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದೇ ಹೊರತು ಸ್ವದೇಶದವನಿಗೆ ಕೊಟ್ಟಿರುವುನ್ನು ಕೇಳಬಾರದು.
ಅನ್ಯದೇಶದವರಿಂದ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದು. ಆದರೆ ಸ್ವದೇಶದವನಾದ ನಿಮ್ಮ ಸಹೋದರರು ಕೊಡಬೇಕಾದ ಸಾಲವನ್ನು ನೀವು ಮನ್ನಾಮಾಡಬೇಕು.
4 ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ,
ಏಕೆಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸೊತ್ತಾಗಿ ಕೊಡುವ ದೇಶದಲ್ಲಿ ಯೆಹೋವ ದೇವರು ನಿಮ್ಮನ್ನು ಬಹಳವಾಗಿ ಆಶೀರ್ವದಿಸುವರು. ಹೀಗಾಗಿ ನಿಮ್ಮಲ್ಲಿ ಬಡವರೇ ಇರುವುದಿಲ್ಲ.
5 ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನೀವು ಅಭಿವೃದ್ಧಿ ಹೊಂದುವುದರಿಂದ ನಿಮ್ಮಲ್ಲಿ ಬಡವರೇ ಇರುವುದಿಲ್ಲ.
ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಎಚ್ಚರಿಕೆಯಿಂದ ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಎಲ್ಲಾ ಆಜ್ಞೆಯನ್ನು ಕಾಪಾಡಿ ನಡೆಯಿರಿ.
6 ನಿಮ್ಮ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವನು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಅವರಿಂದ ಸಾಲ ತೆಗೆದುಕೊಳ್ಳುವುದಿಲ್ಲ. ನೀವು ಅನೇಕ ಜನಾಂಗಗಳ ಮೇಲೆ ದೊರೆತನ ಮಾಡುವಿರೇ ಹೊರತು ಅವರು ನಿಮ್ಮ ಮೇಲೆ ದೊರೆತನ ಮಾಡುವುದಿಲ್ಲ.
ನಿಶ್ಚಯವಾಗಿ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದಂತೆ ನಿನ್ನನ್ನು ಆಶೀರ್ವದಿಸುವರು. ನೀವು ಸಾಲ ತೆಗೆದುಕೊಳ್ಳದೆ ಅನೇಕ ಜನಾಂಗಗಳಿಗೆ ಸಾಲ ಕೊಡುವಿರಿ. ಅನೇಕ ಜನಾಂಗಗಳನ್ನು ಆಳುವಿರಿ, ಅವರು ನಿಮ್ಮನ್ನು ಆಳುವುದಿಲ್ಲ.
7 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಯಾವ ಊರಿನಲ್ಲಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು.
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ನಿಮ್ಮ ದೇಶದಲ್ಲಿ, ನಿಮ್ಮ ಸಹೋದರರಲ್ಲಿ ಬಡವರು ಇದ್ದರೆ, ನಿಮ್ಮ ಹೃದಯವನ್ನು ಕಠಿಣ ಮಾಡಿಕೊಳ್ಳಬೇಡಿರಿ. ನಿಮ್ಮ ಕೈಯನ್ನು ನಿಮ್ಮ ಬಡ ಸಹೋದರರಿಗೆ ಮುಚ್ಚಿಕೊಳ್ಳಬೇಡಿರಿ.
8 ನೀವು ಕೈತೆರೆದು ಅವನಿಗೆ ಅವಶ್ಯವಾಗಿ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು.
ನಿಮ್ಮ ಕೈಯನ್ನು ಅವನಿಗೆ ವಿಶಾಲವಾಗಿ ತೆರೆಯಬೇಕು. ಅವನಿಗೆ ಅಗತ್ಯವಾದಷ್ಟು ಕೊಡಬೇಕು.
9 ನೀವು “ಬಿಡುಗಡೆಯುಂಟಾಗುವ ಏಳನೆಯ ವರ್ಷವು ಸಮೀಪವಾಯಿತು” ಎಂಬ ನೀಚವಾದ ಆಲೋಚನೆಯನ್ನು ಮಾಡಿ, ಆ ಬಡ ಸಹೋದರನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಧಿಕ್ಕರಿಸಿದರೆ ಅವನು ಒಂದು ವೇಳೆ ನಿಮ್ಮ ವಿಷಯದಲ್ಲಿ ಯೆಹೋವನಿಗೆ ಮೊರೆಯಿಟ್ಟಾನು, ನೀವು ದೋಷಿಗಳಾಗಿ ಕಂಡುಬರುವಿರಿ.
“ಸಾಲ ಬಿಡುಗಡೆಯ ವರ್ಷವಾದ ಏಳನೆಯ ವರ್ಷವು ಸಮೀಪವಾಯಿತು,” ಎಂಬ ದುಷ್ಟ ಆಲೋಚನೆ ನಿಮ್ಮ ಹೃದಯದಲ್ಲಿ ಹುಟ್ಟಿ, ನಿಮ್ಮ ಬಡ ಸಹೋದರನ ಮೇಲೆ ಕಠಿಣವಾಗಿ, ನೀವು ಅವನಿಗೆ ಏನೂ ಕೊಡದೆ ಇರಬೇಡಿರಿ. ಅವನು ನಿಮಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆ ಇಟ್ಟಾಗ, ನಿಮ್ಮಲ್ಲಿ ಅಪರಾಧ ಉಂಟಾಗದಂತೆ ನೋಡಿಕೊಳ್ಳಿರಿ.
10 ೧೦ ನೀವು ಕೊಡುವಾಗ ಬೇಸರಗೊಳ್ಳದೆ ಉದಾರವಾದ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಮತ್ತು ಪ್ರಯತ್ನಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು.
ಕೊಡುವಾಗ ಬೇಸರಗೊಳ್ಳದೇ ಉದಾರಮನಸ್ಸಿನಿಂದ ಕೊಡಿರಿ. ಏಕೆಂದರೆ ಇದಕ್ಕೋಸ್ಕರವೇ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ, ನೀವು ಕೈಹಾಕುವುದೆಲ್ಲದರಲ್ಲಿಯೂ ಆಶೀರ್ವದಿಸುವರು.
11 ೧೧ ದೇಶದಲ್ಲಿ ಯಾವಾಗಲೂ ಬಡವರು ಇರುವರಷ್ಟೆ; ಆದುದರಿಂದ, “ನೀವು ಸ್ವದೇಶದವರಾದ ನಿಮ್ಮ ಸಹೋದರರಿಗೂ, ಬಡವರಿಗೂ ಮತ್ತು ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕು” ಎಂದು ನಾನು ನಿಮಗೆ ಆಜ್ಞಾಪಿಸಿದ್ದೇನೆ.
ಏಕೆಂದರೆ ಬಡವರು ದೇಶದಲ್ಲಿ ಇಲ್ಲದೆ ಹೋಗುವುದಿಲ್ಲ. ಆದ್ದರಿಂದ ನಿಮ್ಮ ಸಹೋದರರಿಗೂ, ನಿಮ್ಮ ನಾಡಿನ ದರಿದ್ರರಿಗೂ, ಬಡವರಿಗೂ ನಿಮ್ಮ ಕೈಯನ್ನು ವಿಶಾಲವಾಗಿ ತೆರೆಯಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ.
12 ೧೨ ಸ್ವದೇಶದವರೊಳಗೆ ಯಾವ ಇಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ದಾಸರಾಗಿರುವುದಕ್ಕಾಗಿ ಮಾರಲ್ಪಡುವ ಪಕ್ಷಕ್ಕೆ, ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ; ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಡುಗಡೆ ಮಾಡಬೇಕು.
ನಿಮ್ಮ ಸಹೋದರನಾದ ಹಿಬ್ರಿಯನಾಗಲಿ, ಒಬ್ಬ ಹಿಬ್ರಿಯ ಸ್ತ್ರೀಯಾಗಲಿ ನಿಮಗೆ ಗುಲಾಮರಾಗಿ, ಆರು ವರ್ಷ ನಿಮಗೆ ಮಾರಾಟವಾಗಿದ್ದರೆ ಮತ್ತು ಸೇವೆ ಮಾಡಿದ್ದರೆ, ಏಳನೆಯ ವರ್ಷದಲ್ಲಿ ಅವರನ್ನು ಬಿಡುಗಡೆ ಮಾಡಿ ಕಳುಹಿಸಿಬಿಡಿರಿ.
13 ೧೩ ಬಿಡುಗಡೆ ಮಾಡುವಾಗ ಬರಿಗೈಯಲ್ಲಿ ಕಳುಹಿಸಿಬಿಡಬಾರದು.
ಹಾಗೆ ಬಿಟ್ಟುಬಿಡುವಾಗ ಬರೀ ಕೈಯಲ್ಲಿ ಕಳುಹಿಸಬಾರದು.
14 ೧೪ ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಹಿಂಡು, ದವಸ, ದ್ರಾಕ್ಷಿ ಆಲೆ ಮತ್ತು ಕಣ ಇವುಗಳಲ್ಲಿ ಉದಾರವಾಗಿ ಕೊಟ್ಟು ಕಳುಹಿಸಿಬಿಡಬೇಕು.
ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಶೀರ್ವಾದವಾಗಿ ಕೊಟ್ಟದ್ದರಲ್ಲಿ ಅಂದರೆ ನಿಮ್ಮ ಕುರಿಮಂದೆಯಿಂದಲೂ ಕಣದಿಂದಲೂ ದ್ರಾಕ್ಷಿ ಆಲೆಯದಿಂದಲೂ ಅವರಿಗೆ ಧಾರಾಳವಾಗಿ ಕೊಟ್ಟುಕಳುಹಿಸಬೇಕು.
15 ೧೫ ಐಗುಪ್ತದೇಶದಲ್ಲಿ ನೀವೇ ದಾಸರಾಗಿರಲು ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡುಗಡೆಮಾಡಿದನು ಎಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಇದಕ್ಕೋಸ್ಕರವಾಗಿಯೇ ನಾನು ಈ ಆಜ್ಞೆಯನ್ನು ನಿಮಗೆ ಈಗ ಕೊಟ್ಟಿದ್ದೇನೆ.
ನೀವು ಈಜಿಪ್ಟ್ ದೇಶದಲ್ಲಿ ದಾಸರಾಗಿದ್ದಿರಿ ಎಂದೂ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ವಿಮೋಚಿಸಿದರೆಂದೂ ಜ್ಞಾಪಕಮಾಡಿಕೊಳ್ಳಿರಿ. ಆದ್ದರಿಂದ ನಾನು ಈ ಹೊತ್ತು ಇದನ್ನು ನಿಮಗೆ ಆಜ್ಞಾಪಿಸುತ್ತೇನೆ.
16 ೧೬ ಒಂದು ವೇಳೆ ಆ ದಾಸನು ನಿಮ್ಮ ಬಳಿಯಲ್ಲಿ ಸುಖವಾಗಿದ್ದು, ನಿಮ್ಮನ್ನೂ ಮತ್ತು ನಿಮ್ಮ ಮನೆಯವರನ್ನೂ ಪ್ರೀತಿಸಿ, ತಾನು ಬಿಡುಗಡೆಯಾಗಿ ಹೋಗುವುದಿಲ್ಲ ಎಂದು ಹೇಳುವ ಪಕ್ಷಕ್ಕೆ,
ಒಂದು ವೇಳೆ ಆ ಗುಲಾಮನು, ನಿಮ್ಮನ್ನೂ, ನಿಮ್ಮ ಮನೆಯನ್ನೂ ಪ್ರೀತಿಸುವುದರಿಂದಲೂ, ನಿಮ್ಮ ಬಳಿ ಸುಖವಾಗಿರುವುದರಿಂದಲೂ, “ನಾನು ಬಿಡುಗಡೆಯಾಗಿ ಹೋಗುವುದಕ್ಕೆ ಮನಸ್ಸಿಲ್ಲ,” ಎಂದು ಹೇಳಿದರೆ,
17 ೧೭ ನೀವು ದಬ್ಬಳದಿಂದ ಅವನ ಕಿವಿಯನ್ನು ಚುಚ್ಚಿ, ಕದಕ್ಕೆ ಸಿಕ್ಕಿಸಬೇಕು. ಆ ದಿನದಿಂದ ಅವನು ನಿಮಗೆ ಶಾಶ್ವತ ದಾಸನಾಗಿರಬೇಕು. ಅದೇ ರೀತಿಯಾಗಿ ದಾಸಿಯರ ವಿಷಯದಲ್ಲಿಯೂ ನಡೆದುಕೊಳ್ಳಬೇಕು.
ನೀವು ದಬ್ಬಳವನ್ನು ತೆಗೆದುಕೊಂಡು ಅವನ ಕಿವಿಯನ್ನು ಬಾಗಿಲಿಗೆ ತಗಲಿಸಿ ಚುಚ್ಚಬೇಕು. ಆಗ ಅವನು ನಿತ್ಯವಾಗಿ ನಿಮ್ಮ ದಾಸನಾಗಿರುವನು. ನಿಮ್ಮ ದಾಸಿಗೂ ಹಾಗೆಯೇ ಮಾಡಬೇಕು.
18 ೧೮ ದಾಸನನ್ನು ಬಿಡುಗಡೆಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ದಾಸನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲಾ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಗೊಳಿಸುವನು.
ಒಬ್ಬ ಗುಲಾಮನನ್ನು ನಿಮ್ಮಿಂದ ಬಿಡುಗಡೆಯಾಗಿ ಕಳುಹಿಸುವುದು ನಿಮಗೆ ಕಷ್ಟವೆಂದು ಹೇಳಿಕೊಳ್ಳಬಾರದು. ಏಕೆಂದರೆ ಅವನು ಆರು ವರ್ಷ ನಿಮ್ಮ ದಾಸನಾಗಿದ್ದದರಿಂದ ಸಂಬಳದ ಸೇವಕನಿಗಿಂತ ಎರಡಷ್ಟಾಗಿದ್ದನು. ಹೀಗೆ ನಿಮ್ಮ ದೇವರಾದ ಯೆಹೋವ ದೇವರು ನೀವು ಮಾಡುವುದೆಲ್ಲದರಲ್ಲಿಯೂ ನಿಮ್ಮನ್ನು ಆಶೀರ್ವದಿಸುವರು.
19 ೧೯ ದನಗಳಲ್ಲಿಯೂ ಮತ್ತು ಆಡುಕುರಿಗಳಲ್ಲಿಯೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು.
ನಿಮ್ಮ ದನಕುರಿಗಳಲ್ಲಿ ಹುಟ್ಟುವ ಚೊಚ್ಚಲು ಗಂಡುಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠಿಸಬೇಕು. ನಿಮ್ಮ ಹೋರಿಯ ಚೊಚ್ಚಲಿನಿಂದ ನೀವು ಕೆಲಸ ಮಾಡಿಸಬಾರದು. ನಿಮ್ಮ ಕುರಿಯ ಚೊಚ್ಚಲಲ್ಲಿ ಉಣ್ಣೆ ಕತ್ತರಿಸಬಾರದು.
20 ೨೦ ಪ್ರತಿ ವರ್ಷದಲ್ಲಿ ನೀವೂ ಮತ್ತು ನಿಮ್ಮ ಮನೆಯವರೂ ಅವುಗಳನ್ನು ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲಿ ಆತನ ಸನ್ನಿಧಿಯಲ್ಲೇ ಕೊಯಿದು ತಿನ್ನಬೇಕು.
ನಿಮ್ಮ ದೇವರಾದ ಯೆಹೋವ ದೇವರ ಮುಂದೆ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ನೀವು ನಿಮ್ಮ ಮನೆಯವರ ಸಹಿತವಾಗಿ ಅವುಗಳಿಂದ ಪ್ರತಿವರ್ಷ ಮಾಂಸಾಹಾರವಾಗಿರಬೇಕು.
21 ೨೧ ಅದು ಕುಂಟಾಗಿ, ಕುರುಡಾಗಿ ಇಲ್ಲವೆ ಬೇರೆ ವಿಧದಿಂದ ವಿರೂಪವಾಗಿದ್ದರೆ ಅದನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು.
ಅದರಲ್ಲಿ ಏನಾದರೂ ಊನವಿದ್ದರೆ ಅಂದರೆ, ಅದು ಕುಂಟಾಗಲಿ, ಕುರುಡಾಗಲಿ ಏನಾದರೂ ಕೆಟ್ಟ ಊನವುಳ್ಳದ್ದಾಗಿದ್ದರೆ, ಅದನ್ನು ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು.
22 ೨೨ ಅದನ್ನು ನಿಮ್ಮ ಊರಲ್ಲೇ ತಿನ್ನಬೇಕು. ಶುದ್ಧರೂ ಮತ್ತು ಅಶುದ್ಧರೂ ಜಿಂಕೆ ದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು.
ಅದನ್ನು ನಿಮ್ಮ ಊರಲ್ಲಿ ಮಾಂಸಾಹಾರವಾಗಿರಲಿ. ಆಚಾರವಾಗಿ ಶುದ್ಧರೂ, ಅಶುದ್ಧರೂ ಕೂಡ ಅದನ್ನು ಕಡವೆ ಜಿಂಕೆಗಳನ್ನು ಮಾಂಸಾಹಾರವಾಗಿ ಮಾಡಿಕೊಂಡ ಹಾಗೆ ತಿನ್ನಬಹುದು.
23 ೨೩ ನೀವು ರಕ್ತವನ್ನು ಮಾತ್ರ ಊಟಮಾಡಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.
ಅದರ ರಕ್ತವನ್ನು ಮಾತ್ರ ಭುಜಿಸಬಾರದು, ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.

< ಧರ್ಮೋಪದೇಶಕಾಂಡ 15 >