< ದಾನಿಯೇಲನು 5 >
1 ೧ ರಾಜನಾದ ಬೇಲ್ಶಚ್ಚರನು ತನ್ನ ರಾಜ್ಯದ ಮುಖಂಡರಲ್ಲಿ ಸಾವಿರ ಮಂದಿಗೆ ಔತಣವನ್ನು ಏರ್ಪಡಿಸಿ ಆ ಸಾವಿರ ಜನರ ಕಣ್ಣೆದುರಿಗೆ ತಾನೂ ದ್ರಾಕ್ಷಾರಸವನ್ನು ಕುಡಿದನು.
ಅರಸನಾದ ಬೇಲ್ಯಚ್ಚರನು ತನ್ನ ಪ್ರಧಾನರಲ್ಲಿ ಸಾವಿರ ಮಂದಿಗೆ ದೊಡ್ಡ ಔತಣವನ್ನು ಮಾಡಿಸಿ, ಅವರೊಂದಿಗೆ ಅವನು ದ್ರಾಕ್ಷಾರಸವನ್ನು ಕುಡಿದನು.
2 ೨ ಬೇಲ್ಶಚ್ಚರನು ಅದನ್ನು ಸವಿಯುತ್ತಾ, ಯೆರೂಸಲೇಮಿನ ದೇವಾಲಯದೊಳಗಿನಿಂದ ತನ್ನ ತಂದೆಯಾದ ನೆಬೂಕದ್ನೆಚ್ಚರನು ತೆಗೆದುಕೊಂಡು ಬಂದಿದ್ದ ಬೆಳ್ಳಿ, ಬಂಗಾರಗಳ ಪಾತ್ರೆಗಳಲ್ಲಿ ತಾನೂ, ತನ್ನ ಮುಖಂಡರೂ, ಪತ್ನಿಯರೂ ಮತ್ತು ಉಪಪತ್ನಿಯರೂ ಕುಡಿಯುವುದಕ್ಕಾಗಿ ಅವುಗಳನ್ನು ತರುವಂತೆ ಆಜ್ಞಾಪಿಸಿದನು.
ಬೇಲ್ಯಚ್ಚರನು ತನ್ನ ದ್ರಾಕ್ಷಾರಸವನ್ನು ಕುಡಿಯುತ್ತಿರುವಾಗ, ತನ್ನ ತಂದೆ ನೆಬೂಕದ್ನೆಚ್ಚರನು ಯೆರೂಸಲೇಮಿನ ದೇವಾಲಯದೊಳಗಿಂದ ತಂದ ಬೆಳ್ಳಿ ಬಂಗಾರಗಳ ಪಾತ್ರೆಗಳನ್ನು ತಂದು, ಅದರಲ್ಲಿ ಅರಸನು ಮತ್ತು ಪ್ರಧಾನರು, ಅವನ ಪತ್ನಿ ಮತ್ತು ಉಪಪತ್ನಿಯರು ಅವುಗಳಲ್ಲಿ ಕುಡಿಯುವಂತೆ ಆಜ್ಞಾಪಿಸಿದನು.
3 ೩ ಯೆರೂಸಲೇಮಿನ ದೇವಾಲಯದಿಂದ ಸೂರೆಯಾದ ಬಂಗಾರದ ಪಾತ್ರೆಗಳನ್ನು ತಂದೊಡನೆ ರಾಜನೂ, ಅವನ ಮುಖಂಡರೂ, ಪತ್ನಿಯರು ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
ಆಗ ಅವರು ಯೆರೂಸಲೇಮಿನ ದೇವರ ಆಲಯದೊಳಗಿಂದ ತಂದಿದ್ದ ಬಂಗಾರದ ಪಾತ್ರೆಗಳನ್ನು ತಂದರು. ಅರಸನೂ ಅವರ ಪ್ರಧಾನರೂ ಪತ್ನಿ ಮತ್ತು ಉಪಪತ್ನಿಯರೂ ಅವುಗಳಲ್ಲಿ ಕುಡಿದರು.
4 ೪ ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಮರಕಲ್ಲುಗಳ ದೇವರುಗಳನ್ನು ಸ್ತುತಿಸಿದರು.
ಅವರು ದ್ರಾಕ್ಷಾರಸವನ್ನು ಕುಡಿದು ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ಮರ ಮತ್ತು ಕಲ್ಲಿನ ದೇವರುಗಳನ್ನು ಸ್ತುತಿಸಿದರು.
5 ೫ ಅದೇ ಸಮಯದಲ್ಲಿ ಒಬ್ಬನ ಕೈಯ ಬೆರಳುಗಳು ದೀಪಸ್ತಂಭದ ಎದುರಿಗೆ ಅರಮನೆಯ ಸುಣ್ಣದ ಗೋಡೆಯ ಮೇಲೆ ಬರೆಯಲು ತೊಡಗಿದವು; ಬರೆಯುತ್ತಿದ್ದ ಹಸ್ತವನ್ನು ರಾಜನು ನೋಡಿದನು.
ಕೂಡಲೇ ಒಬ್ಬ ಮನುಷ್ಯನ ಕೈಬೆರಳುಗಳು ಬಂದು ದೀಪಸ್ತಂಭಕ್ಕೆ ಎದುರಾಗಿ ಅರಮನೆಯ ಗೋಡೆಯ ಮೇಲೆ ಬರೆಯಲಾರಂಭಿಸಿದವು. ಅರಸನು ಆ ಬರೆಯುವ ಕೈಭಾಗವನ್ನು ನೋಡಿದನು.
6 ೬ ಆಗ ಅವನ ಮುಖ ಕಳೆಗುಂದಿತು, ಮನಸ್ಸು ಕಳವಳಗೊಂಡಿತು, ಸೊಂಟದ ಕೀಲು ಸಡಿಲವಾಯಿತು, ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
ಆಗ ಅರಸನ ಮುಖವು ಕಳೆಗುಂದಿತು. ಅವನು ತುಂಬಾ ಭಯಭೀತನಾದನು. ಅವನ ಸೊಂಟದ ಕೀಲುಗಳು ಸಡಿಲಗೊಂಡವು. ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.
7 ೭ ಹೀಗಿರಲು ರಾಜನು ಗಟ್ಟಿಯಾಗಿ ಕೂಗಿಕೊಂಡು ಮಂತ್ರವಾದಿ, ಪಂಡಿತ, ಶಾಕುನಿಕರನ್ನು ಕರೆಯಿಸಿ ಬಾಬೆಲಿನ ಆ ವಿದ್ವಾಂಸರಿಗೆ, “ಯಾರು ಈ ಬರಹವನ್ನು ಓದಿ, ಇದರ ಅರ್ಥವನ್ನು ನನಗೆ ತಿಳಿಸುತ್ತಾನೋ ಅವನಿಗೆ ನಾನು ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ಅವನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.
ಅರಸನು ಗಟ್ಟಿಯಾಗಿ ಕಿರುಚಿ ಜ್ಯೋತಿಷ್ಯರನ್ನೂ, ಪಂಡಿತರನ್ನೂ, ಶಕುನ ಹೇಳುವವರನ್ನೂ ಕರೆಸಿ, ಬಾಬಿಲೋನಿನ ಜ್ಞಾನಿಗಳಿಗೆ, “ಯಾರು ಈ ಬರಹವನ್ನು ಓದಿ, ಅದರ ಅರ್ಥವನ್ನು ನನಗೆ ತಿಳಿಸುವರೋ, ಅವರಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ರಾಜ್ಯದ ಮೂರನೆಯ ಅಧಿಕಾರಿಯಾಗಿ ಮಾಡುವೆನು,” ಎಂದು ಹೇಳಿದನು.
8 ೮ ಆಸ್ಥಾನದ ವಿದ್ವಾಂಸರೆಲ್ಲರು ಬಂದು ನೋಡಿದರು; ಆದರೆ ಆ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ರಾಜನಿಗೆ ತಿಳಿಸುವುದಕ್ಕೂ ಅವರಲ್ಲಿ ಯಾರಿಂದಲೂ ಆಗಲಿಲ್ಲ.
ಆಗ ಅರಸನ ಎಲ್ಲಾ ಜ್ಞಾನಿಗಳು ಒಳಗೆ ಬಂದರು. ಆದರೆ ಆ ಬರಹವನ್ನು ಓದಲೂ, ಅದರ ಅರ್ಥವನ್ನು ಅರಸನಿಗೆ ತಿಳಿಸಲೂ ಅವರಿಗೆ ಆಗದೆ ಹೋಯಿತು.
9 ೯ ಆಗ ರಾಜನಾದ ಬೇಲ್ಶಚ್ಚರನು ಬಹಳ ಕಳವಳಗೊಂಡು ಕಳೆಗುಂದಿದನು, ಅವನ ಮುಖಂಡರೂ ವಿಸ್ಮಯಗೊಂಡರು.
ಆಗ ಅರಸನಾದ ಬೇಲ್ಯಚ್ಚರನು ಬಹಳವಾಗಿ ಕಳವಳಪಟ್ಟನು. ಅವನ ಮುಖವು ಕಳೆಗುಂದಿತು. ಅವನ ಪ್ರಧಾನರು ಭಯಗೊಂಡರು.
10 ೧೦ ರಾಜನು ಮತ್ತು ಮುಖಂಡರು ಆಡಿದ ಮಾತುಗಳು ರಾಣಿಗೆ ಮುಟ್ಟಲು ಆಕೆಯು ಔತಣದ ಶಾಲೆಗೆ ಬಂದು, “ರಾಜನೇ, ಚಿರಂಜೀವಿಯಾಗಿರು. ನಿನ್ನ ಮನಸ್ಸು ಕಳವಳಗೊಳ್ಳದಿರಲಿ, ನಿನ್ನ ಮುಖ ಕಳೆಗುಂದದಿರಲಿ!
ಆಗ ಅರಸನ ಮತ್ತು ಅವನ ಪ್ರಧಾನರ ಮಾತುಗಳನ್ನು ಕೇಳಿ ರಾಣಿಯು ಔತಣದ ಮನೆಗೆ ಬಂದಳು. ಆಗ ಮಾತನಾಡಿ, “ಅರಸನೇ, ನಿರಂತರವಾಗಿ ಬಾಳು! ನಿನ್ನ ಆಲೋಚನೆಗಳು ನಿನ್ನನ್ನು ಕಳವಳಪಡಿಸದಿರಲಿ. ನಿನ್ನ ಮುಖವು ಕಳೆಗುಂದದಿರಲಿ!
11 ೧೧ “ಪರಿಶುದ್ಧ ದೇವರುಗಳ ಆತ್ಮವು ನೆಲೆಸಿರುವ ಒಬ್ಬನು ನಿನ್ನ ರಾಜ್ಯದಲ್ಲಿ ಇದ್ದಾನೆ; ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ರಾಜನು ಅವನನ್ನು ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು ಇವರಿಗೆ ಅಧ್ಯಕ್ಷನನ್ನಾಗಿ ನೇಮಿಸಿದನು.
ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ. ದೇವರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ, ವಿವೇಕವೂ, ಬುದ್ಧಿಯೂ, ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ, ಜ್ಯೋತಿಷ್ಯರಿಗೂ, ಪಂಡಿತರಿಗೂ, ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು.
12 ೧೨ ಹೌದು, ಬೇಲ್ತೆಶಚ್ಚರನೆಂಬ ಅಡ್ಡ ಹೆಸರನ್ನು ರಾಜನಿಂದ ಹೊಂದಿದ ಈ ದಾನಿಯೇಲನಲ್ಲಿ ಪರಮಬುದ್ಧಿಯೂ, ಜ್ಞಾನವೂ, ವಿವೇಕವೂ, ಕನಸುಗಳ ಅರ್ಥವನ್ನು ತಿಳಿಸುವ ಜಾಣತನವೂ, ಒಗಟುಬಿಡಿಸುವ ಚಮತ್ಕಾರವೂ, ಕಠಿಣವಾದ ಸಂಗತಿಗಳನ್ನು ತಿಳಿಸುವ ಚಾತುರ್ಯವೂ ತೋರಿಬಂದವು. ಆದುದರಿಂದಲೇ ಆತನನ್ನು ಹಾಗೆ ನೇಮಿಸಿದನು. ಈಗ ಆ ದಾನಿಯೇಲನನ್ನು ಕರೆಯಿಸಿದರೆ ಅವನು ಬರಹದ ಅರ್ಥವನ್ನು ವಿವರಿಸುವನು” ಎಂದಳು.
ಏಕೆಂದರೆ ಬೇಲ್ತೆಶಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವುದಕ್ಕೂ, ಕಠಿಣವಾದ ಸಂಗತಿಗಳನ್ನು ತಿಳಿಸುವುದಕ್ಕೂ, ಒಗಟುಗಳನ್ನು ವಿವರಿಸುವುದಕ್ಕೂ ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸುವುದಕ್ಕೂ ಉತ್ತಮ ಆತ್ಮವೂ, ಜ್ಞಾನವೂ, ವಿವೇಕವೂ ಸಿಕ್ಕಿದವು. ಈಗ ಆ ದಾನಿಯೇಲನನ್ನು ಕರೆಯಿಸಿದರೆ, ಅವನು ಈ ಬರಹದ ಅರ್ಥವನ್ನು ವಿವರಿಸುವನು,” ಎಂದಳು.
13 ೧೩ ಆಗ ದಾನಿಯೇಲನನ್ನು ರಾಜನ ಬಳಿ ಬರಮಾಡಲು ರಾಜನು ಅವನಿಗೆ, “ರಾಜನಾದ ನನ್ನ ತಂದೆಯು ಯೆಹೂದದಿಂದ ಕೈದಿಗಳಾಗಿ ತಂದು ಸೆರೆಮಾಡಿದ ಯೆಹೂದ್ಯರ ದಾನಿಯೇಲ್ ಎಂಬುವನು ನೀನೋ?
ಆಗ ದಾನಿಯೇಲನನ್ನು ಅರಸನ ಮುಂದೆ ತಂದರು. ಅರಸನು ದಾನಿಯೇಲನಿಗೆ, “ಅರಸನಾದ ನನ್ನ ತಂದೆಯು ಯೆಹೂದದಿಂದ ತಂದ ಯೆಹೂದದ ಸೆರೆಯವರಲ್ಲಿ ಒಬ್ಬನಾದ ದಾನಿಯೇಲನು ನೀನೋ?
14 ೧೪ ದೇವರುಗಳ ಆತ್ಮವು ನಿನ್ನಲ್ಲಿ ನೆಲಸಿ ಪರಮಜ್ಞಾನವೂ, ವಿವೇಕವೂ, ಬುದ್ಧಿಪ್ರಕಾಶವೂ ನಿನಗುಂಟೆಂದು ಕೇಳಿದ್ದೇನೆ.
ನಿನ್ನಲ್ಲಿ ದೇವರುಗಳ ಆತ್ಮ ಉಂಟೆಂದೂ, ಒಳನೋಟ, ಬುದ್ಧಿಯೂ, ಉತ್ತಮ ಜ್ಞಾನವೂ ನಿನ್ನಲ್ಲಿ ಇವೆ ಎಂದೂ ನಿನ್ನ ವಿಷಯವಾಗಿ ಕೇಳಿದ್ದೇನೆ.
15 ೧೫ “ಈಗ ಈ ಬರಹವನ್ನು ಓದಿ, ಇದರ ಅರ್ಥವನ್ನು ನನಗೆ ತಿಳಿಸುವುದಕ್ಕಾಗಿ ವಿದ್ವಾಂಸರನ್ನೂ ಮತ್ತು ಮಂತ್ರವಾದಿಗಳನ್ನೂ ಸಮ್ಮುಖಕ್ಕೆ ಬರಮಾಡಲು ಅವರು ಇದರ ಅರ್ಥವನ್ನು ವಿವರಿಸಲಾರದೆ ಹೋದರು.
ಈಗ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ಜ್ಯೋತಿಷ್ಯರಾದ ಜ್ಞಾನಿಗಳು ನನ್ನ ಮುಂದೆ ಬಂದಿದ್ದಾರೆ. ಆದರೆ ಇದರ ಅರ್ಥವನ್ನು ಹೇಳಲಾರದೆ ಹೋದರು.
16 ೧೬ ನೀನು, ಗೂಢಾರ್ಥಗಳನ್ನು ವಿವರಿಸಿ ಕಠಿಣವಾದ ಸಂಗತಿಗಳನ್ನು ಬಿಡಿಸಿ ತಿಳಿಸುವವನಾಗಿದ್ದೀ ಎಂಬ ಸಮಾಚಾರವು ನನಗೆ ಮುಟ್ಟಿದೆ; ಈ ಬರಹವನ್ನು ಓದಿ ಇದರ ಅಭಿಪ್ರಾಯವನ್ನು ನನಗೆ ತಿಳಿಸಲು ನಿನ್ನಿಂದಾದರೆ ನಾನೀಗ ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ನಿನ್ನ ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ನಿನ್ನನ್ನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನನ್ನಾಗಿ ನೇಮಿಸುವೆನು” ಎಂದು ಹೇಳಿದನು.
ಈಗ ನೀನು ಅರ್ಥಗಳನ್ನು ವಿವರಿಸಿ, ಕಷ್ಟಕರವಾದ ಸಮಸ್ಯೆಗಳನ್ನು ಬಗೆಹರಿಸಲು ಸಮರ್ಥನೆಂದು ನಾನು ನಿನ್ನ ವಿಷಯವಾಗಿ ಕೇಳಿದ್ದೇನೆ. ಹೀಗಾದರೆ ಈ ಬರಹವನ್ನು ಓದುವುದಕ್ಕೂ, ಅದರ ಅರ್ಥವನ್ನು ತಿಳಿಸುವುದಕ್ಕೂ ನಿನ್ನಿಂದ ಸಾಧ್ಯವಾದರೆ, ನಿನಗೆ ಧೂಮ್ರವಸ್ತ್ರವನ್ನು ಹೊದಿಸಿ, ಕೊರಳಿಗೆ ಚಿನ್ನದ ಹಾರವನ್ನು ಹಾಕಿಸಿ, ರಾಜ್ಯದ ಮೂರನೆಯ ಅಧಿಕಾರಿಯನ್ನಾಗಿ ನೇಮಿಸುವೆನು,” ಎಂದು ಹೇಳಿದನು.
17 ೧೭ ಆಗ ದಾನಿಯೇಲನು ರಾಜನ ಬಳಿ, “ನಿನ್ನ ದಾನಗಳು ನಿನಗೇ ಇರಲಿ, ನಿನ್ನ ಬಹುಮಾನಗಳು ಮತ್ತೊಬ್ಬನಿಗಾಗಲಿ. ಆದರೆ ನಾನು ಈ ಬರಹವನ್ನು ಓದಿ ಇದರ ಅರ್ಥವನ್ನು ರಾಜನಿಗೆ ತಿಳಿಸುವೆನು.
ಆಗ ದಾನಿಯೇಲನು ಅರಸನ ಮುಂದೆ, “ನಿನ್ನ ದಾನಗಳು ನಿನಗಿರಲಿ, ನಿನ್ನ ಬಹುಮಾನಗಳು ಮತ್ತೊಬ್ಬರಿಗೆ ದೊರಕಲಿ. ಆದರೂ ನಾನು ಅರಸನಿಗಾಗಿ ಬರಹವನ್ನು ಓದಿ, ಅದರ ಅರ್ಥವನ್ನು ಅರಸನಿಗೆ ತಿಳಿಸುವೆನು,” ಎಂದನು.
18 ೧೮ ಅರಸನೇ, ಪರಾತ್ಪರನಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ರಾಜ್ಯಮಹತ್ವ, ಮಾನಸನ್ಮಾನಗಳನ್ನು ದಯಪಾಲಿಸಿದನು.
“ಅರಸನೇ, ಮಹೋನ್ನತರಾದ ದೇವರು ನಿನ್ನ ತಂದೆಯಾದ ನೆಬೂಕದ್ನೆಚ್ಚರನಿಗೆ ಸಾರ್ವಭೌಮತ್ವವನ್ನೂ, ಮಹತ್ತನ್ನೂ, ಕೀರ್ತಿಯನ್ನೂ, ಘನವನ್ನೂ ಕೊಟ್ಟರು.
19 ೧೯ ಈ ಮಹತ್ವದ ನಿಮಿತ್ತ ಸಕಲ ಜನಾಂಗ, ಕುಲ, ಭಾಷೆಗಳವರು ಅವನ ಮುಂದೆ ಬೆಚ್ಚಿಬೆದರಿದರು; ತನಗೆ ಬೇಕಾದವರನ್ನು ಕೊಲ್ಲಿಸಿದನು, ತನಗೆ ಬೇಕಾದವರನ್ನು ಉಳಿಸಿದನು, ಮನಸ್ಸು ಬಂದವರನ್ನು ಅಭಿವೃದ್ಧಿಮಾಡಿದನು, ಮನಸ್ಸು ಬಂದವರನ್ನು ಇಳಿಸಿದನು.
ಅವರು ಅವನಿಗೆ ಕೊಟ್ಟ ಮಹತ್ತಿನ ನಿಮಿತ್ತ ಸಕಲ ಪ್ರಜೆಗಳೂ, ಜನಾಂಗಗಳೂ, ಭಾಷೆಯವರೂ ಅವನ ಮುಂದೆ ಹೆದರಿ ನಡುಗಿದರು. ತನಗೆ ಬೇಕಾದವರನ್ನು ಬದುಕಿಸಿ ಬೇಡವಾದವರನ್ನು ಕೊಂದನು. ಇಷ್ಟವಿದ್ದವರನ್ನು ಸುಸ್ಥಿತಿಗೆ ಏರಿಸಿ, ಇಷ್ಟವಿಲ್ಲದವರನ್ನು ಕೆಳಕ್ಕಿಳಿಸಿದನು.
20 ೨೦ “ಹೀಗೆ ಅವನ ಹೃದಯವು ಉಬ್ಬಿ, ಅವನ ಸ್ವಭಾವವು ಕಠಿಣವಾಗಿ ಅವನಿಗೆ ಸೊಕ್ಕೇರಲು ಅವನನ್ನು ರಾಜಾಸನದಿಂದ ತಳ್ಳಿ, ಮಾನವನ್ನು ತೆಗೆದುಬಿಟ್ಟರು.
ಆದರೆ ಅವನ ಹೃದಯವು ಹೆಮ್ಮೆಯಿಂದ ಉಬ್ಬಿಕೊಂಡಾಗ ಮತ್ತು ಅವನ ಹೃದಯವು ಗಟ್ಟಿಯಾದಾಗ, ಅವನನ್ನು ಸಿಂಹಾಸನದಿಂದ ತೆಗೆದುಹಾಕಲಾಯಿತು ಮತ್ತು ಅವನ ಪ್ರತಿಷ್ಠೆಯನ್ನು ಕಿತ್ತುಕೊಳ್ಳಲಾಯಿತು.
21 ೨೧ ಅವನು ನರಜಾತಿಯವರೊಳಗಿಂದ ನೂಕಲ್ಪಟ್ಟನು, ಅವನ ಬುದ್ಧಿಯು ಮೃಗದ ಬುದ್ಧಿಯಂತಾಯಿತು, ಕಾಡು ಕತ್ತೆಗಳೊಂದಿಗೆ ವಾಸಿಸಿದನು. ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಮೇಲೆ ತನಗೆ ಬೇಕಾದವರನ್ನು ನೇಮಿಸುತ್ತಾನೆ ಎಂಬುದು ಅವನಿಗೆ ತಿಳಿದುಬರುವ ತನಕ ದನಗಳಂತೆ ಹುಲ್ಲು ಮೇಯುವುದೇ ಅವನ ಗತಿಯಾಯಿತು, ಆಕಾಶದ ಇಬ್ಬನಿಯು ಅವನ ಮೈಯನ್ನು ತೋಯಿಸುತ್ತಿತ್ತು.
ಅವನು ಮಾನವ ಸಮಾಜದಿಂದ ಬಹಿಷ್ಕೃತನಾದನು. ಮಹೋನ್ನತರಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾರೆಂದೂ, ಅವರು ತಮಗೆ ಬೇಕಾದವರನ್ನು ಅದಕ್ಕೆ ನೇಮಿಸುತ್ತಾರೆಂದೂ ತಿಳಿಯುವ ತನಕ ಅವನು ಮೃಗಬುದ್ಧಿಯುಳ್ಳವನಾಗಿದ್ದನು. ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು. ಅವನು ದನಗಳಂತೆ ಹುಲ್ಲನ್ನು ಮೇಯುತ್ತಿದ್ದನು. ಅವನ ಶರೀರ ಆಕಾಶದ ಮಂಜಿನಿಂದ ತೇವವಾಯಿತು.
22 ೨೨ “ಬೇಲ್ಶಚ್ಚರನೇ, ಅವನ ಮಗನಾದ ನೀನು ಇದನ್ನೆಲ್ಲಾ ತಿಳಿದುಕೊಂಡರೂ ನಿನ್ನ ಮನಸ್ಸನ್ನು ತಗ್ಗಿಸಿಕೊಳ್ಳಲಿಲ್ಲ.
“ಅವನ ಮಗ ಬೇಲ್ಯಚ್ಚರನೇ, ನೀನು ಇದನ್ನೆಲ್ಲಾ ತಿಳಿದುಕೊಂಡಿದ್ದರೂ ತಗ್ಗಿಸಿಕೊಳ್ಳದೆ
23 ೨೩ ಪರಲೋಕದ ಒಡೆಯನಿಗೆ ವಿರುದ್ಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಮುಂದೆ ತಂದರಲ್ಲಾ; ನೀನು ನಿನ್ನ ರಾಜ್ಯದ ಮುಖಂಡರ, ಪತ್ನಿ ಹಾಗೂ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ, ಕಣ್ಣು, ಕಿವಿ ಇಲ್ಲದ ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಮರ, ಕಲ್ಲುಗಳ ದೇವರುಗಳನ್ನು ಸ್ತುತಿಸಿದ್ದೀ. ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ, ನಿನ್ನ ಸ್ಥಿತಿಗತಿಗಳು ಯಾರ ಅಧೀನವೋ ಆ ದೇವರನ್ನು ಘನಪಡಿಸಲೇ ಇಲ್ಲ.
ಪರಲೋಕದ ಒಡೆಯನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ. ಅವರ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು. ಆಗ ನೀನು ನಿನ್ನ ಪ್ರಧಾನರು ಮತ್ತು ಪತ್ನಿಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು, ಬುದ್ಧಿ, ಕಣ್ಣು ಕಿವಿಗಳಿಲ್ಲದ ಬೆಳ್ಳಿಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿರಿ. ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗತಿಗಳು ಯಾರ ಅಧೀನದಲ್ಲಿವೆಯೋ, ಆ ದೇವರನ್ನು ಘನಪಡಿಸಲೇ ಇಲ್ಲ.
24 ೨೪ ಹೀಗಿರಲು ಆ ಹಸ್ತವು ದೇವರ ಸನ್ನಿಧಿಯಿಂದ ಬಂದು ಈ ಬರಹವನ್ನು ಬರೆಯಿತು.
ಅದಕ್ಕಾಗಿಯೇ ಆತನು ಕಳುಹಿಸಿದ ಕೈಯ ಭಾಗವು ಬಂದು ಆ ಬರಹವನ್ನು ಬರೆದಿದೆ.
25 ೨೫ “ಬರೆದ ಬರಹವು ಇದೇ, ‘ಮೆನೇ, ಮೆನೇ, ತೆಕೇಲ್, ಉಫರ್ಸಿನ್.’
“ಆ ಬರಹವು ಏನೆಂದರೆ: ಮೆನೇ ಮೆನೇ, ತೆಕೇಲ್, ಉಫರ್ಸಿನ್.
26 ೨೬ ಇದರ ಅರ್ಥವು ಹೀಗಿದೆ, ಮೆನೇ ಎಂದರೆ, ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾನೆ.
“ಇದರ ಅರ್ಥವು ಹೀಗಿದೆ: “ಮೆನೇ ಎಂದರೆ ದೇವರು ನಿನ್ನ ಆಳ್ವಿಕೆಯ ಕಾಲಾವಧಿಯನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾರೆ.
27 ೨೭ ತೆಕೇಲ್ ಎಂದರೆ, ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ನಿನ್ನ ಯೋಗ್ಯತೆ ಕಡಿಮೆಯಾಗಿ ಕಂಡು ಬಂದಿದೆ.
“ತೆಕೇಲ್ ಎಂದರೆ ನಿನ್ನನ್ನು ತಕ್ಕಡಿಯಲ್ಲಿ ಹಾಕಿ ನೋಡಲು ನೀನು ಕೊರತೆಯುಳ್ಳವನಾಗಿ ಕಂಡುಬಂದಿರುವೆ.
28 ೨೮ ಪೆರೇಸ್ ಎಂದರೆ, ನಿನ್ನ ರಾಜ್ಯವು ವಿಭಾಗವಾಗಿ ಮೇದ್ಯಯರಿಗೂ, ಪಾರಸಿಯರಿಗೂ ಕೊಡಲ್ಪಟ್ಟಿದೆ” ಎಂದು ಅರಿಕೆಮಾಡಿದನು.
“ಫರ್ಸಿನ್ ಎಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯರಿಗೂ, ಪಾರಸಿಯರಿಗೂ ಕೊಡಲಾಗಿದೆ,” ಎಂಬದಾಗಿ ಅರಿಕೆಮಾಡಿದನು.
29 ೨೯ ಆಗ ಬೇಲ್ಶಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ಈತನು ರಾಜ್ಯದ ಮೂವರು ಮುಖ್ಯಾಧಿಕಾರಿಗಳಲ್ಲಿ ಒಬ್ಬನಾದನು ಎಂದು ಪ್ರಕಟಿಸಿದರು.
ಆಗ ಬೇಲ್ಯಚ್ಚರನು ಆಜ್ಞಾಪಿಸಲು ದಾನಿಯೇಲನಿಗೆ ಧೂಮ್ರವಸ್ತ್ರವನ್ನು ಹೊದಿಸಿ, ಅವನ ಕೊರಳಿಗೆ ಚಿನ್ನದ ಹಾರವನ್ನು ಹಾಕಿ, ಇವನು ರಾಜ್ಯದ ಮೂರನೇ ಉನ್ನತ ಅಧಿಕಾರಿಗಳಲ್ಲಿ ಒಬ್ಬನೆಂದು ಸಾರಿದನು.
30 ೩೦ ಅದೇ ರಾತ್ರಿಯಲ್ಲಿ ಕಸ್ದೀಯ ರಾಜನಾದ ಬೇಲ್ಶಚ್ಚರನು ಕೊಲ್ಲಲ್ಪಟ್ಟನು.
ಅದೇ ರಾತ್ರಿಯಲ್ಲಿ ಕಸ್ದೀಯರ ಅರಸನಾದ ಬೇಲ್ಯಚ್ಚರನು ಹತನಾದನು.
31 ೩೧ ಮೇದ್ಯನಾದ ದಾರ್ಯಾವೆಷನು ರಾಜ್ಯವನ್ನು ತೆಗೆದುಕೊಂಡನು. ಅವನ ವಯಸ್ಸು ಹೆಚ್ಚು ಕಡಿಮೆ ಅರುವತ್ತೆರಡು.
ಮೇದ್ಯನಾದ ದಾರ್ಯಾವೆಷನು ತನ್ನ ಅರವತ್ತೆರಡು ವಯಸ್ಸಿನಲ್ಲಿ ರಾಜ್ಯವನ್ನು ವಶಪಡಿಸಿಕೊಂಡನು.