< ಅರಸುಗಳು - ದ್ವಿತೀಯ ಭಾಗ 24 >
1 ೧ ಯೆಹೋಯಾಕೀಮನ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊರಟು ಬಂದನು. ಯೆಹೋಯಾಕೀಮನು ಅವನಿಗೆ ಅಧೀನನಾಗಿ ಮೂರು ವರ್ಷಗಳಾದ ನಂತರ ಅವನ ವಿರುದ್ಧವಾಗಿ ತಿರುಗಿ ಬಿದ್ದನು.
2 ೨ ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮುಖಾಂತರವಾಗಿ ಮುಂತಿಳಿಸಿದ ಯೆಹೋವನ ವಾಕ್ಯದ ಪ್ರಕಾರ ಯೆಹೂದ ರಾಜ್ಯವನ್ನು ಹಾಳುಮಾಡುವುದಕ್ಕೋಸ್ಕರ ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನಿಯರ ಸುಲಿಗೆಯ ಗುಂಪುಗಳನ್ನು ಅಲ್ಲಿಗೆ ಕಳುಹಿಸಿದನು.
3 ೩ ಯೆಹೂದ ರಾಜ್ಯದ ನಿರಪರಾಧಿಗಳ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ ಮನಸ್ಸೆಯ ದುಷ್ಕೃತ್ಯಗಳನ್ನು ಯೆಹೋವನು ಕ್ಷಮಿಸದೆ ಹೋದನು.
4 ೪ ಅವುಗಳಿಗಾಗಿ ಯೆಹೋವನು ಯೆರೂಸಲೇಮಿನವರನ್ನು ಕ್ಷಮಿಸದೆ ತನ್ನ ಸನ್ನಿಧಿಯಿಂದ ತೆಗೆದುಹಾಕಬೇಕೆಂದಿದ್ದರಿಂದ ಅವರಿಗೆ ಶಿಕ್ಷೆಯಾಯಿತು. ಇದು ಯೆಹೋವನ ಅಪ್ಪಣೆಯ ಪ್ರಕಾರ ನಡೆಯಿತು.
5 ೫ ಯೆಹೋಯಾಕೀಮನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ (ಇತಿಹಾಸ) ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.
6 ೬ ಯೆಹೋಯಾಕೀಮನು ಪೂರ್ವಿಕರ ಬಳಿಗೆ ಸೇರಲು ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಖೀನನು ಅರಸನಾದನು.
7 ೭ ಬಾಬೆಲಿನ ಅರಸನು ಐಗುಪ್ತದ ಕಣಿವೆಯಿಂದ ಯೂಫ್ರೆಟಿಸ್ ನದಿವರೆಗೂ ಇದ್ದ, ಎಲ್ಲಾ ಭೂಪ್ರದೇಶವನ್ನು ಸ್ವಾಧೀನಮಾಡಿಕೊಂಡನು. ಅನಂತರ ಐಗುಪ್ತದ ಅರಸನು ತನ್ನ ದೇಶದಿಂದ ರಾಜ್ಯವ್ಯಾಪ್ತಿಗಾಗಿ ಹೊರಡಲಿಲ್ಲ.
8 ೮ ಯೆಹೋಯಾಖೀನನು ಅರಸನಾದಾಗ ಅವನು ಹದಿನೆಂಟು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳುಗಳ ಕಾಲ ಆಳಿದನು. ಯೆರೂಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆಯು ಇವನ ತಾಯಿ.
9 ೯ ಇವನು ತನ್ನ ತಂದೆಯಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.
10 ೧೦ ಇವನ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಯೆರೂಸಲೇಮ್ ಪಟ್ಟಣಕ್ಕೆ ವಿರುದ್ಧವಾಗಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು.
11 ೧೧ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಸೈನ್ಯದವರು ಮುತ್ತಿಗೆ ಹಾಕಿದ ಯೆರೂಸಲೇಮ್ ಪಟ್ಟಣಕ್ಕೆ ನೆಬೂಕದ್ನೆಚ್ಚರನೂ ಬಂದನು.
12 ೧೨ ಆಗ ಯೆಹೂದದ ಅರಸನಾದ ಯೆಹೋಯಾಖೀನನು ತನ್ನ ತಾಯಿಯ ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಬಾಬೆಲಿನ ಅರಸನ ಬಳಿಗೆ ಹೋದನು. ಬಾಬೆಲಿನ ಅರಸನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು.
13 ೧೩ ಇದಲ್ಲದೆ, ಯೆಹೋವನು ಮುಂತಿಳಿಸಿದ ಪ್ರಕಾರ ಅವನು ಯೆಹೋವನ ಆಲಯದ ಮತ್ತು ಅರಸನ ಅರಮನೆಯ ಭಂಡಾರಗಳಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ದ್ರವ್ಯವನ್ನು ತೆಗೆದುಕೊಂಡು ಹೋದನು. ಇಸ್ರಾಯೇಲರ ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಸಾಮಾನುಗಳನ್ನು ಮುರಿದುಬಿಟ್ಟನು.
14 ೧೪ ಯೆರೂಸಲೇಮಿನಲ್ಲಿದ್ದ ಎಲ್ಲಾ ಪ್ರಭುಗಳನ್ನೂ, ಭಟರನ್ನೂ, ಕಮ್ಮಾರರನ್ನೂ, ಪರಾಕ್ರಮಶಾಲಿಗಳನ್ನು ಒಟ್ಟಾಗಿ ಹತ್ತು ಸಾವಿರ ಜನರನ್ನು ಸೆರೆಹಿಡಿದು ತನ್ನ ದೇಶಕ್ಕೆ ಕರೆದುಕೊಂಡು ಹೋದನು. ದೇಶದಲ್ಲಿ ಕೇವಲ ಸಾಮಾನ್ಯ ಜನರಾಗಿದ್ದ ಬಡವರು ಹೊರತಾಗಿ ಯಾರನ್ನೂ ಬಿಡಲಿಲ್ಲ.
15 ೧೫ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀನನನ್ನೂ, ಅವನ ತಾಯಿ, ಹೆಂಡತಿ, ಕಂಚುಕಿಗಳನ್ನೂ ಮತ್ತು ದೇಶದ ಪ್ರಧಾನ ಪುರುಷರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಯಾಗಿ ತೆಗೆದುಕೊಂಡುಹೋದನು.
16 ೧೬ ಬಾಬೆಲಿನ ಅರಸನು ಏಳು ಸಾವಿರ ಮಂದಿ ಭಟರನ್ನೂ, ಸಾವಿರ ಮಂದಿ ಕಮ್ಮಾರರನ್ನೂ, ಬಡಗಿಗಳನ್ನು ಯೆರೂಸಲೇಮಿನಿಂದ ಬಾಬಿಲೋನಿಗೆ ಕರೆದುಕೊಂಡು ಹೋದನು. ಅವರೆಲ್ಲರೂ ಪರಾಕ್ರಮಶಾಲಿಗಳೂ ಯುದ್ಧವೀರರೂ ಆಗಿದ್ದರು.
17 ೧೭ ಬಾಬೆಲಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ಚಿದ್ಕೀಯನೆಂದು ಹೆಸರಿಟ್ಟನು.
18 ೧೮ ಚಿದ್ಕೀಯನು ತನ್ನ ಇಪ್ಪತ್ತೊಂದನೆಯ ವರ್ಷ ತುಂಬಿದ ಮೇಲೆ ಅರಸನಾಗಿ ಯೆರೂಸಲೇಮಿನಲ್ಲಿ ಹನ್ನೊಂದು ವರ್ಷಗಳ ಕಾಲ ಆಳಿದನು. ಲಿಬ್ನ ಪಟ್ಟಣದವನಾದ, ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆಯು ಇವನ ತಾಯಿ.
19 ೧೯ ಚಿದ್ಕೀಯನು ಯೆಹೋಯಾಕೀಮನಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.
20 ೨೦ ಯೆಹೋವನು ಯೆರೂಸಲೇಮಿನವರ ಮೇಲೆಯೂ ಬೇರೆ ಎಲ್ಲಾ ಯೆಹೂದ್ಯರ ಮೇಲೆಯೂ ಇದನ್ನೆಲ್ಲಾ ಬರಮಾಡಿ ಕೊನೆಯಲ್ಲಿ ಅವರನ್ನು ತನ್ನ ಸನ್ನಿಧಿಯಿಂದ ನಾಶಮಾಡುವಷ್ಟು ರೋಷವುಳ್ಳವನಾಗಿದ್ದನು. ಆದರೆ ಚಿದ್ಕೀಯನು ಬಾಬೆಲಿನ ಅರಸನಿಗೆ ವಿರುದ್ಧವಾಗಿ ತಿರುಗಿಬಿದ್ದನು.