< ಅರಸುಗಳು - ದ್ವಿತೀಯ ಭಾಗ 2 >

1 ಯೆಹೋವನು ಎಲೀಯನನ್ನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಸೇರಿಸಿಕೊಳ್ಳುವ ಸಮಯ ಬಂದಾಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು.
ಯೆಹೋವ ದೇವರು ಎಲೀಯನನ್ನು ಬಿರುಗಾಳಿಯಿಂದ ಆಕಾಶಕ್ಕೆ ಎತ್ತಿಕೊಳ್ಳುವಾಗ, ಎಲೀಯನು ಎಲೀಷನ ಸಂಗಡ ಗಿಲ್ಗಾಲಿನಿಂದ ಹೋಗುತ್ತಾ ಇದ್ದನು.
2 ಆಗ ಎಲೀಯನು ಎಲೀಷನಿಗೆ, “ನೀನು ಇಲ್ಲೇ ಇರು, ಯೆಹೋವನು ನನಗೆ ಬೇತೇಲಿಗೆ ಹೋಗಬೇಕೆಂದು” ಆಜ್ಞಾಪಿಸಿದ್ದಾನೆ ಎನ್ನಲು, ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರಕೊಟ್ಟನು. ತರುವಾಯ ಅವರಿಬ್ಬರೂ ಬೇತೇಲಿಗೆ ಹೋದರು.
ಆಗ ಎಲೀಯನು ಎಲೀಷನಿಗೆ, “ನೀನು ದಯಮಾಡಿ ಇಲ್ಲಿ ಇರು. ಯೆಹೋವ ದೇವರು ನನ್ನನ್ನು ಬೇತೇಲಿಗೆ ಕಳುಹಿಸುತ್ತಿದ್ದಾರೆ,” ಎಂದನು. ಅದಕ್ಕೆ ಎಲೀಷನು, “ಯೆಹೋವ ದೇವರ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಬೇತೇಲಿಗೆ ಹೋದರು.
3 ಬೇತೇಲಿನ ಪ್ರವಾದಿ ಮಂಡಳಿಯವರು ಎಲೀಷನನ್ನು ಎದುರುಗೊಂಡು ಅವನನ್ನು, “ಯೆಹೋವನು ಈ ಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತೆಗೆದುಕೊಳ್ಳುವನೆಂಬುದು ನಿನಗೆ ಗೊತ್ತುಂಟೋ?” ಎಂದು ಕೇಳಿದರು. ಅದಕ್ಕೆ ಅವನು, “ಗೊತ್ತಿದೆ ನೀವು ಸುಮ್ಮನಿರಿ” ಎಂದನು.
ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಇಂದು ಯೆಹೋವ ದೇವರು ನಿನ್ನ ಯಜಮಾನನನ್ನು ನಿನ್ನಿಂದ ತೆಗೆದುಕೊಳ್ಳುವರೆಂದು ತಿಳಿದಿದ್ದೀಯೋ?” ಎಂದರು. ಅದಕ್ಕವನು, “ಹೌದು, ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು.
4 ಆಗ ಎಲೀಯನು ಎಲೀಷನಿಗೆ, “ನೀನು ಇಲ್ಲೇ ಇರು, ಯೆಹೋವನು ನನಗೆ ಯೆರಿಕೋವಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಆದರೆ ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರ ಕೊಟ್ಟನು. ಎಲೀಷನು ಅವನ ಜೊತೆಯಲ್ಲಿ ಯೆರಿಕೋವಿಗೆ ಹೋದನು.
ಆಗ ಎಲೀಯನು ಅವನಿಗೆ, “ಎಲೀಷನೇ, ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೆರಿಕೋವಿಗೆ ಕಳುಹಿಸುತ್ತಿದ್ದಾರೆ” ಎಂದನು. ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರು ಯೆರಿಕೋವಿಗೆ ಬಂದರು.
5 ಯೆರಿಕೋವಿನಲ್ಲಿದ್ದ ಪ್ರವಾದಿ ಮಂಡಳಿಯವರು ಎಲೀಷನನ್ನು ಎದುರುಗೊಂಡು ಅವನಿಗೆ, “ಯೆಹೋವನು ಈ ಹೊತ್ತು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ಮೇಲಕ್ಕೆ ತೆಗೆದುಕೊಳ್ಳುವನೆಂಬುದು ನಿನಗೆ ಗೊತ್ತುಂಟೋ?” ಎಂದು ಕೇಳಿದರು. ಅದಕ್ಕೆ ಅವನು, ನನಗೆ “ಗೊತ್ತುಂಟು ನೀವು ಸುಮ್ಮನಿರಿ” ಎಂದು ಉತ್ತರ ಕೊಟ್ಟನು.
ಆಗ ಯೆರಿಕೋವಿನಲ್ಲಿರುವ ಪ್ರವಾದಿಗಳ ಗುಂಪು ಎಲೀಷನ ಬಳಿಗೆ ಬಂದು ಅವನಿಗೆ, “ಯೆಹೋವ ದೇವರು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತೆಗೆದುಕೊಳ್ಳುವನೆಂದು ತಿಳಿದಿದ್ದೀಯೋ?” ಎಂದರು. ಅದಕ್ಕವನು, “ನಾನು ಕೂಡಾ ಬಲ್ಲೆ, ಸುಮ್ಮನೆ ಇರಿ,” ಎಂದನು.
6 ಎಲೀಯನು ತಿರುಗಿ ಅವನಿಗೆ, “ನೀನು ಇಲ್ಲೇ ಇರು. ಯೆಹೋವನು ನನಗೆ ಯೊರ್ದನಿಗೆ ಹೋಗಬೇಕೆಂದು ಆಜ್ಞಾಪಿಸಿದ್ದಾನೆ” ಎಂದು ಹೇಳಿದನು. ಅದಕ್ಕೆ ಎಲೀಷನು, “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಉತ್ತರ ಕೊಟ್ಟನು. ಅನಂತರ ಅವರಿಬ್ಬರೂ ಹೊರಟು ಯೊರ್ದನ್ ಹೊಳೆಯ ದಡಕ್ಕೆ ಬಂದರು.
ಎಲೀಯನು ಅವನಿಗೆ, “ನೀನು ದಯಮಾಡಿ ಇಲ್ಲೇ ಇರು. ಯೆಹೋವ ದೇವರು ನನ್ನನ್ನು ಯೊರ್ದನಿಗೆ ಕಳುಹಿಸುತ್ತಿದ್ದಾರೆ,” ಎಂದನು. ಅದಕ್ಕವನು, “ಯೆಹೋವ ದೇವರ ಜೀವದಾಣೆ, ನನ್ನ ಪ್ರಾಣದ ಜೀವದಾಣೆ, ನಾನು ನಿನ್ನನ್ನು ಬಿಡುವುದಿಲ್ಲ,” ಎಂದನು. ಹಾಗೆಯೇ ಅವರಿಬ್ಬರೂ ಮುಂದಕ್ಕೆ ನಡೆದರು.
7 ಪ್ರವಾದಿ ಮಂಡಳಿಯವರಲ್ಲಿ ಐವತ್ತು ಜನರು ಇವರ ಹಿಂದಿನಿಂದಲೇ ಬಂದು ಯೊರ್ದನಿಗೆ ಸ್ವಲ್ಪ ದೂರದಲ್ಲಿಯೇ ನಿಂತುಕೊಂಡರು.
ಪ್ರವಾದಿಗಳ ಗುಂಪಿನಲ್ಲಿ ಐವತ್ತು ಮಂದಿ ಹೋಗಿ ದೂರದಲ್ಲಿ ಎದುರಾಗಿ ನಿಂತರು. ಆದರೆ ಆ ಇಬ್ಬರು ಯೊರ್ದನ್ ನದಿ ಬಳಿಯಲ್ಲಿ ನಿಂತರು.
8 ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಚಿ ಅದರಿಂದ ನೀರನ್ನು ಹೊಡೆಯಲು ನೀರು ಎರಡು ಭಾಗವಾಯಿತು. ಇಬ್ಬರೂ ಒಣನೆಲದ ಮೇಲೆ ನಡೆದುಕೊಂಡು ಯೊರ್ದನನ್ನು ದಾಟಿದರು.
ಆದರೆ ಎಲೀಯನು ತನ್ನ ಹೊದಿಕೆಯನ್ನು ತೆಗೆದು ಮಡಿಸಿಕೊಂಡು, ನೀರನ್ನು ಹೊಡೆದನು. ಆಗ ಆ ನೀರು ಈ ಕಡೆ, ಆ ಕಡೆ ವಿಭಾಗವಾದುದರಿಂದ ಅವರಿಬ್ಬರೂ ಒಣಭೂಮಿಯ ಮೇಲೆ ದಾಟಿಹೋದರು.
9 ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟು ಹೋಗುವ ಮೊದಲು, ನಾನು ನಿನಗೋಸ್ಕರ ಏನು ಮಾಡಬೇಕೆನ್ನುತ್ತೀ ಹೇಳು” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿನಗಿರುವ ಆತ್ಮದಲ್ಲಿ ನನಗೆ ಎರಡರಷ್ಟು ಪಾಲನ್ನು ಅನುಗ್ರಹಿಸು” ಎಂದು ಬೇಡಿಕೊಂಡನು.
ಅವರು ದಾಟಿಹೋದ ತರುವಾಯ, ಎಲೀಯನು ಎಲೀಷನಿಗೆ, “ನಾನು ನಿನ್ನನ್ನು ಬಿಟ್ಟುಹೋಗುವುದಕ್ಕೆ ಮುಂಚೆ, ನಿನಗೋಸ್ಕರ ನಾನು ಮಾಡಬೇಕಾದದ್ದನ್ನು ಕೇಳು,” ಎಂದನು. ಅದಕ್ಕೆ ಎಲೀಷನು, “ನಿನ್ನ ಆತ್ಮದ ಎರಡು ಪಾಲನ್ನು ನಾನು ಬಾಧ್ಯವಾಗಿ ಹೊಂದುವಂತೆ ಮಾಡು,” ಎಂದನು.
10 ೧೦ ಆಗ ಎಲೀಯನು ಅವನಿಗೆ, “ನೀನು ಕಷ್ಟಕರವಾದುದ್ದನ್ನು ಕೇಳಿಕೊಂಡಿರುವೆ. ಆದರೂ ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವುದಾದರೆ ಅದು ನಿನಗೆ ದೊರಕುವುದು. ಇಲ್ಲವಾದರೆ ದೊರಕುವುದಿಲ್ಲ” ಎಂದನು.
ಅದಕ್ಕವನು, “ನೀನು ಕಠಿಣವಾದದ್ದನ್ನು ಕೇಳಿದೆ. ಆದಾಗ್ಯೂ ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ಕಂಡರೆ, ನಿನಗೆ ಅದು ದೊರಕುವುದು, ಇಲ್ಲದಿದ್ದರೆ, ದೊರಕುವುದಿಲ್ಲ,” ಎಂದನು.
11 ೧೧ ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ, ಪಕ್ಕನೆ ಅಗ್ನಿಮಯವಾದ ರಥಗಳು ನಡುವೆ ಬಂದು ಅವರಿಬ್ಬರನ್ನು ಬೇರ್ಪಡಿಸಿದವು. ಎಲೀಯನು ಸುಂಟರಗಾಳಿಯ ಮುಖಾಂತರವಾಗಿ ಪರಲೋಕಕ್ಕೆ ಏರಿ ಹೋದನು.
ಅವರು ನಡೆಯುತ್ತಾ ಬಂದು ಮಾತನಾಡಿಕೊಂಡಿರುವಾಗ, ಬೆಂಕಿಯ ರಥವೂ ಬೆಂಕಿಯ ಕುದುರೆಗಳೂ ಅವರಿಬ್ಬರನ್ನೂ ಬೇರೆಯಾಗಿ ಮಾಡಿದವು. ಎಲೀಯನು ಬಿರುಗಾಳಿಯಲ್ಲಿ ಆಕಾಶಕ್ಕೆ ಏರಿಹೋದನು.
12 ೧೨ ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥಾರಥಾಶ್ವಗಳಾಗಿದ್ದವನೇ” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದ ಮೇಲೆ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು.
ಎಲೀಷನು ಅದನ್ನು ಕಂಡು, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥ ಮತ್ತು ಸಾರಥಿಯಾದ್ದಾತನೇ!” ಎಂದು ಕೂಗಿದನು. ಮತ್ತೆ ಅವನನ್ನು ಕಾಣಲಿಲ್ಲ. ಆಗ ಅವನು ತನ್ನ ವಸ್ತ್ರಗಳನ್ನು ತೆಗೆದು ಎರಡು ತುಂಡುತುಂಡಾಗಿ ಹರಿದನು.
13 ೧೩ ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಯೊರ್ದನ್ ನದಿ ತೀರಕ್ಕೆ ಬಂದು,
ಎಲೀಷನು ಎಲೀಯನಿಂದ ಬಿದ್ದ ಹೊದಿಕೆಯನ್ನು ಎತ್ತಿಕೊಂಡು, ಹಿಂದಕ್ಕೆ ಹೋಗಿ, ಯೊರ್ದನ್ ನದಿ ತೀರದಲ್ಲಿ ನಿಂತನು.
14 ೧೪ “ಎಲೀಯನ ದೇವರಾದ ಯೆಹೋವನೆಲ್ಲಿ?” ಎಂದು ಅಂದುಕೊಂಡು, ಆ ಕಂಬಳಿಯಿಂದ ನೀರನ್ನು ಹೊಡೆಯಲು ಅದು ಎರಡು ಭಾಗವಾಯಿತು. ಎಲೀಷನು ಹೊಳೆಯನ್ನು ದಾಟಿಹೋದನು.
ಎಲೀಯನಿಂದ ಬಿದ್ದ ಹೊದಿಕೆಯನ್ನು ತೆಗೆದುಕೊಂಡು ನೀರನ್ನು ಹೊಡೆದು, “ಎಲೀಯನ ದೇವರಾದ ಯೆಹೋವ ದೇವರು ಎಲ್ಲಿ?” ಎಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ, ಅದು ಬಲಗಡೆಗೂ ಎಡಗಡೆಗೂ ವಿಭಾಗವಾದದ್ದರಿಂದ, ಎಲೀಷನು ದಾಟಿಹೋದನು.
15 ೧೫ ದೂರದಲ್ಲಿ ನಿಂತಿದ್ದ ಯೆರಿಕೋವಿನ ಪ್ರವಾದಿ ಮಂಡಳಿಯವರು ಇದನ್ನು ಕಂಡು, “ಎಲೀಯನಿಗಿದ್ದ ಆತ್ಮವು ಎಲೀಷನ ಮೇಲೆ ಬಂದಿದೆ” ಎಂದು ತಿಳಿದುಕೊಂಡು ಅವನನ್ನು ಎದುರುಗೊಂಡು, ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು.
ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಗುಂಪು ಅವನನ್ನು ಕಂಡಾಗ, “ಎಲೀಯನ ಆತ್ಮವು ಎಲೀಷನ ಮೇಲೆ ನಿಂತಿರುವುದು,” ಎಂದು ಹೇಳಿ, ಎದುರುಗೊಳ್ಳಲು ಬಂದು, ಅವನ ಮುಂದೆ ನೆಲದವರೆಗೂ ಅಡ್ಡಬಿದ್ದರು.
16 ೧೬ ಅನಂತರ ಅವರು ಅವನಿಗೆ, “ನಿನ್ನ ಸೇವಕರಾದ ನಮ್ಮಲ್ಲಿ ಐವತ್ತು ಮಂದಿ ಬಲಿಷ್ಠಜನರಿದ್ದಾರೆ. ನಿನ್ನ ಯಜಮಾನನ್ನು ಹುಡುಕುವುದಕ್ಕೆ ಅವರಿಗೆ ಅಪ್ಪಣೆಯಾಗಲಿ ಯೆಹೋವನ ಆತ್ಮವು ಅವನನ್ನು ಎತ್ತಿಕೊಂಡು ಹೋಗಿ ಒಂದು ಬೆಟ್ಟದ ಮೇಲಾಗಲಿ ತಗ್ಗಿನಲ್ಲಾಗಲಿ ಇಟ್ಟಿರಬಹುದು” ಎಂದು ಹೇಳಿದರು. ಅವನು ಅವರಿಗೆ, “ನೀವು ಅವರನ್ನು ಕಳುಹಿಸಬೇಡಿರಿ” ಎಂದನು.
ಇದಲ್ಲದೆ ಅವರು ಅವನಿಗೆ, “ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ. ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಆಗಲಿ. ಒಂದು ವೇಳೆ ಯೆಹೋವ ದೇವರ ಆತ್ಮರು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ, ತಗ್ಗಿನಲ್ಲಾದರೂ ಇಟ್ಟಿರಬಹುದು,” ಎಂದರು. ಅದಕ್ಕೆ ಅವನು, “ಕಳುಹಿಸಬೇಡಿರಿ,” ಎಂದನು.
17 ೧೭ ಆದರೆ ಅವರು ಅವನನ್ನು ಒತ್ತಾಯಪಡಿಸಿದ್ದರಿಂದ ಅವನು ಬೇಸರಗೊಂಡು, “ಅವರನ್ನು ಕಳುಹಿಸಿರಿ” ಎಂದು ಅಪ್ಪಣೆ ಕೊಟ್ಟನು. ಅವರು ಐವತ್ತು ಮಂದಿಯನ್ನು ಕಳುಹಿಸಿದರು. ಇವರು ಮೂರು ದಿನ ಹುಡುಕಿದರೂ ಎಲೀಯನನ್ನು ಕಾಣಲಿಲ್ಲ.
ಆದರೆ ಅವರು ಅವನನ್ನು ಬೇಸರಪಡುವವರೆಗೂ ಬಲವಂತ ಮಾಡಿದ್ದರಿಂದ ಅವನು, “ಕಳುಹಿಸಿರಿ,” ಎಂದನು. ಅವರು ಐವತ್ತು ಮಂದಿಯನ್ನು ಕಳುಹಿಸಿದರು. ಇವರು ಮೂರು ದಿವಸ ಹುಡುಕಿ ಅವನನ್ನು ಕಾಣದೆ ಹೋದರು.
18 ೧೮ ಇನ್ನೂ ಯೆರಿಕೋವಿನಲ್ಲೇ ಇದ್ದ ಎಲೀಷನ ಬಳಿಗೆ ಬಂದರು. ಎಲೀಷನು ಅವರಿಗೆ, ಹೋಗಬೇಡಿರಿ ಎಂದು ನಾನು ಹೇಳಲಿಲ್ಲವೋ? ಎಂದನು.
ಅವನು ಯೆರಿಕೋವಿನಲ್ಲಿ ನಿಂತಿರುವಾಗ, ಅವರು ತಿರುಗಿ ಅವನ ಬಳಿಗೆ ಬಂದರು. ಆಗ ಅವನು ಅವರಿಗೆ, “ಹೋಗಬೇಡಿರೆಂದು ನಾನು ನಿಮಗೆ ಹೇಳಲಿಲ್ಲವೋ?” ಎಂದನು.
19 ೧೯ ಯೆರಿಕೋವಿನ ಜನರು ಎಲೀಷನಿಗೆ, “ನಮ್ಮ ಒಡೆಯನಾದ ನಿನಗೆ ಗೊತ್ತಿರುವಂತೆ, ಈ ಊರು ಕಟ್ಟಲ್ಪಟ್ಟಿರುವ ಸ್ಥಳವು ಒಳ್ಳೆಯದಾಗಿದೆ. ಆದರೆ ನೀರು ಕೆಟ್ಟದ್ದಾಗಿರುವುದರಿಂದ ಬಂಜೆತನ ಉಂಟಾಗಿದೆ” ಎಂದು ಹೇಳಿದರು.
ಆಗ ಪಟ್ಟಣದ ಮನುಷ್ಯರು ಎಲೀಷನಿಗೆ, “ಈ ಪಟ್ಟಣದ ಸ್ಥಳವು ಒಳ್ಳೆಯದಾಗಿದೆ. ನಮ್ಮ ಯಜಮಾನನೇ, ನೋಡು ನಿನಗೆ ಕಾಣುವುದು. ಆದರೆ ನೋಡು ನೀರು ಕೆಟ್ಟದ್ದು, ಭೂಮಿ ಬಂಜೆಯಾದದ್ದು,” ಎಂದರು.
20 ೨೦ ಆಗ ಎಲೀಷನು ಅವರಿಗೆ, “ಒಂದು ಹೊಸ ಮಡಿಕೆಯಲ್ಲಿ ಉಪ್ಪು ಹಾಕಿ ಅದನ್ನು ತಂದು ಕೊಡಿರಿ” ಎಂದು ಹೇಳಿದಾಗ, ಅವರು ತಂದುಕೊಟ್ಟರು.
ಅದಕ್ಕವನು, “ನನ್ನ ಬಳಿಗೆ ಹೊಸ ಗಡಿಗೆಯನ್ನು ತೆಗೆದುಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ,” ಎಂದನು. ಅವರು ಅವನ ಬಳಿಗೆ ತೆಗೆದುಕೊಂಡು ಬಂದರು.
21 ೨೧ ಅವನು ಬುಗ್ಗೆಗೆ ಹೋಗಿ ಆ ನೀರಿನಲ್ಲಿ ಉಪ್ಪು ಹಾಕಿ, “ಇನ್ನು ಮುಂದೆ ಈ ನೀರಿನಿಂದ ಮರಣವೂ ಬಂಜೆತನವೂ ಉಂಟಾಗದಂತೆ ಇದರಲ್ಲಿದ್ದ ದೋಷವನ್ನೆಲ್ಲಾ ಪರಿಹರಿಸಿದ್ದೇನೆ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳಿದನು.
ಅವನು ನೀರಿನ ಬುಗ್ಗೆಯ ಬಳಿಗೆ ಹೊರಟುಹೋಗಿ, ನೀರಿನಲ್ಲಿ ಉಪ್ಪು ಹಾಕಿ, “‘ಆ ನೀರನ್ನು ಶುದ್ಧಮಾಡಿದೆನು. ಇನ್ನು ಮೇಲೆ ಅದರಿಂದ ಮರಣವೂ, ಬಂಜೆತನವೂ ಆಗದಿರಲಿ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು.
22 ೨೨ ಕೂಡಲೆ ನೀರಿನಲ್ಲಿದ್ದ ದೋಷವೆಲ್ಲಾ ಪರಿಹಾರವಾಯಿತು, ಎಲೀಷನ ವಾಕ್ಯಬಲದಿಂದ ಅದು ಇಂದಿನವರೆಗೂ ಹಾಗೆಯೇ ಇರುತ್ತದೆ.
ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನವರೆಗೂ ಶುದ್ಧವಾಗಿಯೇ ಇದೆ.
23 ೨೩ ಎಲೀಷನು ಅಲ್ಲಿಂದ ಬೇತೇಲಿಗೆ ಹೊರಟು ಅಲ್ಲಿನ ಗುಡ್ಡವನ್ನು ಹತ್ತುತ್ತಿರುವಾಗ, ಆ ಊರಿನ ಹುಡುಗರು ಹೊರಗೆ ಬಂದು, “ಬೋಳು ಮಂಡೆಯವನೇ ಏರಿ ಬಾ, ಬೋಳು ಮಂಡೆಯವನೇ ಏರಿ ಬಾ” ಎಂದು ಕೂಗಿ ಅವನನ್ನು ಪರಿಹಾಸ್ಯ ಮಾಡಿದರು.
ಅವನು ಆ ಸ್ಥಳವನ್ನು ಬಿಟ್ಟು ಬೇತೇಲಿಗೆ ಹೋದನು. ಅವನು ಮಾರ್ಗದಲ್ಲಿ ಏರಿ ಹೋಗುತ್ತಿರುವಾಗ, ಚಿಕ್ಕ ಹುಡುಗರು ಪಟ್ಟಣದಿಂದ ಹೊರಟುಬಂದು ಅವನನ್ನು ಹಾಸ್ಯಮಾಡಿ ಅವನಿಗೆ, “ಬೋಳು ತಲೆಯವನೇ, ಏರಿ ಹೋಗು; ಬೋಳು ತಲೆಯವನೇ, ಏರಿ ಹೋಗು,” ಎಂದರು.
24 ೨೪ ಅವನು ಅವರ ಕಡೆಗೆ ತಿರುಗಿಕೊಂಡು ಯೆಹೋವನ ಹೆಸರಿನಲ್ಲಿ ಅವರನ್ನು ಶಪಿಸಿದನು. ಕೂಡಲೆ ಕಾಡಿನಿಂದ ಎರಡು ಹೆಣ್ಣು ಕರಡಿಗಳು ಬಂದು ಆ ಹುಡುಗರಲ್ಲಿ ನಲ್ವತ್ತೆರಡು ಮಂದಿಯನ್ನು ಹರಿದುಬಿಟ್ಟವು.
ಅವನು ಹಿಂದಿರುಗಿ ಅವರನ್ನು ನೋಡಿ, ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಶಪಿಸಿದನು. ಆಗ ಅಡವಿಯಿಂದ ಎರಡು ಕರಡಿಗಳು ಹೊರಟು, ಅವರಲ್ಲಿ ನಾಲ್ವತ್ತೆರಡು ಹುಡುಗರನ್ನು ಸೀಳಿಬಿಟ್ಟವು.
25 ೨೫ ಎಲೀಷನು ಅಲ್ಲಿಂದ ಕರ್ಮೆಲ್ ಬೆಟ್ಟಕ್ಕೆ ಹೋಗಿ ಅನಂತರ ಸಮಾರ್ಯಕ್ಕೆ ಹಿಂದಿರುಗಿದನು.
ಅವನು ಆ ಸ್ಥಳವನ್ನು ಬಿಟ್ಟು ಕರ್ಮೆಲ್ ಬೆಟ್ಟಕ್ಕೆ ಹೋದನು. ಅಲ್ಲಿಂದ ಸಮಾರ್ಯಕ್ಕೆ ಇಳಿದು ಹೋದನು.

< ಅರಸುಗಳು - ದ್ವಿತೀಯ ಭಾಗ 2 >