< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 9 >
1 ೧ ದೇವಜನರಿಗೋಸ್ಕರ ನೀವು ಸಂಗ್ರಹಿಸುತ್ತಿರುವ ಹಣದ ಕುರಿತು ನಾನು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.
2 ೨ ನಿಮ್ಮ ಮನಸ್ಸಿನ ಬಯಕೆ ಏನೆಂಬುದು ನನಗೆ ಗೊತ್ತುಂಟು. ಕಳೆದ ವರ್ಷದಿಂದಲೂ ಅಖಾಯದವರು ಸಹಾಯಮಾಡುವುದಕ್ಕೆ ಸಿದ್ಧರಾಗಿದ್ದರೆಂದು ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ. ಮತ್ತು ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು.
3 ೩ ಆದರೂ ನಾವು ನಿಮ್ಮನ್ನು ಹೊಗಳಿದ್ದು ಆಧಾರರಹಿತವಾಗದೆ ನಾನು ಹೇಳಿದ ಪ್ರಕಾರವೇ ನೀವು ಸಿದ್ಧರಾಗಿರಬಹುದೆಂದು ಆ ಸಹೋದರರನ್ನು ಕಳುಹಿಸಿದ್ದೇನೆ.
4 ೪ ನೀವು ಸಿದ್ಧವಾಗದಿದ್ದರೆ ಒಂದು ವೇಳೆ ಮಕೆದೋನ್ಯದವರಲ್ಲಿ ಯಾರಾದರೂ ನನ್ನ ಸಂಗಡ ಬಂದು ನೀವು ಸಿದ್ಧವಾಗಲಿಲ್ಲವೆಂಬುದನ್ನು ಕಂಡು ನಮಗೆ ನಿಮ್ಮ ಮೇಲೆ ಇಂಥ ಭರವಸೆ ಇಟ್ಟಿದ್ದಕ್ಕೆ ನಾವು ನಾಚಿಕೆಪಡಬೇಕಾದೀತು; ನಿಮಗೂ ನಾಚಿಕೆಯಾಗುವುದೆಂದು ನಾನು ಹೀಗೆ ಹೇಳುತ್ತೇನೆ.
5 ೫ ಹೀಗಿರಲಾಗಿ ಈ ಸಹೋದರರು ಮುಂಚಿತವಾಗಿ ನಿಮ್ಮ ಬಳಿಗೆ ಬಂದು ನೀವು ಮೊದಲೇ ವಾಗ್ದಾನಮಾಡಿದ ಕೊಡುಗೆಯನ್ನು ಸಿದ್ಧಪಡಿಸಲು ನಿಮಗೆ ಸಹಾಯಮಾಡುವಂತೆ ಇವರನ್ನು ಬೇಡಿಕೊಳ್ಳುವುದು ಅವಶ್ಯವೆಂದು ನನಗೆ ತೋಚಿತು. ಹೀಗೆ ಈ ದಾನ ಒತ್ತಾಯದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ದಾನ ಆಗಿರುತ್ತದೆ.
6 ೬ ಆದರೆ ಮಿತವಾಗಿ ಬಿತ್ತುವವನು ಮಿತವಾಗಿ ಕೊಯ್ಯುವನು. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.
7 ೭ ಪ್ರತಿಯೊಬ್ಬನೂ ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲವಂತದಿಂದಾಗಲಿ ಯಾರೂ ಕೊಡಬಾರದು; ಯಾಕೆಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುವನು.
8 ೮ ದೇವರು ಸಕಲ ವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವುದಕ್ಕೆ ಶಕ್ತನಾದ್ದರಿಂದ, ನೀವೂ ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲ ಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು.
9 ೯ “ಅವನು ಬಡವರಿಗೆ ಧಾರಾಳವಾಗಿ ನೀಡುವನು; ಅವನ ನೀತಿಯು ಸದಾಕಾಲವೂ ಇರುವುದು.” (aiōn )
10 ೧೦ ಬಿತ್ತುವವನಿಗೆ ಬೀಜವನ್ನೂ, ತಿನ್ನುವವನಿಗೆ ಆಹಾರವನ್ನು ಕೊಡುವಾತನು ನಿಮಗೂ ಬಿತ್ತುವುದಕ್ಕೆ ಬೀಜವನ್ನು ಕೊಟ್ಟು ಅದನ್ನು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು.
11 ೧೧ ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಇದಲ್ಲದೆ ನಿಮ್ಮ ದಾನಗಳು ನಮ್ಮ ಕೈಯಿಂದ ಮತ್ತೊಬ್ಬರಿಗೆ ಸೇರಿದಾಗ ಅದು ದೇವರಿಗೆ ಕೃತಜ್ಞತಾಸ್ತುತಿಯನ್ನು ಉಂಟುಮಾಡುತ್ತದೆ.
12 ೧೨ ಹೇಗೆಂದರೆ ನೀವು ಮಾಡುವ ಈ ಧರ್ಮಕಾರ್ಯವು ದೇವಜನರ ಕೊರತೆಗಳನ್ನು ನೀಗಿಸುವುದು ಮಾತ್ರವಲ್ಲದೆ ಅನೇಕ ರೀತಿಯಲ್ಲಿ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟುಮಾಡಲು ಇದು ಕಾರಣವಾಗುತ್ತದೆ.
13 ೧೩ ನೀವು ಮಾಡುವ ಈ ಸಹಾಯ ಹಾಗೂ ನಿಮ್ಮ ಯೋಗ್ಯ ಭಾವವನ್ನು ಅನೇಕರು ನೋಡುವಾಗ, ನೀವು ಮಾಡಿದ ಕ್ರಿಯೆಗೆ ಸರಿಯಾಗಿ, ಕ್ರಿಸ್ತನ ಸುವಾರ್ತೆಯನ್ನು ನೀವು ಅನುಸರಿಸುವುದರಿಂದಲೂ, ಅವರಿಗೂ ಮತ್ತು ಎಲ್ಲರಿಗೂ ನೀವು ಉದಾರವಾಗಿ ಸಹಾಯ ಮಾಡುವುದರಿಂದಲೂ ಅವರು ದೇವರನ್ನು ಕೊಂಡಾಡುವರು.
14 ೧೪ ಇದಲ್ಲದೆ ನಿಮಗೋಸ್ಕರ ವಿಜ್ಞಾಪನೆ ಮಾಡಿ ದೇವರ ಅತಿಶಯವಾದ ಕೃಪೆಯು ನಿಮಗೆ ದೊರೆತಿರುವುದರಿಂದ ಅವರು ನಿಮ್ಮನ್ನು ನೋಡಲು ಬಯಸಿರುವರಲ್ಲದೆ ನಿಮಗಾಗಿ ಪ್ರಾರ್ಥಿಸುವರು.
15 ೧೫ ವರ್ಣಿಸಲಸಾಧ್ಯವಾದ ದಾನಗಳ ನಿಮಿತ್ತ ದೇವರಿಗೆ ಸ್ತೋತ್ರವಾಗಲಿ.