< ಕೊರಿಂಥದವರಿಗೆ ಬರೆದ ಎರಡನೆಯ ಪತ್ರಿಕೆ 8 >
1 ೧ ಸಹೋದರರೇ, ಮಕೆದೋನ್ಯದ ಸಭೆಗಳಿಗೆ ಅನುಗ್ರಹಿಸಲ್ಪಟ್ಟ ದೇವರ ಕೃಪೆಯ ಕುರಿತು ನಿಮಗೆ ತಿಳಿಯಬೇಕೆಂದು ಬಯಸುತ್ತೇವೆ,
2 ೨ ಆ ಸಭೆಗಳವರಿಗೆ ಬಹಳ ಸಂಕಷ್ಟಗಳು ಬಂದರೂ ತಮ್ಮ ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿಂದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.
3 ೩ ಅವರು ತಮ್ಮ ಶಕ್ತಿಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ ತಮ್ಮಿಷ್ಟಕ್ಕೆ ತಾವೇ ಉದಾರವಾಗಿ ದಾನಮಾಡಿದರು.
4 ೪ ಇದಕ್ಕೆ ನಾನೇ ಸಾಕ್ಷಿ. ದೇವಜನರಿಗೆ ಸಹಾಯ ಮಾಡುವ ಕೆಲಸದಲ್ಲಿ ತಾವು ಪಾಲುಗಾರರಾಗಲು ಅಪ್ಪಣೆಯಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು.
5 ೫ ನಾವು ಇದನ್ನು ನಿರೀಕ್ಷಿಸದ ರೀತಿಯಲ್ಲಿ ಅವರು ಕೊಡದೆ, ಮೊದಲು ತಮ್ಮನ್ನೇ ಕರ್ತನಿಗೆ ಒಪ್ಪಿಸಿಕೊಟ್ಟರು; ಅನಂತರ ದೇವರ ಚಿತ್ತಾನುಸಾರವಾಗಿ ನಮಗೂ ತಮ್ಮನ್ನು ಒಪ್ಪಿಸಿದರು.
6 ೬ ತೀತನು ಪ್ರಾರಂಭಿಸಿದ ಹಾಗೆಯೇ ಧರ್ಮಕಾರ್ಯವನ್ನು ಪೂರೈಸಬೇಕೆಂದು ನಾವು ಅವನನ್ನು ಕೇಳಿಕೊಂಡಿದ್ದೇವೆ.
7 ೭ ನೀವು ದೇವರ ಮೇಲಣ ನಂಬಿಕೆಯಲ್ಲಿ, ವಾಕ್ಚಾತುರ್ಯದಲ್ಲಿ, ಜ್ಞಾನದಲ್ಲಿ, ಸಕಲ ವಿಧವಾದ ಆಸಕ್ತಿಯಲ್ಲಿ ಮತ್ತು ನಮ್ಮ ಪ್ರೇರಣೆಯಿಂದ ನಿಮ್ಮಲ್ಲಿ ಹುಟ್ಟಿದ ಪ್ರೀತಿಯಲ್ಲಿ ಹೇಗೆ ಸಮೃದ್ಧರಾಗಿದ್ದೀರೋ ಹಾಗೆಯೇ ಈ ಧರ್ಮಕಾರ್ಯದಲ್ಲಿಯೂ ಸಮೃದ್ಧರಾಗಿ ಮುಂದುವರೆಯಿರಿ.
8 ೮ ಇದನ್ನು ಆಜ್ಞಾರೂಪವಾಗಿ ಹೇಳುತ್ತಿಲ್ಲ ಆದರೆ ಇತರರ ಆಸಕ್ತಿಗೆ ಹೋಲಿಸಿ ನಿಮ್ಮ ಪ್ರೀತಿಯು ಎಷ್ಟು ಯಥಾರ್ಥವಾದದ್ದೆಂಬುದನ್ನು ಸಾಬೀತು ಮಾಡಬೇಕೆಂದು ಹೇಳುತ್ತೇನೆ.
9 ೯ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದರೂ ತನ್ನ ಬಡತನದ ಮುಖಾಂತರ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಆತನು ಬಡವನಾದನು.
10 ೧೦ ಈ ಧರ್ಮಕಾರ್ಯವನ್ನು ಕುರಿತ ನನ್ನ ಸಲಹೆಯನ್ನು ತಿಳಿಸುತ್ತೇನೆ, ಇದು ನಿಮ್ಮ ಸಹಾಯಕ್ಕೆ; ಈ ಕಾರ್ಯವನ್ನು ಒಂದು ವರ್ಷದ ಹಿಂದೆ ನಡೆಸುವುದಕ್ಕೆ ಪ್ರಾರಂಭಿಸಿದ ನೀವು, ಮುಂದುವರಿಯಲು ಮನಸ್ಸು ಮಾಡಿದ ಹಾಗೆಯೇ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿರಿ.
11 ೧೧ ಈ ಕಾರ್ಯವನ್ನು ಪ್ರಾರಂಭಿಸುವುದಕ್ಕೆ ನಿಮ್ಮಲ್ಲಿ ಸಿದ್ಧ ಮನಸ್ಸು ಇರುವ, ಹಾಗೆಯೇ ನಿಮ್ಮ ನಿಮ್ಮ ಶಕ್ತ್ಯನುಸಾರವಾಗಿ ಅದನ್ನು ನೆರವೇರಿಸಿರಿ.
12 ೧೨ ಒಬ್ಬನು ಕೊಡುವಂತ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನ ಯೋಗ್ಯತೆಗೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವುದು; ಅವನಿಗೆ ದೇವರಿಂದ ಮೆಚ್ಚಿಕೆ ದೊರೆಯುವುದು.
13 ೧೩ ಇತರರಿಗೆ ಕಷ್ಟಪರಿಹಾರವೂ, ನಿಮಗೆ ಕಷ್ಟವೂ ಉಂಟಾಗಬೇಕೆಂದು ನನ್ನ ತಾತ್ಪರ್ಯವಲ್ಲ;
14 ೧೪ ಸಮಾನತ್ವ ಇರಬೇಕೆಂಬುದೇ ನನ್ನ ತಾತ್ಪರ್ಯ. ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸುತ್ತದೆ. ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸುವುದಕ್ಕೆ ಅನುಕೂಲವಾಗುವುದು. ಹೀಗೆ ಸಮಾನತ್ವವುಂಟಾಗುವುದು.
15 ೧೫ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ “ಅತಿಯಾಗಿ ಶೇಖರಿಸಿದವನಿಗೆ ಅಧಿಕವಾಗಲಿಲ್ಲ ಮಿತಿಯಾಗಿ ಶೇಖರಿಸಿದವನಿಗೆ ಕೊರತೆಯಾಗಲಿಲ್ಲ.”
16 ೧೬ ನಿಮ್ಮ ವಿಷಯವಾಗಿ ನನಗಿರುವ ಹಿತ ಚಿಂತನೆಯನ್ನು ದೇವರು ತೀತನ ಹೃದಯದಲ್ಲಿಯೂ ಹುಟ್ಟಿಸಿದ್ದಕ್ಕಾಗಿ ಆತನಿಗೆ ಸ್ತೋತ್ರಮಾಡುತ್ತೇನೆ.
17 ೧೭ ಅವನು ನಿಮ್ಮ ಬಳಿಗೆ ಹೋಗಬೇಕೆಂದು ನಾವು ಕೇಳಿಕೊಂಡಾಗ ಅವನು ಒಪ್ಪಿದ್ದನಲ್ಲದೆ ಅತ್ಯಾಸಕ್ತನಾಗಿದ್ದು, ತನ್ನ ಸ್ವಚಿತ್ತದಿಂದ ನಿಮ್ಮ ಬಳಿಗೆ ಬಂದನು.
18 ೧೮ ಅವನ ಜೊತೆಯಲ್ಲಿ ಮತ್ತೊಬ್ಬ ಸಹೋದರನನ್ನು ಕಳುಹಿಸಿದ್ದೇವೆ. ಈ ಸಹೋದರನು ಸುವಾರ್ತಾ ಸೇವೆಯಲ್ಲಿ ಎಲ್ಲಾ ಸಭೆಗಳೊಳಗೆ ಕೀರ್ತಿ ಪಡೆದುಕೊಂಡವನಾಗಿದ್ದಾನೆ.
19 ೧೯ ಇದು ಮಾತ್ರವಲ್ಲದೆ, ಕರ್ತನ ಮಹಿಮೆಗಾಗಿ ಮತ್ತು ನಮ್ಮ ಸಿದ್ಧ ಮನಸ್ಸನ್ನು ತೋರಿಸುವುದಕ್ಕಾಗಿ ನಾವು ನಡಿಸುವ ಧರ್ಮಕಾರ್ಯದ ಸಂಬಂಧವಾಗಿ ನಮ್ಮ ಸಂಗಡ ಪ್ರಯಾಣಮಾಡುವಂತೆ ಸಭೆಗಳಿಂದ ಇವನು ಆರಿಸಲ್ಪಟ್ಟಿದ್ದಾನೆ.
20 ೨೦ ನಾವು ಸಂಗ್ರಹಿಸುತ್ತಿರುವಂತಹ ಈ ಉದಾರ ಕೊಡುಗೆಯ ವಿಷಯದಲ್ಲಿ ಒಬ್ಬರೂ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದಕೊಡಬಾರದು.
21 ೨೧ ಯಾಕೆಂದರೆ ಕರ್ತನ ದೃಷ್ಟಿಯಲ್ಲಿ ಮಾತ್ರವಲ್ಲದೆ ಮನುಷ್ಯರ ದೃಷ್ಟಿಯಲ್ಲಿಯೂ ಯೋಗ್ಯವಾದದ್ದನ್ನು ಮಾಡುವುದು ನಮ್ಮ ಉದ್ದೇಶ.
22 ೨೨ ಇವರಿಬ್ಬರ ಸಂಗಡ ನಮ್ಮ ಸಹೋದರರಲ್ಲಿ ಮತ್ತೊಬ್ಬನನ್ನು ಕಳುಹಿಸಿದ್ದೇವೆ; ನಾವು ಅನೇಕ ಸಮಯದಲ್ಲಿಯೂ, ಅನೇಕ ಕಾರ್ಯಗಳಲ್ಲಿಯೂ ಅವನನ್ನು ಪರೀಕ್ಷಿಸಿ ಆಸಕ್ತನೆಂದು ತಿಳಿದುಕೊಂಡಿದ್ದೇವೆ; ಈಗ ಅವನು ನಿಮ್ಮಲ್ಲಿಟ್ಟಿರುವ ವಿಶೇಷ ಭರವಸದಿಂದ ಇನ್ನೂ ಬಹು ಹೆಚ್ಚಾಗಿ ಆಸಕ್ತಿಯುಳ್ಳವನಾಗಿದ್ದಾನೆ.
23 ೨೩ ತೀತನನ್ನು ಕುರಿತಾಗಿ ಹೇಳುವುದಾದರೆ, ಅವನು ನನ್ನ ಪಾಲುಗಾರನೂ ನಿಮ್ಮ ಪ್ರಯೋಜನಕ್ಕಾಗಿ ನನಗೆ ಸಹಕಾರಿಯೂ ಆಗಿದ್ದಾನೆ; ಆ ಸಹೋದರರನ್ನು ಕುರಿತಾಗಿ ಹೇಳುವುದಾದರೆ, ಅವರು ಸಭೆಗಳಿಂದ ಕಳುಹಿಸಲ್ಪಟ್ಟವರೂ ಮತ್ತು ಕ್ರಿಸ್ತನ ಮಹಿಮೆಯನ್ನು ಪ್ರಕಾಶಪಡಿಸುವವರೂ ಆಗಿದ್ದಾರೆ.
24 ೨೪ ಆದಕಾರಣ ಇವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಾವು ನಿಮ್ಮನ್ನು ಹೊಗಳಿದ್ದಕ್ಕೆ ತಕ್ಕಂತೆ ನಡೆದುಕೊಂಡು ಸಭೆಗಳಿಗೆ ನಿಮ್ಮ ಯೋಗ್ಯತೆಯನ್ನು ಮನದಟ್ಟು ಮಾಡಿಕೊಡಿರಿ.