< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 5 >
1 ೧ ಹೀಗೆ ಸೊಲೊಮೋನನು ಯೆಹೋವನ ಆಲಯಕ್ಕಾಗಿ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಪಡಿಸಿದ ನಂತರ, ತನ್ನ ತಂದೆಯಾದ ದಾವೀದನು ಯೆಹೋವನಿಗೆ ಪ್ರತಿಷ್ಠೆ ಮಾಡಿದ್ದ ಬೆಳ್ಳಿಯನ್ನು, ಬಂಗಾರವನ್ನೂ, ಎಲ್ಲಾ ಸಾಮಾನುಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.
2 ೨ ಆಗ ಸೊಲೊಮೋನನು ದಾವೀದನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೆಲ್ಲರನ್ನು, ಕುಲಾಧಿಪತಿಗಳೆಲ್ಲರನ್ನು ಹಾಗೂ ಇಸ್ರಾಯೇಲರ ಗಣ್ಯ ವ್ಯಕ್ತಿಗಳೆಲ್ಲರನ್ನು ಯೆರೂಸಲೇಮಿಗೆ ಕರೆಸಿಕೊಂಡನು.
3 ೩ ಇಸ್ರಾಯೇಲರೆಲ್ಲರೂ ಏಳನೆಯ ತಿಂಗಳಿನ ಜಾತ್ರೆಗಾಗಿ ಅರಸನ ಬಳಿಗೆ ಒಟ್ಟಾಗಿ ಸೇರಿ ಬಂದರು.
4 ೪ ಇಸ್ರಾಯೇಲ್ಯರ ಹಿರಿಯರೆಲ್ಲರೂ ಕೂಡಿ ಬಂದಾಗ, ಲೇವಿಯರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು.
5 ೫ ಯಾಜಕರಾದ ಲೇವಿಯರು ಒಡಂಬಡಿಕೆಯ ಮಂಜೂಷವನ್ನು, ದೇವದರ್ಶನದ ಗುಡಾರ, ಅದರಲ್ಲಿದ್ದ ಎಲ್ಲಾ ಪರಿಶುದ್ಧವಸ್ತುಗಳನ್ನೂ ಹೊತ್ತುಕೊಂಡು ತಂದರು.
6 ೬ ಅರಸನಾದ ಸೊಲೊಮೋನನೂ, ಎಲ್ಲಾ ಇಸ್ರಾಯೇಲರೂ ಮಂಜೂಷದ ಮುಂದೆ ಕೂಡಿಬಂದು, ಅಸಂಖ್ಯವಾದ ಕುರಿ, ದನಗಳನ್ನು ಯಜ್ಞವಾಗಿ ಅರ್ಪಿಸಿದರು.
7 ೭ ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿರಿಸಿದರು.
8 ೮ ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿಕೊಂಡಿದ್ದವು. ಆದುದರಿಂದ ಮಂಜೂಷವು ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು.
9 ೯ ಮಂಜೂಷಕ್ಕಿಂತಲೂ ಉದ್ದವಾಗಿದ್ದ ಆ ಕೋಲುಗಳ ತುದಿಗಳು ಗರ್ಭಗುಡಿಯ ಎದುರಿನಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು. ಆದರೆ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ; ಮಂಜೂಷವು ಇಂದಿನವರೆಗೂ ಅಲ್ಲೇ ಇದೆ.
10 ೧೦ ಮಂಜೂಷದಲ್ಲಿ ಎರಡು ಕಲ್ಲಿನ ಹಲಗೆಗಳ ಹೊರತಾಗಿ ಬೇರೇನೂ ಇರಲಿಲ್ಲ, ಐಗುಪ್ತ ದೇಶದಿಂದ ಬಂದ ಇಸ್ರಾಯೇಲರೊಡನೆ, ಹೋರೇಬ್ ಬೆಟ್ಟದ ಬಳಿಯಲ್ಲಿ ಯೆಹೋವನು ಒಡಂಬಡಿಕೆ ಮಾಡಿಕೊಂಡ ಮೇಲೆ, ಮೋಶೆಯು ಅವುಗಳನ್ನು ಅದರಲ್ಲಿಟ್ಟಿದ್ದನು.
11 ೧೧ ಮಹಾ ಪರಿಶುದ್ಧ ಸ್ಥಳದಿಂದ ಯಾಜಕರು ಹೊರಗೆ ಬಂದರು. ಸಮಸ್ತ ಯಾಜಕರು ವರ್ಗವ್ಯತ್ಯಾಸವಿಲ್ಲದೆ ಎಲ್ಲರೂ ತಮ್ಮನ್ನು ಶುದ್ಧಮಾಡಿಕೊಂಡಿದ್ದರು.
12 ೧೨ ಹಾಗೂ ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನರೂ ಇವರ ಮಕ್ಕಳೂ, ಸಹೋದರರೂ ನಾರುಮಡಿಗಳನ್ನು ಧರಿಸಿಕೊಂಡು, ತಾಳಗಳನ್ನೂ, ವೀಣೆಗಳನ್ನೂ, ಕಿನ್ನರಿಗಳನ್ನು ನುಡಿಸುತ್ತಾ ಯಜ್ಞವೇದಿಯ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು. ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರೂ ತುತ್ತೂರಿಗಳನ್ನು ಊದುತ್ತಾ ಇದ್ದರು.
13 ೧೩ ಮಂಜೂಷವನ್ನು ಒಳಗಿಟ್ಟ ಯಾಜಕರು ದೇವಾಲಯದಿಂದ ಹೊರಗೆ ಬಂದಕೂಡಲೆ ಏಕ ಸ್ವರದಿಂದ ಸ್ವರವೆತ್ತಿ ಯೆಹೋವನನ್ನು ಕೀರ್ತಿಸುವುದಕ್ಕಾಗಿ ತುತ್ತೂರಿ ಊದುವವರೂ ಗಾಯನ ಮಾಡುವವರೂ ಅಲ್ಲಿ ನಿಂತಿದ್ದರು. ತುತ್ತೂರಿ, ತಾಳ ಮೊದಲಾದ ವಾದ್ಯಗಳ ಧ್ವನಿಯೊಡನೆ ಹೀಗೆ ಹಾಡಿದರು, “ಯೆಹೋವನು ಒಳ್ಳೆಯವನು, ಆತನ ಕೃಪೆಯು ಶಾಶ್ವತವಾಗಿರುವುದು” ಎಂದು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವವರ ಸ್ವರವೂ ಕೇಳಿಸಿದೊಡನೆ, ಮೇಘವು ಯೆಹೋವನ ಆಲಯದಲ್ಲಿ ತುಂಬಿಕೊಂಡಿತು.
14 ೧೪ ಯೆಹೋವನ ತೇಜಸ್ಸಿನಿಂದ ವ್ಯಾಪಿಸಿಕೊಂಡಿದ್ದ ಮೇಘವು ದೇವಾಲಯದಲ್ಲಿ ತುಂಬಿಕೊಂಡಿದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.