< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 36 >
1 ೧ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನು ಅವನ ತಂದೆಯ ಬದಲಾಗಿ ಯೆರೂಸಲೇಮಿನಲ್ಲಿ ಅವನನ್ನು ಅರಸನನ್ನಾಗಿ ಮಾಡಿದರು.
ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದಲಾಗಿ ಅರಸನನ್ನಾಗಿ ಮಾಡಿದರು.
2 ೨ ಯೆಹೋವಾಹಾಜನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತಮೂರು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು.
ಯೆಹೋವಾಹಾಜನು ಅರಸನಾದಾಗ ಇಪ್ಪತ್ತಮೂರು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು.
3 ೩ ಐಗುಪ್ತದ ಅರಸನು ಯೆರೂಸಲೇಮಿಗೆ ಬಂದು ಅವನನ್ನು ಪಟ್ಟದಿಂದ ತೆಗೆದುಹಾಕಿ, ಯೆಹೂದ್ಯರು ತನಗೆ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರವನ್ನೂ ದಂಡ ತೆರುವಂತೆ ಮಾಡಿದನು.
ಈಜಿಪ್ಟ್ ಅರಸನು ಯೆರೂಸಲೇಮಿನಲ್ಲಿ ಅವನನ್ನು ಸಿಂಹಾಸನದಿಂದ ತೆಗೆದುಹಾಕಿ, ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ, ಮೂವತ್ತ ನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರುವಂತೆ ಮಾಡಿದನು.
4 ೪ ಐಗುಪ್ತದ ಅರಸನಾದ ನೆಕೋವನು ಯೆಹೋವಾಹಾಜನ ಸಹೋದರನಾದ ಎಲ್ಯಾಕೀಮನನ್ನು ಯೆಹೂದದ ಮತ್ತು ಯೆರೂಸಲೇಮಿನ ಅರಸನನ್ನಾಗಿ ನೇಮಿಸಿ ಅವನಿಗೆ ಯೆಹೋಯಾಕೀಮನೆಂಬ ಹೆಸರಿಟ್ಟನು ಮತ್ತು ಅವನ ಸಹೋದರನಾದ ಯೆಹೋವಾಹಾಜನನ್ನು ಐಗುಪ್ತ ದೇಶಕ್ಕೆ ತೆಗೆದುಕೊಂಡು ಹೋದನು.
ಇದಲ್ಲದೆ ಈಜಿಪ್ಟ್ ಅರಸನು ಯೆಹೋವಾಹಾಜನ ಸಹೋದರನಾದ ಎಲ್ಯಾಕೀಮನನ್ನು ಯೆಹೂದದ ಮತ್ತು ಯೆರೂಸಲೇಮಿನ ಮೇಲೆ ಅರಸನನ್ನಾಗಿ ಮಾಡಿ, ಅವನಿಗೆ ಯೆಹೋಯಾಕೀಮನೆಂಬ ಹೆಸರನ್ನಿಟ್ಟನು. ನೆಕೋವನು ಎಲ್ಯಾಕೀಮನ ಸಹೋದರನಾದ ಯೆಹೋವಾಹಾಜನನ್ನು ತೆಗೆದುಕೊಂಡು ಈಜಿಪ್ಟಿಗೆ ಒಯ್ದನು.
5 ೫ ಯೆಹೋಯಾಕೀಮನು ಅರಸನಾದಾಗ ಅವನು ಇಪ್ಪತ್ತೈದು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷಗಳ ಕಾಲ ಆಳಿದನು. ಅವನು ತನ್ನ ದೇವರಾದ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
ಯೆಹೋಯಾಕೀಮನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಆದರೆ ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
6 ೬ ಬಾಬೆಲಿನ, ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಯುದ್ಧಕ್ಕೆ ಬಂದು ಅವನನ್ನು ಬಾಬಿಲೋನಿಗೆ ಒಯ್ಯುವುದಕ್ಕೋಸ್ಕರ ಅವನಿಗೆ ಬೇಡಿಹಾಕಿ,
ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬಿಲೋನಿಗೆ ಒಯ್ಯುವುದಕ್ಕಾಗಿ ಅವನಿಗೆ ಕಂಚಿನ ಸಂಕೋಲೆಗಳನ್ನು ಹಾಕಿಸಿದನು.
7 ೭ ಯೆಹೋವನ ಆಲಯದ ಹಲವು ಸಾಮಾನುಗಳನ್ನು ತೆಗೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿಟ್ಟನು.
ಇದಲ್ಲದೆ ನೆಬೂಕದ್ನೆಚ್ಚರನು ಯೆಹೋವ ದೇವರ ಆಲಯದ ಪಾತ್ರೆಗಳಲ್ಲಿ ಕೆಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗಿ, ಬಾಬಿಲೋನಿನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು.
8 ೮ ಯೆಹೋಯಾಕೀಮನ ಉಳಿದ ಚರಿತ್ರೆಯೂ, ಅವನು ನಡಿಸಿದ ಅಸಹ್ಯ ಕೃತ್ಯಗಳೂ, ಅವನಲ್ಲಿ ಕಂಡುಬಂದದ್ದೆಲ್ಲವೂ ಇಸ್ರಾಯೇಲರ ಮತ್ತು ಯೆಹೂದ್ಯರ ರಾಜ ಗ್ರಂಥದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಕೀನನು ಅರಸನಾದನು.
ಯೆಹೋಯಾಕೀಮನ ಇತರ ಕ್ರಿಯೆಗಳೂ, ಅವನು ಮಾಡಿದ ಅಸಹ್ಯಗಳೂ, ಅವನಲ್ಲಿ ಕಂಡುಕೊಂಡದ್ದೂ, ಇಸ್ರಾಯೇಲ್ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು.
9 ೯ ಯೆಹೋಯಾಕೀನನು ಅರಸನಾದಾಗ ಅವನು ಎಂಟು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿನಗಳ ಕಾಲ ಆಳಿದನು. ಅವನು ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
10 ೧೦ ನೆಬೂಕದ್ನೆಚ್ಚರನು ವರ್ಷ ಆರಂಭದಲ್ಲಿ ಅವನನ್ನೂ, ಯೆಹೋವನ ದೇವಾಲಯದ ಬೆಲೆಯುಳ್ಳ ಸಾಮಾನುಗಳನ್ನು ಬಾಬಿಲೋನಿಗೆ ತರಿಸಿಕೊಂಡು, ಅವನ ಚಿಕ್ಕಪ್ಪನಾದ ಚಿದ್ಕೀಯನನ್ನು ಯೆಹೂದ ಮತ್ತು ಯೆರೂಸಲೇಮಿನ ಅರಸನನ್ನಾಗಿ ಮಾಡಿದನು.
ಆದರೆ ಒಂದು ವರ್ಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ, ಅವನನ್ನೂ ಮತ್ತು ಯೆಹೋವ ದೇವರ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬಿಲೋನಿಗೆ ತೆಗೆದುಕೊಂಡು ಬರಮಾಡಿ, ಅವನ ಸಹೋದರನಾದ ಚಿದ್ಕೀಯನನ್ನು ಯೆಹೂದ ಮತ್ತು ಯೆರೂಸಲೇಮಿನ ಮೇಲೆ ಅರಸನನ್ನಾಗಿ ಮಾಡಿದನು.
11 ೧೧ ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದನು; ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷಗಳ ಕಾಲ ಆಳಿದನು.
ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು.
12 ೧೨ ಅವನು ತನ್ನ ದೇವರಾದ ಯೆಹೋವನಿಗೆ ವಿರೋಧವಾಗಿ ನಡೆದದ್ದಲ್ಲದೆ ಅವನ ಮಾತುಗಳನ್ನು ತನಗೆ ತಿಳಿಸುತ್ತಿದ್ದ ಪ್ರವಾದಿಯಾದ ಯೆರೆಮೀಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳಲಿಲ್ಲ.
ಅವನು ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ, ಯೆಹೋವ ದೇವರು ಹೇಳಿದ ಮಾತುಗಳಂತೆ ಪ್ರವಾದಿಯಾದ ಯೆರೆಮೀಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು.
13 ೧೩ ಇದಲ್ಲದೆ, ಅರಸನಾದ ನೆಬೂಕದ್ನೆಚ್ಚರನಿಗೆ ಅಧೀನನಾಗಿರುತ್ತೇನೆ ಎಂದು ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿಸಿದ್ದ ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ತಿರುಗಿಬಿದ್ದದ್ದಲ್ಲದೆ ಇಸ್ರಾಯೇಲ್ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳದೆ ಹಠಮಾರಿಯಾಗಿ ತನ್ನ ಮನಸ್ಸನ್ನು ಕಠಿಣ ಮಾಡಿಕೊಂಡನು.
ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿಬಿದ್ದನು. ಹೇಗೆಂದರೆ ಅವನು ಇಸ್ರಾಯೇಲಿನ ಯೆಹೋವ ದೇವರ ಕಡೆಗೆ ತಿರುಗದೆ, ಹಟಮಾರಿಯಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.
14 ೧೪ ಪ್ರಧಾನಯಾಜಕರೂ, ಪ್ರಜೆಗಳೂ ಕೂಡ ಮಹಾ ದ್ರೋಹಿಗಳಾಗಿ, ಅನ್ಯಜನಾಂಗಗಳ ಅಸಹ್ಯ ಕೃತ್ಯಗಳನ್ನು ಅನುಸರಿಸಿ, ಯೆಹೋವನು ತನಗೆ ಪ್ರತಿಷ್ಠಿಸಿಕೊಂಡಿದ್ದ ಯೆರೂಸಲೇಮಿನ ದೇವಾಲಯವನ್ನು ಹೊಲೆಮಾಡಿದರು.
ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ, ಜನರೂ ಜನಾಂಗಗಳ ಅಸಹ್ಯಗಳನ್ನು ಹಿಂಬಾಲಿಸಿ ಬಹಳವಾಗಿ ಅಪನಂಬಿಗಸ್ತರಾಗಿ, ಯೆಹೋವ ದೇವರು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.
15 ೧೫ ಅವರ ಪೂರ್ವಿಕರ ದೇವರಾದ ಯೆಹೋವನು ತನ್ನ ಪ್ರಜೆಗಳನ್ನು, ತನ್ನ ನಿವಾಸಸ್ಥಾನವನ್ನೂ ಕನಿಕರಿಸಿ, ಸಾವಕಾಶ ಮಾಡದೆ ತನ್ನ ದೂತರ ಮುಖಾಂತರವಾಗಿ ಅವರನ್ನು ಎಚ್ಚರಿಸುತ್ತಾ ಬಂದರು.
ಅವರ ಪಿತೃಗಳ ದೇವರಾದ ಯೆಹೋವ ದೇವರು ತಮ್ಮ ಸೇವಕರನ್ನು ಅವನ ಬಳಿಗೆ ಪುನಃ ಕಳುಹಿಸಿದರು. ತಮ್ಮ ಜನರ ಮೇಲೆಯೂ, ತಮ್ಮ ನಿವಾಸ ಸ್ಥಾನದ ಮೇಲೆಯೂ ಅವರು ಕನಿಕರಪಟ್ಟರು.
16 ೧೬ ಅವರಾದರೋ ದೇವಪ್ರೇಷಿತರನ್ನು ಗೇಲಿಮಾಡಿ, ಯೆಹೋವನ ಮಾತುಗಳನ್ನು ಕಡೆಗಣಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ, ಆತನ ಕೋಪಾಗ್ನಿಯು ಆತನ ಪ್ರಜೆಗಳ ಮೇಲೆ ಉರಿಯತೊಡಗಿತು, ಅದರ ತಾಪವು ಆರಿಹೋಗಲೇ ಇಲ್ಲ.
ಆದರೆ ಯೆಹೋವ ದೇವರ ಕೋಪವು ತಮ್ಮ ಜನರಿಗೆ ವಿರೋಧವಾಗಿ ಏಳುವವರೆಗೂ, ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ, ದೇವರ ವಾಕ್ಯಗಳನ್ನು ತಿರಸ್ಕರಿಸಿ, ದೇವರ ಪ್ರವಾದಿಗಳಿಗೆ ಅಪಹಾಸ್ಯ ಮಾಡಿದರು.
17 ೧೭ ಆತನು ಕಸ್ದೀಯರ ಅರಸನನ್ನು ಅವರ ಮೇಲೆ ಬರಮಾಡಿ ಎಲ್ಲರನ್ನೂ ಅವನ ಕೈಗೆ ಒಪ್ಪಿಸಿದನು. ಅವನು ಅವರ ಯುವಭಟರನ್ನು ಅವರ ಪವಿತ್ರಾಲಯದಲ್ಲೇ ಕತ್ತಿಯಿಂದ ಸಂಹರಿಸಿ ಯುವಕರನ್ನೂ, ಕನ್ಯೆಯರನ್ನೂ, ಮುದುಕರನ್ನೂ, ಅತಿವೃದ್ಧರನ್ನೂ ಕನಿಕರಿಸದೆ ಎಲ್ಲರನ್ನೂ ಕೊಲ್ಲಿಸಿದನು.
ಆದ್ದರಿಂದ ದೇವರು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದರು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಖಡ್ಗದಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ, ಕನ್ಯಾಸ್ತ್ರೀಯ ಮೇಲಾದರೂ, ಅತಿವೃದ್ಧನ ಮೇಲಾದರೂ ಕನಿಕರಪಡಲಿಲ್ಲ. ದೇವರು ಸಮಸ್ತ ಜನರನ್ನು ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸಿದರು.
18 ೧೮ ದೇವಾಲಯದ ಎಲ್ಲಾ ಚಿಕ್ಕ, ದೊಡ್ಡ ಸಾಮಾನುಗಳನ್ನೂ ಯೆಹೋವನ ಮಂದಿರದ ಭಂಡಾರದ ಹಾಗೂ ಅರಸನ ಮತ್ತು ಅವನ ಸರದಾರರ ಭಂಡಾರದ ದ್ರವ್ಯವನ್ನೂ ಬಾಬಿಲೋನಿಗೆ ಒಯ್ದನು.
ಇದಲ್ಲದೆ ದೊಡ್ಡವೂ, ಸಣ್ಣವೂ ಆದ ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳು ಆಲಯದ ಬೊಕ್ಕಸಗಳು, ಅರಸನ ಬೊಕ್ಕಸಗಳು, ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬಿಲೋನಿಗೆ ತರಿಸಿದನು.
19 ೧೯ ಅವನ ಜನರು ಯೆರೂಸಲೇಮಿನ ಪೌಳಿಗೋಡೆಗಳನ್ನು ಕೆಡವಿದರು. ಅದರ ಎಲ್ಲಾ ರಾಜಮಂದಿರಗಳನ್ನೂ, ದೇವಾಲಯವನ್ನೂ ಸುಟ್ಟು ನೆಲಸಮ ಮಾಡಿ; ಅಮೂಲ್ಯವಾದ ವಸ್ತುಗಳನ್ನು ನಾಶಮಾಡಿದರು.
ಅವರು ದೇವರ ಆಲಯವನ್ನು ಸುಟ್ಟುಬಿಟ್ಟು, ಯೆರೂಸಲೇಮಿನ ಗೋಡೆಯನ್ನು ಕೆಡವಿಹಾಕಿ, ಅದರ ಅರಮನೆಗಳನ್ನು ಸುಟ್ಟುಬಿಟ್ಟು, ಅದರ ಬೆಲೆಯುಳ್ಳ ಸಲಕರಣೆಗಳನ್ನೆಲ್ಲಾ ನಾಶಮಾಡಿದರು.
20 ೨೦ ಕತ್ತಿಗೆ ತಪ್ಪಿಸಿಕೊಂಡವರನ್ನು ಅರಸನು ಬಾಬಿಲೋನಿಗೆ ಸೆರೆಯೊಯ್ದನು. ಪಾರಸಿಯರ ಪ್ರಭುತ್ವವು ಅಲ್ಲಿ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.
ಇದಲ್ಲದೆ ಖಡ್ಗದಿಂದ ತಪ್ಪಿಸಿಕೊಂಡವರನ್ನು ಅವನು ಬಾಬಿಲೋನಿಗೆ ಸೆರೆಹಿಡಿದು ಕರೆದುಕೊಂಡು ಹೋದನು. ಅವರು ಅಲ್ಲಿ ಪಾರಸಿಯ ಸಾಮ್ರಾಜ್ಯ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.
21 ೨೧ ಈ ಪ್ರಕಾರ ಯೆರೆಮೀಯನ ಮುಖಾಂತರ ಹೇಳಿಸಿದ ಯೆಹೋವನ ಮಾತು ನೆರವೇರಿತು; ದೇಶವು ತನ್ನ ಸಬ್ಬತ್ ಕಾಲವನ್ನು ಅನುಭವಿಸುವವರೆಗೂ ಸಮಾಧಾನವಾಗಿತ್ತಷ್ಟೇ. ದೇಶವು ಎಪ್ಪತ್ತು ವರ್ಷಗಳು ಪೂರ್ಣವಾಗುವವರೆಗೂ ಅದು ಶೂನ್ಯವಾಗಿದ್ದ ಸಬ್ಬತ್ತನ್ನು ಅನುಭವಿಸಿತು.
ಹೀಗೆ ಯೆರೆಮೀಯನ ಮುಖಾಂತರವಾಗಿ ಹೇಳಿಸಿದ ಯೆಹೋವ ದೇವರ ವಾಕ್ಯವು ನೆರವೇರಿತು. ದೇಶವು ಅದರ ಸಬ್ಬತ್ ದಿನಗಳನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು, ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಾ ಇತ್ತು.
22 ೨೨ ಪಾರಸಿಯ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಆ ಪಾರಸಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ, ಪತ್ರಗಳಿಂದಲೂ,
ಆದರೆ ಪಾರಸಿಯ ಅರಸ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವ ದೇವರು ಯೆರೆಮೀಯನ ಮುಂಖಾತರ ಹೇಳಿದ ವಾಕ್ಯವು ಈಡೇರುವ ಹಾಗೆ ಯೆಹೋವ ದೇವರು ಪಾರಸಿಯ ಅರಸ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ, ಅವನು ತನ್ನ ಸಮಸ್ತ ರಾಜ್ಯದಲ್ಲಿ ಡಂಗುರದಿಂದಲೂ, ಪತ್ರಗಳಿಂದಲೂ ಸಾರಿ ಹೇಳಿದ್ದೇನೆಂದರೆ,
23 ೨೩ ಪಾರಸಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ, “ಪರಲೋಕದ ದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನು ಒಪ್ಪಿಸಿ, ತನಗೋಸ್ಕರ ಯೆಹೂದ ದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಬೇಕೆಂದು ಆಜ್ಞಾಪಿಸಿದ್ದಾನೆ. ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಸ್ವದೇಶಕ್ಕೆ ಪ್ರಯಾಣ ಬೆಳೆಸಲಿ; ಅವರ ದೇವರಾದ ಯೆಹೋವನು ಅವರ ಸಂಗಡ ಇರುವನು” ಎಂದು ಪ್ರಕಟಿಸಿದನು.
“ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ: “‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ. ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತೀರೋ, ಅಂಥವರು ಸ್ವಂತನಾಡಿಗೆ ಹೋಗಬಹುದು. ದೇವರಾದ ಯೆಹೋವ ದೇವರು ಅವರ ಸಂಗಡ ಇರಲಿ!’” ಎಂದನು.