< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 28 >
1 ೧ ಆಹಾಜನು ಪಟ್ಟಕ್ಕೆ ಬಂದಾಗ ಅವನು ಇಪ್ಪತ್ತು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಅವನು ಯೆಹೋವನ ಚಿತ್ತಾನುಸಾರವಾಗಿ ನಡೆಯಲಿಲ್ಲ. ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟುಬಿಟ್ಟನು.
2 ೨ ಅವನು ಇಸ್ರಾಯೇಲ್ ರಾಜರ ಮಾರ್ಗದಲ್ಲಿ ನಡೆದು, ಬಾಳ್ ದೇವರುಗಳ ಎರಕದ ವಿಗ್ರಹಗಳನ್ನು ಮಾಡಿಸಿದ್ದಲ್ಲದೆ
3 ೩ ಅವನು ಬೆನ್ ಹಿನ್ನೋಮ್ ಎಂಬ ತಗ್ಗಿನಲ್ಲಿ ಧೂಪ ಹಾಕಿಸಿದ್ದಲ್ಲದೆ, ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯ ಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಅಗ್ನಿಪ್ರವೇಶ ಮಾಡಿಸಿದನು.
4 ೪ ಪೂಜಾಸ್ಥಳಗಳಲ್ಲೂ, ಗುಡ್ಡಗಳ ಮೇಲೆ ಹಾಗೂ ಎಲ್ಲಾ ಹಸಿರು ಮರಗಳ ಕೆಳಗೂ ಯಜ್ಞಗಳನ್ನೂ, ಧೂಪಗಳನ್ನೂ ಸಮರ್ಪಿಸಿದನು.
5 ೫ ಈ ಕಾರಣ ಅವನ ದೇವರಾದ ಯೆಹೋವನು, ಅವನನ್ನು ಅರಾಮ್ಯರ ಅರಸನ ಕೈಗೆ ಒಪ್ಪಿಸಿದನು. ಅರಾಮ್ಯರು ಅವನನ್ನು ಸೋಲಿಸಿ, ಅವನ ಜನರಲ್ಲಿ ಬಹಳಷ್ಟುಮಂದಿಯನ್ನು ಸೆರೆಹಿಡಿದು ದಮಸ್ಕಕ್ಕೆ ಒಯ್ದರು. ಇದಲ್ಲದೆ ಅವನು ಇಸ್ರಾಯೇಲ್ ರಾಜನ ಕೈಗೂ ಒಪ್ಪಿಸಲ್ಪಟ್ಟು, ಅವನಿಂದಲೂ ಪೂರ್ಣವಾಗಿ ಅಪಜಯ ಹೊಂದಿದನು.
6 ೬ ರೆಮಲ್ಯನ ಮಗನು ಇಸ್ರಾಯೇಲ್ಯರ ಅರಸನು ಆದ ಪೆಕಹ ಎಂಬವನು ಒಂದೇ ದಿನ ಯೆಹೂದ್ಯರಲ್ಲಿ ಲಕ್ಷದ ಇಪ್ಪತ್ತು ಸಾವಿರ ಮಂದಿಯನ್ನು ಕೊಲ್ಲಿಸಿದನು. ಇವರೆಲ್ಲರೂ ಯುದ್ಧವೀರರು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದು ಬಿಟ್ಟಿದ್ದೇ ಇದಕ್ಕೆ ಕಾರಣವಾಗಿತ್ತು.
7 ೭ ರಾಜಪುತ್ರನಾದ ಮಾಸೇಯ, ರಾಜಗೃಹಾಧಿಪತಿಯಾದ ಅಜ್ರೀಕಾಮ್, ರಾಜಪ್ರತಿನಿಧಿಯಾದ ಎಲ್ಕಾನ ಎಂಬುವವರನ್ನು ಎಫ್ರಾಯೀಮ್ ದೇಶದ ಜಿಕ್ರಿಯೆಂಬ ಶೂರನು ಕೊಂದನು.
8 ೮ ಇದಲ್ಲದೆ, ಇಸ್ರಾಯೇಲರು ತಮ್ಮ ಬಂಧುಗಳಾದ ಯೆಹೂದ್ಯರಲ್ಲಿ ಎರಡು ಲಕ್ಷ ಹೆಂಗಸರನ್ನೂ, ಗಂಡು, ಹೆಣ್ಣು ಮಕ್ಕಳನ್ನೂ ಸೆರೆಹಿಡಿದು, ದೊಡ್ಡ ಕೊಳ್ಳೆಯನ್ನೂ ಸೂರೆಮಾಡಿಕೊಂಡು ಸಮಾರ್ಯಕ್ಕೆ ಒಯ್ದರು.
9 ೯ ಅಲ್ಲಿ ಯೆಹೋವನ ಒಬ್ಬ ಪ್ರವಾದಿಯಿದ್ದನು; ಅ ವನ ಹೆಸರು ಓದೇದ್. ಅವನು ಸಮಾರ್ಯಕ್ಕೆ ಬರುತ್ತಿದ್ದ ಸೈನ್ಯದವರನ್ನು ಎದುರುಗೊಂಡು ಅವರಿಗೆ, “ನಿಮ್ಮ ಪೂರ್ವಿಕರ ದೇವರಾದ ಯೆಹೋವನು ಯೆಹೂದ್ಯರ ಮೇಲೆ ಕೋಪಗೊಂಡು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟನಷ್ಟೆ. ಅವರನ್ನು ಸಂಹರಿಸುವುದರಲ್ಲಿ ನಿಮ್ಮ ರೌದ್ರವು ಆಕಾಶವನ್ನು ಮುಟ್ಟಿತು.
10 ೧೦ ಇದು ಸಾಲದೆಂದು ನೀವು ಯೆಹೂದ್ಯರನ್ನು, ಯೆರೂಸಲೇಮಿನವರನ್ನೂ ಬಲಾತ್ಕರಿಸಿ ದಾಸರನ್ನಾಗಿಯೂ, ದಾಸಿಯರನ್ನಾಗಿಯೂ ಮಾಡಿಕೊಳ್ಳಬೇಕೆಂದಿದ್ದೀರಿ. ದೇವರಾದ ಯೆಹೋವನಿಗೆ ವಿರುದ್ಧವಾದ ಅಪರಾಧಗಳು ನಿಮ್ಮಲ್ಲಿಯೂ ಇಲ್ಲವೇ?
11 ೧೧ ಈಗ ನೀವು ನನ್ನ ಮಾತಿಗೆ ಕಿವಿಗೊಟ್ಟು ನಿಮ್ಮ ಸಹೋದರರಿಂದ ಸೆರೆಯಾಗಿ ತಂದವರನ್ನು ಹಿಂದಕ್ಕೆ ಕಳುಹಿಸಿರಿ; ಇಲ್ಲವಾದರೆ ಯೆಹೋವನ ಕೋಪಾಗ್ನಿಯೂ ನಿಮ್ಮ ಮೇಲೆ ಉರಿಯುತ್ತದೆಯಷ್ಟೇ” ಎಂದನು.
12 ೧೨ ಆಗ ಎಫ್ರಾಯೀಮ್ಯರಲ್ಲಿ ಮುಖಂಡರಾಗಿದ್ದ ಯೆಹೋಹಾನಾನನ ಮಗನಾದ ಅಜರ್ಯ, ಮೆಷಿಲ್ಲೇಮೋತನ ಮಗನಾದ ಬೆರಕ್ಯ, ಶಲ್ಲೂಮನ ಮಗನಾದ ಹಿಜ್ಕೀಯ, ಹದ್ಲೈಯನ ಮಗನಾದ ಅಮಾಸ ಎಂಬುವವರು ಯುದ್ಧದಿಂದ ಬರುವವರ ಮುಂದೆ ನಿಂತು,
13 ೧೩ ಅವರಿಗೆ, “ನೀವು ಸೆರೆಹಿಡಿದವರನ್ನು ಇಲ್ಲಿಗೆ ತರಬೇಡಿರಿ; ನೀವು ನಮ್ಮ ಪಾಪ ಅಪರಾಧಗಳ ಜೊತೆಯಲ್ಲಿ ಯೆಹೋವನಿಗೆ ವಿರುದ್ಧವಾದ ಮತ್ತೊಂದು ಅಪರಾಧವನ್ನು ಸೇರಿಸಬೇಕೆಂದಿರುವಿರಾ? ನಮ್ಮ ಅಪರಾಧವು ದೊಡ್ಡದು; ಇಸ್ರಾಯೇಲರ ಮೇಲಿರುವ ದೈವಕೋಪವು ಉಗ್ರವಾಗಿದೆ” ಎಂದು ಹೇಳಿದರು.
14 ೧೪ ಭಟರು ಇದನ್ನು ಕೇಳಿ ಸೆರೆಯವರನ್ನೂ, ಕೊಳ್ಳೆಯನ್ನು ಅಧಿಪತಿಗಳ ಮತ್ತು ಸಮೂಹದವರ ಮುಂದೆಯೇ ಬಿಟ್ಟುಬಿಟ್ಚರು.
15 ೧೫ ಆಗ ಹೆಸರು ಕೂಗಿದ ಪುರುಷರು ಎದ್ದು ಬಂದು ಸೆರೆಯವರಲ್ಲಿ ಬೆತ್ತಲೆಯಾದವರೆಲ್ಲರಿಗೆ ಕೊಳ್ಳೆಯಿಂದ ಉಡುವುದಕ್ಕೆ ಬಟ್ಟೆಗಳನ್ನೂ, ಕಾಲಿಗೆ ಚಪ್ಪಲಿಗಳನ್ನು ಕೊಟ್ಟರು. ಎಲ್ಲರಿಗೂ ಅನ್ನಪಾನಗಳನ್ನಿಟ್ಟು ತೈಲಹಚ್ಚಿದರು. ಬಳಲಿ ಹೋದವರನ್ನು ಕತ್ತೆಗಳ ಮೇಲೆ ಕುಳ್ಳಿರಿಸಿ, ಎಲ್ಲರನ್ನೂ ಯೆರಿಕೋವೆಂಬ ಖರ್ಜೂರ ನಗರಕ್ಕೆ ಕರೆದುಕೊಂಡು ಹೋಗಿ, ಅವರ ಬಂಧುಗಳ ಹತ್ತಿರ ಬಿಟ್ಟು, ಸಮಾರ್ಯಕ್ಕೆ ಹಿಂತಿರುಗಿ ಬಂದರು.
16 ೧೬ ಆ ಕಾಲದಲ್ಲಿ ಅರಸನಾದ ಆಹಾಜನು ತನಗೆ ಸಹಾಯ ಮಾಡಬೇಕೆಂದು ಅಶ್ಶೂರದ ರಾಜರನ್ನು ದೂತರ ಮುಖಾಂತರ ಬೇಡಿಕೊಂಡನು.
17 ೧೭ ಏಕೆಂದರೆ ಎದೋಮ್ಯರು ಯೆಹೂದ್ಯರ ಮೇಲೆ ತಿರುಗಿ ಯುದ್ಧಕ್ಕೆ ಬಂದು ಅವರನ್ನು ಸೋಲಿಸಿ ಅನೇಕ ಜನರನ್ನು ಸೆರೆಯಾಗಿ ಒಯ್ದಿದ್ದರು.
18 ೧೮ ಫಿಲಿಷ್ಟಿಯರು ಯೆಹೂದದ ತಗ್ಗಾದ ಪ್ರದೇಶದ ಮತ್ತು ದಕ್ಷಿಣಪ್ರಾಂತ್ಯದ ಪಟ್ಟಣಗಳ ಮೇಲೆ ಬಿದ್ದು ಬೇತ್ಷೆಮೆಷ್, ಅಯ್ಯಾಲೋನ್, ಗೆದೇರೋತ್ ಇವುಗಳನ್ನೂ ಸೋಕೋ, ತಿಮ್ನಾ, ಗಿಮ್ಜೋ ಇವುಗಳನ್ನೂ ಇವುಗಳಿಗೆ ಸೇರಿದ ಗ್ರಾಮಗಳನ್ನೂ ಸ್ವಾಧೀನಮಾಡಿಕೊಂಡು ಅವುಗಳಲ್ಲಿ ವಾಸವಾಗಿದ್ದರು.
19 ೧೯ ಯೆಹೂದ್ಯರನ್ನು ಅಧರ್ಮಕ್ಕೆ ಪ್ರೇರೇಪಿಸಿ ಯೆಹೋವನಿಗೆ ದ್ರೋಹಮಾಡಿದ ಇಸ್ರಾಯೇಲ್ ರಾಜನಾದ ಆಹಾಜನ ನಿಮಿತ್ತವಾಗಿ ಯೆಹೋವನು ಯೆಹೂದ್ಯರನ್ನು ಈ ಪ್ರಕಾರವಾಗಿ ತಗ್ಗಿಸಿದನು.
20 ೨೦ ಅಶ್ಶೂರದ ಅರಸನಾದ ತಿಗ್ಲತ್ಪಿಲೆಸರನು ಬಂದು ಅವನಿಗೆ ನೆರವಾಗುವುದಕ್ಕೆ ಬದಲಾಗಿ ಅವನನ್ನು ಕುಗ್ಗಿಸಿದನು.
21 ೨೧ ಆಹಾಜನು ಯೆಹೋವನ ಆಲಯದ ಅರಮನೆಯ ಪ್ರಭುಗಳ ಆಸ್ತಿಯನ್ನು ಸೂರೆಮಾಡಿಕೊಂಡು ಹೋಗಿ ಅಶ್ಶೂರದ ಅರಸನಿಗೆ ಕಾಣಿಕೆಯನ್ನಾಗಿ ಕೊಟ್ಟರೂ ಅವನಿಂದ ಏನೂ ಸಹಾಯವಾಗಲಿಲ್ಲ.
22 ೨೨ ಕಷ್ಟ ಬಂದಾಗ ಅರಸನಾದ ಆಹಾಜನು ಯೆಹೋವನಿಗೆ ಮತ್ತಷ್ಟು ದ್ರೋಹಿಯಾದನು.
23 ೨೩ ಹೇಗೆಂದರೆ “ಅರಾಮ್ ರಾಜರ ದೇವತೆಗಳು ಅವರಿಗೆ ಜಯವನ್ನು ಅನುಗ್ರಹಿಸುವೆ ಎಂದು ತಿಳಿದು; ನಾನೂ ಅವುಗಳಿಗೆ ಯಜ್ಞಸಮರ್ಪಿಸುವೆನು, ಆಗ ನನಗೂ ಜಯವಾಗುವುದು” ಎಂದುಕೊಂಡು ಅವನು ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಯಜ್ಞಸಮರ್ಪಿಸಿದನು. ಆದರೆ ಆ ದೇವತೆಗಳ ದೆಸೆಯಿಂದ ಅವನಿಗೂ ಮತ್ತು ಎಲ್ಲಾ ಇಸ್ರಾಯೇಲರಿಗೂ ಕೇಡು ಉಂಟಾಯಿತು.
24 ೨೪ ಇದಲ್ಲದೆ, ಆಹಾಜನು ದೇವಾಲಯದ ಸಾಮಾನುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಒಡೆದುಹಾಕಿದನು; ಯೆಹೋವನ ಆಲಯದ ಬಾಗಿಲುಗಳನ್ನು ಮುಚ್ಚಿ ಯೆರೂಸಲೇಮಿನ ಪ್ರತಿಯೊಂದು ಮೂಲೆಯಲ್ಲಿಯೂ ಯಜ್ಞವೇದಿಗಳನ್ನು ಕಟ್ಟಿಸಿದನು.
25 ೨೫ ಅನ್ಯದೇವತೆಗಳಿಗೆ ಧೂಪಹಾಕುವುದಕ್ಕಾಗಿ ಯೆಹೂದದ ಎಲ್ಲಾ ಪಟ್ಟಣಗಳಲ್ಲಿಯೂ ಪೂಜಾಸ್ಥಳಗಳನ್ನು ಏರ್ಪಡಿಸಿದನು. ಹೀಗೆ ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ರೇಗಿಸಿದನು.
26 ೨೬ ಆಹಾಜನ ಉಳಿದ ಪೂರ್ವೋತ್ತರ ಚರಿತ್ರೆಯೂ ಮತ್ತು ಮಾಡಿದ ಅವನ ಎಲ್ಲಾ ಕೃತ್ಯಗಳೂ ಯೆಹೂದ್ಯರ ಮತ್ತು ಇಸ್ರಾಯೇಲರ ರಾಜ ಗ್ರಂಥದಲ್ಲಿ ಬರೆಯಲ್ಪಟ್ಟಿದೆ.
27 ೨೭ ಆಹಾಜನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನನ್ನು ಇಸ್ರಾಯೇಲ್ ರಾಜಸ್ಮಶಾನದಲ್ಲಿ ಹೂಣಿಡದೆ ಯೆರೂಸಲೇಮ್ ಪಟ್ಟಣದೊಳಗಣ ಒಂದು ಸ್ಥಳದಲ್ಲಿ ಹೂಣಿಟ್ಟರು, ಅವನ ನಂತರ ಅವನ ಮಗನಾದ ಹಿಜ್ಕೀಯನು ಅರಸನಾದನು.