< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 19 >
1 ೧ ಯೆಹೂದದ ಅರಸನಾದ ಯೆಹೋಷಾಫಾಟನು ಸುರಕ್ಷಿತವಾಗಿ ಯೆರೂಸಲೇಮಿಗೆ ಹಿಂದಿರುಗಿದನು.
ಯೆಹೂದದ ಅರಸನಾದ ಯೆಹೋಷಾಫಾಟನು ಸಮಾಧಾನವಾಗಿ ಯೆರೂಸಲೇಮಿನಲ್ಲಿರುವ ತನ್ನ ಅರಮನೆಗೆ ತಿರುಗಿಬಂದನು.
2 ೨ ಯೆಹೋಷಾಫಾಟನು ಯೆರೂಸಲೇಮಿಗೆ ಬಂದಾಗ ಹನಾನೀಯನ ಮಗನಾದ ಯೇಹೂ ಎಂಬ ದರ್ಶಕನು ಅರಸನನ್ನು ಎದುರುಗೊಂಡು ಅವನಿಗೆ, “ನೀನು ದುಷ್ಟರಿಗೆ ಸಹಾಯ ಮಾಡಬಹುದೇ? ಯೆಹೋವನ ಹಗೆಗಾರರನ್ನು ಪ್ರೀತಿಸಬಹುದೇ? ನೀನು ಹೀಗೆ ಮಾಡಿದ್ದರಿಂದ ಯೆಹೋವನ ಕೋಪವು ನಿನ್ನ ಮೇಲಿರುತ್ತದೆ.
ಆಗ ಪ್ರವಾದಿ ಹನಾನೀಯ ಮಗ ಯೇಹುವು ಅವನನ್ನು ಎದುರುಗೊಂಡು, ಅರಸನಾದ ಯೆಹೋಷಾಫಾಟನಿಗೆ ಅವನು, “ದುಷ್ಟನಿಗೆ ಸಹಾಯ ಕೊಡುವವನಾಗಿ ಯೆಹೋವ ದೇವರನ್ನು ದ್ವೇಷಮಾಡುವವರನ್ನು ಪ್ರೀತಿಮಾಡಬಹುದೋ? ಆದಕಾರಣ ನಿನ್ನ ಮೇಲೆ ಯೆಹೋವ ದೇವರ ಸನ್ನಿಧಿಯಿಂದ ಕೋಪಾಗ್ನಿ ಇದೆ.
3 ೩ ಆದರೂ, ನೀನು ದೇಶದೊಳಗಿನಿಂದ ಅಶೇರ ವಿಗ್ರಹಸ್ತಂಭಗಳನ್ನು ತೆಗೆದು ಹಾಕಿ, ಯೆಹೋವನ ಭಕ್ತಿಯಲ್ಲಿ ಮನಸ್ಸಿಟ್ಟಿದ್ದರಿಂದ ನಿನ್ನಲ್ಲಿ ಒಳ್ಳೆಯದು ಉಂಟೆಂದು ತಿಳಿದು ಬಂದಿದೆ” ಎಂಬುದಾಗಿ ಹೇಳಿದನು.
ಆದರೂ ನೀನು ದೇಶದಿಂದ ಅಶೇರ ಸ್ತಂಭಗಳನ್ನು ತೆಗೆದುಹಾಕಿ, ದೇವರನ್ನು ಹುಡುಕಲು ನಿನ್ನ ಹೃದಯವನ್ನು ಸಿದ್ಧಪಡಿಸಿದ್ದರಿಂದ, ನಿನ್ನಲ್ಲಿ ಉತ್ತಮವಾದ ಕಾರ್ಯಗಳು ತೋರಿಬಂದಿವೆ,” ಎಂದನು.
4 ೪ ಯೆಹೋಷಾಫಾಟನು ಯೆರೂಸಲೇಮಿನಲ್ಲಿ ವಾಸವಾಗಿದ್ದು, ಮತ್ತೊಮ್ಮೆ ಬೇರ್ಷೆಬದಿಂದ ಎಫ್ರಾಯೀಮ್ ಪರ್ವತದ ವರೆಗೂ ಸಂಚರಿಸಿ, ತನ್ನ ಪ್ರಜೆಗಳನ್ನು ಅವರ ಪೂರ್ವಿಕರ ದೇವರಾದ ಯೆಹೋವನ ಕಡೆಗೆ ತಿರುಗಿಸಿದನು.
ಯೆಹೋಷಾಫಾಟನು ಯೆರೂಸಲೇಮಿನಲ್ಲಿ ವಾಸವಾಗಿದ್ದನು. ಅವನು ತಿರುಗಿ ಹೊರಟು ಬೇರ್ಷೆಬ ಮೊದಲುಗೊಂಡು ಎಫ್ರಾಯೀಮನ ಬೆಟ್ಟದ ಮಟ್ಟಿಗೂ ಜನರಲ್ಲಿ ಸಂಚರಿಸಿ, ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಕಡೆಗೆ ಅವರನ್ನು ತಿರುಗಿಸಿದನು.
5 ೫ ಅವನು ಯೆಹೂದ ದೇಶದ ಪ್ರತಿಯೊಂದು ಕೋಟೆಕೊತ್ತಲಗಳುಳ್ಳ ಪಟ್ಟಣದಲ್ಲಿ ನ್ಯಾಯಾಧಿಪತಿಗಳನ್ನು ನೇಮಿಸಿದನು.
ಇದಲ್ಲದೆ ಅವನು ದೇಶದೊಳಗೆ ಪಟ್ಟಣ ಪಟ್ಟಣದಲ್ಲಿ ಯೆಹೂದದ ಸಮಸ್ತ ಕೋಟೆಗಳುಳ್ಳ ಪಟ್ಟಣಗಳೊಳಗೆ ನ್ಯಾಯಾಧಿಪತಿಗಳಿಗೆ,
6 ೬ ಅವನು ಅವರಿಗೆ, “ನೀವು ಹೇಗೆ ಕೆಲಸ ನಿರ್ವಹಿಸುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ. ನೀವು ನ್ಯಾಯತೀರಿಸುವುದು ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ. ನ್ಯಾಯವಿಚಾರಣೆ ಮಾಡುವಾಗ ಆತನು ನಿಮ್ಮ ಮಧ್ಯದಲ್ಲಿ ಇರುತ್ತಾನೆ.
“ನೀವು ಮಾಡುವುದನ್ನು ನೋಡಿಕೊಳ್ಳಿರಿ. ನೀವು ಮನುಷ್ಯರಿಗೋಸ್ಕರವಲ್ಲ, ನ್ಯಾಯತೀರಿಸುವ ಕಾರ್ಯದಲ್ಲಿ ನಿಮ್ಮ ಸಂಗಡ ಇರುವ ಯೆಹೋವ ದೇವರಿಗೋಸ್ಕರ ನ್ಯಾಯ ತೀರಿಸುತ್ತೀರಿ.
7 ೭ ಹೀಗಿರುವಲ್ಲಿ, ನಿಮಗೆ ಯೆಹೋವನ ಭಯವಿರಲಿ. ನಿಮ್ಮ ದೇವರಾದ ಯೆಹೋವನಲ್ಲಿ ಅನ್ಯಾಯವೂ, ಮುಖದಾಕ್ಷಿಣ್ಯವೂ ಇಲ್ಲದಿರುವುದರಿಂದ ಜಾಗರೂಕತೆಯಿಂದ ಕಾರ್ಯನಿರ್ವಹಿಸಿರಿ” ಎಂದು ಎಚ್ಚರಿಸಿದನು.
ಆದಕಾರಣ ಯೆಹೋವ ದೇವರ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡೆಯಿರಿ. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರ ಬಳಿಯಲ್ಲಿ ಅನ್ಯಾಯವಾದರೂ, ಮುಖದಾಕ್ಷಿಣ್ಯವಾದರೂ, ಲಂಚ ತೆಗೆದುಕೊಳ್ಳುವುದಾದರೂ ಇಲ್ಲ,” ಎಂದನು.
8 ೮ ಇದಲ್ಲದೆ, ಯೆಹೋಷಾಫಾಟನು ತನ್ನ ಪರಿವಾರದವರೊಡನೆ ಯೆರೂಸಲೇಮಿಗೆ ಹಿಂತಿರುಗಿ ಬಂದು ಲೇವಿಯರಿಂದಲೂ, ಯಾಜಕರಿಂದಲೂ, ಇಸ್ರಾಯೇಲ್ ಗೋತ್ರ ಪ್ರಧಾನರಿಂದಲೂ, ಕೆಲವರನ್ನು ಆರಿಸಿ ಯೆಹೋವನ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ, ಕಲಹಗಳನ್ನೂ ಬೇರೆ ವ್ಯಾಜ್ಯಗಳನ್ನೂ ವಿಚಾರಿಸಿ ತೀರಿಸುವುದಕ್ಕಾಗಿ ಅವರನ್ನು ಯೆರೂಸಲೇಮಿನಲ್ಲೇ ಇರಿಸಿದನು.
ಅವರು ಯೆರೂಸಲೇಮಿಗೆ ತಿರುಗಿ ಬಂದ ತರುವಾಯ ಯೆಹೋಷಾಫಾಟನು ಯೆಹೋವ ದೇವರ ನ್ಯಾಯತೀರ್ವಿಕೆಗೋಸ್ಕರವೂ, ವ್ಯಾಜ್ಯಗಳಿಗೋಸ್ಕರವೂ ಯೆರೂಸಲೇಮಿನೊಳಗೆ ಲೇವಿಯರಲ್ಲಿಯೂ, ಯಾಜಕರಲ್ಲಿಯೂ, ಇಸ್ರಾಯೇಲ್ ಗೋತ್ರಪ್ರಧಾನರಲ್ಲಿಯೂ ಕೆಲವರನ್ನು ನೇಮಿಸಿ ಅವರಿಗೆ,
9 ೯ ಅವರಿಗೆ, “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ನಂಬಿಕೆಯಿಂದಲೂ ಯಥಾರ್ಥಮನಸ್ಸಿನಿಂದಲೂ ಮಾಡತಕ್ಕ ಕೆಲಸಗಳು ಯಾವುದೆಂದರೆ,
“ನೀವು ಈ ಕಾರ್ಯವನ್ನು ಯೆಹೋವ ದೇವರ ಭಯದಿಂದಲೂ ನಂಬಿಕೆಯಿಂದಲೂ ಪೂರ್ಣಹೃದಯದಿಂದಲೂ ಮಾಡಬೇಕು.
10 ೧೦ ಯೆಹೂದ ಪಟ್ಟಣಗಳಲ್ಲಿ ವಾಸಿಸುವ ನಿಮ್ಮ ಸಹೋದರರೊಳಗೆ ಜೀವಹತ್ಯ ಸಂಬಂಧದಲ್ಲಿಯಾಗಲಿ, ಧರ್ಮಶಾಸ್ತ್ರದ ಆಯಾ ಆಜ್ಞಾವಿಧಿ ನ್ಯಾಯಗಳ ಸಂಬಂಧದಲ್ಲಿಯಾಗಲಿ ವ್ಯಾಜ್ಯವುಂಟಾಗಿ, ಅದು ನಿಮ್ಮ ಮುಂದೆ ವಿಚಾರಣೆಗೆ ಬಂದರೆ, ನಿಮ್ಮ ಸಹೋದರರು ಯೆಹೋವನ ದೃಷ್ಟಿಯಲ್ಲಿ ಅಪರಾಧಿಗಳಾಗದಂತೆ ನೀವು ಅವರೊಂದಿಗೆ ದೇವರ ಕೋಪಕ್ಕೆ ಗುರಿಯಾಗದಂತೆ ಅವರನ್ನು ಎಚ್ಚರಿಸಿರಿ. ಹೀಗೆ ಮಾಡುವುದಾದರೆ ನೀವು ನಿರ್ದೋಷಿಗಳಾಗಿರುವಿರಿ.
ಇದಲ್ಲದೆ ಜೀವಹತ್ಯ, ನ್ಯಾಯಕ್ಕೂ, ಆಜ್ಞೆಗೂ, ನಿಯಮಗಳಿಗೂ, ನ್ಯಾಯತೀರ್ವಿಕೆಗಳಿಗೂ ತಮ್ಮ ಪಟ್ಟಣಗಳಲ್ಲಿ ವಾಸವಾಗಿರುವ ನಿಮ್ಮ ಸಹೋದರರಿಂದ ಯಾವ ಕಾರ್ಯವಾದರೂ ನಿಮ್ಮ ಮುಂದೆ ಬಂದರೆ, ರೌದ್ರವು ನಿಮ್ಮ ಮೇಲೆಯೂ, ನಿಮ್ಮ ಸಹೋದರರ ಮೇಲೆಯೂ ಬಾರದ ಹಾಗೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡದಂತೆ ನೀವು ಅವರನ್ನು ಎಚ್ಚರಿಸಬೇಕು. ಇದನ್ನು ಮಾಡಿರಿ. ಆಗ ನೀವು ಅಪರಾಧವಿಲ್ಲದವರಾಗಿರುವಿರಿ.
11 ೧೧ ಇಗೋ, ಯೆಹೋವನ ಆಜ್ಞಾಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಮಹಾಯಾಜಕನಾದ ಅಮರ್ಯನು ನಿಮ್ಮ ನಾಯಕನು; ರಾಜಕೀಯ ಕಾರ್ಯಸಂಬಂಧವಾದ ಎಲ್ಲಾ ವಿಚಾರಣೆಗಳಲ್ಲಿಯೂ ಇಷ್ಮಾಯೇಲನ ಮಗನೂ ಯೆಹೂದ ಕುಲದ ಪ್ರಮುಖನೂ ಆದ ಜೆಬದ್ಯನು ಅಧ್ಯಕ್ಷನು; ಲೇವಿಯರು ನ್ಯಾಯಸ್ಥಾನದ ಉದ್ಯೋಗಸ್ಥರಾಗಿ ನಿಮ್ಮೊಂದಿಗಿದ್ದಾರೆ; ಧ್ಯೆರ್ಯದಿಂದ ಕಾರ್ಯಪ್ರವೃತ್ತರಾಗಿರಿ, ಯೆಹೋವನು ಸಜ್ಜನರ ಸಹಾಯಕನು” ಎಂದು ಹೇಳಿದನು.
“ಮುಖ್ಯಯಾಜಕನಾದ ಅಮರ್ಯನು ಯೆಹೋವ ದೇವರ ಸಮಸ್ತ ಕಾರ್ಯಗಳಲ್ಲಿಯೂ, ಯೆಹೂದದ ಮನೆಯ ನಾಯಕನಾಗಿರುವ ಇಷ್ಮಾಯೇಲನ ಮಗ ಜೆಬದ್ಯನು ಅರಸನ ಸಮಸ್ತ ಕಾರ್ಯಗಳಲ್ಲಿಯೂ ಇರುವರು. ಇದಲ್ಲದೆ ಲೇವಿಯರು ನಿಮ್ಮ ಮುಂದೆ ಅಧಿಕಾರಿಗಳಾಗಿರುವರು. ನೀವು ಬಲಗೊಂಡು ಕೆಲಸ ನಡೆಸಿರಿ. ಯೆಹೋವ ದೇವರು ಒಳ್ಳೆಯವರ ಸಂಗಡ ಇರುವರು,” ಎಂದನು.