< ಪೂರ್ವಕಾಲವೃತ್ತಾಂತ ದ್ವಿತೀಯ ಭಾಗ 10 >
1 ೧ ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಎಲ್ಲಾ ಇಸ್ರಾಯೇಲರೂ ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಕೂಡಿಬಂದಿದ್ದರು.
2 ೨ ಇದಲ್ಲದೆ ಅರಸನಾದ ಸೊಲೊಮೋನನಿಂದ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿ ಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ನಡೆದ ಸಂಗತಿಗಳನ್ನು ಕೇಳಿದೊಡನೆ ಐಗುಪ್ತದಿಂದ ಹಿಂತಿರುಗಿ ಬಂದಿದ್ದನು.
3 ೩ ಇಸ್ರಾಯೇಲರು ಅವನನ್ನೂ ತಮ್ಮ ಬಳಿಗೆ ಕರೆಸಿಕೊಂಡರು. ಯಾರೊಬ್ಬಾಮನು ಎಲ್ಲಾ ಇಸ್ರಾಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,
4 ೪ ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೊರೆಯನ್ನು ಹೊರಿಸಿದ್ದನು; ನಿನ್ನ ತಂದೆಯು ನೇಮಿಸಿದ ಬಿಟ್ಟಿ ಕೆಲಸವನ್ನು ನೀನು ಕಡಿಮೆ ಮಾಡಿ, ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರ ಮಾಡುವುದಾದರೆ, ನಾವು ನಿನ್ನನ್ನು ಸೇವಿಸುವೆವು” ಎಂದು ಹೇಳಿದರು.
5 ೫ ಅದಕ್ಕೆ ರೆಹಬ್ಬಾಮನು, “ನೀವು ಮೂರು ದಿನಗಳ ಬಳಿಕ ಬನ್ನಿರಿ” ಎಂದು ಉತ್ತರಕೊಟ್ಟನು; ಜನರು ಹೊರಟು ಹೋದರು.
6 ೬ ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕರೆಸಿ ಅವರಿಗೆ, “ಈ ಜನರಿಗೆ ಉತ್ತರ ಕೊಡಲು ನೀವು ಯಾವ ಆಲೋಚನೆಯನ್ನು ನನಗೆ ಹೇಳುವಿರಿ?” ಎಂದನು.
7 ೭ ಅವರು ಅವನಿಗೆ, “ನೀನು ಈ ಜನರಿಗೆ ದಯತೋರಿಸಿ, ಅವರನ್ನು ಮೆಚ್ಚಿಸುವ ಒಳ್ಳೆಯ ಉತ್ತರ ಕೊಟ್ಟರೆ ಅವರು ಯಾವಾಗಲೂ ನಿನಗೆ ಅಧೀನರಾಗಿರುವರು” ಎಂದರು.
8 ೮ ಆದರೆ ಅವನು ಅ ಹಿರಿಯರ ಆಲೋಚನೆಯನ್ನು ನಿರಾಕರಿಸಿ, ತನ್ನ ಸಂಗಡವೇ ಬೆಳೆದು ತನಗೆ ಮಂತ್ರಿಗಳಾದ ಯೌವನಸ್ಥರನ್ನು ಕರೆಯಿಸಿದನು.
9 ೯ “ನನ್ನ ತಂದೆಯು ಹೇರಿದ ನೊಗವನ್ನು ಹಗುರ ಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
10 ೧೦ ಅವರು ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ಭಾರವಾದ ನೊಗವನ್ನು ಹಗುರ ಮಾಡು ಎಂಬುದಾಗಿ ನಿನ್ನನ್ನು ಬೇಡಿಕೊಂಡಿರುವ ಈ ಜನರಿಗೆ ನೀನು, ‘ನನ್ನ ತಂದೆಯ ನಡುವಿಗಿಂತ ನನ್ನ ಕಿರುಬೆರಳು ದಪ್ಪವಾಗಿದೆ.
11 ೧೧ ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು’ ಎಂಬುದಾಗಿ ಹೇಳಬೇಕು” ಎಂದು ಉತ್ತರಕೊಟ್ಟರು.
12 ೧೨ ಯಾರೊಬ್ಬಾಮನೂ ಮತ್ತು ಜನರೆಲ್ಲರೂ ಅರಸನಾದ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನ ಹಿಂತಿರುಗಿ ಅವನ ಬಳಿಗೆ ಬಂದರು.
13 ೧೩ ಅರಸನಾದ ರೆಹಬ್ಬಾಮನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು. ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿದನು.
14 ೧೪ ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ, “ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನೂ ಹೇರಿರುವದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು” ಎಂದು ನುಡಿದನು.
15 ೧೫ ಅರಸನು ಜನರ ಮಾತನ್ನು ಕೇಳದೆ ಹೋದದ್ದು ದೈವಯೋಗದಿಂದಲೇ. ಈ ಪ್ರಕಾರ ಯೆಹೋವನು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿದ ಮಾತು ನೆರವೇರಿತು.
16 ೧೬ ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲ ಎಂದು ತಿಳಿದು; ಇಸ್ರಾಯೇಲರೆಲ್ಲರು ಅವನಿಗೆ, “ದಾವೀದನಿಗೂ ನಮಗೂ ಇನ್ನು ಮೇಲೆ ಏನೂ ಸಂಬಂಧವಿಲ್ಲ. ಇಷಯನ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ. ಇಸ್ರಾಯೇಲರೇ, ನಿಮ್ಮ ನಿಮ್ಮ ಸ್ವತ್ತುಗಳಿಗೆ ಹೋಗಿರಿ; ದಾವೀದನ ಕಡೆಯವರೇ, ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ” ಎಂದು ಹೇಳಿ ತಮ್ಮ ತಮ್ಮ ಗುಡಾರಗಳಿಗೆ ಹಿಂತಿರುಗಿದರು.
17 ೧೭ ಯೆಹೂದ ಪಟ್ಟಣದಲ್ಲಿದ್ದ ಇಸ್ರಾಯೇಲರಾದರೋ ಅರಸನಾದ ರೆಹಬ್ಬಾಮನ ಅಧೀನದಲ್ಲಿದ್ದರು.
18 ೧೮ ರೆಹಬ್ಬಾಮನು ಬಿಟ್ಟೀಕೆಲಸದವರ ಮೇಲ್ವಿಚಾರಕನಾದ ಹದೋರಾಮನನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದಾಗ, ಅವರು ಅವನನ್ನು ಕಲ್ಲೆಸೆದು ಕೊಂದರು. ಆಗ ಅರಸನಾದ ರೆಹಬ್ಬಾಮನು ಬೇಗನೆ ರಥವನ್ನೇರಿ ಯೆರೂಸಲೇಮಿಗೆ ಓಡಿ ಹೋದನು.
19 ೧೯ ಇಸ್ರಾಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.