< ಸಮುವೇಲನು - ಪ್ರಥಮ ಭಾಗ 5 >
1 ೧ ಫಿಲಿಷ್ಟಿಯರು ದೇವರ ಮಂಜೂಷವನ್ನು ಎಬೆನೆಜೆರಿನಿಂದ ಅಷ್ಡೋದಿನಲ್ಲಿರುವ
ಫಿಲಿಷ್ಟಿಯರು ದೇವರ ಮಂಜೂಷವನ್ನು ತೆಗೆದುಕೊಂಡು ಎಬೆನೆಜೆರಿನಿಂದ ಅಷ್ಡೋದಿಗೆ ತಂದರು.
2 ೨ ದಾಗೋನನ ಗುಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ದಾಗೋನನ ಮಗ್ಗುಲಲ್ಲೇ ಇಟ್ಟರು.
ಫಿಲಿಷ್ಟಿಯರು ದೇವರ ಮಂಜೂಷವನ್ನು ದಾಗೋನನ ಗುಡಿಗೆ ತೆಗೆದುಕೊಂಡುಹೋಗಿ, ದಾಗೋನನ ಪಕ್ಕದಲ್ಲಿಟ್ಟರು.
3 ೩ ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡಲಾಗಿ ದಾಗೋನ್ ವಿಗ್ರಹವು ಯೆಹೋವನ ಮಂಜೂಷದ ಮುಂದೆ ಬೋರಲಬಿದ್ದಿರುವುದನ್ನು ಕಂಡು ಅದನ್ನು ಎತ್ತಿ ತಿರುಗಿ ಅದರ ಸ್ಥಳದಲ್ಲಿಟ್ಟರು.
ಅಷ್ಡೋದ್ಯರು ಮಾರನೆಯ ದಿವಸ ಎದ್ದಾಗ, ದಾಗೋನ್ ವಿಗ್ರಹ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು.
4 ೪ ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆಯೂ, ಕೈಗಳೂ ಕಡಿಯಲ್ಪಟ್ಟು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಯೆಹೋವನ ಮಂಜೂಷದ ಮುಂದೆ ಬಿದ್ದಿತ್ತು;
ಆಗ ಅವರು ದಾಗೋನನನ್ನು ತೆಗೆದು, ಅದನ್ನು ಅದರ ಸ್ಥಳದಲ್ಲಿ ತಿರುಗಿ ಇಟ್ಟರು. ಅವರು ಮಾರನೆಯ ದಿವಸ ಬೆಳಿಗ್ಗೆ ಎದ್ದಾಗ, ದಾಗೋನ್ ಯೆಹೋವ ದೇವರ ಮಂಜೂಷದ ಮುಂದೆ ಬೋರಲು ಬಿದ್ದಿತ್ತು. ದಾಗೋನನ ತಲೆಯೂ ಅದರ ಎರಡು ಕೈಗಳೂ ಕತ್ತರಿಸಲಾಗಿ ಹೊಸ್ತಿಲ ಮೇಲೆ ಬಿದ್ದಿದ್ದವು.
5 ೫ ಆದ್ದರಿಂದ ಈ ದಿನದ ವರೆಗೂ ದಾಗೋನನ ಯಾಜಕರೂ ಮತ್ತು ದಾಗೋನನ ಮನೆಗೆ ಬರುವವರೆಲ್ಲರೂ ಅಷ್ಡೋದಿನ ಗುಡಿಯ ಹೊಸ್ತಿಲನ್ನು ಇಂದಿಗೂ ತುಳಿಯದಿರುವುದಕ್ಕೆ ಇದೇ ಕಾರಣ.
ಮುಂಡ ಮಾತ್ರ ಅದಕ್ಕೆ ಉಳಿದಿತ್ತು. ಆದ್ದರಿಂದ ಈ ದಿನದವರೆಗೂ ದಾಗೋನನ ಯಾಜಕರೂ, ದಾಗೋನನ ಗುಡಿಯನ್ನು ಪ್ರವೇಶಿಸುವವರೆಲ್ಲರೂ ಅಷ್ಡೋದಿನಲ್ಲಿರುವ ದಾಗೋನನ ಹೊಸ್ತಿಲನ್ನು ತುಳಿಯುವುದಿಲ್ಲ.
6 ೬ ಯೆಹೋವನ ಹಸ್ತವು ಅಷ್ಡೋದಿನವರಿಗೆ ಬಾಧಕವಾಗಿತ್ತು; ಆತನು ಆ ನಗರದಲ್ಲಿಯೂ, ಅದರ ಗ್ರಾಮಗಳಲ್ಲಿಯೂ ಗಡ್ಡೆ ರೋಗವನ್ನು ಬರಮಾಡಿ ಅವರನ್ನು ನಾಶಮಾಡಿದನು.
ಯೆಹೋವ ದೇವರ ಕೈ ಅಷ್ಡೋದಿನವರ ಮೇಲೆ ಮಹಾ ಭಾರವಾಗಿತ್ತು. ಅವರನ್ನು ನಾಶಮಾಡಿ, ಅಷ್ಡೋದನ್ನೂ, ಅದರ ಮೇರೆಗಳನ್ನೂ ಗಡ್ಡೆರೋಗದಿಂದಲೂ ಬಾಧಿಸಿದರು.
7 ೭ ಅಷ್ಡೋದಿನ ಜನರು ಅದನ್ನು ನೋಡಿ, “ಇಸ್ರಾಯೇಲಿನ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಏಕೆಂದರೆ ಆತನ ಹಸ್ತವು ನಮಗೂ, ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ” ಎಂದು ಹೇಳಿ
ಈ ಪ್ರಕಾರ ಸಂಭವಿಸಿದ್ದನ್ನು ಅಷ್ಡೋದಿನ ಜನರು ಕಂಡಾಗ, “ಇಸ್ರಾಯೇಲ್ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು. ಏಕೆಂದರೆ ಅವರ ಕೈ ನಮ್ಮ ಮೇಲೆಯೂ, ನಮ್ಮ ದೇವರಾದ ದಾಗೋನನ ಮೇಲೆಯೂ ಕಠಿಣವಾಗಿದೆ,” ಎಂದರು.
8 ೮ ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ, “ಇಸ್ರಾಯೇಲಿನ ದೇವರ ಮಂಜೂಷವನ್ನು ಏನು ಮಾಡೋಣ?” ಎಂದು ಕೇಳಲು ಅವರು, “ಅದನ್ನು ಗತ್ ಊರಿಗೆ ಕಳುಹಿಸಿ ಕೊಡಬೇಕೆಂದು ನಿರ್ಣಯಿಸಿದರು.” ಅವರು ಹಾಗೆಯೇ ಇಸ್ರಾಯೇಲಿನ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು.
ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ತಮ್ಮ ಬಳಿಗೆ ಕರೆಯಕಳುಹಿಸಿ ಅವರಿಗೆ, “ಇಸ್ರಾಯೇಲ್ ದೇವರ ಮಂಜೂಷವನ್ನು ಏನು ಮಾಡೋಣ?” ಎಂದರು. ಅದಕ್ಕವರು, “ಇಸ್ರಾಯೇಲ್ ದೇವರ ಮಂಜೂಷವು ಗತ್ ಊರಿಗೆ ಕಳುಹಿಸಬೇಕು,” ಎಂದರು. ಅವರು ಇಸ್ರಾಯೇಲ್ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು.
9 ೯ ಮಂಜೂಷವು ಅಲ್ಲಿ ಹೋದ ಮೇಲೆ ಯೆಹೋವನ ಹಸ್ತವು ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲವಾಯಿತು. ಯೆಹೋವನು ಊರಿನ ಚಿಕ್ಕವರಲ್ಲಿಯೂ, ದೊಡ್ಡವರಲ್ಲಿಯೂ ಗಡ್ಡೆಗಳನ್ನು ಬರಮಾಡಿದನು.
ಆದರೆ ಅವರು ಅದನ್ನು ತಂದ ತರುವಾಯ, ಯೆಹೋವ ದೇವರ ಕೈ ಆ ಪಟ್ಟಣದ ಮೇಲೆ ಬಂದು ಮಹಾ ನಾಶಮಾಡಿತು. ಇದಲ್ಲದೆ ಯೆಹೋವ ದೇವರು ಚಿಕ್ಕವರಿಂದ ಹಿರಿಯರವರೆಗೂ ಆ ಪಟ್ಟಣದ ಮನುಷ್ಯರನ್ನು ಹೊಡೆದರು. ಅವರಿಗೆ ಗಡ್ಡೆರೋಗ ಬಂದಿತು.
10 ೧೦ ಆದ್ದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, “ನೋಡಿರಿ, ನಮ್ಮನ್ನೂ, ನಮಗೆ ಸೇರಿದವರನ್ನೂ ಕೊಲ್ಲುವುದಕ್ಕೋಸ್ಕರ ಇಸ್ರಾಯೇಲಿನ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ” ಎಂದು ಕೂಗಿಕೊಂಡರು.
ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ದೇವರ ಮಂಜೂಷವು ಎಕ್ರೋನಿಗೆ ಬಂದಾಗ, ಎಕ್ರೋನ್ಯರು, “ನಮ್ಮನ್ನೂ, ನಮ್ಮ ಜನರನ್ನೂ ಕೊಂದುಹಾಕಬೇಕೆಂದು ಇಸ್ರಾಯೇಲ್ ದೇವರ ಮಂಜೂಷವನ್ನು ನಮ್ಮ ಬಳಿಗೆ ತಂದರು,” ಎಂದು ಕೂಗಿ ಹೇಳಿದರು.
11 ೧೧ ದೇವರ ಹಸ್ತವು ಅವರಿಗೂ ಬಾಧಕವಾಗಿದ್ದುದರಿಂದ ಅವರಿಗೆ ಮರಣಭಯವುಂಟಾಯಿತು. ಅವರು ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ ಅವರಿಗೆ, “ಇಸ್ರಾಯೇಲಿನ ದೇವರ ಮಂಜೂಷವನ್ನು ಹಾಗೆಯೇ ಅದರ ಸ್ಥಳಕ್ಕೆ ಕಳುಹಿಸಿಬಿಡಿರಿ” ಅಂದರು.
ಆಗ ಆ ಇಡೀ ಪಟ್ಟಣಕ್ಕೆ ಮರಣಾಂತಿಕ ವಿನಾಶ ಉಂಟಾಗಿ, ದೇವರ ಕೈ ಅಲ್ಲಿ ಮಹಾಬಾಧಕವಾಗಿದ್ದರಿಂದ ಅವರು ಫಿಲಿಷ್ಟಿಯರ ಅಧಿಪತಿಗಳೆಲ್ಲರನ್ನು ಒಟ್ಟುಗೂಡಿಸಿ, “ಇಸ್ರಾಯೇಲ್ ದೇವರ ಮಂಜೂಷವು ನಮ್ಮನ್ನೂ, ನಮ್ಮ ಜನರನ್ನೂ ಕೊಂದು ಹಾಕದ ಹಾಗೆ ನೀವು ಅದನ್ನು ಅದರ ಸ್ವಸ್ಥಳಕ್ಕೆ ತಿರುಗಿ ಹೋಗುವಂತೆ ಕಳುಹಿಸಿಬಿಡಿರಿ,” ಎಂದರು.
12 ೧೨ ಸಾಯದೆ ಉಳಿದ ಜನರಿಗೂ ಗಡ್ಡೆರೋಗ ಬಂದಿತ್ತು. ಪಟ್ಟಣದ ಗೋಳಾಟವು ಆಕಾಶವನ್ನು ಮುಟ್ಟಿತು.
ಉಳಿದವರು ಸತ್ತು ಹೋಗದೆ ಗಡ್ಡೆರೋಗದಿಂದ ಬಾಧಿತರಾದರು, ಆ ಪಟ್ಟಣದ ಗೋಳಾಟವು ಆಕಾಶಕ್ಕೆ ಮುಟ್ಟಿತು.