< ಸಮುವೇಲನು - ಪ್ರಥಮ ಭಾಗ 27 >

1 ದಾವೀದನು ತನ್ನ ಮನಸ್ಸಿನಲ್ಲಿ, “ನಾನು ಇಲ್ಲೇ ಇದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಸಾಯಲೇಬೇಕು ಆದ್ದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವುದೇ ಉತ್ತಮ. ಆ ಮೇಲೆ ಸೌಲನು ಇಸ್ರಾಯೇಲ್ಯರ ಪ್ರಾಂತ್ಯಗಳಲ್ಲಿ ನನ್ನನ್ನು ಹುಡುಕದೆ ಬಿಟ್ಟುಬಿಡುವನು. ನಾನು ಅವನ ಕೈಗೆ ತಪ್ಪಿಸಿಕೊಂಡವನಾಗಿರುವೆನು” ಅಂದುಕೊಂಡನು.
ಆದರೆ ದಾವೀದನು ತನ್ನ ಹೃದಯದಲ್ಲಿ, “ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಸಾಯುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿ ಹೋಗುವುದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು,” ಎಂದುಕೊಂಡನು.
2 ಅವನು ತನ್ನ ಆರುನೂರು ಜನರೊಡನೆ ಗತ್ ಊರಿನ ಅರಸನೂ ಮಾವೋಕನ ಮಗನೂ ಆದ ಆಕೀಷನ ಬಳಿಗೆ ಹೋದನು.
ಆದ್ದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರುನೂರು ಜನರೊಡನೆ ಗತ್ ಊರಿನ ಅರಸನಾಗಿರುವ ಮಾವೋಕನ ಮಗ ಆಕೀಷನ ಬಳಿಗೆ ಹೋದನು.
3 ಅವನೂ, ಅವನ ಜನರೂ ತಮ್ಮ ತಮ್ಮ ಕುಟುಂಬ ಸಹಿತವಾಗಿ ಆಕೀಷನ ಊರಾದ ಗತ್ ಊರಿನಲ್ಲಿ ವಾಸಮಾಡಿದರು. ದಾವೀದನ ಹೆಂಡತಿಯರಾಗಿರುವ ಇಜ್ರೇಲ್ಯಳಾದ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಅವನ ಸಂಗಡ ಇದ್ದರು.
ದಾವೀದನು ಗತ್ ಊರಿನಲ್ಲಿ ಆಕೀಷನ ಬಳಿಯಲ್ಲಿ ತಾನೂ, ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ, ದಾವೀದನು ತನ್ನ ಇಬ್ಬರು ಹೆಂಡತಿಯರಾದ ಇಜ್ರೆಯೇಲಿನವಳಾದ ಅಹೀನೋವಮಳು, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳು ಸಹಿತವಾಗಿಯೂ ಇದ್ದರು.
4 ದಾವೀದನು ತಪ್ಪಿಸಿಕೊಂಡು ಗತ್ ಊರಿಗೆ ಹೋದನೆಂಬ ವರ್ತಮಾನವನ್ನು ಸೌಲನು ಕೇಳಿದ ಮೇಲೆ ಅವನನ್ನು ಹುಡುಕಲೇ ಇಲ್ಲ.
ದಾವೀದನು ಗತ್ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲಾಯಿತು. ಆದ್ದರಿಂದ ಅವನು ಆ ತರುವಾಯ ದಾವೀದನನ್ನು ಹುಡುಕಲಿಲ್ಲ.
5 ಒಂದು ದಿನ ದಾವೀದನು ಆಕೀಷನಿಗೆ, “ನಿನ್ನ ಸೇವಕನಾದ ನಾನು ನಿನ್ನ ಸಂಗಡ ರಾಜಧಾನಿಯಲ್ಲೇಕೆ ವಾಸಿಸಬೇಕು? ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದಾದರೆ ಯಾವುದಾದರು ಒಂದು ಪಟ್ಟಣದಲ್ಲಿ ನನಗೆ ಸ್ಥಳಕೊಡು. ನಾನು ಅಲ್ಲಿ ವಾಸಮಾಡುವೆನು” ಅಂದನು.
ದಾವೀದನು ಆಕೀಷನಿಗೆ, “ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದ್ದರೆ, ಗ್ರಾಮಾಂತರಗಳಲ್ಲಿ ನಾನು ಇರುವುದಕ್ಕೆ ಒಂದು ಸ್ಥಳ ನನಗೆ ಕೊಡು. ನಿನ್ನ ದಾಸನು ಏಕೆ ನಿನ್ನ ಸಂಗಡ ರಾಜ್ಯದ ಪಟ್ಟಣದಲ್ಲಿ ಇರಬೇಕು?” ಎಂದನು.
6 ಆಕೀಷನು ಕೂಡಲೇ ಅವನಿಗೆ ಚಿಕ್ಲಗ್ ಊರನ್ನು ಕೊಟ್ಟುಬಿಟ್ಟನು. ಆದ್ದರಿಂದ ಚಿಕ್ಲಗ್ ಎಂಬುದು ಇಂದಿನವರೆಗೂ ಯೆಹೂದ ರಾಜರಿಗೆ ಸೇರಿದೆ.
ಆಗ ಆಕೀಷನು ಆ ದಿವಸದಲ್ಲಿ ಚಿಕ್ಲಗ್ ಊರನ್ನು ಅವನಿಗೆ ಕೊಟ್ಟನು. ಆದ್ದರಿಂದ ಚಿಕ್ಲಗ್ ಇಂದಿನವರೆಗೂ ಯೆಹೂದದ ಅರಸರಿಗೆ ಸೇರಿದೆ.
7 ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳೂ ವಾಸವಾಗಿದ್ದನು.
ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳು ವಾಸಿಸಿದ್ದನು.
8 ಆ ಕಾಲದಲ್ಲಿ ಅವನೂ, ಅವನ ಜನರೂ ತೇಲಾಮಿನಿಂದ ಶೂರಿನವರೆಗೂ, ಐಗುಪ್ತ ದೇಶದವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸುತ್ತಿರುವ ಗೆಷೂರ್ಯರು, ಗಿಜ್ರೀಯರು, ಅಮಾಲೇಕ್ಯರು ಇವರ ಮೇಲೆ ಆಕ್ರಮಣ ಮಾಡಿ ಸುಲಿದುಕೊಳ್ಳುತ್ತಿದ್ದರು.
ದಾವೀದನೂ, ಅವನ ಜನರೂ ಶೂರಿಗೆ ಹೋಗುವ ಮೇರೆಯಿಂದ ಈಜಿಪ್ಟಿನವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.
9 ದಾವೀದನು ಸ್ತ್ರೀಪುರುಷರಲ್ಲಿ ಒಬ್ಬರನ್ನೂ ಉಳಿಸದೆ ದೇಶದ ಎಲ್ಲಾ ನಿವಾಸಿಗಳನ್ನು ಕೊಂದು, ಕುರಿ, ದನ, ಕತ್ತೆ, ಒಂಟೆ, ಉಡುಗೊರೆ ಇವುಗಳನ್ನು ತೆಗೆದುಕೊಂಡು ಆಕೀಷನ ಬಳಿಗೆ ಹೋಗುತ್ತಿದ್ದನು.
ಆಗ ದಾವೀದನು ಪುರುಷರನ್ನಾದರೂ, ಸ್ತ್ರೀಯರನ್ನಾದರೂ ಉಳಿಸದೆ, ಆ ಸೀಮೆಯನ್ನು ಹೊಡೆದು, ಕುರಿಪಶುಗಳನ್ನೂ, ಕತ್ತೆಗಳನ್ನೂ, ಒಂಟೆಗಳನ್ನೂ, ವಸ್ತ್ರಗಳನ್ನೂ ತೆಗೆದುಕೊಂಡು ಆಕೀಷನ ಬಳಿಗೆ ತಿರುಗಿಬಂದನು.
10 ೧೦ ಆಕೀಷನು ಅವನನ್ನು “ಈ ಹೊತ್ತು ಯಾವ ಪ್ರಾಂತ್ಯದವರನ್ನು ಸೂರೆಮಾಡಿಕೊಂಡು ಬಂದಿರಿ” ಎಂದು ಕೇಳುವನು. ದಾವೀದನು ಅವನಿಗೆ “ದಕ್ಷಿಣ ಪ್ರಾಂತ್ಯದಲ್ಲಿರುವ ಯೆಹೂದ್ಯರು, ಎರಹ್ಮೇಲ್ಯರು ಕೇನ್ಯರು ಇವರಲ್ಲಿ ಯಾರ ಹೆಸರನ್ನಾದರೂ” ಹೇಳುವರು.
ಆಗ ಆಕೀಷನು, “ಈ ಹೊತ್ತು ಎಲ್ಲಿ ಸುಲಿದುಕೊಂಡಿರಿ?” ಎಂದಾಗ ದಾವೀದನು, “ನಾವು ಯೆಹೂದದ ದಕ್ಷಿಣ ಸೀಮೆಯ ಮೇಲೆಯೂ, ಯೆರಹ್ಮೇಲ್ಯರ ದಕ್ಷಿಣ ಸೀಮೆಯ ಮೇಲೆಯೂ, ಕೇನ್ಯರ ದಕ್ಷಿಣ ಸೀಮೆಯ ಮೇಲೆಯೂ ಬಿದ್ದೆವು,” ಎಂದನು.
11 ೧೧ ದಾವೀದನು ತನ್ನ ಕೃತ್ಯವನ್ನು ಜನರು ಹೇಳಾರೆಂದು ನೆನಸಿ, ಅವನು ಯಾರನ್ನೂ ಗತ್ ಊರಿಗೆ ತಾರದೆ, ಎಲ್ಲಾ ಸ್ತ್ರೀಪುರುಷರನ್ನು ಅಲ್ಲೇ ಕೊಂದುಹಾಕುತ್ತಿದ್ದನು. ಅವನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು.
ದಾವೀದನು ಗತ್ ಪಟ್ಟಣಕ್ಕೆ ಒಬ್ಬ ಪುರುಷನನ್ನಾದರೂ ಸ್ತ್ರೀಯನನ್ನಾದರೂ ಜೀವಂತವಾಗಿ ತರಲಿಲ್ಲ. ಏಕೆಂದರೆ ಯಾರಾದರೂ ಹೋಗಿ ರಾಜನಾದ ಆಕೀಷನಿಗೆ ಸತ್ಯವನ್ನು ತಿಳಿಸಬಹುದೆಂದು ದಾವೀದನು ಯೋಚಿಸಿದನು. ಅವನು ಫಿಲಿಷ್ಟಿಯರ ಸೀಮೆಯಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು.
12 ೧೨ ದಾವೀದನ ಹೆಸರು ಸ್ವಜನರಾದ ಇಸ್ರಾಯೇಲರಲ್ಲಿ ತನ್ನ ಹೆಸರನ್ನು ಕೆಡಿಸಿಕೊಂಡಿದ್ದರಿಂದ ಇವನು ತನ್ನ ನಿತ್ಯ ದಾಸನಾಗಿರುವನೆಂದು ಆಕೀಷನು ನಂಬಿಕೊಂಡನು.
ಆಕೀಷನು ದಾವೀದನನ್ನು ನಂಬಿ, “ಇವನು ತನ್ನ ಜನರಾದ ಇಸ್ರಾಯೇಲರಿಗೆ ಅಸಹ್ಯವಾದನು, ಆದ್ದರಿಂದ ಇವನು ಎಂದೆಂದಿಗೂ ನನ್ನ ದಾಸನಾಗಿರುವನು,” ಎಂದನು.

< ಸಮುವೇಲನು - ಪ್ರಥಮ ಭಾಗ 27 >