< ಸಮುವೇಲನು - ಪ್ರಥಮ ಭಾಗ 21 >
1 ೧ ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಭಯಭಕ್ತಿಯಿಂದ ಎದುರುಗೊಂಡು, “ನಿನ್ನ ಜೊತೆಯಲ್ಲಿ ಒಬ್ಬನಾದರೂ ಇಲ್ಲವಲ್ಲಾ, ನೀನು ಒಬ್ಬನೇ ಬಂದದ್ದೇಕೆ?” ಎಂದು ಅವನನ್ನು ಕೇಳಿದನು.
2 ೨ ಅವನು, “ಅರಸನು ಒಂದು ಕೆಲಸವನ್ನು ಆಜ್ಞಾಪಿಸಿ, ಇದನ್ನು ಯಾರಿಗೂ ತಿಳಿಸಬಾರದೆಂದು ನನ್ನನ್ನು ಕಳುಹಿಸಿದ್ದಾನೆ. ನನ್ನ ಆಳುಗಳು ಇಂಥಿಂಥ ಸ್ಥಳದಲ್ಲಿ ನನ್ನನ್ನು ಸಂಧಿಸಬೇಕೆಂದು ಗೊತ್ತುಮಾಡಿದ್ದಾನೆ.
3 ೩ ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ನಾಲ್ಕೈದು ರೊಟ್ಟಿಗಳಾದರೂ, ಬೇರೆ ಯಾವ ಆಹಾರಪದಾರ್ಥವಾದರೂ ಇದ್ದರೆ ನನಗೆ ಕೊಟ್ಟುಬಿಡು” ಎಂದನು.
4 ೪ ಯಾಜಕನು ದಾವೀದನಿಗೆ, “ನನ್ನ ಬಳಿಯಲ್ಲಿ ಮೀಸಲು ರೊಟ್ಟಿಗಳು ಹೊರತು ಬೇರೆ ರೊಟ್ಟಿಗಳಿಲ್ಲ. ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು” ಎಂದನು.
5 ೫ ದಾವೀದನು, “ನಮ್ಮ ಎಲ್ಲಾ ಯುದ್ಧ ಪ್ರಯಾಣಗಳಲ್ಲಿ ಸ್ತ್ರೀಸಂಗವನ್ನು ನಿಷೇಧಮಾಡುವಂತೆ ಈಗಲೂ ಮಾಡಿದ್ದೇವೆ. ನಾವು ಸಾಧಾರಣ ಕಾರ್ಯಕ್ಕೆ ಹೊರಟಾಗಲೂ ಆಳುಗಳು, ಸಾಮಾನುಗಳು ಪರಿಶುದ್ಧವಾಗಿರುತ್ತವೆ. ಈ ದಿನದಲ್ಲಿ ಅವು ಎಷ್ಟೋ ಹೆಚ್ಚಾಗಿ ಪರಿಶುದ್ಧವಾಗಿರುತ್ತದಲ್ಲವೇ” ಎಂದು ಉತ್ತರ ಕೊಟ್ಟನು
6 ೬ ಬಿಸಿರೊಟ್ಟಿಗಳನ್ನು ಅರ್ಪಿಸಿದ ಆ ದಿನಗಳಲ್ಲಿ ಯೆಹೋವನ ಸನ್ನಿಧಿಯಿಂದ ತೆಗೆಯಲ್ಪಟ್ಟ ನೈವೇದ್ಯವಾದ ಮೊದಲ ರೊಟ್ಟಿಗಳ ಹೊರತು ಅಲ್ಲಿ ಬೇರೆ ರೊಟ್ಟಿಗಳು ಇರಲಿಲ್ಲವಾದ್ದರಿಂದ, ಯಾಜಕನು ಆ ಪರಿಶುದ್ಧವಾದ ರೊಟ್ಟಿಗಳನ್ನೇ ಕೊಟ್ಟುಬಿಟ್ಟನು.
7 ೭ ಅದೇ ದಿನ ಸೌಲನ ಪಶುಪಾಲರಲ್ಲಿ ಪ್ರಧಾನನಾದ ದೋಯೇಗನೆಂಬ ಎದೋಮ್ಯನು ಯೆಹೋವನ ಆಲಯದಲ್ಲಿ ಉಳಿದುಕೊಂಡಿದ್ದನು.
8 ೮ ದಾವೀದನು ಅಹೀಮೆಲೆಕನನ್ನು, “ಅರಸನ ಕಾರ್ಯವು ತುರ್ತಾದ್ದರಿಂದ ಕತ್ತಿಯನ್ನಾಗಲಿ, ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲಿಲ್ಲ, ನಿನ್ನ ಬಳಿಯಲ್ಲಿ ಬರ್ಜಿಯಾಗಲಿ ಕತ್ತಿಯಾಗಲಿ ಇಲ್ಲವೋ?” ಎಂದು ಕೇಳಿದನು.
9 ೯ ಅವನು, “ನೀನು ಏಲಾ ತಗ್ಗಿನಲ್ಲಿ ಕೊಂದು ಹಾಕಿದ ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯು ಒಂದು ಬಟ್ಟೆಯಲ್ಲಿ ಸುತ್ತಲ್ಪಟ್ಟು, ಏಫೋದಿನ ಹಿಂದೆ ಇಡಲ್ಪಟ್ಟಿದೆ. ಬೇಕಾದರೆ ಅದನ್ನು ತೆಗೆದುಕೊ. ಅದರ ಹೊರತು ನನ್ನ ಬಳಿಯಲ್ಲಿ ಬೇರೊಂದಿಲ್ಲ” ಎಂದು ಉತ್ತರಕೊಟ್ಟನು. ದಾವೀದನು, “ಅದಕ್ಕೆ ಸಮಾನವಾದದ್ದು ಮತ್ತೊಂದಿಲ್ಲ. ಅದನ್ನೇ ಕೊಡು” ಎಂದು ಹೇಳಿ ತೆಗೆದುಕೊಂಡನು.
10 ೧೦ ದಾವೀದನನು ಸೌಲನ ಭಯದಿಂದ ಅದೇ ದಿನ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿಹೋದನು.
11 ೧೧ ಆಕೀಷನ ಸೇವಕರು, “ಸೌಲನು ಸಾವಿರಾರು ಶತ್ರುಗಳನ್ನು ಕೊಂದನು, ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು ಎಂಬುದಾಗಿ ಸ್ತ್ರೀಯರು ಕುಣಿಯುತ್ತಾ ಹಾಡಿದ್ದು ಇವನ ಕುರಿತಲ್ಲವೋ?” ಎಂದು ಮಾತನಾಡಿಕೊಂಡರು.
12 ೧೨ ದಾವೀದನು ಈ ಮಾತುಗಳನ್ನು ಕೇಳುತ್ತಲೇ ಗತ್ ಊರಿನ ಅರಸನಾದ ಆಕೀಷನಿಗೆ ಬಹಳವಾಗಿ ಹೆದರಿ,
13 ೧೩ ಅವನ ಸೇವಕರ ಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿಕೊಂಡು, ಗಡ್ಡದ ಮೇಲೆಲ್ಲಾ ಜೊಲ್ಲು ಸುರಿಸುತ್ತಾ, ಬಾಗಿಲುಗಳನ್ನು ಕೆರೆಯುತ್ತಾ, ತನ್ನನ್ನು ಹುಚ್ಚನಂತೆ ನಟಿಸಿದನು.
14 ೧೪ ಆಗ ಆಕೀಷನು ತನ್ನ ಸೇವಕರಿಗೆ, “ಈ ಮನುಷ್ಯನು ಹುಚ್ಚನೆಂದು ನಿಮಗೆ ಕಾಣುವುದಿಲ್ಲವೋ, ಇವನನ್ನು ನನ್ನ ಹತ್ತಿರ ಯಾಕೆ ಕರೆತಂದಿರಿ?
15 ೧೫ ನನ್ನ ಬಳಿಯಲ್ಲಿ ಹುಚ್ಚರು ಕಡಿಮೆಯೆಂದು ನೆನಸಿ ನನ್ನನ್ನು ಬೇಸರಗೊಳಿಸುವುದಕ್ಕಾಗಿ ಇವನನ್ನು ಕರೆತಂದಿರೋ? ಇಂಥವನೂ ನನ್ನ ಮನೆಗೆ ಬರಬೇಕೋ?” ಅಂದನು.