< ಅರಸುಗಳು - ಪ್ರಥಮ ಭಾಗ 9 >

1 ಸೊಲೊಮೋನನು ಯೆಹೋವನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿದ ನಂತರ,
ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ತಾನು ಬಯಸಿದ್ದೆಲ್ಲವನ್ನೂ ಸಾಧಿಸಿದನು.
2 ಯೆಹೋವನು ಅವನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷನಾದಂತೆ ಎರಡನೆಯ ಸಾರಿ ಪ್ರತ್ಯಕ್ಷನಾದನು.
ಅನಂತರ ಯೆಹೋವ ದೇವರು ಸೊಲೊಮೋನನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷರಾದಂತೆ, ಅವನಿಗೆ ಎರಡನೆಯ ಸಾರಿ ಪ್ರತ್ಯಕ್ಷರಾದರು.
3 ಆತನು ಅವನಿಗೆ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆಯನ್ನೂ ಕೇಳಿದ್ದೇನೆ. ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ. ನನ್ನ ದೃಷ್ಟಿಯೂ, ಮನಸ್ಸೂ ಪ್ರತಿದಿನವೂ ಅದರ ಮೇಲಿರುವವು.
ಯೆಹೋವ ದೇವರು ಅವನಿಗೆ, “ನೀನು ನನ್ನ ಮುಂದೆ ಮಾಡಿದ ನಿನ್ನ ಪ್ರಾರ್ಥನೆಯನ್ನೂ ನಿನ್ನ ವಿಜ್ಞಾಪನೆಯನ್ನೂ ಕೇಳಿ ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ನೀನು ಕಟ್ಟಿಸಿದ ಈ ಆಲಯವನ್ನು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು.
4 ನೀನು ನಿನ್ನ ತಂದೆಯಾದ ದಾವೀದನಂತೆ ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುತ್ತಾ ಬರುವುದಾದರೆ,
“ನೀನು ನಿನ್ನ ತಂದೆಯಾದ ದಾವೀದನಂತೆ ಸಂಪೂರ್ಣ ಹೃದಯದಿಂದಲೂ, ಯಥಾರ್ಥತೆಯಿಂದಲೂ ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ,
5 ಇಸ್ರಾಯೇಲರಲ್ಲಿ ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು. ‘ಇಸ್ರಾಯೇಲ್ ಸಿಂಹಾಸನದ ಮೇಲೆ ನಿನ್ನ ಸಂತಾನದವರು ತಪ್ಪದೆ ಕುಳಿತುಕೊಳ್ಳುವರು’ ಎಂಬುದಾಗಿ ನಿನ್ನ ತಂದೆಯಾದ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿನಗೆ ಉತ್ತರಾಧಿಕಾರಿಯ ಕೊರತೆಯಾಗುವುದಿಲ್ಲವೆಂದು ನಾನು ನಿನ್ನ ತಂದೆ ದಾವೀದನಿಗೆ ಮಾತುಕೊಟ್ಟ ಪ್ರಕಾರ, ‘ಇಸ್ರಾಯೇಲಿನಲ್ಲಿ ನಿನ್ನ ರಾಜ್ಯದ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.’
6 ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳದೆ, ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಹಿಂಬಾಲಿಸಿ, ಅವುಗಳಿಗೆ ಕೈಮುಗಿಯುವುದಾದರೆ
“ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ, ಕಟ್ಟಳೆಗಳನ್ನೂ ಕೈಗೊಂಡು ನಡೆಯದೆ ನನ್ನಿಂದ ದೂರಹೋಗಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ,
7 ಇಸ್ರಾಯೇಲರನ್ನು ನಾನು ಅವರಿಗೆ ಕೊಟ್ಟ ದೇಶದಿಂದ ತೆಗೆದು ಹಾಕಿ, ನನ್ನ ಹೆಸರಿಗೋಸ್ಕರ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ‘ಇಸ್ರಾಯೇಲರು’ ಎಲ್ಲಾ ಜನಾಂಗಗಳವರ ಗಾದೆಗೂ ನಿಂದೆಗೂ, ಲೋಕದ ಅಪವಾದಕ್ಕೂ ಗುರಿಯಾಗುವಾಗುವರು.
ಆಗ ನಾನು ಇಸ್ರಾಯೇಲಿಗೆ ಕೊಟ್ಟ ದೇಶದೊಳಗಿಂದ ಅವರನ್ನು ತೆಗೆದುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಇಸ್ರಾಯೇಲರು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಗುರಿಯಾಗುವರು.
8 ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ, ‘ಅಬ್ಬಬ್ಬಾ ಇದೇನು, ಯೆಹೋವನು ಈ ದೇಶವನ್ನು ಮತ್ತು ಈ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.
ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.
9 ಆಗ ಈ ದೇಶದವರು ಅವರಿಗೆ, ‘ನಮ್ಮ ಪೂರ್ವಿಕರನ್ನು ಐಗುಪ್ತದಿಂದ ಬರಮಾಡಿದ ದೇವರಾದ ಯೆಹೋವನನ್ನು ಬಿಟ್ಟು, ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದಲೇ ಯೆಹೋವನು ಈ ಎಲ್ಲಾ ಆಪತ್ತನ್ನು ಬರಮಾಡಿದ್ದಾನೆ’ ಎಂಬ ಉತ್ತರ ಹೇಳುವರು” ಎಂದನು.
ಅದಕ್ಕೆ ಜನರು, ‘ತಮ್ಮ ತಂದೆಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಅನ್ಯದೇವರುಗಳನ್ನು ಹಿಂಬಾಲಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಯೆಹೋವ ದೇವರು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಾರೆಂದು ಹೇಳುವರು,’” ಎಂದರು.
10 ೧೦ ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವನ ಆಲಯವನ್ನೂ ಮತ್ತು ತನ್ನ ಅರಮನೆಯನ್ನೂ ಕಟ್ಟಿಸಿ ಮುಗಿಸಿದನು.
ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಆ ಎರಡು ಮನೆಗಳನ್ನು ಅಂದರೆ, ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ
11 ೧೧ ಆನಂತರ ಅವನು ತನಗೆ ಬೇಕಾದಷ್ಟು ದೇವದಾರುಮರಗಳನ್ನೂ, ತುರಾಯಿಮರಗಳನ್ನೂ ಮತ್ತು ಬಂಗಾರವನ್ನೂ ಕೊಟ್ಟಂಥ ತೂರಿನ ಅರಸನಾದ ಹೀರಾಮನಿಗೆ ಗಲಿಲಾಯ ಪ್ರಾಂತ್ಯದಲ್ಲಿ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
ಸೊಲೊಮೋನನ ಇಷ್ಟದ ಪ್ರಕಾರ ಟೈರಿನ ಅರಸನಾದ ಹೀರಾಮನು ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಚಿನ್ನವನ್ನೂ ಕೊಟ್ಟಿದ್ದರಿಂದ ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ ಗಲಿಲಾಯ ದೇಶದಲ್ಲಿನ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
12 ೧೨ ಹೀರಾಮನು ತೂರಿನಿಂದ ಬಂದು ಆ ಪಟ್ಟಣಗಳನ್ನು ನೋಡಲು ಅವು ಅವನಿಗೆ ಮೆಚ್ಚಿಗೆಯಾಗಲಿಲ್ಲ.
ಆಗ ಹೀರಾಮನು ಟೈರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು. ಆದರೆ ಅವು ಅವನಿಗೆ ಮೆಚ್ಚಿಕೆಯಾಗಿರಲಿಲ್ಲ.
13 ೧೩ ಆದುದರಿಂದ ಅವನು ಸೊಲೊಮೋನನಿಗೆ, “ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೇ?” ಎಂದು ಹೇಳಿ ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಅವುಗಳಿಗೆ ಇಂದಿನವರೆಗೂ ಇದೇ ಹೆಸರಿರುತ್ತದೆ.
ಆದ್ದರಿಂದ ಅವನು, “ನನ್ನ ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೆ?” ಎಂದು ಹೇಳಿ, ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಇಂದಿನವರೆಗೂ ಅವಕ್ಕೆ ಅದೇ ಹೆಸರು.
14 ೧೪ ಹೀರಾಮನು ಸೊಲೊಮೋನನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನು ಕೊಟ್ಟನು.
ಹೀರಾಮನು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ಚಿನ್ನವನ್ನು ಕಳುಹಿಸಿದನು.
15 ೧೫ ಸೊಲೊಮೋನನ ಬಿಟ್ಟೀ ಕೆಲಸದವರು ಕಟ್ಟಿದವುಗಳು ಯಾವುವೆಂದರೆ, ಯೆಹೋವನ ಆಲಯ, ಅರಮನೆ, ಮಿಲ್ಲೋ ಕೋಟೆ, ಯೆರೂಸಲೇಮಿನ ಪೌಳಿಗೋಡೆ, ಹಾಚೋರ್ ಮೆಗಿದ್ದೋ ಮತ್ತು ಗೆಜೆರ್ ಇವುಗಳೇ.
ಅರಸನಾದ ಸೊಲೊಮೋನನು ದಾಸರನ್ನು ಕೂಡಿಸಿದ ಕಾರಣವೇನೆಂದರೆ, ಯೆಹೋವ ದೇವರ ಮಂದಿರವನ್ನೂ, ತನ್ನ ಅರಮನೆಯನ್ನೂ, ಮಿಲ್ಲೋವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಹಾಚೋರನ್ನೂ, ಮೆಗಿದ್ದೋವನ್ನೂ, ಗೆಜೆರನ್ನೂ ಕಟ್ಟುವುದಕ್ಕೋಸ್ಕರವೇ.
16 ೧೬ ಐಗುಪ್ತದ ಅರಸನಾದ ಫರೋಹನು ಗೆಜೆರ್ ಪಟ್ಟಣವನ್ನು ಹಿಡಿದು ಅದಕ್ಕೆ ಬೆಂಕಿಹೊತ್ತಿಸಿ, ಅದರಲ್ಲಿದ್ದ ಕಾನಾನ್ಯರನ್ನು ಹತಿಸಿ, ಅದನ್ನು ವಶಮಾಡಿಕೊಂಡು ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಕೊಟ್ಟಿದ್ದನು.
ಈಜಿಪ್ಟಿನ ಅರಸನಾದ ಫರೋಹನು ಹೊರಟುಹೋಗಿ, ಗೆಜೆರನ್ನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು, ಪಟ್ಟಣದಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಕೊಂದು, ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಅದನ್ನು ಬಹುಮಾನವಾಗಿ ಕೊಟ್ಟನು.
17 ೧೭ ಸೊಲೊಮೋನನು ಗೆಜೆರ್ ಪಟ್ಟಣದ ಹೊರತಾಗಿ ಕೆಳಗಿನ ಬೆತ್ ಹೋರೋನ್,
ಹೀಗೆಯೇ ಸೊಲೊಮೋನನು ಗೆಜೆರನ್ನೂ, ಕೆಳಗಿನ ಬೇತ್ ಹೋರೋನನ್ನೂ,
18 ೧೮ ಯೆಹೂದದ ಅರಣ್ಯಪ್ರದೇಶದಲ್ಲಿರುವ ಬಾಲಾತ್ ಮತ್ತು ತಾಮಾರ್,
ಬಾಲಾತನ್ನೂ, ಮರುಭೂಮಿಯಲ್ಲಿರುವ ತದ್ಮೋರ್ ಎಂಬ ಸ್ಥಳವನ್ನೂ ಕಟ್ಟಿಸಿದನು.
19 ೧೯ ತನ್ನ ಎಲ್ಲಾ ಉಗ್ರಾಣ ಪಟ್ಟಣಗಳು, ಯುದ್ಧ ರಥಗಳನ್ನಿರಿಸುವ ಪಟ್ಟಣಗಳು, ರಾಹುತರ ಪಟ್ಟಣಗಳು ಇವುಗಳನ್ನೂ ಕಟ್ಟಿಸಿದನು. ಇದಲ್ಲದೆ ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲಿಯೂ ತನ್ನ ಮನಸ್ಸಿಗೆ ಬಂದವುಗಳನ್ನೆಲ್ಲಾ ಕಟ್ಟಿಸಿದನು.
ಇದಲ್ಲದೆ ಸೊಲೊಮೋನನು ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ, ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
20 ೨೦ ಇದಲ್ಲದೆ ಅವನು ಇಸ್ರಾಯೇಲರಿಂದ ಸಂಹೃತರಾದ ಅನ್ಯ ಜನರನ್ನೂ, ಕಾನಾನ್ ದೇಶದಲ್ಲಿ ಉಳಿದ ಅಮೋರಿಯ, ಹಿತ್ತಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ,
ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ
21 ೨೧ ಮೊದಲಾದ ಅನ್ಯಜನಾಂಗಗಳ ಸಂತಾನದವರೆಲ್ಲರನ್ನು ತನ್ನ ಕೆಲಸಕ್ಕಾಗಿ ಬಿಟ್ಟೀಹಿಡಿದನು. ಇಂದಿನ ವರೆಗೂ ಅವರು ಬಿಟ್ಟೀಕೆಲಸದವರಾಗಿರುತ್ತಾರೆ.
ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು.
22 ೨೨ ಆದರೆ ಅವನು ಇಸ್ರಾಯೇಲರನ್ನು ಬಿಟ್ಟೀಹಿಡಿಯಲಿಲ್ಲ. ಅವರನ್ನು ಸೈನಿಕರನ್ನಾಗಿಯೂ, ಪರಿವಾರದವರನ್ನಾಗಿಯೂ ಅಧಿಪತಿಗಳನ್ನಾಗಿಯೂ, ಸರದಾರರನ್ನಾಗಿಯೂ, ರಥಾಶ್ವಬಲಗಳ ನಾಯಕರನ್ನಾಗಿಯೂ ನೇಮಿಸಿಕೊಂಡನು.
ಆದರೆ ಸೊಲೊಮೋನನು ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಅವರು ಯುದ್ಧಭಟರಾಗಿಯೂ, ಅವನ ಅಧಿಪತಿಯಾಗಿಯೂ, ತನ್ನ ಕೈಕೆಳಗಿರುವ ಅವನ ಪ್ರಧಾನರಾಗಿಯೂ, ಅಧಿಕಾರಿಗಳಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇದ್ದರು.
23 ೨೩ ಇದಲ್ಲದೆ ಅವನು ಬಿಟ್ಟೀಕೆಲಸ ಮಾಡುವವರ ಮೇಲೆ ಐನೂರೈವತ್ತು ಮಂದಿ ಇಸ್ರಾಯೇಲರನ್ನು ಅಧಿಕಾರಿಗಳನ್ನಾಗಿಯೂ ನೇಮಿಸಿದನು.
ಇದರೊಳಗೆ ಐದು ನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.
24 ೨೪ ಫರೋಹನ ಮಗಳು ದಾವೀದನಗರದಿಂದ ತನಗೋಸ್ಕರ ಕಟ್ಟಿಸಿದ ಅರಮನೆಗೆ ಬಂದಳು. ಅನಂತರ ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿದನು.
ಆದರೆ ಫರೋಹನ ಮಗಳು ದಾವೀದನ ಪಟ್ಟಣದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.
25 ೨೫ ಸೊಲೊಮೋನನು ಯೆಹೋವನ ಆಲಯದ ಮುಂದೆ ತಾನು ಯೆಹೋವನಿಗೋಸ್ಕರ ಕಟ್ಟಿಸಿದ ಯಜ್ಞವೇದಿಯ ಮೇಲೆ ವರ್ಷಕ್ಕೆ ಮೂರು ಸಾರಿ ಸರ್ವಾಂಗಹೋಮ, ಸಮಾಧಾನಯಜ್ಞ ಇವುಗಳನ್ನು ಸಮರ್ಪಿಸಿ ಧೂಪಹಾಕುತ್ತಿದ್ದನು. ಹೀಗೆ ಅವನು ದೇವಾಲಯವನ್ನು ಕಟ್ಟಿ ಸಂಪೂರ್ಣಗೊಳಿಸಿದನು.
ವರುಷಕ್ಕೆ ಮೂರು ಸಾರಿ ಸೊಲೊಮೋನನು ಯೆಹೋವ ದೇವರಿಗೆ ತಾನು ಕಟ್ಟಿಸಿದ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ಯೆಹೋವ ದೇವರ ಮುಂದಿರುವ ಪೀಠದ ಮೇಲೆ ಧೂಪವನ್ನು ಸುಡುತ್ತಿದ್ದನು. ಹೀಗೆ ಆಲಯದ ಅರ್ಪಣೆಗಳನ್ನು ಪೂರೈಸಿದನು.
26 ೨೬ ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದಲ್ಲಿ ಏಲೋತಿನ ಹತ್ತಿರ ಕೆಂಪುಸಮುದ್ರದ ತೀರದಲ್ಲಿರುವ ಎಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.
ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದ ಕೆಂಪು ಸಮುದ್ರತೀರದ ಏಲೋತ್ ಎಂಬ ಊರ ಬಳಿಯಲ್ಲಿರುವ ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.
27 ೨೭ ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರೊಡನೆ ಆ ಹಡಗುಗಳಲ್ಲಿ ಕಳುಹಿಸಿದನು.
ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರ ಸಂಗಡ ಆ ಹಡಗುಗಳಲ್ಲಿ ಕಳುಹಿಸಿದನು.
28 ೨೮ ಅವರು ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸನಾದ ಸೊಲೊಮೋನನಿಗೆ ನಾನೂರಿಪ್ಪತ್ತು ತಲಾಂತು ಬಂಗಾರವನ್ನು ತೆಗೆದುಕೊಂಡು ಬಂದರು.
ಅವರು ಓಫೀರಿಗೆ ಹೋಗಿ, ಅಲ್ಲಿಂದ ಹದಿನಾಲ್ಕು ಸಾವಿರ ಕಿಲೋಗ್ರಾಂ ಬಂಗಾರವನ್ನು ಅರಸನಾದ ಸೊಲೊಮೋನನಿಗೆ ತೆಗೆದುಕೊಂಡು ಬಂದರು.

< ಅರಸುಗಳು - ಪ್ರಥಮ ಭಾಗ 9 >