< ಪ್ರಕಟಣೆ 1 >
1 ಇದು ಕ್ರಿಸ್ತ ಯೇಸುವಿನ ಪ್ರಕಟನೆ. ಶೀಘ್ರವೇ ಸಂಭವಿಸಲಿಕ್ಕಿರುವ ಸಂಗತಿಗಳನ್ನು ತಮ್ಮ ದಾಸರಿಗೆ ತೋರಿಸುವುದಕ್ಕಾಗಿ ದೇವರಿಂದ ಈ ಪ್ರಕಟನೆಯನ್ನು ಹೊಂದಿದರು. ಇದಲ್ಲದೆ ದೇವರು ತಮ್ಮ ದೇವದೂತನನ್ನು ಕಳುಹಿಸಿ, ಅವನ ಮುಖಾಂತರ ಆ ಸಂಗತಿಗಳನ್ನು ತಮ್ಮ ದಾಸನಾದ ಯೋಹಾನನಿಗೆ ತಿಳಿಸಿದರು.
2 ಯೋಹಾನನು ತಾನು ಕಂಡ ಎಲ್ಲಾ ಸಂಗತಿಗಳನ್ನು ಅಂದರೆ ದೇವರ ವಾಕ್ಯದ ವಿಷಯವಾಗಿಯೂ ಕ್ರಿಸ್ತ ಯೇಸುವಿನ ವಿಷಯವಾಗಿಯೂ ತಿಳಿಸಿ ಸಾಕ್ಷಿಕೊಟ್ಟನು.
3 ಈ ಪ್ರವಾದನೆಯ ವಾಕ್ಯಗಳನ್ನು ಓದುವಂಥವರೂ ಕೇಳುವಂಥವರೂ ಈ ಪ್ರವಾದನೆಯ ವಾಕ್ಯಗಳಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವಂಥವರೂ ಧನ್ಯರು. ಏಕೆಂದರೆ ಸಮಯವು ಸಮೀಪವಾಗಿದೆ.
4 ಯೋಹಾನನು, ಅಂದಿನ ಏಷ್ಯಾ ಪ್ರಾಂತದಲ್ಲಿರುವ ಏಳು ಸಭೆಗಳಿಗೆ ಬರೆಯುವುದೇನೆಂದರೆ, ಗತಕಾಲ, ವರ್ತಮಾನ, ಭವಿಷ್ಯತ್ ಕಾಲಗಳಲ್ಲಿರುವ ದೇವರಿಂದ ಮತ್ತು ತಮ್ಮ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ,
5 ನಂಬಿಗಸ್ತ ಸಾಕ್ಷಿಯೂ ಸತ್ತವರೊಳಗಿಂದ ಪ್ರಥಮವಾಗಿ ಜೀವಂತವಾಗಿ ಎದ್ದು ಬಂದವರೂ ಭೂರಾಜರಿಗೆ ಒಡೆಯರೂ ಆಗಿರುವ ಕ್ರಿಸ್ತ ಯೇಸುವಿನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ಅವರೇ ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವರೂ ಆಗಿದ್ದಾರೆ.
6 ನಮ್ಮನ್ನು ಒಂದು ರಾಜ್ಯವನ್ನಾಗಿಯೂ ತಮ್ಮ ತಂದೆಯಾದ ದೇವರಿಗೆ ಸೇವೆ ಸಲ್ಲಿಸುವ ಯಾಜಕರನ್ನಾಗಿಯೂ ಮಾಡಿರುವ ಕ್ರಿಸ್ತ ಯೇಸುವಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯು, ಬಲವು ಇರಲಿ ಆಮೆನ್. (aiōn )
7 “ಇಗೋ, ಯೇಸು ಮೇಘಗಳೊಂದಿಗೆ ಬರುತ್ತಾರೆ,” ಮತ್ತು “ಎಲ್ಲರ ಕಣ್ಣುಗಳು ಅವರನ್ನು ಕಾಣುವವು, ಅವರನ್ನು ಇರಿದವರು ಸಹ ಕಾಣುವರು.” ಭೂಲೋಕದಲ್ಲಿರುವ ಎಲ್ಲಾ ಜನರು, “ಅವರ ದೆಸೆಯಿಂದ ಗೋಳಾಡುವರು.”
8 “ನಾನೇ ಆದಿಯೂ ಅಂತ್ಯವೂ ಗತಕಾಲ, ವರ್ತಮಾನ, ಭವಿಷ್ಯತ್ಕಾಲಗಳಲ್ಲಿರುವವನೂ ಮತ್ತು ಸರ್ವಶಕ್ತನೂ ಆಗಿದ್ದೇನೆ,” ಎಂದು ಕರ್ತದೇವರು ಹೇಳುತ್ತಾರೆ.
9 ನಿಮ್ಮ ಸಹೋದರನೂ ಯೇಸುವಿನ ನಿಮಿತ್ತ ಆಗುವ ಬಾಧೆಯಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ನಿಮ್ಮೊಂದಿಗೆ ಪಾಲುಗಾರನೂ ಆಗಿರುವ ಯೋಹಾನನೆಂಬ ನಾನು ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ ಪತ್ಮೊಸ್ ಎಂಬ ದ್ವೀಪದಲ್ಲಿದ್ದೆನು.
10 ನಾನು ಕರ್ತ ಯೇಸುವಿನ ದಿನದಲ್ಲಿ ಆತ್ಮಭರಿತನಾಗಿರಲು ನನ್ನ ಹಿಂದೆ ತುತೂರಿಯ ಶಬ್ದದಂತಿರುವ ಮಹಾಧ್ವನಿಯನ್ನು ಕೇಳಿದೆನು.
11 ಅದು, “ಕಾಣುತ್ತಿರುವುದನ್ನು ಸುರುಳಿಯಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ, ಲವೊದಿಕೀಯದಲ್ಲಿರುವ ಏಳು ಸಭೆಗಳಿಗೆ ಕಳುಹಿಸಬೇಕು,” ಎಂದು ನುಡಿಯಿತು.
12 ನನ್ನೊಂದಿಗೆ ಮಾತನಾಡುತ್ತಿದ್ದ ಧ್ವನಿಯು ಯಾರದೆಂದು ನೋಡುವುದಕ್ಕೆ ಹಿಂದಕ್ಕೆ ತಿರುಗಿದೆನು. ತಿರುಗಿದಾಗ ಏಳು ಚಿನ್ನದ ದೀಪಸ್ತಂಭಗಳನ್ನೂ
13 ಆ ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಪುತ್ರ ಇವರ ಹಾಗೆ ಒಬ್ಬ ವ್ಯಕ್ತಿ ಇರುವವರನ್ನೂ ಕಂಡೆನು. ಅವರು ಪಾದದವರೆಗೆ ಮುಚ್ಚುವ ನಿಲುವಂಗಿಯನ್ನು ತೊಟ್ಟು, ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದರು.
14 ಅವರ ತಲೆ ಕೂದಲುಗಳು ಬಿಳಿಯ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿದ್ದವು. ಅವರ ನೇತ್ರಗಳು ಬೆಂಕಿಯ ಜ್ವಾಲೆಯಂತೆಯೂ
15 ಅವರ ಪಾದಗಳು ಕುಲುಮೆಯಲ್ಲಿ ಹೊಳೆಯುವ ತಾಮ್ರದಂತೆಯೂ ಅವರ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು.
16 ಅವರು ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿದ್ದರು. ಅವರ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಡುತ್ತಿತ್ತು. ಅವರ ಮುಖವು ಸೂರ್ಯನ ತೇಜಸ್ಸಿನಂತೆ ಪ್ರಕಾಶಿಸುವಂತಿತ್ತು.
17 ನಾನು ಅವರನ್ನು ಕಂಡಾಗ ಸತ್ತವನ ಹಾಗೆ ಅವರ ಪಾದಗಳ ಮೇಲೆ ಬಿದ್ದೆನು. ಅವರು ತಮ್ಮ ಬಲಗೈಯನ್ನು ನನ್ನ ಮೇಲಿಟ್ಟು, “ಭಯಪಡಬೇಡ, ನಾನು ಮೊದಲನೆಯವನೂ ಕಡೆಯವನೂ
18 ಸದಾ ಜೀವಿಸುವವನೂ ಆಗಿದ್ದೇನೆ. ಮರಣ ಹೊಂದಿದ್ದೆನು, ಇಗೋ, ಯುಗಯುಗಾಂತರಗಳಲ್ಲಿಯೂ ನಾನು ಬದುಕುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನ ಬಳಿ ಇವೆ. (aiōn , Hadēs )
19 “ಆದ್ದರಿಂದ ನೀನು ಕಂಡದ್ದವುಗಳನ್ನೂ ಈಗ ನಡೆಯುತ್ತಿರುವವುಗಳನ್ನೂ ಮುಂದೆ ಸಂಭವಿಸುವವುಗಳನ್ನೂ ಬರೆ.
20 ನನ್ನ ಬಲಗೈಯಲ್ಲಿ ನೀನು ಕಂಡ ಏಳು ನಕ್ಷತ್ರಗಳ ಮತ್ತು ಏಳು ಚಿನ್ನದ ದೀಪಸ್ತಂಭಗಳ ರಹಸ್ಯ ಏನೆಂದರೆ: ಆ ಏಳು ನಕ್ಷತ್ರಗಳು, ಆ ಏಳು ಸಭೆಗಳ ಸಂದೇಶಕರು, ಆ ಏಳು ದೀಪಸ್ತಂಭಗಳು, ಆ ಏಳು ಸಭೆಗಳಾಗಿರುತ್ತವೆ.