< ಎಜ್ರನು 4 >
1 ಸೆರೆಯಿಂದ ಬಂದವರು ಇಸ್ರಾಯೇಲ್ ದೇವರಾದ ಯೆಹೋವ ದೇವರಿಗಾಗಿ ಆಲಯವನ್ನು ಕಟ್ಟುತ್ತಾರೆಂಬುದಾಗಿ ಯೆಹೂದದ ಮತ್ತು ಬೆನ್ಯಾಮೀನನ ಶತ್ರುಗಳು ಕೇಳಿದಾಗ
೧ಸೆರೆಯಿಂದ ಹಿಂತಿರುಗಿ ಬಂದವರು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಮಂದಿರವನ್ನು ಕಟ್ಟುತ್ತಿದ್ದಾರೆ ಎಂಬ ಸುದ್ದಿ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ವಿರೋಧಿಗಳಿಗೆ ತಿಳಿದುಬಂತು.
2 ಅವರು ಜೆರುಬ್ಬಾಬೆಲನ ಬಳಿಗೂ, ಕುಟುಂಬಗಳ ಮುಖ್ಯಸ್ಥರ ಬಳಿಗೂ ಬಂದು ಅವರಿಗೆ, “ನಾವು ನಿಮ್ಮ ಹಾಗೆ ನಿಮ್ಮ ದೇವರನ್ನು ಹುಡುಕುತ್ತೇವೆ. ನಮ್ಮನ್ನು ಇಲ್ಲಿಗೆ ಬರಮಾಡಿದ ಅಸ್ಸೀರಿಯದ ಅರಸನಾದ ಏಸರ್‌ಹದ್ದೋನ್ ಎಂಬವನ ದಿವಸಗಳು ಮೊದಲುಗೊಂಡು, ಅವರಿಗೆ ನಾವೂ ಬಲಿಯನ್ನು ಅರ್ಪಿಸುತ್ತಾ ಇದ್ದೇವೆ, ಕಟ್ಟುವುದರಲ್ಲಿ ನಾವು ಸಹಾಯ ಮಾಡುತ್ತೇವೆ,” ಎಂದರು.
೨ಆಗ ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು ಅವರಿಗೆ, “ನಿಮ್ಮೊಡನೆ ದೇವಾಲಯ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ, ಯಾಕೆಂದರೆ ನಿಮ್ಮಂತೆ ನಾವು ನಿಮ್ಮ ದೇವರ ಭಕ್ತರಾಗಿದ್ದೇವೆ. ನಮ್ಮನ್ನು ಇಲ್ಲಿ ತಂದಿರಿಸಿದ ಅಶ್ಶೂರದ ಅರಸನಾದ ಏಸರ್ಹದ್ದೋನನ ಕಾಲದಿಂದ ನಾವು ಆತನಿಗೇ ಯಜ್ಞಸಮರ್ಪಣೆಯನ್ನು ಮಾಡುತ್ತಾ ಬಂದಿದ್ದೇವೆ” ಎಂದು ಹೇಳಿದರು.
3 ಆದರೆ ಜೆರುಬ್ಬಾಬೆಲನೂ, ಯೇಷೂವನೂ, ಮಿಕ್ಕಾದ ಇಸ್ರಾಯೇಲಿನ ಕುಟುಂಬಗಳ ಮುಖ್ಯಸ್ಥರೂ ಅವರಿಗೆ, “ನಮ್ಮ ದೇವರಿಗೆ ಆಲಯವನ್ನು ಕಟ್ಟುವುದರಲ್ಲಿ ನಿಮಗೆ ಭಾಗವಿಲ್ಲ. ಪಾರಸಿಯ ಅರಸನಾದ ಕೋರೆಷನು ನಮಗೆ ಆಜ್ಞಾಪಿಸಿದ ಹಾಗೆ, ನಾವು ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರಿಗೆ ಅದನ್ನು ಕಟ್ಟುವೆವು,” ಎಂದರು.
೩ಆಗ ಜೆರುಬ್ಬಾಬೆಲ್, ಯೇಷೂವ ಮತ್ತು ಬೇರೆ ಇಸ್ರಾಯೇಲ್ ಗೋತ್ರಪ್ರಧಾನರೂ ಅವರಿಗೆ, “ನೀವು ನಮ್ಮ ದೇವರ ಆಲಯ ಕಟ್ಟುವುದರಲ್ಲಿ ನಮ್ಮೊಡನೆ ಸೇರಲೇ ಕೂಡದು. ಪರ್ಷಿಯ ದೇಶದ ರಾಜನಾದ ಕೋರೆಷನಿಂದ ನಮಗಾದ ಅಪ್ಪಣೆಯ ಮೇರೆಗೆ ನಾವೇ ಇಸ್ರಾಯೇಲ್ ದೇವರಾದ ಯೆಹೋವನ ಆಲಯವನ್ನು ಕಟ್ಟುತ್ತೇವೆ” ಎಂದು ಉತ್ತರ ಕೊಟ್ಟರು.
4 ಆಗ ಸುತ್ತಲಿದ್ದ ಜನಾಂಗಗಳವರು ಯೆಹೂದದ ಜನರನ್ನು ನಿರಾಶರನ್ನಾಗಿ ಮಾಡಲು ಮತ್ತು ಕಟ್ಟುವುದನ್ನು ಮುಂದುವರಿಸುವ ವಿಷಯದಲ್ಲಿ ಭಯಪಡಿಸಲು ಮುಂದಿದ್ದರು.
೪ಆಗ ಆ ದೇಶನಿವಾಸಿಗಳು ಯೆಹೂದ್ಯರನ್ನು ಧೈರ್ಯಗುಂದಿಸಿ ದೇವಾಲಯ ಕಟ್ಟದ ಹಾಗೆ ಬೆದರಿಸಿದರು. ಇದರೊಂದಿಗೆ ಅವರ ಉದ್ದೇಶವನ್ನು ಕೆಡಿಸುವುದಕ್ಕೋಸ್ಕರ ಹಣಕೊಟ್ಟು ವಕೀಲರನ್ನು ನೇಮಿಸಿಕೊಂಡರು.
5 ಪಾರಸಿಯ ಅರಸನಾದ ಕೋರೆಷನ ದಿನಗಳಿಂದ ಹಿಡಿದು, ಪಾರಸಿಯ ಅರಸನಾದ ದಾರ್ಯಾವೆಷನ ಆಳ್ವಿಕೆಯವರೆಗೂ, ಅವರ ಯೋಚನೆಯನ್ನು ವ್ಯರ್ಥಮಾಡುವುದಕ್ಕೆ ಅವರ ವಿರೋಧವಾಗಿ ವಕೀಲರನ್ನು ಹಣಕೊಟ್ಟು ಇಟ್ಟುಕೊಂಡರು.
೫ಪರ್ಷಿಯ ರಾಜನಾದ ಕೋರೆಷನ ಕಾಲದಿಂದ ಪರ್ಷಿಯ ರಾಜನಾದ ದಾರ್ಯಾವೆಷನ ಆಳ್ವಿಕೆಯವರೆಗೂ ಇದು ಮುಂದುವರಿಯಿತು.
6 ಆದರೆ ಅಹಷ್ವೇರೋಷನು ಆಳುವಾಗ, ಅವನ ಆಳ್ವಿಕೆಯ ಪ್ರಾರಂಭದಲ್ಲಿ, ಅವರು ಯೆಹೂದ ಮತ್ತು ಯೆರೂಸಲೇಮಿನ ನಿವಾಸಿಗಳಿಗೆ ವಿರೋಧವಾಗಿ ದೂರು ಸಲ್ಲಿಸಿದರು.
೬ಅಹಷ್ವೇರೋಷನ ಆಳ್ವಿಕೆಯ ಪ್ರಾರಂಭದಲ್ಲಿ ಅವರು ಯೆಹೂದದಲ್ಲಿಯೂ ಮತ್ತು ಯೆರೂಸಲೇಮಿನಲ್ಲಿಯೂ ವಾಸ ಮಾಡುತ್ತಿದ್ದವರ ವಿರುದ್ಧವಾಗಿ ಆಪಾದನೆಯ ಪತ್ರವನ್ನು ಬರೆದರು.
7 ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ, ಮಿತ್ರದಾತನೂ, ಟಾಬೆಯೇಲನೂ, ಮಿಕ್ಕಾದ ಅವರ ಜೊತೆಗಾರರೂ ಪಾರಸಿಯ ಅರಸನಾದ ಅರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯ ಭಾಷೆಯಲ್ಲಿಯೂ, ಅರಾಮ್ಯ ಲಿಪಿಯಲ್ಲಿಯೂ ಇತ್ತು.
೭ಮತ್ತು ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್ ಈ ಮೊದಲಾದವರು ಪರ್ಷಿಯ ರಾಜನಾದ ಅರ್ತಷಸ್ತನಿಗೆ ಬರೆದರು. ಆ ಪತ್ರವು ಅರಾಮ್ಯ ಲಿಪಿಯಲ್ಲಿಯೂ ಮತ್ತು ಅರಾಮ್ಯ ಭಾಷೆಯಲ್ಲಿಯೂ ಇತ್ತು.
8 ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ, ಯೆರೂಸಲೇಮಿಗೆ ವಿರೋಧವಾಗಿ ಈ ಕೆಳಗೆ ಕಂಡಂತೆ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದ್ದರು.
೮ದೇಶಾಧಿಪತಿಯಾದ ರೆಹೂಮ್, ಲೇಖಕನಾದ ಶಿಂಷೈ ಇವರು ಯೆರೂಸಲೇಮಿಗೆ ವಿರುದ್ಧವಾಗಿ ಮುಂದಿನ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದರು.
9 ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ, ಪರ್ಷಿಯಾ, ಯೆರೆಕ್ ಹಾಗೂ ಬಾಬೆಲಿನವರು, ಶೂಷನಿನವರ ಮತ್ತು ಏಲಾಮ್ಯರ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಆಡಳಿತಗಾರರು,
೯ಅದರಲ್ಲಿ, ದೇಶಾಧಿಪತಿಯಾದ ರೆಹೂಮ್, ಲೇಖಕನಾದ ಶಿಂಷೈ ಇವರೂ ಇವರ ಜೊತೆಗಾರರಾದ ದಿನಾಯರು, ಅಪರ್ಸತ್ಕಾಯರು, ಟರ್ಪಲಾಯರು, ಅಪಾರ್ಸಾಯರು, ಯೆರೆಕ್ಯರು, ಬಾಬಿಲೋನಿನವರು, ಶೂಷನಿನವರು, ದೆಹಾಯರು ಮತ್ತು ಏಲಾಮ್ಯರು.
10 ಮತ್ತು ಮಹಾ ಶ್ರೀಮತ್ ಆಸೆನಪ್ಪರನು ಕರೆದುತಂದು ಸಮಾರ್ಯ ಪಟ್ಟಣದಲ್ಲಿ ಮತ್ತು ಯೂಫ್ರೇಟೀಸ್ ನದಿಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು, ಬರೆಯುವುದು ಏನೆಂದರೆ:
೧೦ಇವರೂ ಮಹಾಶ್ರೀಮತ್ ಆಸೆನಪ್ಪರನು ಕರತಂದು ಸಮಾರ್ಯ ಪಟ್ಟಣದಲ್ಲಿ ಮತ್ತು ಹೊಳೆಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು ಇತ್ಯಾದಿ ಶಿರೋಲೇಖ.
11 ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಈ ರೀತಿಯಿತ್ತು: ಅರ್ತಷಸ್ತ ರಾಜರಿಗೆ, ತಮ್ಮ ಸೇವಕರಾದ ಯೂಫ್ರೇಟೀಸ್ ನದಿಯ ಈಚೆಯವರು:
೧೧ಅವರು ಅರಸನಿಗೆ ಕಳುಹಿಸಿದ ಪತ್ರದ ಸಾರಾಂಶ ಹೀಗಿತ್ತು, “ಅರ್ತಷಸ್ತ ರಾಜರಿಗೆ, ನಿಮ್ಮ ಸೇವಕರಾದ ಹೊಳೆಯ ಈಚೆಯವರು.
12 ಅದಾಗಿ, ತಮ್ಮ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು, ಯೆರೂಸಲೇಮನ್ನು ಸೇರಿ, ರಾಜಕಂಟಕವಾದ ಆ ದುಷ್ಟ ಪಟ್ಟಣವನ್ನೂ, ಅದರ ಪೌಳಿಗೋಡೆಯನ್ನೂ ಮತ್ತೆ ಕಟ್ಟುವುದಕ್ಕೆ ಪ್ರಾರಂಭಿಸಿ, ಪೌಳಿಗೋಡೆಯ ಅಸ್ತಿವಾರವನ್ನು ಮುಗಿಸಿದ್ದಾರೆ ಎಂಬುದಾಗಿ ನಾವು ರಾಜರಿಗೆ ಅರಿಕೆ ಮಾಡಿಕೊಳ್ಳುತ್ತೇವೆ.
೧೨ನಿನ್ನ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಯೆರೂಸಲೇಮನ್ನು ಸೇರಿ ರಾಜಕಂಟಕವಾದ ಆ ಕೆಟ್ಟ ಪಟ್ಟಣವನ್ನೂ, ಅದರ ಪೌಳಿಗೋಡೆಯನ್ನೂ ಪುನಃ ಕಟ್ಟುವುದಕ್ಕೆ ಪ್ರಾರಂಭಿಸಿ ಪೌಳಿಗೋಡೆಯ ಅಸ್ತಿವಾರವನ್ನು ಜೀರ್ಣೋದ್ಧಾರಮಾಡಿದ್ದಾರೆ ಎಂಬುದಾಗಿ ನಾವು ತಮಗೆ ಅರಿಕೆಮಾಡಿಕೊಳ್ಳುತ್ತೇವೆ.
13 ಆ ಪಟ್ಟಣವನ್ನೂ, ಅದರ ಗೋಡೆಗಳನ್ನೂ ಕಟ್ಟುವುದು ಮುಗಿದರೆ, ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ. ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.
೧೩ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಕಟ್ಟುವುದು ಮುಕ್ತಾಯಗೊಂಡರೆ ಅವರು ಕಪ್ಪ, ತೆರಿಗೆ ಮತ್ತು ಸುಂಕಗಳನ್ನು ಪಾವತಿಸಲಿಕ್ಕಿಲ್ಲ ಮತ್ತು ಕಡೆಯಲ್ಲಿ ಇದರಿಂದ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.
14 ನಾವಾದರೋ ಅರಮನೆಯ ಉಪ್ಪನ್ನು ತಿನ್ನುವವರು, ಅರಸರಿಗೆ ಅಪಮಾನವಾಗುವುದನ್ನು ಕಂಡು ಸುಮ್ಮನೆ ಇರುವುದು ಉಚಿತವಲ್ಲವೆಂದು ತಿಳಿದು, ತಮಗೆ ಈ ಪತ್ರದ ಮೂಲಕ ಸುದ್ದಿ ಕಳುಹಿಸಿದ್ದೇವೆ.
೧೪ನಾವಂತು ಅರಮನೆಯ ಉಪ್ಪನ್ನು ತಿನ್ನುವವರಾದುದರಿಂದ ಅರಸರಿಗೆ ಅಪಮಾನವುಂಟಾಗುವುದನ್ನು ನೋಡಿ ಸುಮ್ಮನಿರುವುದು ಸರಿಯಲ್ಲವೆಂದು ತಿಳಿದು ಅರಸರಿಗೆ ಈ ಪತ್ರದ ಮೂಲಕವಾಗಿ ವರ್ತಮಾನ ಕಳುಹಿಸಿದ್ದೇವೆ.
15 ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರ ಗ್ರಂಥದಲ್ಲಿ ಪರಿಶೋಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣ ರಾಜಕಂಟಕವಾದ ಪಟ್ಟಣ. ಅರಸರಿಗೂ, ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥ ಪಟ್ಟಣ. ಇದು ಪೂರ್ವಕಾಲದಿಂದಲೂ ದೇಶದ್ರೋಹ ಮಾಡುತ್ತಾ ಬಂದಿದೆ ಎಂದೂ ಹಾಗು ಆ ಕಾರಣದಿಂದಲೇ ನೆಲಸಮವಾಯಿತೆಂದೂ ಆ ಚರಿತ್ರ ಗ್ರಂಥದಲ್ಲಿ ಕಂಡುಬರುತ್ತದೆ.
೧೫ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರಗ್ರಂಥಗಳನ್ನು ಪರಿಶೋಧಿಸಿ ತಿಳಿದುಕೊಳ್ಳುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣವು ರಾಜಕಂಟಕವಾದ ಪಟ್ಟಣವು. ಅರಸರಿಗೂ ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥದು, ಪೂರ್ವಕಾಲದಿಂದಲೇ ದಂಗೆಯೆಬ್ಬಿಸುವಂಥದು ಎಂಬುದೂ ಆ ಕಾರಣದಿಂದಲೇ ಈ ಪಟ್ಟಣವು ನೆಲಸಮವಾಯಿತು ಎಂದು ಆ ಚರಿತ್ರಾ ಗ್ರಂಥದಲ್ಲಿ ಕಂಡುಬರುತ್ತದೆ.
16 ಆ ಪಟ್ಟಣವನ್ನೂ, ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ, ತಮಗೆ ಯೂಫ್ರೇಟೀಸ್ ನದಿಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸನಿಗೆ ಅರಿಕೆ ಮಾಡಿಕೊಳ್ಳುತ್ತೇವೆ.
೧೬ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ ತಮಗೆ ಹೊಳೆಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸರಿಗೆ ಅರಿಕೆಮಾಡಿಕೊಳ್ಳುತ್ತೇವೆ ಎಂಬುದೇ.”
17 ಈ ಪತ್ರಕ್ಕೆ ಅರಸನು ಅವರಿಗೆ ಕೊಟ್ಟ ಉತ್ತರ: ದೇಶಾಧಿಪತಿಯಾದ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರಿಗೂ, ಸಮಾರ್ಯದಲ್ಲಿರುವವರಿಗೂ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಇತರರಿಗೂ, ಕ್ಷೇಮಾಭಿಲಾಶೆಗಳು.
೧೭ಅರಸನು ಅವರಿಗೆ ಕೊಟ್ಟ ಉತ್ತರವು, “ದೇಶಾಧಿಪತಿಯಾದ ರೆಹೂಮ್, ಲೇಖಕನಾದ ಶಿಂಷೈ ಇವರಿಗೂ ಸಮಾರ್ಯದಲ್ಲಿರುವ ಅವರ ಜೊತೆಗಾರರಿಗೂ ಹೊಳೆಯ ಆಚೆಯಲ್ಲಿರುವ ಇತರರಿಗೂ, ನಮ್ಮ ಕುಶಲಕ್ಷೇಮಗಳ ಅಭಿಲಾಷೆ ವ್ಯಕ್ತಪಡಿಸುತ್ತೇವೆ.
18 ನೀವು ಕಳುಹಿಸಿದ್ದ ಪತ್ರವನ್ನು ನನ್ನ ಸನ್ನಿಧಿಯಲ್ಲಿ ಸ್ಪಷ್ಟವಾಗಿ ಓದಿ ಅನುವಾದ ಮಾಡಲಾಯಿತು.
೧೮ನೀವು ಕಳುಹಿಸಿದ ಪತ್ರವು ನನ್ನ ಮುಂದೆ ಓದಲಾಯಿತು. ಅದರ ಸಂಪೂರ್ಣ ವಿಷಯ ಮನದಟ್ಟಾಯಿತು.
19 ನನ್ನ ಆಜ್ಞಾನುಸಾರ ವಿಚಾರಣೆಯಾದಾಗ, ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರೋಧವಾಗಿ ಪ್ರತಿಭಟಿಸುತ್ತಾ, ದೇಶದ್ರೋಹ ಮಾಡುತ್ತಾ ಬಂದಿದ್ದಾರೆ.
೧೯ನನ್ನ ಆಜ್ಞಾನುಸಾರ ವಿಚಾರಣೆ ಮಾಡಿ ಪರಿಶೀಲಿಸಿದಾಗ ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರುದ್ಧವಾಗಿ ತಿರುಗಿಬೀಳುತ್ತಾ, ದ್ರೋಹಮಾಡುತ್ತಾ, ದಂಗೆಯೆಬ್ಬಿಸುತ್ತಾ ಇದ್ದವರು ಎಂದು ತಿಳಿಯಿತು.
20 ಇದಲ್ಲದೆ ಯೆರೂಸಲೇಮಿನಲ್ಲಿ ಬಲಿಷ್ಠ ರಾಜರು ಆಳುತ್ತಾ, ಯೂಫ್ರೇಟೀಸ್ ನದಿಯಾಚೆಯ ಎಲ್ಲಾ ಪ್ರದೇಶಗಳಲ್ಲಿ ಅಧಿಕಾರ ನಡೆಸುತ್ತಾ, ಕಪ್ಪ, ತೆರಿಗೆ, ಸುಂಕಗಳನ್ನು ತೆಗೆದುಕೊಳ್ಳುತ್ತಿದ್ದರೆಂದು ಕಂಡುಬಂದಿದೆ.
೨೦ಅವರು ಯೆರೂಸಲೇಮಿನಲ್ಲಿ ಬಲಿಷ್ಠರಾಗಿ ರಾಜ್ಯ ಆಳುತ್ತಾ, ಹೊಳೆಯಾಚೆಯ ಎಲ್ಲಾ ಪ್ರದೇಶಗಳಲ್ಲಿ ಅಧಿಕಾರನಡಿಸುತ್ತಾ, ಕಪ್ಪ, ತೆರಿಗೆ ಸುಂಕಗಳನ್ನು ತೆಗೆದುಕೊಳ್ಳುತ್ತಾ ಇದ್ದರೆಂದು ಕಂಡುಬಂದಿತು.
21 ಆದ್ದರಿಂದ ಆ ಜನರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವವರೆಗೆ ಆ ಪಟ್ಟಣವನ್ನು ಕಟ್ಟಲು ಅವಕಾಶ ಕೊಡಬಾರದೆಂತಲೂ ಪ್ರಕಟಿಸಿರಿ.
೨೧ಆದುದರಿಂದ ಆ ಮನುಷ್ಯರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವ ವರೆಗೆ ಆ ಪಟ್ಟಣವನ್ನು ಕಟ್ಟಲು ಆವಕಾಶ ಕೊಡಬಾರದೆಂತಲೂ ಪ್ರಕಟಿಸಿರಿ.
22 ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿರಿ.
೨೨ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದಿರಿ, ಉದಾಸೀನತೆಯಿಂದ ಲಕ್ಷಿಸದೆ ಇರಬೇಡಿ” ಎಂದು ತಿಳಿಸಿದನು.
23 ಅರಸನಾದ ಅರ್ತಷಸ್ತನ ಪತ್ರದ ಪ್ರತಿಯು ರೆಹೂಮನಿಗೂ, ಕಾರ್ಯದರ್ಶಿ ಶಿಂಷೈಯಿಗೂ, ಅವರ ಜೊತೆಗಾರರಿಗೂ ಓದಿದ ತರುವಾಯ, ಅವರು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರ ಬಳಿಗೆ ತ್ವರೆಯಾಗಿ ಹೋಗಿ, ಒತ್ತಾಯದಿಂದ ಮತ್ತು ಅಧಿಕಾರದಿಂದ ಅವರನ್ನು ನಿಲ್ಲಿಸುವಂತೆ ಮಾಡಿದರು.
೨೩ಅರಸನಾದ ಅರ್ತಷಸ್ತನ ಈ ಪತ್ರವನ್ನು ರೆಹೂಮ್, ಲೇಖಕನಾದ ಶಿಂಷೈ ಇವರ ಮುಂದೆಯೂ ಇವರ ಜೊತೆಗಾರರ ಮುಂದೆಯೂ ಓದಿದ ಕೂಡಲೆ ಅವರು ಶೀಘ್ರವಾಗಿ ಯೆರೂಸಲೇಮಿಗೆ ಹೋಗಿ ಬಲವಂತದಿಂದಲೂ ಅಧಿಕಾರದಿಂದಲೂ ಯೆಹೂದ್ಯರನ್ನು ತಡೆದರು.
24 ಅಂದಿನಿಂದ ಪರ್ಷಿಯ ದೇಶದ ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಯೆರೂಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸವು ನಿಂತುಹೋಯಿತು.
೨೪ಅಂದಿನಿಂದ ಪರ್ಷಿಯ ದೇಶದ ರಾಜನಾದ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಯೆರೂಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸವು ನಿಂತುಹೋಯಿತು.