< ಪ್ರಸಂಗಿ 9 >
1 ನಾನು ಇವೆಲ್ಲವುಗಳ ಮೇಲೆ ಅಭ್ಯಾಸ ಮಾಡಿ ಈ ತೀರ್ಮಾನಕ್ಕೆ ಬಂದೆನು. ಅದೇನೆಂದರೆ, ನೀತಿವಂತರ ಮತ್ತು ಜ್ಞಾನಿಗಳ ಕೆಲಸಗಳು ದೇವರ ಕೈಯಲ್ಲಿವೆ. ಆದರೆ ಅವರಿಗೆ ಪ್ರೀತಿ ಕಾದಿದೆಯೋ ಅಥವಾ ದ್ವೇಷ ಕಾದಿದೆಯೋ ಎಂದು ಯಾರಿಗೂ ಗೊತ್ತಿಲ್ಲ.
೧ಇವೆಲ್ಲವುಗಳನ್ನು ನನ್ನ ಮನಸ್ಸಿನಲ್ಲಿ ವಿಚಾರಿಸಿಕೊಂಡು ಒಂದು ತೀರ್ಮಾನಕ್ಕೆ ಬಂದೆನು. ಅದೇನೆಂದರೆ ನೀತಿವಂತನ ಮತ್ತು ಜ್ಞಾನಿಗಳ ಕೆಲಸಗಳು ದೇವರ ಕೈಯಲ್ಲಿವೆ. ಯಾವ ಮನುಷ್ಯನೂ ತನ್ನ ಮುಂದಿರುವ ಪ್ರೀತಿಯನ್ನು ಅಥವಾ ದ್ವೇಷವನ್ನು ತಿಳಿಯಲಾರನು.
2 ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ದುಷ್ಟನಿಗೂ ಒಳ್ಳೆಯವನಿಗೂ ಕೆಟ್ಟವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಯಜ್ಞ ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವುದು. ಒಳ್ಳೆಯವನಿಗೆ ಹೇಗೋ ಹಾಗೆಯೇ ಪಾಪಿಗೂ ಇರುವುದು. ಆಣೆಯಿಡುವವನಿಗೆ ಹೇಗೋ ಹಾಗೆಯೇ, ಆಣೆಯಿಡಲು ಭಯಪಡುವವನಿಗೂ ಇರುವುದು.
೨ಎಲ್ಲವುಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ಮತ್ತು ದುಷ್ಟನಿಗೂ, ಒಳ್ಳೆಯವನಿಗೂ ಮತ್ತು ಕೆಟ್ಟವನಿಗೂ, ಶುದ್ಧನಿಗೂ ಮತ್ತು ಅಶುದ್ಧನಿಗೂ, ಯಜ್ಞವನ್ನು ಅರ್ಪಿಸುವವನಿಗೂ ಮತ್ತು ಅರ್ಪಿಸದವನಿಗೂ ಒಂದೇ ಗತಿಯಾಗುವುದು. ಒಳ್ಳೆಯವನು ಹೇಗೋ ಹಾಗೆಯೇ ಪಾಪಿಯೂ ಇರುವನು. ಆಣೆಯಿಡುವವನು ಹೇಗೋ ಹಾಗೆಯೇ ಆಣೆಗೆ ಭಯಪಡುವವನೂ ಇರುವನು.
3 ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ವ್ಯಸನವು. ಎಲ್ಲರಿಗೂ ಒಂದೇ ಗತಿ ಇದೆ. ಹೌದು, ಮನುಷ್ಯರ ಹೃದಯದಲ್ಲಿ ಕೆಟ್ಟತನ ತುಂಬಿವೆ. ಅವರು ಬದುಕಿರುವ ತನಕ ಅವರ ಹೃದಯಗಳಲ್ಲಿ ಹುಚ್ಚುತನವಿದೆ. ಅನಂತರ ಅವರು ಸಾಯುತ್ತಾರೆ.
೩ಈ ಲೋಕದಲ್ಲಿ ನಡೆಯುವ ಎಲ್ಲಾ ಸಂಗತಿಗಳಿಗೂ ಕೆಟ್ಟ ಪ್ರತಿಫಲ ಉಂಟು ಮತ್ತು ಎಲ್ಲರಿಗೂ ಒಂದೇ ಗತಿಯಾಗುವುದು. ಇದಲ್ಲದೆ ಮನುಷ್ಯರ ಹೃದಯದಲ್ಲಿ ಕೆಟ್ಟತನವು ತುಂಬಿದೆ. ಅವರು ಬದುಕಿರುವ ತನಕ ಹುಚ್ಚುತನವು ಅವರ ಮನಸ್ಸನ್ನು ಹಿಡಿದಿರುವುದು. ಅನಂತರ ಅವರು ಸಾಯುತ್ತಾರೆ.
4 ಜೀವಂತರ ಗುಂಪಿಗೆ ಸೇರಿಕೊಂಡವನಿಗೆ ನಿರೀಕ್ಷೆ ಇರುವುದು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಉತ್ತಮ.
೪ಜೀವಿತರ ಗುಂಪಿನಲ್ಲಿ ಸೇರಿದವನಿಗೆ ನಿರೀಕ್ಷೆಯುಂಟು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.
5 ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿದ್ದಾರೆ, ಆದರೆ ಸತ್ತವರಿಗೆ ಏನೂ ತಿಳಿಯದು; ಅವರಿಗೆ ಇನ್ನು ಮೇಲೆ ಪ್ರತಿಫಲ ಇಲ್ಲ. ಅವರ ಹೆಸರನ್ನು ಸಹ ಜನರು ಮರೆತುಬಿಡುತ್ತಾರೆ.
೫ಜೀವಿಸುವವರಿಗೆ ಸಾಯುತ್ತೇವೆಂಬ ತಿಳಿವಳಿಕೆಯು ಉಂಟು. ಸತ್ತವರಿಗೋ ಯಾವ ತಿಳಿವಳಿಕೆಯೂ ಇಲ್ಲ. ಅವರಿಗೆ ಇನ್ನು ಮೇಲೆ ಪ್ರತಿಫಲವು ಇಲ್ಲ. ಅವರ ಜ್ಞಾಪಕವೇ ಇಲ್ಲ.
6 ಅವರ ಪ್ರೀತಿಯೂ ಅವರ ದ್ವೇಷವೂ ಅವರ ಅಸೂಯೆ ಕೂಡ, ಅವರು ಸತ್ತಾಗಲೇ ಅಳಿದುಹೋಗುತ್ತವೆ. ಸೂರ್ಯನ ಕೆಳಗೆ ನಡೆಯುವ ಯಾವ ಸಂಗತಿಗಳಲ್ಲಿಯೂ ಸತ್ತವರಿಗೆ ಇನ್ನೆಂದಿಗೂ ಪಾಲು ಇಲ್ಲ.
೬ಅವರು ಸತ್ತಾಗಲೇ ಅವರ ಪ್ರೀತಿಯೂ, ಹಗೆಯೂ, ಹೊಟ್ಟೆಕಿಚ್ಚು ಅಳಿದುಹೋಗಿವೆ. ಲೋಕದೊಳಗೆ ನಡೆಯುವ ಯಾವ ಕೆಲಸದಲ್ಲಿಯೂ ಅವರಿಗೆ ಇನ್ನೆಂದಿಗೂ ಪಾಲು ಇಲ್ಲ.
7 ನೀನು ಹೋಗಿ ನಿನ್ನ ಆಹಾರವನ್ನು ಸಂತೋಷದಿಂದ ತಿಂದು ಹರ್ಷ ಹೃದಯದಿಂದ ನಿನ್ನ ದ್ರಾಕ್ಷಾರಸವನ್ನು ಕುಡಿ. ಏಕೆಂದರೆ ನಿನ್ನ ಕೆಲಸಗಳನ್ನು ದೇವರು ಈಗಾಗಲೇ ಮೆಚ್ಚಿಕೊಂಡಿದ್ದಾರೆ.
೭ಹೋಗು, ನಿನ್ನ ಅನ್ನವನ್ನು ಸಂತೋಷದಿಂದ ಉಣ್ಣು. ನಿನ್ನ ದ್ರಾಕ್ಷಾರಸವನ್ನು ಒಳ್ಳೆಯ ಮನಸ್ಸಿನಿಂದ ಕುಡಿ. ದೇವರು ನಿನ್ನ ಕೆಲಸಗಳನ್ನು ಈಗ ಒಪ್ಪಿಕೊಳ್ಳುತ್ತಾನೆ.
8 ನಿನ್ನ ವಸ್ತ್ರಗಳು ಯಾವಾಗಲೂ ಬಿಳುಪಾಗಿರಲಿ, ನಿನ್ನ ತಲೆಗೆ ಯಾವಾಗಲೂ ಎಣ್ಣೆ ಹಚ್ಚಿರಲಿ.
೮ನಿನ್ನ ಬಟ್ಟೆಗಳು ಯಾವಾಗಲೂ ಬಿಳುಪಾಗಿರಲಿ. ನಿನ್ನ ತಲೆಗೆ ಎಣ್ಣೆಯ ಕೊರತೆ ಇಲ್ಲದಿರಲಿ.
9 ಈ ನಿರರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ದೇವರು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ, ನೀನು ಪ್ರೀತಿಸುವ ನಿನ್ನ ಹೆಂಡತಿಯೊಡನೆ ಆನಂದದಿಂದ ವಾಸಿಸು. ಸೂರ್ಯನ ಕೆಳಗೆ ನೀನು ಪಡುವ ನಿನ್ನ ಜೀವನದ ಕಷ್ಟದಲ್ಲಿ ಇದೇ ನಿನ್ನ ಪಾಲಾಗಿದೆ.
೯ಲೋಕದೊಳಗೆ ದೇವರು ನಿನಗೆ ನೇಮಿಸಿರುವ ವ್ಯರ್ಥ ಜೀವಮಾನದ ವ್ಯರ್ಥ ದಿನಗಳೆಲ್ಲಾ ನಿನ್ನ ಪ್ರಿಯಪತ್ನಿಯೊಡನೆ ಸುಖದಿಂದ ಬದುಕು. ನಿನ್ನ ಬಾಳಿನಲ್ಲಿಯೂ, ನೀನು ಲೋಕದೊಳಗೆ ಪಡುವ ಪ್ರಯಾಸದಲ್ಲಿಯೂ ಇದೇ ನಿನ್ನ ಪಾಲಾಗಿದೆ.
10 ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿರುವ ಸಮಾಧಿಯಲ್ಲಿ, ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ. (Sheol )
೧೦ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಸೇರಬೇಕಾದ ಸಮಾಧಿಯಲ್ಲಿ ಯಾವ ಕೆಲಸವೂ, ಯುಕ್ತಿಯೂ, ತಿಳಿವಳಿಕೆಯೂ, ಜ್ಞಾನವೂ ಇರುವುದಿಲ್ಲ. (Sheol )
11 ನಾನು ಮತ್ತೆ ಸೂರ್ಯನ ಕೆಳಗೆ ನೋಡಿದ್ದೇನೆಂದರೆ, ವೇಗಿಗಳಿಗೆ ಓಟವೂ ಪರಾಕ್ರಮಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ಆಹಾರವೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವುದು ಎಂಬ ನಿಶ್ಚಯ ಇಲ್ಲ. ಏಕೆಂದರೆ ಕಾಲವೂ ಅವಕಾಶವೂ ಅವರೆಲ್ಲರಿಗೆ ಒಳಪಟ್ಟಿರುತ್ತವೆ.
೧೧ನಾನು ಲೋಕದಲ್ಲಿ ತಿರುಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲುವಿಲ್ಲ. ಬಲಿಷ್ಠರಿಗೆ ಯುದ್ಧದಲ್ಲಿ ಜಯವಿಲ್ಲ. ಜ್ಞಾನಿಗಳಿಗೆ ಅನ್ನ ಸಿಕ್ಕದು. ವಿವೇಕಿಗಳಿಗೆ ಧನ ಲಭಿಸದು. ಪ್ರವೀಣರಿಗೆ ದಯೆ ದೊರಕದು. ಕಾಲವೂ, ಗತಿಯೂ ಅವರೆಲ್ಲರಿಗೆ ಸಂಭವಿಸುತ್ತದೆ.
12 ಇದಲ್ಲದೆ, ಅವರವರ ಸಮಯ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿಯದು. ಕ್ರೂರ ಬಲೆಯಿಂದ ಹಿಡಿಯುವ ಮೀನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗಳಂತೆಯೂ ಕೇಡಿನ ಕಾಲವು ತಟ್ಟನೆ ಬೀಳುವಾಗ ಜನರು ಸಿಕ್ಕಿಕೊಳ್ಳುತ್ತಾರೆ.
೧೨ಮನುಷ್ಯನೋ ತನ್ನ ಕಾಲ ಗತಿಯನ್ನು ತಿಳಿಯನಷ್ಟೆ. ಮೀನುಗಳು ಕೆಟ್ಟ ಬಲೆಗೂ, ಪಕ್ಷಿಗಳು ಉರುಲಿನಲ್ಲಿ ಸಿಕ್ಕಿಬೀಳುವ ಹಾಗೆ ಮನುಷ್ಯರು ಪ್ರಾಣಿಗಳ ಹಾಗೆ ತಮ್ಮ ಮೇಲೆ ತಟ್ಟನೆ ಬೀಳುವ ಕೇಡಿನ ಕಾಲಕ್ಕೆ ಸಿಕ್ಕಿಕೊಳ್ಳುವರು.
13 ಸೂರ್ಯನ ಕೆಳಗೆ ನಾನು ಜ್ಞಾನವನ್ನು ಈ ವಿಧವಾಗಿ ನೋಡಿದ್ದೇನೆ. ಇದು ನನ್ನ ದೃಷ್ಟಿಗೆ ದೊಡ್ಡದಾಗಿ ಕಾಣಿಸಿತು.
೧೩ನಾನು ಲೋಕದಲ್ಲಿ ಜ್ಞಾನವನ್ನು ಈ ವಿಧವಾಗಿಯೂ ಕಂಡುಕೊಂಡೆನು. ಅದು ದೊಡ್ಡದೆಂದು ತೋಚಿತು.
14 ಒಂದು ಕಾಲದಲ್ಲಿ ಒಂದು ಸಣ್ಣ ನಗರವಿತ್ತು, ಅದರಲ್ಲಿ ಕೆಲವೇ ಜನರಿದ್ದರು. ಆಗ ಅಲ್ಲಿ ಒಬ್ಬ ಮಹಾ ಅರಸನು ಬಂದು ಅದನ್ನು ಮುತ್ತಿಗೆ ಹಾಕಿ, ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.
೧೪ಇಗೋ, ಒಂದು ಚಿಕ್ಕ ಪಟ್ಟಣ. ಅದರಲ್ಲಿ ಸ್ವಲ್ಪ ಜನರು ಇದ್ದರು. ಒಬ್ಬ ದೊಡ್ಡ ಅರಸನು ಅದಕ್ಕೆ ವಿರುದ್ಧವಾಗಿ ಬಂದು ಮುತ್ತಿಗೆ ಹಾಕಿ ಅಲ್ಲಿ ದೊಡ್ಡ ದಿಬ್ಬಗಳನ್ನು ಹಾಕಿದನು.
15 ಆಗ ಅದರಲ್ಲಿ ಒಬ್ಬ ಜ್ಞಾನಿಯಾದ ಬಡ ಮನುಷ್ಯನು ಬಂದು, ತನ್ನ ಜ್ಞಾನದಿಂದ ಆ ಪಟ್ಟಣವನ್ನು ರಕ್ಷಿಸಿದನು. ಆದರೂ ಆ ಬಡ ಮನುಷ್ಯನನ್ನು ಯಾರೂ ಜ್ಞಾಪಕ ಮಾಡಿಕೊಳ್ಳಲಿಲ್ಲ.
೧೫ಆಗ ಅಲ್ಲಿದ್ದವರು ತಮ್ಮಲ್ಲಿ ಒಬ್ಬ ಬಡ ಜ್ಞಾನಿಯನ್ನು ಕಂಡುಕೊಂಡರು. ಅವನು ತನ್ನ ಜ್ಞಾನದಿಂದಲೇ ಆ ಪಟ್ಟಣವನ್ನು ರಕ್ಷಿಸಿದನು. ಆದರೆ ಆ ಬಡ ಜ್ಞಾನಿಯನ್ನು ಯಾರೂ ಸ್ಮರಿಸಲಿಲ್ಲ.
16 ಇದನ್ನು ನೋಡಿ ನಾನು, “ಬಲಕ್ಕಿಂತ ಜ್ಞಾನವು ಉತ್ತಮ; ಆದರೆ ಜನರು ಬಡವನ ಜ್ಞಾನವನ್ನು ತಿರಸ್ಕಾರ ಮಾಡುತ್ತಾರೆ, ಅವನ ಮಾತುಗಳನ್ನು ಯಾರೂ ಲಕ್ಷಿಸುವುದಿಲ್ಲ,” ಎಂದುಕೊಂಡೆನು.
೧೬ನಾನು ಇದನ್ನು ನೋಡಿ ಬಲಕ್ಕಿಂತ ಜ್ಞಾನವೇ ಶ್ರೇಷ್ಠ, ಆದರೆ ಜನರು ಬಡವನ ಜ್ಞಾನವನ್ನು ತಾತ್ಸಾರ ಮಾಡಿ ಅವನ ಮಾತುಗಳನ್ನು ಗಮನಿಸುವುದಿಲ್ಲ ಅಂದುಕೊಂಡೆನು.
17 ಹುಚ್ಚರನ್ನು ಆಳುವವನ ಕೂಗಾಟಕ್ಕಿಂತಲೂ ಜ್ಞಾನಿಯ ಸಮಾಧಾನದ ಮಾತಿಗೆ ಮಹತ್ವ ಇದೆ.
೧೭ಹುಚ್ಚರನ್ನು ಆಳುವವನ ಕೂಗಿಗಿಂತ ಜ್ಞಾನಿಯ ಮೆಲ್ಲನೆಯ ಮಾತುಗಳು ಕಿವಿಗೆ ಕೇಳಿಸುತ್ತದೆ.
18 ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು. ಆದರೆ ಒಬ್ಬ ಪಾಪಿಯು ಬಹು ಶುಭವನ್ನು ಹಾಳುಮಾಡುವನು.
೧೮ಯುದ್ಧದ ಆಯುಧಗಳಿಗಿಂತಲೂ ಜ್ಞಾನವೇ ಉತ್ತಮ. ಆದರೆ ಒಬ್ಬ ಪಾಪಿಯು ಬಹಳ ಶುಭವನ್ನು ಹಾಳುಮಾಡುತ್ತಾನೆ.