< ಸಮುವೇಲನು - ಪ್ರಥಮ ಭಾಗ 17 >
1 ಫಿಲಿಷ್ಟಿಯರು ಯುದ್ಧಮಾಡುವುದಕ್ಕೆ ತಮ್ಮ ಸೈನ್ಯವನ್ನು ಯೆಹೂದ ದೇಶದ ಸೋಕೋವಿನಲ್ಲಿ ಕೂಡಿಸಿದರು. ಅಜೇಕಕ್ಕೂ ಸೋಕೋವಿಗೂ ಮಧ್ಯದಲ್ಲಿರುವ ಎಫೆಸ ದಮ್ಮೀಮಿನಲ್ಲಿ ದಂಡಿಳಿದರು.
೧ಫಿಲಿಷ್ಟಿಯರು ಯುದ್ಧ ಮಾಡುವುದಕ್ಕೋಸ್ಕರ ಯೆಹೂದ ದೇಶದ ಸೋಕೋವಿನಲ್ಲಿ ಸೈನ್ಯವನ್ನು ಕೂಡಿಸಿಕೊಂಡು ಬಂದು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀಮಿನಲ್ಲಿ ಪಾಳೆಯಮಾಡಿಕೊಂಡರು.
2 ಸೌಲನೂ, ಇಸ್ರಾಯೇಲರೂ ಕೂಡಿಕೊಂಡರು. ಏಲಾ ತಗ್ಗಿನ ಬಳಿಯಲ್ಲಿ ದಂಡಿಳಿದು, ಫಿಲಿಷ್ಟಿಯರಿಗೆ ಎದುರಾಗಿ ಯುದ್ಧಮಾಡಲು ವ್ಯೂಹ ಕಟ್ಟಿದರು.
೨ಸೌಲನೂ, ಇಸ್ರಾಯೇಲ್ಯರೂ ಫಿಲಿಷ್ಟಿಯರೊಡನೆ ಯುದ್ಧಮಾಡುವುದಕ್ಕಾಗಿ ಸೈನ್ಯವನ್ನು ಕೂಡಿಸಿ ಏಲಾ ತಗ್ಗಿನಲ್ಲಿ ಪಾಳೆಯಮಾಡಿಕೊಂಡು ವ್ಯೂಹಕಟ್ಟಿದರು.
3 ಫಿಲಿಷ್ಟಿಯರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ, ಇಸ್ರಾಯೇಲರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ ನಿಂತರು. ಅವರ ಮಧ್ಯದಲ್ಲಿ ತಗ್ಗು ಇತ್ತು.
೩ಫಿಲಿಷ್ಟಿಯರು ಒಂದು ಗುಡ್ಡದ ಪಕ್ಕದಲ್ಲಿ, ಇಸ್ರಾಯೇಲರು ಇನ್ನೊಂದು ಗುಡ್ಡದ ಪಕ್ಕದಲ್ಲಿಯೂ ನಿಂತರು. ಅವರ ಮಧ್ಯದಲ್ಲಿ ಒಂದು ಕಣಿವೆ ಇತ್ತು.
4 ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಬಂದನು. ಅವನ ಎತ್ತರ ಸುಮಾರು ಮೂರು ಮೀಟರ್.
೪ಫಿಲಿಷ್ಟಿಯರ ಪಾಳೆಯದಿಂದ ಗತ್ ಊರಿನವನಾದ ಗೊಲ್ಯಾತನೆಂಬ ಒಬ್ಬ ರಣಶೂರನು ಹೊರಟುಬಂದನು. ಅವನು ಆರುವರೆ ಮೊಳ ಎತ್ತರವಾಗಿದ್ದನು.
5 ಅವನ ತಲೆಯ ಮೇಲೆ ಕಂಚಿನ ಶಿರಸ್ತ್ರಾಣ ಇತ್ತು. ಪರೆಪರೆಯಾಗಿ ಜೋಡಿಸಲಾಗಿದ್ದ ಕವಚವನ್ನು ಅವನು ತೊಟ್ಟುಕೊಂಡಿದ್ದನು. ಆ ಕವಚವು ಸುಮಾರು ಐವತ್ತೇಳು ಕಿಲೋಗ್ರಾಂ ತೂಕವಾಗಿತ್ತು.
೫ಅವನ ಶಿರಸ್ತ್ರಾಣವು ತಾಮ್ರದ್ದು. ತಾಮ್ರ ಲೋಹದ ಬಿಲ್ಲೆಗಳಿಂದ ಪರೆಪರೆಯಾಗಿ ಜೋಡಿಸಲ್ಪಟ್ಟ ಅವನ ಕವಚವು (ಐದು ಸಾವಿರ ಶೆಕೆಲಿನ ತಾಮ್ರದ ನಾಣ್ಯಗಳಷ್ಟು ತೂಕವಾಗಿತ್ತು.)
6 ಅವನ ಕಾಲುಗಳಲ್ಲಿ ಕಂಚಿನ ಚಮ್ಮಳಿಗೆ. ಅವನ ತೋಳುಗಳ ಮಧ್ಯದಲ್ಲಿ ಭರ್ಜಿ ಇದ್ದವು.
೬ಅವನ ಪಾದರಕ್ಷೆಗಳು, ಹೆಗಲ ಮೇಲಣ ಈಟಿಯೂ ತಾಮ್ರದವು.
7 ಅವನ ಈಟಿಯ ಕೋಲು ನೇಕಾರರ ಕುಂಟೆಯಷ್ಟು ಗಾತ್ರದಾಗಿತ್ತು. ಅವನ ಈಟಿಯ ಅಲಗು ಏಳು ಕಿಲೋಗ್ರಾಂ ತೂಕವಾಗಿತ್ತು.
೭ಅವನ ಬರ್ಜಿಯ ಹಿಡಿಕೆಯು ನೇಯಿಗಾರ ಕುಂಟೆಯಷ್ಟು ಗಾತ್ರವಾಗಿತ್ತು. ಅದರ ಅಲಗು ಆರುನೂರು ತೊಲೆ ಕಬ್ಬಿಣದಿಂದ ಮಾಡಿದ್ದು. ಅವನ ಗುರಾಣಿಯನ್ನು ಹೊರುವವನು ಅವನ ಮುಂದೆ ಹೋಗುತ್ತಿದ್ದನು.
8 ಇದಲ್ಲದೆ ಖೇಡ್ಯ ಹಿಡಿಯುವವನು ಅವನ ಮುಂದೆ ನಡೆದನು. ಅವನು ನಿಂತು ಇಸ್ರಾಯೇಲ್ ಸೈನ್ಯಗಳಿಗೆ ಕೂಗಿ ಹೇಳಿದ್ದೇನೆಂದರೆ, “ಏಕೆ ನೀವು ವ್ಯೂಹ ಕಟ್ಟಿಕೊಳ್ಳ ಹೊರಟಿರಿ? ನಾನು ಫಿಲಿಷ್ಟಿಯನಲ್ಲವೋ? ನೀವು ಸೌಲನ ಸೇವಕರಲ್ಲವೋ? ನೀವು ನಿಮಗೋಸ್ಕರ ಒಬ್ಬನನ್ನು ಆಯ್ದುಕೊಳ್ಳಿರಿ. ಅವನು ನನ್ನ ಮುಂದೆ ಬರಲಿ.
೮ಅವನು ನಿಂತು ಇಸ್ರಾಯೇಲ ಸೈನ್ಯದವರನ್ನು ಕೂಗಿ ಅವರಿಗೆ, “ನೀವು ಯುದ್ಧಮಾಡಲು ಬಂದದ್ದೇಕೆ? ನಾನು ಫಿಲಿಷ್ಟಿಯನು. ನೀವು ಸೌಲನ ಸೇವಕರು. ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿರಿ.
9 ಅವನು ನನ್ನ ಸಂಗಡ ಯುದ್ಧಮಾಡಿ ನನ್ನನ್ನು ಕೊಂದರೆ, ನಾವು ನಿಮಗೆ ಸೇವಕರಾಗುವೆವು. ಆದರೆ ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮಗೆ ಸೇವಕರಾಗಿದ್ದು ನಮ್ಮನ್ನು ಸೇವಿಸಬೇಕು,” ಎಂದನು.
೯ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಕೊಂದರೆ ನಾವು ನಿಮಗೇ ದಾಸರಾಗಿರುವೆವು. ಆದರೆ ನಾನು ಅವನನ್ನು ಸೋಲಿಸಿ ಕೊಂದರೆ ಆಗ ನೀವು ನಮ್ಮ ಗುಲಾಮರಾಗಿ ನಮ್ಮನ್ನು ಸೇವೆಮಾಡುವವರಾಗುವಿರಿ” ಎಂದು ಹೇಳಿದನು.
10 ಆ ಫಿಲಿಷ್ಟಿಯನು, “ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ. ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ,” ಎಂದನು.
೧೦ಮತ್ತು ಅವನು, “ಈಹೊತ್ತು ಇಸ್ರಾಯೇಲ ಸೈನ್ಯದವರನ್ನು ಕುರಿತು. ನನ್ನೊಡನೆ ಕಾಳಗಕ್ಕೆ ನಿಮ್ಮಲ್ಲಿಂದ ಒಬ್ಬ ಮನುಷ್ಯನನ್ನು ಕಳುಹಿಸಿರಿ ನೋಡೋಣ” ಎಂದು ಸವಾಲು ಹಾಕಿದನು.
11 ಸೌಲನೂ, ಸಮಸ್ತ ಇಸ್ರಾಯೇಲರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿದಾಗ ಹೆದರಿಕೊಂಡು ಬಹು ಭಯಪಟ್ಟರು.
೧೧ಸೌಲನೂ ಎಲ್ಲಾ ಇಸ್ರಾಯೇಲರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿ ಎದೆಗುಂದಿದವರಾಗಿ ಬಹಳ ಭಯಪಟ್ಟರು.
12 ದಾವೀದನು ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನ ಮಗನಾಗಿದ್ದನು. ಈ ಇಷಯನಿಗೆ ಎಂಟು ಮಂದಿ ಪುತ್ರರಿದ್ದರು. ಸೌಲನ ಕಾಲದಲ್ಲಿ ಇಷಯನು ವೃದ್ಧನಾಗಿದ್ದನು.
೧೨ಸೌಲನ ಕಾಲದಲ್ಲಿ ಯೆಹೂದ ಬೇತ್ಲೆಹೇಮ್ ಎಂಬ ಊರಿನ ಎಫ್ರಾತ್ಯನಾದ ಇಷಯನೆಂಬ ಒಬ್ಬ ವೃದ್ಧನಿದ್ದನು. ಇವನ ಎಂಟು ಮಂದಿ ಮಕ್ಕಳಲ್ಲಿ ದಾವೀದನು ಒಬ್ಬನು.
13 ಇಷಯನ ಮೂವರು ಹಿರಿಯ ಪುತ್ರರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು. ಯುದ್ಧಕ್ಕೆ ಹೋದ ಆ ಮೂವರು ಪುತ್ರರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬನು, ಎರಡನೆಯವನ ಹೆಸರು ಅಬೀನಾದಾಬನು; ಮೂರನೆಯವನ ಹೆಸರು ಶಮ್ಮನು;
೧೩ಇವನ ಮೂರು ಹಿರಿಯ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋಗಿದ್ದರು. ಅವರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬ, ಎರಡನೆಯ ಮಗನ ಹೆಸರು ಅಬೀನಾದಾಬ, ಮೂರನೆಯವನ ಹೆಸರು ಶಮ್ಮ,
14 ಆದರೆ ದಾವೀದನು ಚಿಕ್ಕವನಾಗಿದ್ದನು. ಹಿರಿಯರಾದ ಆ ಮೂವರು ಸೌಲನ ಹಿಂದೆ ಯುದ್ಧಕ್ಕೆ ಹೋಗಿದ್ದರು.
೧೪ದಾವೀದನೇ ಎಲ್ಲರಿಗಿಂತಲೂ ಕಿರಿಯನು. ಮೂರು ಮಂದಿ ಹಿರಿ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋದ್ದರಿಂದ
15 ದಾವೀದನು ಸೌಲನನ್ನು ಬಿಟ್ಟು, ತನ್ನ ತಂದೆಯ ಕುರಿಗಳನ್ನು ಮೇಯಿಸಲು ಬೇತ್ಲೆಹೇಮಿಗೆ ಆಗಾಗ ಹೋಗುತ್ತಿದ್ದನು.
೧೫ದಾವೀದನು ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಮೇಯಿಸುವುದಕ್ಕೋಸ್ಕರ ಬೇತ್ಲೆಹೇಮಿಗೆ ಹೋದನು.
16 ಆದರೆ ಆ ಫಿಲಿಷ್ಟಿಯನು ಪ್ರತಿ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ ಬಂದು ನಾಲ್ವತ್ತು ದಿವಸ ನಿಂತುಕೊಳ್ಳುತ್ತಿದ್ದನು.
೧೬ಆ ಫಿಲಿಷ್ಟಿಯನು ನಲ್ವತ್ತು ದಿನ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ, ಬಂದು ಅದೇ ಪ್ರಕಾರ ಕೂಗುತ್ತಾ ಸವಾಲು ಹಾಕುತ್ತಾ ಯುದ್ಧಕ್ಕೆ ನಿಲ್ಲುತ್ತಿದ್ದನು.
17 ಇಷಯನು ತನ್ನ ಮಗನಾದ ದಾವೀದನಿಗೆ, “ನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ, ಈ ಹತ್ತು ರೊಟ್ಟಿಗಳನ್ನೂ ತೆಗೆದುಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಹೋಗು.
೧೭ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಇಗೋ ಇಲ್ಲಿ ಮೂವತ್ತು ಸೇರು ಹುರಿದ ಧಾನ್ಯ, ಹತ್ತು ರೊಟ್ಟಿಗಳೂ ಇರುತ್ತವೆ. ಇವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಡು.
18 ಇದಲ್ಲದೆ ಈ ಹತ್ತು ಗಿಣ್ಣಿನ ಗಡ್ಡೆಗಳನ್ನು ಅವರ ಪ್ರಧಾನನಿಗೆ ಕೊಟ್ಟು, ನಿನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸಿ, ಅವರ ಗುರುತನ್ನು ತೆಗೆದುಕೊಂಡು ಬಾ,” ಎಂದನು.
೧೮ಇದಲ್ಲದೆ ಇಲ್ಲಿ ಹತ್ತು ಗಿಣ್ಣದ ಉಂಡೆಗಳಿವೆ, ಇವುಗಳನ್ನು ಅವರ ಸಹಸ್ರಾಧಿಪತಿಗೆ ಕೊಡು. ಬರುವಾಗ ನಿನ್ನ ಅಣ್ಣಂದಿರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು ಅವರಿಂದ ಒಂದು ಗುರುತನ್ನು ತೆಗೆದುಕೊಂಡು ಬಾ.
19 ಆಗ ಸೌಲನೂ, ಇಸ್ರಾಯೇಲರೆಲ್ಲರೂ ಫಿಲಿಷ್ಟಿಯರ ಸಂಗಡ ಏಲಾ ತಗ್ಗಿನಲ್ಲಿ ಯುದ್ಧ ಮಾಡುತ್ತಿದ್ದರು.
೧೯ಸೌಲನೂ, ಇಸ್ರಾಯೇಲರೂ ಏಲಾ ತಗ್ಗಿನಲ್ಲಿ ಫಿಲಿಷ್ಟಿಯರೊಡನೆ ಯುದ್ಧಮಾಡುತ್ತಿದ್ದಾರಲ್ಲಾ” ಎಂದು ಹೇಳಿದನು.
20 ದಾವೀದನು ಉದಯಕಾಲದಲ್ಲಿ ಎದ್ದು, ಕುರಿ ಕಾಯುವವನ ವಶಕ್ಕೆ ಕುರಿಗಳನ್ನು ಬಿಟ್ಟು, ತನ್ನ ತಂದೆ ಇಷಯನು ತನಗೆ ಆಜ್ಞಾಪಿಸಿದ ಹಾಗೆಯೇ ತೆಗೆದುಕೊಂಡುಹೋಗಿ ಸೈನ್ಯವು ಯುದ್ಧಕ್ಕೆ ಆರ್ಭಟಿಸಿ ಹೊರಡುವಾಗ, ಸಲಕರಣೆಗಳು ಇರುವ ಸ್ಥಳಕ್ಕೆ ಬಂದನು.
೨೦ದಾವೀದನು ಮರುದಿನ ಬೆಳಿಗ್ಗೆ ಎದ್ದು ಕುರಿ ಕಾಯುವವನಿಗೆ ಕುರಿಗಳನ್ನು ಒಪ್ಪಿಸಿ, ತನ್ನ ತಂದೆಯಾದ ಇಷಯನು ಹೇಳಿದವುಗಳನ್ನು ತೆಗೆದುಕೊಂಡು ಸೈನ್ಯವು ಹೊರಟು ಯುದ್ಧಕ್ಕಾಗಿ ಅರ್ಭಟಿಸುವ ಹೊತ್ತಿನಲ್ಲಿ ಪಾಳೆಯದ ರಥಗಳು ನಿಂತಿದ್ದ ಸ್ಥಳಕ್ಕೆ ಬಂದನು.
21 ಇಸ್ರಾಯೇಲರೂ, ಫಿಲಿಷ್ಟಿಯರೂ ಸೈನ್ಯಕ್ಕೆದುರಾಗಿ ಸೈನ್ಯ ವ್ಯೂಹ ಕಟ್ಟಿಕೊಂಡಿದ್ದರು.
೨೧ಇಸ್ರಾಯೇಲರು, ಫಿಲಿಷ್ಟಿಯರೂ ಎದುರೆದುರು ವ್ಯೂಹಕಟ್ಟುವಷ್ಟರಲ್ಲಿ
22 ಆಗ ದಾವೀದನು ತಾನು ತೆಗೆದುಕೊಂಡು ಬಂದದ್ದನ್ನು, ವಸ್ತುಗಳನ್ನು ಕಾಯುವವನ ಕೈಯಲ್ಲಿ ಇಟ್ಟುಬಿಟ್ಟು, ರಣರಂಗಕ್ಕೆ ಓಡಿಹೋಗಿ, ತನ್ನ ಸಹೋದರರ ಬಳಿಗೆ ಬಂದು, ಯೋಗಕ್ಷೇಮ ವಿಚಾರಿಸಿದನು.
೨೨ದಾವೀದನು ತಾನು ತಂದವುಗಳನ್ನು ಸಾಮಾನು ಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ ಅವರೊಡನೆ ಮಾತನಾಡುತ್ತಿದ್ದನು.
23 ಅವನು ಇವರ ಸಂಗಡ ಮಾತನಾಡಿಕೊಳ್ಳುತ್ತಾ ಇರುವಾಗ, ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ಫಿಲಿಷ್ಟಿಯರ ಸೈನ್ಯದಿಂದ ಹೊರಟು, ಮೊದಲಿನ ಹಾಗೆಯೇ ಮಾತನಾಡಿದನು. ಆ ಮಾತುಗಳನ್ನು ದಾವೀದನು ಕೇಳಿದನು.
೨೩ಅಷ್ಟರಲ್ಲಿ ಗತ್ ಊರಿನ ಯುದ್ಧವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ತನ್ನ ಸೈನ್ಯದಿಂದ ಹೊರಗೆ ಬಂದು ಮುಂಚಿನಂತೆಯೇ ಕೂಗಿದನು. ದಾವೀದನು ಅವನ ಮಾತುಗಳನ್ನು ಕೇಳಿದನು.
24 ಇಸ್ರಾಯೇಲರೆಲ್ಲರೂ ಅವನನ್ನು ಕಂಡಾಗ, ಅವನ ಬಳಿಯಿಂದ ಓಡಿಹೋದರು; ಬಹು ಭಯಪಟ್ಟರು.
೨೪ಇಸ್ರಾಯೇಲರು ಅವನನ್ನು ನೋಡಿ ಬಹಳವಾಗಿ ಭಯಪಟ್ಟು ಅಲ್ಲಿಂದ ಓಡಿಹೋದರು.
25 ಇಸ್ರಾಯೇಲರು, “ಏರಿ ಬಂದ ಈ ಮನುಷ್ಯನನ್ನು ಕಂಡಿರೋ? ಇಸ್ರಾಯೇಲನ್ನು ಪ್ರತಿಭಟಿಸಿ ಏರಿ ಬಂದಿದ್ದಾನಲ್ಲ. ಯಾವನು ಇವನನ್ನು ಕೊಂದು ಬಿಡುವನೋ, ಅವನನ್ನು ಅರಸನು ಬಹಳ ಐಶ್ವರ್ಯವಂತನನ್ನಾಗಿ ಮಾಡಿ, ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸುವನು ಮತ್ತು ಅವನ ತಂದೆಯ ಮನೆಯನ್ನು ಇಸ್ರಾಯೇಲರಲ್ಲಿ ತೆರಿಗೆಯಿಂದ ವಿಮೋಚಿಸುವನು,” ಎಂದರು.
೨೫ಅವರು, “ಇಸ್ರಾಯೇಲ್ಯರಾದ ನಮ್ಮನ್ನು ಹೀಯಾಳಿಸುವುದಕ್ಕೋಸ್ಕರ ಬಂದಿರುವ ಈ ಮನುಷ್ಯನನ್ನು ಕಂಡಿರಾ? ಯಾವನು ಇವನನ್ನು ಕೊಲ್ಲುವನೋ ಅಂಥವನಿಗೆ ಅರಸನು ಅಪಾರದ್ರವ್ಯದೊಡನೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವನು. ಇದಲ್ಲದೆ ಅವನ ತಂದೆಯ ಕುಟುಂಬವನ್ನು ಎಲ್ಲಾ ತೆರಿಗೆಯಿಂದ ವಿಮೋಚಿಸುವನು” ಎಂದು ಮಾತನಾಡಿಕೊಳ್ಳುತ್ತಿದ್ದರು.
26 ಆಗ ದಾವೀದನು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರಿಗೆ, “ಈ ಫಿಲಿಷ್ಟಿಯನನ್ನು ಕೊಂದು, ಇಸ್ರಾಯೇಲಿನ ಮೇಲಿಂದ ನಿಂದೆಯನ್ನು ತೆಗೆದುಬಿಡುವ ಆ ಮನುಷ್ಯನಿಗೆ ಏನು ಸಿಕ್ಕುವುದು? ಏಕೆಂದರೆ ಸುನ್ನತಿ ಇಲ್ಲದ ಆ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸುವುದಕ್ಕೆ ಎಷ್ಟರವನು,” ಎಂದನು.
೨೬ದಾವೀದನು, “ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವುದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಏನು ಸಿಕ್ಕುವುದು ಹೇಳಿರಿ” ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಿದನು,
27 ಜನರು ಆ ಮಾತಿಗೆ ಸರಿಯಾಗಿ, “ಅವನನ್ನು ಕೊಂದವನಿಗೆ ಈ ಪ್ರಕಾರ ಮಾಡಲಾಗುವುದು,” ಎಂದು ಹೇಳಿದರು.
೨೭ಅದಕ್ಕೆ ಅವರು ಮುಂಚಿನಂತೆ ಇಂಥಿಂಥದು ದೊರಕುವುದೆಂದು ಉತ್ತರಕೊಟ್ಟರು.
28 ದಾವೀದನು ಆ ಮನುಷ್ಯರ ಸಂಗಡ ಮಾತನಾಡುತ್ತಿರುವುದನ್ನು ಅವನ ಹಿರಿಯ ಸಹೋದರನಾದ ಎಲೀಯಾಬನು ಕೇಳಿ, ಅವನ ಮೇಲೆ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇನು? ಅಡವಿಯಲ್ಲಿರುವ ಆ ಸ್ವಲ್ಪ ಕುರಿಗಳನ್ನು ಯಾರ ವಶಕ್ಕೆ ಒಪ್ಪಿಸಿ ಬಂದೆ? ನಿನ್ನ ಗರ್ವವನ್ನೂ, ನಿನ್ನ ಹೃದಯದ ಅಹಂಕಾರವನ್ನೂ ನಾನು ಬಲ್ಲೆನು. ಏಕೆಂದರೆ ಯುದ್ಧವನ್ನು ನೋಡಲು ಇಳಿದು ಬಂದಿದ್ದೀ,” ಎಂದನು.
೨೮ದಾವೀದನು ಜನರ ಸಂಗಡ ಹೀಗೆ ಮಾತನಾಡುತ್ತಿರುವುದನ್ನು ಅವನ ಹಿರಿಯ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು, “ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿರುವೆ. ನಿನ್ನ ಸೊಕ್ಕು, ತುಂಟತನವು ನನಗೆ ಗೊತ್ತಿದೆ. ನೀನು ಯುದ್ಧವನ್ನು ನೋಡುವುದಕ್ಕೆ ಬಂದಿದ್ದೀ” ಎಂದು ಅವನನ್ನು ಗದರಿಸಿದನು.
29 ಅದಕ್ಕೆ ದಾವೀದನು, “ನಾನು ಈಗ ಮಾಡಿದ್ದೇನು? ಮಾತನಾಡಿದೆನಷ್ಟೇ?” ಎಂದನು.
೨೯ಆಗ ದಾವೀದನು, “ನಾನೇನು ತಪ್ಪು ಮಾಡಿದೆನು? ಸುಮ್ಮನೆ ಮಾತನಾಡಿದೆನಷ್ಟೆ” ಎಂದು ಹೇಳಿ
30 ಅವನನ್ನು ಬಿಟ್ಟು ಬೇರೊಬ್ಬನ ಕಡೆಗೆ ತಿರುಗಿಕೊಂಡು ಹಾಗೆಯೇ ಕೇಳಿದನು. ಆಗ ಜನರು ಮೊದಲು ಹೇಳಿದ ಹಾಗೆಯೇ ಅವನಿಗೆ ಉತ್ತರವನ್ನು ಹೇಳಿದರು.
೩೦ಅವನನ್ನು ಬಿಟ್ಟು ಬೇರೆ ಕಡೆಗೆ ಹೋಗಿ ಹಾಗೆಯೇ ವಿಚಾರಿಸಲು ಜನರು ಮುಂಚಿನಂತೆಯೇ ಉತ್ತರಕೊಟ್ಟರು.
31 ದಾವೀದನು ಹೇಳಿದ ಮಾತುಗಳನ್ನು ಕೇಳಿದವರು ಸೌಲನ ಮುಂದೆ ತಿಳಿಸಿದರು. ಸೌಲನು ದಾವೀದನನ್ನು ಕರೆಯಿಸಿದನು.
೩೧ದಾವೀದನು ಈ ಪ್ರಕಾರ ವಿಚಾರಿಸುತ್ತಿರುವುದನ್ನು ಕೇಳಿದವರು ಸೌಲನಿಗೆ ತಿಳಿಸಿದರು. ಅವನು ದಾವೀದನನ್ನು ಕರೆದುಕೊಂಡು ಬರಲು ಹೇಳಿದನು.
32 ಆಗ ದಾವೀದನು ಸೌಲನಿಗೆ, “ಅವನ ನಿಮಿತ್ತವಾಗಿ ಯಾವ ಹೃದಯವೂ ಕುಗ್ಗಬಾರದು. ನಿನ್ನ ಸೇವಕನು ಹೋಗಿ ಈ ಫಿಲಿಷ್ಟಿಯನ ಸಂಗಡ ಯುದ್ಧಮಾಡುವನು,” ಎಂದನು.
೩೨ದಾವೀದನು ಸೌಲನಿಗೆ, “ಆ ಫಿಲಿಷ್ಟಿಯನ ನಿಮಿತ್ತವಾಗಿ ಯಾವನೂ ಧೈರ್ಯಗೆಡಬಾರದು ನಿನ್ನ ಸೇವಕನಾದ ನಾನು ಹೋಗಿ ಅವನೊಡನೆ ಯುದ್ಧಮಾಡುವೆನು” ಅನ್ನಲು,
33 ಆಗ ಸೌಲನು ದಾವೀದನಿಗೆ, “ಈ ಫಿಲಿಷ್ಟಿಯನ ಮೇಲೆ ಯುದ್ಧಮಾಡಲು ನಿನ್ನಿಂದಾಗದು, ಏಕೆಂದರೆ ನೀನು ಹುಡುಗನಾಗಿದ್ದೀಯೆ. ಆದರೆ ಅವನು ಚಿಕ್ಕಂದಿನಿಂದ ಯುದ್ಧದ ಮನುಷ್ಯನಾಗಿದ್ದಾನೆ,” ಎಂದನು.
೩೩ಸೌಲನು ಅವನಿಗೆ, “ಅವನೊಡನೆ ಕಾದಾಡಲಾರೆ, ನೀನು ಇನ್ನೂ ಹುಡುಗನು ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರನು” ಎಂದು ಹೇಳಿದನು.
34 ದಾವೀದನು ಸೌಲನಿಗೆ, “ನಿನ್ನ ಸೇವಕನು ತನ್ನ ತಂದೆಯ ಕುರಿಗಳನ್ನು ಮೇಯಿಸಿಕೊಂಡಿರುವಾಗ ಸಿಂಹವೂ ಕರಡಿಯೂ ಬಂದು ಮಂದೆಯಲ್ಲಿರುವ ಕುರಿಮರಿಯನ್ನು ಹಿಡಿದವು.
೩೪ಆಗ ದಾವೀದನು ಅವನಿಗೆ, “ನಿನ್ನ ಸೇವಕನಾದ ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿರುವಾಗ ಸಿಂಹವಾಗಲಿ, ಕರಡಿಯಾಗಲಿ ಹಿಂಡಿನಲ್ಲಿನ ಕುರಿಮರಿಯನ್ನು ಹಿಡಿದುಕೊಂಡು ಹೋಗಲು ಬಂದರೆ
35 ಆಗ ನಾನು ಅದರ ಹಿಂದೆ ಹೋಗಿ, ಅದನ್ನು ಹೊಡೆದುಬಿಟ್ಟು, ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂದಿರುಗಿ ಬಿದ್ದಾಗ, ನಾನು ಅದರ ಗಡ್ಡವನ್ನು ಹಿಡಿದು, ಹೊಡೆದು ಕೊಂದುಹಾಕಿದೆನು.
೩೫ನಾನು ಒಡನೇ ಬೆನ್ನಟ್ಟಿ, ಅದನ್ನು ಹೊಡೆದು, ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆನು. ಅದು ಹಿಂದಿರುಗಿ ನನ್ನ ಮೇಲೆ ಬೀಳಲು ಬಂದಾಗ ಅದರ ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು.
36 ಹೀಗೆಯೇ ನಿನ್ನ ಸೇವಕನು ಆ ಸಿಂಹವನ್ನೂ, ಆ ಕರಡಿಯನ್ನೂ ಕೊಂದುಬಿಟ್ಟೆನು. ಸುನ್ನತಿ ಇಲ್ಲದ ಈ ಫಿಲಿಷ್ಟಿಯನು ಜೀವವುಳ್ಳ ದೇವರ ಸೈನ್ಯಗಳನ್ನು ದೂಷಿಸಿದ್ದರಿಂದ, ಅವುಗಳಲ್ಲಿ ಒಂದರ ಹಾಗೆ ಇರುವನು,” ಎಂದನು.
೩೬ನಿನ್ನ ಸೇವಕನಿಂದ ಕೊಲ್ಲಲ್ಪಟ್ಟ ಸಿಂಹಕ್ಕೂ, ಕರಡಿಗೂ ಆದ ಗತಿಯೇ ಜೀವಸ್ವರೂಪನಾದ ದೇವರ ಸೈನ್ಯವನ್ನು ನಿಂದಿಸುವಂಥ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು.
37 ಇದಲ್ಲದೆ ದಾವೀದನು, “ನನ್ನನ್ನು ಸಿಂಹದ ಕೈಗೂ, ಕರಡಿಯ ಕೈಗೂ ತಪ್ಪಿಸಿಬಿಟ್ಟ ಯೆಹೋವ ದೇವರು, ಈ ಫಿಲಿಷ್ಟಿಯನ ಕೈಗೂ ನನ್ನನ್ನು ತಪ್ಪಿಸಿಬಿಡುವರು,” ಎಂದನು. ಆಗ ಸೌಲನು ದಾವೀದನಿಗೆ, “ನೀನು ಹೋಗು, ಯೆಹೋವ ದೇವರು ನಿನ್ನ ಸಂಗಡ ಇರಲಿ,” ಎಂದನು.
೩೭ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಗೆ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವನು” ಎಂದನು. ಆಗ ಸೌಲನು ದಾವೀದನಿಗೆ “ಹೋಗು ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿ,
38 ಸೌಲನು ದಾವೀದನಿಗೆ ತನ್ನ ಆಯುಧಗಳನ್ನು ಧರಿಸಲು ಹೇಳಿ, ಅವನ ತಲೆಯ ಮೇಲೆ ಒಂದು ಕಂಚಿನ ಶಿರಸ್ತ್ರಾಣವನ್ನು ಇಟ್ಟು, ಅವನಿಗೆ ಕವಚವನ್ನು ತೊಡಿಸಿದನು.
೩೮ಅವನಿಗೆ ತನ್ನ ಯುದ್ಧ ವಸ್ತ್ರಗಳನ್ನು, ಕವಚವನ್ನೂ ತೊಣಿಸಿ, ತಲೆಗೊಂದು ತಾಮ್ರದ ಶಿರಸ್ತ್ರಾಣವನ್ನಿಟ್ಟನು.
39 ದಾವೀದನು ಅವನ ಖಡ್ಗವನ್ನು ತನ್ನ ಕವಚಗಳ ಮೇಲೆ ಕಟ್ಟಿಕೊಂಡು ನಡೆದು ಪರೀಕ್ಷಿಸಿದನು. ಆದರೆ ಅವನಿಗೆ ಅದರ ಅಭ್ಯಾಸವಿರಲಿಲ್ಲ. ಆಗ ದಾವೀದನು ಸೌಲನಿಗೆ, “ನನಗೆ ಅವುಗಳ ಅಭ್ಯಾಸವಿಲ್ಲದ್ದರಿಂದ ಇವುಗಳ ಸಂಗಡ ಹೋಗಲಾರೆನು,” ಎಂದು ಹೇಳಿ, ಅವುಗಳನ್ನು ಬಿಚ್ಚಿಹಾಕಿ
೩೯ದಾವೀದನು ಯುದ್ಧ ವಸ್ತ್ರದ ಮೇಲೆ ಕತ್ತಿಯನ್ನೂ ಬಿಗಿದುಕೊಂಡ ನಂತರ ನಡೆಯಲು ಸಾಧ್ಯವಾಗುತ್ತದೆಯೇ ಎಂದು ಪರೀಕ್ಷಿಸಿದ ಮೇಲೆ ಸೌಲನಿಗೆ, “ನನಗೆ ಅಭ್ಯಾಸವಿಲ್ಲದೆ ಇರುವುದರಿಂದ ಇವುಗಳನ್ನು ಧರಿಸಿಕೊಂಡು ನಡೆಯಲಾರೆ” ಎಂದು ಹೇಳಿ ಅವುಗಳನ್ನು ತೆಗೆದಿಟ್ಟು
40 ತನ್ನ ಕೋಲನ್ನು ಕೈಯಲ್ಲಿ ಹಿಡಿದು, ಹಳ್ಳದಲ್ಲಿರುವ ಐದು ನುಣುಪಾದ ಕಲ್ಲುಗಳನ್ನು ಆಯ್ದುಕೊಂಡು, ಅವುಗಳನ್ನು ಕುರಿಕಾಯಲು ಬಳಸುವ ತನ್ನ ಚೀಲದಲ್ಲಿ ಹಾಕಿಕೊಂಡು ಕವಣೆಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಆ ಫಿಲಿಷ್ಟಿಯನ ಬಳಿಗೆ ಹೋದನು.
೪೦ತನ್ನ ಕೋಲನ್ನು ತೆಗೆದುಕೊಂಡು ಹೊರಟು, ಹಳ್ಳದಲ್ಲಿನ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು, ಅವುಗಳನ್ನು ಕುರುಬರ ಪದ್ಧತಿಯಂತೆ ತನಗಿರುವ ಸೊಂಟದ ಚೀಲದಲ್ಲಿ ಹಾಕಿ ಕೈಯಲ್ಲಿ ಕವಣೆಯನ್ನು ಹಿಡಿದು ಫಿಲಿಷ್ಟಿಯನ ಬಳಿಗೆ ಹೋದನು.
41 ಫಿಲಿಷ್ಟಿಯನು ನಡೆದು ದಾವೀದನ ಬಳಿಗೆ ಸಮೀಪಿಸಿ ಬಂದನು.
೪೧ಇತ್ತ ಫಿಲಿಷ್ಟಿಯನೂ ದಾವೀದನ ಸಮೀಪಕ್ಕೆ ಬಂದನು. ಗುರಾಣಿ ಹೊರುವವರು ಅವನ ಮುಂದೆ ಇದ್ದರು.
42 ಅವನ ಖೇಡ್ಯವನ್ನು ಹಿಡಿಯುವವನು ಅವನ ಮುಂದೆ ನಡೆದನು. ಫಿಲಿಷ್ಟಿಯನು ದಾವೀದನನ್ನು ದೃಷ್ಟಿಸಿ ನೋಡಿದಾಗ, ಅವನು ಕೆಂಪಾದವನಾಗಿಯೂ, ಸುಂದರ ರೂಪವುಳ್ಳವನಾಗಿಯೂ ಇರುವ ಹುಡುಗನಾಗಿದ್ದುದರಿಂದ, ಅವನನ್ನು ತಿರಸ್ಕರಿಸಿ ದಾವೀದನಿಗೆ,
೪೨ಫಿಲಿಷ್ಟಿಯನು ಕೆಂಬಣ್ಣದವನೂ, ಸುಂದರನೂ, ಯೌವನಸ್ಥನೂ ಆದ ದಾವೀದನನ್ನು ನೋಡಿ ತಿರಸ್ಕಾರದಿಂದ ಅವನಿಗೆ,
43 “ನೀನು ಕೋಲು ಹಿಡಿದುಕೊಂಡು ನನ್ನ ಬಳಿಗೆ ಬರುವ ಹಾಗೆ ನಾನು ನಾಯಿಯೋ?” ಎಂದು ಹೇಳಿ ಆ ಫಿಲಿಷ್ಟಿಯನು ತನ್ನ ದೇವರುಗಳಿಂದ ದಾವೀದನನ್ನು ಶಪಿಸಿದನು.
೪೩“ನೀನು ಕೋಲುಹಿಡಿದು ನನ್ನ ಬಳಿಗೆ ಬರುವುದೇನು? ನಾನು ನಾಯಿಯೋ” ಎಂದು ಹೇಳಿ ಅವನನ್ನು ತನ್ನ ದೇವರ ಹೆಸರಿನಲ್ಲಿ ಶಪಿಸಿ,
44 ದಾವೀದನಿಗೆ, “ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು,” ಎಂದನು.
೪೪“ಇಲ್ಲಿ ಬಾ, ನಿನ್ನ ಮಾಂಸವನ್ನು ಮೃಗ ಪಕ್ಷಿಗಳಿಗೆ ಹಂಚಿಕೊಡುತ್ತೇನೆ” ಅಂದನು.
45 ದಾವೀದನು ಫಿಲಿಷ್ಟಿಯನಿಗೆ, “ನೀನು ಖಡ್ಗ, ಈಟಿ ಮತ್ತು ಗುರಾಣಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ. ಆದರೆ ನಾನು, ನೀನು ನಿಂದಿಸಿದ ಇಸ್ರಾಯೇಲಿನ ಸೈನ್ಯಗಳ ದೇವರಾದ ಸೇನಾಧೀಶ್ವರ ಯೆಹೋವ ದೇವರ ಹೆಸರಿನಲ್ಲಿ ನಿನ್ನ ಬಳಿಗೆ ಬರುತ್ತೇನೆ.
೪೫ಆಗ ದಾವೀದನು ಅವನಿಗೆ, “ನೀನು ಈಟಿ, ಕತ್ತಿ, ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ. ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ, ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬಂದಿದ್ದೇನೆ.
46 ಯೆಹೋವ ದೇವರು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವರು; ನಾನು ನಿನ್ನನ್ನು ಹೊಡೆದುಬಿಟ್ಟು, ನಿನ್ನ ತಲೆಯನ್ನು ನಿನ್ನಿಂದ ತೆಗೆದುಹಾಕಿ, ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲರಲ್ಲಿ ದೇವರು ಇದ್ದಾರೆಂದು ಭೂಲೋಕದವರೆಲ್ಲರೂ ತಿಳಿಯುವರು.
೪೬ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು. ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದು ಹಾಕಿ ಫಿಲಿಷ್ಟಿಯ ಸೈನ್ಯದ ಶವಗಳನ್ನು ಮೃಗ ಪಕ್ಷಿಗಳಿಗೆ ಹಂಚಿಕೊಡುವೆನು. ಇದರಿಂದ ಇಸ್ರಾಯೇಲರೊಳಗೆ ದೇವರಿದ್ದಾನೆಂಬುದು ಭೂಲೋಕದವರಿಗೆಲ್ಲಾ ತಿಳಿದುಬರುವುದು.
47 ಯೆಹೋವ ದೇವರು ಖಡ್ಗದಿಂದಲೂ, ಈಟಿಯಿಂದಲೂ ರಕ್ಷಿಸುವುದಿಲ್ಲ ಎಂಬುದು ಈ ಸಮೂಹವೆಲ್ಲಾ ತಿಳಿದುಕೊಳ್ಳುವುದು. ಏಕೆಂದರೆ ಯುದ್ಧವು ಯೆಹೋವ ದೇವರದ್ದು, ಅವರು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವರು,” ಎಂದನು.
೪೭ಯೆಹೋವನು ಈಟಿಕತ್ತಿಗಳಿಲ್ಲದೇ ರಕ್ಷಿಸಬಲ್ಲನೆಂಬುದು ಇಲ್ಲಿ ಕೂಡಿರುವವರಿಗೆಲ್ಲಾ ತಿಳಿದುಬರುವುದು. ಯಾಕೆಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ. ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು” ಅಂದನು.
48 ಆಗ ಆ ಫಿಲಿಷ್ಟಿಯನು ಎದ್ದು ದಾವೀದನಿಗೆ ಎದುರಾಗಿ ಸಮೀಪಿಸಿ ಬರುವಾಗ,
೪೮ಕೂಡಲೇ ಆ ಫಿಲಿಷ್ಟಿಯನು ಹೊರಟು ದಾವೀದನೊಡನೆ ಯುದ್ಧಮಾಡುವುದಕ್ಕೆ ಸಮೀಪಿಸಿದಾಗ ದಾವೀದನು ಫಿಲಿಷ್ಟಿಯರ ಸೈನ್ಯದ ಕಡೆಗೆ ಓಡಿಹೋಗಿ ಆ ಫಿಲಿಷ್ಟಿಯನನ್ನು ಸಂಧಿಸಿ,
49 ದಾವೀದನು ತ್ವರೆಯಾಗಿ ಆ ಫಿಲಿಷ್ಟಿಯನಿಗೆದುರಾಗಿ ಓಡಿಹೋಗಿ, ತನ್ನ ಕೈಯನ್ನು ಚೀಲದಲ್ಲಿ ಹಾಕಿ, ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು, ಕವಣೆಯಲ್ಲಿಟ್ಟು ಬೀಸಿ, ಫಿಲಿಷ್ಟಿಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕದ್ದರಿಂದ, ಅವನು ನೆಲದ ಮೇಲೆ ಬೋರಲು ಬಿದ್ದನು.
೪೯ಚೀಲದಲ್ಲಿ ಕೈ ಹಾಕಿ, ಒಂದು ಕಲ್ಲನ್ನು ತೆಗೆದು ಅವನ ಹಣೆಗೆ ಗುರಿಯಿಟ್ಟು ಕವಣೆಯನ್ನು ಬೀಸಿ ಹೊಡೆಯಲು ಕಲ್ಲು ಅವನ ಹಣೆಯೊಳಗೆ ಹೊಕ್ಕಿತು. ಅವನು ಬೋರಲುಬಿದ್ದನು
50 ಹೀಗೆಯೇ ದಾವೀದನು ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಹೊಡೆದು, ಅವನನ್ನು ಕೊಂದುಹಾಕಿದನು.
೫೦ಕೂಡಲೇ ಅವನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನು ತೆಗೆದುಕೊಂಡು, ಅದರಿಂದಲೇ ಅವನ ತಲೆಯನ್ನು ಕತ್ತರಿಸಿ, ಅವನನ್ನು ಸಾಯಿಸಿದನು.
51 ದಾವೀದನ ಕೈಯಲ್ಲಿ ಖಡ್ಗ ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು, ಅವನ ಖಡ್ಗವನ್ನು ತೆಗೆದುಕೊಂಡು, ಅದನ್ನು ಒರೆಯಿಂದ ಕಿತ್ತು, ಅವನನ್ನು ಕೊಂದು, ಅವನ ತಲೆಯನ್ನು ಕಡಿದುಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತು ಹೋದದ್ದನ್ನು ಕಂಡಾಗ ಓಡಿಹೋದರು.
೫೧ಈ ಪ್ರಕಾರ ದಾವೀದನು ಕತ್ತಿಯಿಂದಲ್ಲ ಬರೀ ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಸೋಲಿಸಿ, ಕೊಂದು ಹಾಕಿದನು ಫಿಲಿಷ್ಟಿಯರು ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಓಡಿಹೋದರು.
52 ಇಸ್ರಾಯೇಲರೂ, ಯೆಹೂದದ ಜನರೂ ಎದ್ದು ಆರ್ಭಟಿಸಿ, ತಗ್ಗಿನ ಮೇರೆಯವರೆಗೂ, ಎಕ್ರೋನಿನ ಬಾಗಿಲಿನವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದ್ದರಿಂದ ಹತರಾದ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ಎಕ್ರೋನಿನವರೆಗೂ ಬಿದ್ದಿದ್ದರು.
೫೨ಇಸ್ರಾಯೇಲರು ಯೆಹೂದ್ಯರು ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ತಗ್ಗಿನ ದಾರಿಯವರೆಗೂ ಎಕ್ರೋನಿನ ಬಾಗಿಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿಮಿನಿಂದ ಗತ್ ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು.
53 ಇಸ್ರಾಯೇಲರು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರುಗಿಬಂದು ಅವರ ಡೇರೆಗಳನ್ನು ಸೂರೆಮಾಡಿದರು.
೫೩ಅನಂತರ ಇಸ್ರಾಯೇಲರು ಹಿಂತಿರುಗಿ ಬಂದು ಫಿಲಿಷ್ಟಿಯರ ಪಾಳೆಯವನ್ನು ಸೂರೆಮಾಡಿದರು.
54 ದಾವೀದನು ಫಿಲಿಷ್ಟಿಯನ ತಲೆಯನ್ನು ತೆಗೆದುಕೊಂಡು, ಅದನ್ನು ಯೆರೂಸಲೇಮಿಗೆ ತಂದನು. ಆದರೆ ಅವನ ಆಯುಧಗಳನ್ನು ತನ್ನ ಡೇರೆಯಲ್ಲಿ ಇಟ್ಟನು.
೫೪ದಾವೀದನು ಆ ಫಿಲಿಷ್ಟಿಯನ ತಲೆಯನ್ನು ಯೆರೂಸಲೇಮಿಗೆ ಒಯ್ದನು. ಅವನ ಆಯುಧಗಳನ್ನು ತನ್ನ ಗುಡಾರದಲ್ಲಿಟ್ಟುಕೊಂಡನು.
55 ದಾವೀದನು ಫಿಲಿಷ್ಟಿಯನಿಗೆ ಎದುರಾಗಿ ಹೊರಟು ಹೋಗುವುದನ್ನು ಸೌಲನು ಕಂಡಾಗ, ತನ್ನ ಸೈನ್ಯಾಧಿಪತಿಯಾದ ಅಬ್ನೇರನಿಗೆ, “ಅಬ್ನೇರನೇ, ಈ ಯುವಕನು ಯಾರ ಮಗನು?” ಎಂದನು. ಅದಕ್ಕೆ ಅಬ್ನೇರನು, “ಅರಸನೇ, ನಿನ್ನ ಪ್ರಾಣದಾಣೆ ನಾನರಿಯೆ,” ಎಂದನು.
೫೫ದಾವೀದನು ಫಿಲಿಷ್ಟಿಯರೊಡನೆ ಯುದ್ಧಮಾಡುವುದಕ್ಕೆ ಹೊರಟದ್ದನ್ನು ಸೌಲನು ಕಂಡು ತನ್ನ ಸೇನಾಪತಿಯಾದ ಅಬ್ನೇರನನ್ನು, “ಅಬ್ನೇರನೇ ಈ ಹುಡುಗನು ಯಾರ ಮಗನು?” ಎಂದು ಕೇಳಿದ್ದಕ್ಕೆ ಅವನು ಸೌಲನಿಗೆ, “ಅರಸನೇ ನಿನ್ನ ಜೀವದಾಣೆ ನನಗೆ ಗೊತ್ತಿಲ್ಲ” ಎಂದು ಉತ್ತರಕೊಟ್ಟನು.
56 ಅದಕ್ಕೆ ಅರಸನು, “ಆ ಯೌವನಸ್ಥನು ಯಾರ ಮಗನೆಂದು ವಿಚಾರಿಸು,” ಎಂದನು.
೫೬ಆಗ ಅರಸನು ಅವನಿಗೆ, “ಆ ಪ್ರಾಯಸ್ಥನು ಯಾರ ಮಗನೆಂದು ವಿಚಾರಿಸು” ಎಂದು ಆಜ್ಞಾಪಿಸಿದನು.
57 ಆಗ ದಾವೀದನು ಫಿಲಿಷ್ಟಿಯನನ್ನು ಕೊಂದು, ಅವನ ತಲೆಯನ್ನು ತೆಗೆದುಕೊಂಡು ಹಿಂದಿರುಗಿ ಬರುವಾಗ, ಅಬ್ನೇರನು ಅವನನ್ನು ಕರೆದು, ಸೌಲನ ಮುಂದೆ ತಂದು ಬಿಟ್ಟನು.
೫೭ದಾವೀದನು ಫಿಲಿಷ್ಟಿಯನನ್ನು ಕೊಂದು ಅವನ ತಲೆಯನ್ನು ಹಿಡಿದುಕೊಂಡು ಹಿಂದಿರುಗಿ ಬರುವಾಗ ಅಬ್ನೇರನು ಅವನನ್ನು ಕರೆದು ಸೌಲನ ಮುಂದೆ ನಿಲ್ಲಿಸಿದನು.
58 ಆಗ ಸೌಲನು, “ಯೌವನಸ್ಥನೇ, ನೀನು ಯಾರ ಮಗನು?” ಎಂದು ಅವನನ್ನು ಕೇಳಿದನು. ಅದಕ್ಕೆ ದಾವೀದನು, “ನಾನು ನಿನ್ನ ಸೇವಕನಾಗಿರುವ ಬೇತ್ಲೆಹೇಮಿನವನಾದ ಇಷಯನ ಮಗನು,” ಎಂದನು.
೫೮ಸೌಲನು ಅವನನ್ನು, “ಹುಡುಗನೇ ನೀನು ಯಾರ ಮಗನು?” ಎಂದು ಕೇಳಿದ್ದಕ್ಕೆ ಅವನು, “ನಾನು ಬೇತ್ಲೆಹೇಮಿನವನೂ ನಿನ್ನ ಸೇವಕನೂ ಆದ ಇಷಯನ ಮಗನು” ಎಂದು ಉತ್ತರಕೊಟ್ಟನು.