< ಯೋಬನು 13 >
1 ೧ ಇಗೋ, ಇವುಗಳನ್ನೆಲ್ಲಾ ನನ್ನ ಕಣ್ಣು ಕಂಡಿದೆ, ಕಿವಿಯು ಕೇಳಿ ಗ್ರಹಿಸಿದೆ.
“ಇಗೋ, ನನ್ನ ಕಣ್ಣು ಎಲ್ಲವನ್ನು ನೋಡಿದೆ; ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿದೆ.
2 ೨ ನೀವು ತಿಳಿದಿರುವುದನ್ನು ನಾನೂ ತಿಳಿದಿದ್ದೇನೆ. ನಿಮಗಿಂತ ನಾನು ಕಡೆಯಲ್ಲ.
ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದುಕೊಂಡಿದ್ದೇನೆ; ನಾನು ನಿಮಗಿಂತ ಕಡಿಮೆಯಾದವನಲ್ಲ.
3 ೩ ಆದರೆ ನಾನು ಸರ್ವಶಕ್ತನಾದ ದೇವರ ಸಂಗಡ ಮಾತನಾಡಬೇಕು, ದೇವರೊಂದಿಗೆ ವಾದಿಸಲು ಅಪೇಕ್ಷಿಸುತ್ತೇನೆ.
ನಾನು ಸರ್ವಶಕ್ತರ ಸಂಗಡ ಖಂಡಿತವಾಗಿ ಮಾತನಾಡುವೆನು; ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.
4 ೪ ನೀವಾದರೋ ಸುಳ್ಳನ್ನು ಪ್ರತಿಪಾದಿಸುವವರಾಗಿದ್ದೀರಿ, ನೀವೆಲ್ಲರೂ ವ್ಯರ್ಥ ವೈದ್ಯರೇ.
ಆದರೆ ನೀವು ಸುಳ್ಳನ್ನು ಕಲ್ಪಿಸುವವರು; ನೀವೆಲ್ಲರು ವ್ಯರ್ಥ ವೈದ್ಯರೇ.
5 ೫ ನೀವು ಬಾಯಿಮುಚ್ಚಿ ಸುಮ್ಮನಾದರೆ ಎಷ್ಟೋ ಉತ್ತಮ! ಮೌನವೇ ನಿಮಗೆ ಜ್ಞಾನವು.
ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು; ಮೌನವೇ ನಿಮಗೆ ಜ್ಞಾನವು.
6 ೬ ದಯಮಾಡಿ ನನ್ನ ಆಕ್ಷೇಪಣೆಯನ್ನು ಕೇಳಿರಿ, ನನ್ನ ತುಟಿಗಳ ವಾದಕ್ಕೆ ಕಿವಿಗೊಡಿರಿ.
ಈಗ ನನ್ನ ವಾದವನ್ನು ಕೇಳಿಸಿಕೊಳ್ಳಿರಿ; ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.
7 ೭ ದೇವರ ಪಕ್ಷವಾಗಿ ಅನ್ಯಾಯವನ್ನು ನುಡಿಯುವಿರೋ? ಆತನಿಗೋಸ್ಕರ ಮೋಸದ ಮಾತುಗಳನ್ನಾಡುವಿರೋ?
ದೇವರ ಪರವಾಗಿ ಮಾತಾಡುವ ನೀವು ಅನ್ಯಾಯದಿಂದ ಮಾತಾಡುವಿರೋ? ದೇವರಿಗೋಸ್ಕರ ಮಾತಾಡುವ ನೀವು ವಂಚನೆಯಿಂದ ಮಾತಾಡುವಿರೋ?
8 ೮ ಆತನಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ? ದೇವರಿಗಾಗಿ ವಾದಿಸುವಿರಾ?
ನೀವು ದೇವರಿಗೆ ಪಕ್ಷಪಾತವನ್ನು ತೋರಿಸುವಿರೋ? ದೇವರ ಪರವಾಗಿ ನೀವು ವಾದಿಸುವಿರೋ?
9 ೯ ಆತನು ನಿಮ್ಮನ್ನು ಶೋಧಿಸಿದರೆ ನಿಮಗೆ ಒಳ್ಳೆಯದಾಗುವುದೋ? ಮನುಷ್ಯನನ್ನು ಮೋಸಗೊಳಿಸುವಂತೆ ಆತನನ್ನೂ ಮೋಸಗೊಳಿಸುವಿರೋ?
ದೇವರು ನಿಮ್ಮನ್ನು ಶೋಧಿಸಿದರೆ, ಅದು ನಿಮಗೆ ಒಳ್ಳೇದೋ? ಒಬ್ಬ ಮನುಷ್ಯನು ಇನ್ನೊಬ್ಬನನ್ನು ವಂಚಿಸುವ ಪ್ರಕಾರ, ನೀವೂ ದೇವರನ್ನು ವಂಚಿಸುವಿರೋ?
10 ೧೦ ನೀವು ರಹಸ್ಯವಾಗಿ ಪಕ್ಷಪಾತ ಮಾಡಿದರೆ ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು.
ನೀವು ರಹಸ್ಯವಾಗಿ ಪಕ್ಷಪಾತಮಾಡಿದರೂ, ದೇವರು ನಿಶ್ಚಯವಾಗಿಯೂ ನಿಮ್ಮನ್ನು ಖಂಡಿಸುವರು.
11 ೧೧ ಆತನ ಶ್ರೇಷ್ಠತೆಯು ನಿಮ್ಮನ್ನು ಹೆದರಿಸುವುದಿಲ್ಲವೋ? ಆತನ ಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
ದೇವರ ವೈಭವವು ನಿಮ್ಮನ್ನು ಹೆದರಿಸುವುದಿಲ್ಲವೋ? ದೈವಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?
12 ೧೨ ನಿಮ್ಮ ಸ್ಮೃತಿಗಳು ಬೂದಿಗೆ ಸಮಾನವಾದ ಉದಾಹರಣೆ; ನಿಮ್ಮ ಕೋಟೆಯು ಬರೀ ಮಣ್ಣಿನದೇ.
ನಿಮ್ಮ ನೀತಿವಚನಗಳು ಬೂದಿಯ ಗಾದೆಗಳು; ನಿಮ್ಮ ವಾದಗಳು ಬರೀ ಮಣ್ಣಿನ ಗೋಡೆಯೇ.
13 ೧೩ ಸುಮ್ಮನಿರಿ, ನನ್ನನ್ನು ಬಿಡಿರಿ, ನಾನು ಮಾತನಾಡಬೇಕು, ನನಗೇನಾದರೂ ಆಗಲಿ.
“ಸುಮ್ಮನಿರಿ, ನನ್ನನ್ನು ಮಾತನಾಡಲು ಬಿಡಿರಿ; ನನಗೇನಾದರೂ ಆಗಲಿ.
14 ೧೪ ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು, ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು; ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15 ೧೫ ಆಹಾ, ಆತನು ನನ್ನನ್ನು ಕೊಲ್ಲುವನು, ಅದಕ್ಕಾಗಿ ಕಾದಿರುತ್ತೇನೆ, ಆದರೂ ನನ್ನ ನಡತೆಯ ಒಳ್ಳೆಯತನವನ್ನು ಆತನ ಮುಂದೆ ಸ್ಥಾಪಿಸುವೆನು.
ದೇವರು ನನ್ನನ್ನು ಕೊಂದರೂ, ನಾನು ದೇವರ ಮೇಲೆ ನಿರೀಕ್ಷೆಯಿಂದಿರುವೆನು; ನಾನು ನಿಶ್ಚಯವಾಗಿ ನನ್ನ ನಡತೆಯ ಒಳ್ಳೆಯತನವನ್ನು ದೇವರ ಮುಂದೆ ಸ್ಥಾಪಿಸುವೆನು.
16 ೧೬ ಭ್ರಷ್ಟನು ಆತನ ಮುಂದೆ ಬರುವುದಿಲ್ಲವೆಂಬುದೇ, ನಾನು ರಕ್ಷಣೆಯನ್ನು ಹೊಂದುವೆನೆಂಬುವುದಕ್ಕೆ ಆಧಾರವಾಗಿದೆ.
ಇದೇ ನನ್ನ ಬಿಡುಗಡೆಗೆ ಕಾರಣವಾಗಿರುವುದು; ಭಕ್ತಿಹೀನರು ದೇವರ ಮುಂದೆ ಬರಲು ಧೈರ್ಯಮಾಡುವುದಿಲ್ಲ.
17 ೧೭ ನನ್ನ ಮಾತುಗಳನ್ನು ಚೆನ್ನಾಗಿ ಕೇಳಿರಿ, ನನ್ನ ಅರಿಕೆಗೆ ಕಿವಿಗೊಡಿರಿ.
ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ ಮತ್ತು ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.
18 ೧೮ ಇಗೋ, ನನ್ನ ನ್ಯಾಯವನ್ನು ಸಿದ್ಧಪಡಿಸಿದ್ದೇನೆ; ನಾನು ನೀತಿವಂತನೆಂಬುದಾಗಿ ನಿರ್ಣಯವಾಗುವುದೆಂದು ನನಗೆ ಗೊತ್ತೇ ಇದೆ.
ಇಗೋ, ನನ್ನ ನ್ಯಾಯವನ್ನು ಕ್ರಮಪಡಿಸಿದೆನು; ನಾನು ನೀತಿವಂತನೆಂದು ನಿರ್ಣಯ ಹೊಂದುವುದು ನನಗೆ ಗೊತ್ತೇ ಇದೆ.
19 ೧೯ ನನಗೆ ಪ್ರತಿವಾದಿ ಇದ್ದಾನೋ? ಇದ್ದರೆ, ನಾನು ನನ್ನನ್ನು ನಿನ್ನ ದೃಷ್ಟಿಗೆ ಮರೆಮಾಡಿಕೊಂಡು, ಮೌನನಾಗಿ ಪ್ರಾಣಬಿಡುವೆನು.
ಯಾರಾದರೂ ನನ್ನ ವಿರುದ್ಧ ದೂರನ್ನು ತರಬಹುದೋ? ಹಾಗಿದ್ದರೆ ನಾನು ಮೌನವಾಗಿದ್ದು ಸತ್ತು ಹೋಗುವೆನು.
20 ೨೦ ಈ ನನ್ನೆರಡು ಕೋರಿಕೆಗಳನ್ನು ಈಡೇರಿಸು. ಆಗ ನಿನ್ನ ದೃಷ್ಟಿಗೆ ನಾನು ಮರೆಮಾಡಿಕೊಳ್ಳುವುದಿಲ್ಲ.
“ದೇವರೇ, ಈ ಎರಡು ಸಂಗತಿಗಳನ್ನು ಮಾತ್ರ ನನಗೆ ದಯಪಾಲಿಸಿರಿ; ಆಗ ನಿಮ್ಮಿಂದ ನಾನು ಅಡಗಿಕೊಳ್ಳುವುದಿಲ್ಲ:
21 ೨೧ ನನ್ನ ಮೇಲೆತ್ತಿರುವ ನಿನ್ನ ಕೈಯನ್ನು ದೂರಮಾಡು, ನಿನ್ನ ಭಯವು ನನ್ನನ್ನು ಹೆದರಿಸದಿರಲಿ.
ನಿಮ್ಮ ಕೈಯನ್ನು ನನ್ನಿಂದ ದೂರಮಾಡಿರಿ; ನಿಮ್ಮ ಭಯವು ನನ್ನನ್ನು ಹೆದರಿಸದಿರಲಿ.
22 ೨೨ ಆಗ ನೀನು ಕರೆದರೆ ನಾನು ಉತ್ತರಕೊಡುವೆನು, ಇಲ್ಲವೆ ನಾನು ಮಾತನಾಡುವೆ, ನೀನು ಉತ್ತರಕೊಡು.
ಆಮೇಲೆ ನೀವು ನನ್ನನ್ನು ಕರೆದರೆ, ನಾನು ಉತ್ತರಿಸುವೆನು; ಅಥವಾ ನಾನು ಮಾತಾಡಿದರೆ, ನೀವು ಉತ್ತರಕೊಡಿರಿ.
23 ೨೩ ನನ್ನ ಪಾಪದೋಷಗಳೆಷ್ಟು? ನನ್ನ ಪಾಪವನ್ನೂ, ದ್ರೋಹವನ್ನೂ ನನಗೆ ತಿಳಿಯಪಡಿಸು.
ನಾನು ಎಷ್ಟೋ ಅಕ್ರಮಗಳನ್ನೂ, ಪಾಪಗಳನ್ನೂ ಮಾಡಿದ್ದೇನೆ. ನನ್ನ ಅಪರಾಧವನ್ನೂ, ಪಾಪವನ್ನೂ ನನಗೆ ತೋರಿಸಿಕೊಡಿರಿ.
24 ೨೪ ಏಕೆ ನಿನ್ನ ಮುಖವನ್ನು ಮರೆಮಾಡುತ್ತಿ? ನನ್ನನ್ನು ಶತ್ರುವೆಂದೆಣಿಸಿರುವುದೇಕೆ?
ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ? ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?
25 ೨೫ ಹಾರಿಹೋಗುವ ಎಲೆಯನ್ನು ನಡುಗಿಸುವಿಯಾ? ಒಣಗಿದ ಹೊಟ್ಟನ್ನು ಅಟ್ಟಿಬಿಡುವಿಯಾ?
ಗಾಳಿಯಿಂದ ಹಾರಿಹೋಗುವ ಎಲೆಯನ್ನು ತೊಂದರೆಪಡಿಸುವಿರೋ? ಒಣಗಿದ ಕೊಳೆಯನ್ನು ಬೆನ್ನಟ್ಟುವಿರೋ?
26 ೨೬ ನನ್ನ ವಿಷಯವಾಗಿ ಕಠಿಣವಾದ ತೀರ್ಪುಗಳನ್ನು ಬರೆದು, ನನ್ನ ಯೌವನದ ಪಾಪಗಳ ಬಾಧ್ಯತೆಯನ್ನು ನನಗೆ ಕೊಟ್ಟಿದ್ದಿ.
ಏಕೆಂದರೆ ನನಗೆ ವಿರೋಧವಾಗಿ ಕಹಿಯಾದ ತೀರ್ಪನ್ನು ನೀವು ಬರೆದಿರುವಿರಿ; ನನ್ನ ಯೌವನದ ಪಾಪಗಳನ್ನು ನನ್ನ ಮೇಲೆ ಹೊರಿಸಿರುವಿರಿ.
27 ೨೭ ನೀನು ನನ್ನ ಕಾಲುಗಳಿಗೆ ಕೋಳವನ್ನು ಹಾಕಿದ್ದಿ; ನನ್ನ ದಾರಿಗಳನ್ನೆಲ್ಲಾ ಮನದಟ್ಟುಮಾಡಿ ನನ್ನ ಹೆಜ್ಜೆಗಳ ಸುತ್ತಲೂ ಗೆರೆಯೆಳೆದಿದ್ದಿ.
ನನ್ನ ಪಾದಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಿದ್ದೀರಿ, ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕಿದ್ದೀರಿ; ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡುತ್ತೀರಿ.
28 ೨೮ ಕೊಳೆಯುವ ಪದಾರ್ಥದಂತೆಯೂ, ನುಸಿ ಹಿಡಿದ ಬಟ್ಟೆಯ ಹಾಗೂ ಕ್ಷಯಿಸಿಹೋಗುತ್ತಿದ್ದೇನೆ.
“ಆದ್ದರಿಂದ ಮಾನವನು ಕೊಳೆತ ವಸ್ತುವಿನಂತೆಯೂ, ನುಸಿಹಿಡಿದ ಬಟ್ಟೆಯಂತೆಯೂ ಅಳಿದು ಹೋಗುತ್ತಾನೆ.