< ಯೆಶಾಯನು 61 >

1 ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಇದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೂ, ಸೆರೆಯವರಿಗೆ ಬಿಡುಗಡೆಯಾಗುವುದನ್ನು, ಬಂದಿಗಳಿಗೆ ಕದ ತೆರೆಯುವುದನ್ನು ಪ್ರಸಿದ್ಧಿಪಡಿಸುವುದಕ್ಕೂ,
ಸಾರ್ವಭೌಮ ಯೆಹೋವ ದೇವರ ಆತ್ಮರು ನನ್ನ ಮೇಲೆ ಇದ್ದಾರೆ. ಏಕೆಂದರೆ ಯೆಹೋವ ದೇವರು ನನ್ನನ್ನು ಬಡವರಿಗೆ ಶುಭಸಂದೇಶವನ್ನು ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಮುರಿದ ಹೃದಯಗಳನ್ನು ಕಟ್ಟುವುದಕ್ಕೂ, ಬಂಧಿತರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಮತ್ತು ಕೈದಿಗಳಿಗೆ ಕತ್ತಲೆಯಿಂದ ಬಿಡುಗಡೆ ಮಾಡಲು
2 ಯೆಹೋವನು ನೇಮಿಸಿರುವ ಶುಭವರ್ಷ, ನಮ್ಮ ದೇವರು ಮುಯ್ಯಿತೀರಿಸುವ ದಿನ ಇವುಗಳನ್ನು ಪ್ರಚುರಗೊಳಿಸುವುದಕ್ಕೂ,
ಯೆಹೋವ ದೇವರ ಮೆಚ್ಚುಗೆಯ ವರ್ಷವನ್ನು ಸಾರಿ ಹೇಳುವುದಕ್ಕೂ, ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧ ಮಾಡುವುದಕ್ಕೂ, ದುಃಖವುಳ್ಳವರೆಲ್ಲರನ್ನು ಆದರಿಸುವುದಕ್ಕೂ,
3 ದುಃಖಿತರೆಲ್ಲರನ್ನು ಸಂತೈಸುವುದಕ್ಕೂ, ಚೀಯೋನಿನಲ್ಲಿ ಶೋಕಿಸುವವರಿಗೆ ಬೂದಿಗೆ ಬದಲಾಗಿ ಶಿರೋಭೂಷಣ, ದುಃಖವಿದ್ದಲ್ಲಿ ಆನಂದತೈಲ, ಕುಂದಿದ ಮನಕ್ಕೆ ಪ್ರತಿಯಾಗಿ ಉತ್ಸಾಹ ಸ್ತೋತ್ರದ ವಸ್ತ್ರ ಇವುಗಳನ್ನು ಒದಗಿಸಿಕೊಡುವುದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ. ಯೆಹೋವನು ತನ್ನ ಪ್ರಭಾವಕ್ಕೋಸ್ಕರ ಹಾಕಿದ ನೀತಿವೃಕ್ಷಗಳು ಎಂಬ ಬಿರುದು ಇವರಿಗಾಗುವುದು.
ಚೀಯೋನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯದ ಕಿರೀಟವನ್ನೂ, ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ, ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರ ಎಂಬ ಮೇಲಂಗಿಯನ್ನು ಕೊಡುವುದಕ್ಕೂ ನನ್ನನ್ನು ನೇಮಿಸಿದ್ದಾರೆ. ಆಗ ಅವರಿಗೆ ನೀತಿವೃಕ್ಷಗಳೆಂದೂ, ಯೆಹೋವ ದೇವರು ತಾನು ಮಹಿಮೆ ಹೊಂದುವುದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವುದು.
4 ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರುಗಿ ಕಟ್ಟುವರು, ಪೂರ್ವದಲ್ಲಿ ಹಾಳುಬಿದ್ದದ್ದನ್ನು ಪುನಃ ಎಬ್ಬಿಸುವರು, ತಲತಲಾಂತರಗಳಿಂದ ಹಾಳಾದ ಪಟ್ಟಣಗಳನ್ನು ಜೀರ್ಣೋದ್ಧಾರ ಮಾಡುವರು.
ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ, ಮುಂಚೆ ಹಾಳುಬಿದ್ದವುಗಳನ್ನು ಎಬ್ಬಿಸುವರು. ಅನೇಕ ತಲಾಂತರಗಳಿಂದ ಹಾಳಾದ ಪಟ್ಟಣಗಳನ್ನೂ, ನೂತನ ಪಡಿಸುವರು.
5 ಆಗ ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ಮತ್ತು ತೋಟಗಾರರೂ ಆಗುವರು.
ಪರನಾಡಿನವರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು. ಇತರರು ನಿಮಗೆ ನೇಗಿಲು ಹೂಡುವವರೂ, ದ್ರಾಕ್ಷಿತೋಟ ಕಾಯುವವರೂ ಆಗಿರುವರು.
6 ನೀವೋ ಯೆಹೋವನ ಯಾಜಕರೆಂಬ ಬಿರುದನ್ನು ಹೊಂದುವಿರಿ, ಜನರು ನಿಮ್ಮನ್ನು ನಮ್ಮ ದೇವರ ಸೇವಕರು ಎಂದು ಕರೆಯುವರು; ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ, ಅವುಗಳ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.
ಆದರೆ ನೀವು ಯೆಹೋವ ದೇವರ ಯಾಜಕರೆಂಬ ಬಿರುದನ್ನು ಹೊಂದುವಿರಿ. ನಮ್ಮ ದೇವರ ಸೇವಕರೆಂದು ನಿಮಗೆ ಹೆಸರಾಗುವುದು, ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ. ಅವರ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.
7 ನಿಮಗಾದ ಅವಮಾನಕ್ಕೆ ಬದಲಾಗಿ ಎರಡರಷ್ಟು ಮಾನವನ್ನು ಹೊಂದುವಿರಿ; ನಾಚಿಕೆಪಟ್ಟದ್ದಕ್ಕೆ ಪ್ರತಿಯಾಗಿ ಇವರು ತಮ್ಮ ಸ್ವತ್ತಿನಲ್ಲಿ ಹಿಗ್ಗುವರು; ಹೀಗೆ ತಮ್ಮ ದೇಶದಲ್ಲಿ ಎರಡರಷ್ಟನ್ನು ಅನುಭವಿಸುವರು; ಇವರಿಗೆ ಶಾಶ್ವತ ಸಂತೋಷವಾಗುವುದು.
ನಿಮ್ಮ ನಾಚಿಕೆಗೆ ಬದಲಾಗಿ ಮಾನವು ಎರಡರಷ್ಟಾಗುವುದು. ಅವಮಾನಕ್ಕೆ ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು. ಆದ್ದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನಮಾಡಿಕೊಳ್ಳುವರು. ನಿತ್ಯವಾದ ಸಂತೋಷವು ನಿಮಗೆ ಆಗುವುದು.
8 ಯೆಹೋವನೆಂಬ ನಾನು ನ್ಯಾಯವನ್ನು ಪ್ರೀತಿಸುತ್ತೇನೆ. ಕೊಳ್ಳೆಯನ್ನೂ, ಅನ್ಯಾಯವನ್ನೂ ದ್ವೇಷಿಸುತ್ತೇನೆ. ನಾನು ಇವರ ನಷ್ಟಕ್ಕೆ ಬದಲಾಗಿ ಪ್ರತಿಫಲವನ್ನು ಪ್ರಾಮಾಣಿಕವಾಗಿ ಕೊಟ್ಟು, ಇವರೊಂದಿಗೆ ನಿತ್ಯವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು.
ಏಕೆಂದರೆ ಯೆಹೋವನಾದ ನಾನು ನ್ಯಾಯವನ್ನು ಪ್ರೀತಿಮಾಡುತ್ತೇನೆ. ಸುಲಿಗೆಯನ್ನೂ ಅನ್ಯಾಯವನ್ನೂ ಹಗೆಮಾಡುತ್ತೇನೆ. ನನ್ನ ನಿಷ್ಠೆಯಲ್ಲಿ ನಾನು ನನ್ನ ಜನರಿಗೆ ಪ್ರತಿಫಲ ನೀಡುತ್ತೇನೆ ಮತ್ತು ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
9 ಇವರ ಸಂತಾನವು ಜನಾಂಗಗಳಲ್ಲಿ ಪ್ರಖ್ಯಾತವಾಗುವುದು, ಇವರ ಸಂತತಿಯು ಅನ್ಯದೇಶೀಯರಲ್ಲಿ ಹೆಸರುಗೊಳ್ಳುವುದು. ಇವರನ್ನು ನೋಡುವವರೆಲ್ಲರು ಯೆಹೋವನು ಆಶೀರ್ವದಿಸಿದ ವಂಶವು ಇದೇ ಎಂದು ಒಪ್ಪಿಕೊಳ್ಳುವರು.
ಆಗ ಅವರ ಸಂತಾನವು ಇತರ ಜನಾಂಗಗಳಲ್ಲಿ ಪ್ರಸಿದ್ಧವಾಗುವುದು. ಅವರಿಂದಾದ ಉತ್ಪತ್ತಿ ಜನರ ಮಧ್ಯದಲ್ಲಿ ತಿಳಿಸಲಾಗುವುದು. ಅವರನ್ನು ನೋಡುವವರೆಲ್ಲರೂ, ಅವರೇ ಯೆಹೋವ ದೇವರು ಆಶೀರ್ವದಿಸಿದ ಸಂತಾನ ಎಂದು ಒಪ್ಪಿಕೊಳ್ಳುವರು.
10 ೧೦ ನಾನು ಯೆಹೋವನಲ್ಲಿ ಪರಮಾನಂದಪಡುವೆನು, ನನ್ನ ಆತ್ಮವು ನನ್ನ ದೇವರಲ್ಲಿ ಹಿಗ್ಗುವುದು. ವರನು ಬಾಸಿಂಗವನ್ನು ಧರಿಸಿಕೊಳ್ಳುವಂತೆಯೂ, ವಧುವು ತನ್ನನ್ನು ಆಭರಣಗಳಿಂದ ಅಲಂಕರಿಸಿಕೊಳ್ಳುವ ಹಾಗೂ, ಆತನು ನನಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸಿ, ಧರ್ಮವೆಂಬ ನಿಲುವಂಗಿಯನ್ನು ತೊಡಿಸಿದ್ದಾನೆ.
ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.
11 ೧೧ ಭೂಮಿಯು ತನ್ನೊಳಗಿಂದ ಮೊಳಕೆಯನ್ನು ಹೊರಡಿಸುವಂತೆ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೆ, ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಮತ್ತು ಸ್ತೋತ್ರವನ್ನೂ ಮೊಳೆತು ಅಭಿವೃದ್ಧಿ ಹೊಂದುವಂತೆ ಮಾಡುವನು.
ಏಕೆಂದರೆ ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವುದೋ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳೆಯಿಸುವುದೋ, ಹಾಗೆಯೇ ಸಾರ್ವಭೌಮ ಯೆಹೋವ ದೇವರು ನೀತಿಯನ್ನೂ, ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವರು.

< ಯೆಶಾಯನು 61 >